ತಮಿಳುನಾಡು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಬಿಜೆಪಿಗೆ ರಾಜೀನಾಮೆ ನೀಡಲು ನಿರ್ಧರಿಸಿರುವುದು ಮತ್ತು ಹೊಸ ಪ್ರಾದೇಶಿಕ ಪಕ್ಷ ಸ್ಥಾಪಿಸುವ ಮುನ್ಸೂಚನೆ ನೀಡಿರುವುದು ಸದ್ಯದ ಅತ್ಯಂತ ಪ್ರಮುಖ ರಾಜಕೀಯ ಬೆಳವಣಿಗೆ. ತಮಿಳುನಾಡು ಬಿಜೆಪಿಯ ಭವಿಷ್ಯ ಎಂದೇ ಬಿಂಬಿತರಾಗಿದ್ದ ಅಣ್ಣಾಮಲೈ ಅವರು ಕೇವಲ ಆರೇ ವರ್ಷಗಳಲ್ಲಿ ಈ ರೀತಿ ಆಗುತ್ತಿರುವುದಕ್ಕೆ ಕಾರಣ ಏನು.. ಎಂದು ನೋಡಿದರೆ ರಾಜಕೀಯ ವಿಶ್ಲೇಷಕರು ಬೆರಳೆತ್ತಿ ತೋರಿಸುವುದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರತ್ತಲೇ.
ಅಣ್ಣಾಮಲೈ ಅವರು ಐಪಿಎಸ್ ಅಧಿಕಾರಿ ಹುದ್ದೆಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗ ಇದ್ದ ನಿರೀಕ್ಷೆಗಳೇ ಬೇರೆ. ಅದರಲ್ಲೂ ಎನ್ ಮಣ್.. ಎನ್ ಮಕ್ಕಳ್.. ಪಾದಯಾತ್ರೆಯಂತೂ ತಮಿಳುನಾಡು ಬಿಜೆಪಿಗೆ ಬೂಸ್ಟ್ ಕೊಟ್ಟಿತ್ತು. ಕೆ. ಅಣ್ಣಾಮಲೈ ಅವರು ತಮಿಳುನಾಡು ಬಿಜೆಪಿಯ ನೇತೃತ್ವ ವಹಿಸಿಕೊಂಡ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಮತ ಪ್ರಮಾಣ ಗಣನೀಯವಾಗಿ ಹೆಚ್ಚಾಗಿತ್ತು. ಆದರೆ, ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಈ ವೇಗವನ್ನು ಕಾಯ್ದುಕೊಳ್ಳಲು ಸಾಧ್ಯವಾಗದೆ ಮತ ಪ್ರಮಾಣ ಕುಸಿದಿತ್ತು. ಕಾರಣ ಹುಡುಕುತ್ತಾ ಹೋದರೆ.. ಅಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಅಧಿಕಾರದ ಆತುರ ಎದ್ದು ಕಾಣುತ್ತದೆ.
2019ರ ಲೋಕಸಭೆ ಚುನಾವಣೆಯಲ್ಲಿ ಕೇವಲ 3.58% ಇದ್ದ ಬಿಜೆಪಿಯ ಸ್ವತಂತ್ರ ಮತ ಪ್ರಮಾಣ, 2024ರಲ್ಲಿ 11.24% ಗೆ ಏರಿಕೆಯಾಗಿತ್ತು. ತಮಿಳುನಾಡಿನಲ್ಲಿ ಬಿಜೆಪಿಗೆ 5% ವೋಟ್ ಶೇರ್ ಬಂದರೆ ಹೆಚ್ಚು ಎನ್ನುತ್ತಿದ್ದವರಿಗೆ 11.24% ವೋಟ್ ಶೇರ್ ಕಣ್ಣು ಕುಕ್ಕಿತ್ತು. 11.24% ವೋಟ್ ಶೇರ್ ಏನ್ ಮಹಾ ಎನ್ನುತ್ತೀರೇನೋ.. ಆದರೆ ಈ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಪಕ್ಷಗಳು ಪಡೆದ ವೋಟ್ ಶೇರ್ ಎಷ್ಟು ಹೇಳಿ..
