ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಿದ್ದಾರೆ. ಸುಗಮ ಆಡಳಿತಕ್ಕೆ ಸರ್ಕಾರಿ ಅಧಿಕಾರಿಗಳೇ ಬೆನ್ನೆಲುಬು. ಯಾವುದೇ ಕಾರಣಕ್ಕೂ ಯಾರ ಒತ್ತಡಕ್ಕೂ ಮಣಿಯದೇ ಕೆಲಸ ಮಾಡುವಂತೆ ಸೂಚಿಸಿದ್ದಾರೆ. ಈ ವೇಳೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಡಿರುವ ಕೆಲವು ಮಾತುಗಳು ಗಮನಾರ್ಹ. ರೌಡಿಗಳ ನಿಗ್ರಹ ಕುರಿತಂತೆ ಟಾಸ್ಕ್ ಪೋರ್ಸ್ ಮಾಡುವಂತೆ ಸೂಚನೆ ನೀಡಿರುವ ಡಿಕೆ, ಯಾರದೇ ಪ್ರಭಾವ, ಒತ್ತಡಕ್ಕೆ ಮಣಿಯದೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಖಡಕ್ ಸೂಚನೆ ಕೊಟ್ಟಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೂ ಡಿ.ಕೆ. ಶಿವಕುಮಾರ್ ಅವರ ಪ್ರತಿಯೊಂದು ನಡೆ ಹಾಗೂ ನಿರ್ಧಾರಗಳು ಭಾರೀ ಕುತೂಹಲ ಮೂಡಿಸುತ್ತಿವೆ. ಸಿಎಂ ಆದಾಗಿನಿಂದಲೂ ವಾಸ್ತು ಪ್ರಕಾರವೇ ಹೆಜ್ಜೆ ಇಡುತ್ತಿರುವ ಡಿ.ಕೆ. ಶಿವಕುಮಾರ್, ಇದೀಗ ಅಧಿಕೃತ ಸಭೆಗಳಲ್ಲೂ ತಮ್ಮ ಕುಳಿತುಕೊಳ್ಳುವ ದಿಕ್ಕನ್ನೇ ಬದಲಿಸಿದ್ದಾರೆ. ವಿಧಾನಸೌಧಕ್ಕೆ ಪ್ರವೇಶಿಸುವಾಗಲೂ ವಾಸ್ತು ಪ್ರಕಾರ ಅತ್ಯಂತ ಶುಭ ಎನ್ನಲಾಗುವ ‘ಉತ್ತರ ಬಾಗಿಲಿನ’ ಮೂಲಕವೇ ಎಂಟ್ರಿ ಕೊಟ್ಟಿದ್ದ ಡಿಕೆ, ಸುದ್ದಿಗೋಷ್ಠಿ ನಡೆಸುವಾಗಲೂ ಉತ್ತರ ದಿಕ್ಕಿಗೆ ಮುಖ ಮಾಡಿ ಕುಳಿತುಕೊಳ್ಳುತ್ತಿದ್ದಾರೆ. ಅಧಿಕಾರಿಗಳ ಸಭೆಯಲ್ಲೂ ಅಷ್ಟೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಂಪೂರ್ಣವಾಗಿ ದಿಕ್ಕು ಬದಲಿಸಿ ವಾಸ್ತು ಶಾಸ್ತ್ರದ ಪ್ರಕಾರ ಅತ್ಯಂತ ಶ್ರೇಷ್ಠ ಹಾಗೂ ಯಶಸ್ಸಿನ ಸಂಕೇತ ಎನ್ನಲಾಗುವ ‘ಉತ್ತರ ದಿಕ್ಕಿಗೆ’ ಮುಖ ಮಾಡಿ ಸಭೆ ಮಾಡಿದ್ಧಾರೆ. ಆ ಸಭೆಯಲ್ಲಿಯೇ ಡಿಕೆ ಈ ರೀತಿ ಹೇಳಿರುವುದು.
ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಹತ್ವದ ಜಂಟಿ ಸಭೆಯಲ್ಲಿ ʻʻಸುಗಮ ಆಡಳಿತಕ್ಕೆ ಸರ್ಕಾರಿ ಅಧಿಕಾರಿಗಳೇ ಬೆನ್ನೆಲುಬು. ಯಾವುದೇ ಕಾರಣಕ್ಕೂ ಯಾರ ಒತ್ತಡಕ್ಕೂ ಮಣಿಯದೇ ಕೆಲಸ ಮಾಡಬೇಕು. ನಮ್ಮ ಸರ್ಕಾರ ಯಾವುದೇ ಜಾತಿ, ಧರ್ಮ, ಪ್ರಭಾವಗಳಿಗೆ ಹಾಗೂ ಒತ್ತಡಗಳಿಗೆ ಮಣಿಯುವುದಿಲ್ಲ. ಜನರ ಭಾವನೆ, ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಸಕಾರಾತ್ಮಕ ಭಾವದಿಂದ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಬೇಕು. ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು.ಭ್ರಷ್ಟಾಚಾರ ಮಾಡಿದರೆ ನಮ್ಮ ಸರ್ಕಾರ ಸುಮ್ಮನೆ ಇರುವುದಿಲ್ಲʼʼ ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಲಭ್ಯವಿರುವ ಆರ್ಥಿಕ ವ್ಯವಸ್ಥೆಯೊಳಗೆ ಬಾಕಿ ಇರುವ ಕಾಮಗಾರಿಗಳಲ್ಲದೇ ಹೊಸದಾಗಿ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ 25 ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಸಲ್ಲಿಸುವಂತೆ ಸೂಚಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರೂ ಕೂಡ ಜಿಲ್ಲಾ ಪ