TVK (ತಮಿಳಗ ವೆಟ್ರಿ ಕಳಗಂ) ವೋಟ್ ಶೇರ್ 34.92%, DMK (ದ್ರಾವಿಡ ಮುನ್ನೇತ್ರ ಕಳಗಂ)ವೋಟ್ ಸೇರ್ 24.19% ಮತ್ತು ಎಐಎಡಿಎಂಕೆ ವೋಟ್ ಶೇರ್ 21.21%. ಲೋಕಸಭೆ ಚುನಾಣೆಯಲ್ಲಿ ಅತೀ ಹೆಚ್ಚು ವೋಟ್ ಶೇರ್ ಪಡೆದು 2ನೇ ಸ್ಥಾನದಲ್ಲಿದ್ದ ಪಕ್ಷ, ವಿಧಾನಸಭೆ ಚುನಾವಣೆ ಹೊತ್ತಿಗೆ 7ನೇ ಸ್ಥಾನಕ್ಕೆ ಕುಸಿದಿತ್ತು. ಬಿಜೆಪಿಯ ನೇತೃತ್ವದ ಒಕ್ಕೂಟವು (NDA) ಒಟ್ಟಾರೆಯಾಗಿ ಶೇಕಡಾ 18.28% ಮತಗಳನ್ನು ಪಡೆದಿತ್ತು.
ಯಾವುದೇ ಪ್ರಮುಖ ದ್ರಾವಿಡ ಪಕ್ಷಗಳ (DMK ಅಥವಾ AIADMK) ಬೆಂಬಲವಿಲ್ಲದೆ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಎರಡಂಕ್ಕಿಯ ಮತ ಪ್ರಮಾಣ ಪಡೆದಿದ್ದ ಬಿಜೆಪಿ, ದ್ರಾವಿಡ ಪಕ್ಷಗಳ ಜೊತೆಗೆ ಹೋಗಿ ಗಳಿಸಿದ್ದ ಮತ ಪ್ರಮಾಣದಲ್ಲಿ ಶೇ.75ಕ್ಕೂ ಹೆಚ್ಚು ವೋಟ್ ಕಳೆದುಕೊಂಡಿತು. ಕಾರಣ ಏನೆಂದು ಹುಡುಕಿದರೆ ನರೇಂದ್ರ ಮೋದಿ, ಅಮಿತ್ ಶಾ ಕಾಣಿಸ್ತಾರೆ.
ಮೈತ್ರಿಯ ಭಾಗವಾಗಿ AIADMK ನಾಯಕರ ಒತ್ತಡಕ್ಕೆ ಮಣಿದು ಅಣ್ಣಾಮಲೈ ಅವರನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಬದಲಾಯಿಸಿ, ನೈನಾರ್ ನಾಗೇಂದ್ರನ್ ಅವರನ್ನು ನೇಮಿಸಲಾಗಿತ್ತು. ಈತ ಜಯಲಲಿತಾ ಅವರ ಜೊತೆಯಲ್ಲಿದ್ದ ಶಶಿಕಲಾ ಅವರ ಪಕ್ಷದಿಂದ ಬಂದಂತಹವರು. ಇಂತಹವರ ವಿರುದ್ಧವೇ ಹೋರಾಟ ಮಾಡಿದ್ದ ಅಣ್ಣಾಮಲೈಗೆ ಇದು ಪಥ್ಯವಾಗಲೇ ಇಲ್ಲ. ತ್ತೀಚೆಗೆ CBSE 9ನೇ ತರಗತಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ತ್ರಿಭಾಷಾ ನೀತಿಯನ್ನು ಅಣ್ಣಾಮಲೈ ಬಹಿರಂಗವಾಗಿಯೇ ವಿರೋಧಿಸಿ ಟ್ವೀಟ್ ಮಾಡಿದ್ದರು. ಈಗ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಹಿಂದುತ್ವದಿಂದಾಗಿಯೇ ಗಳಿಸುತ್ತಿದ್ದ ಶಕ್ತಿಯನ್ನು ಬಿಜೆಪಿ ಕಳೆದುಕೊಳ್ಳುತ್ತಿದೆ.



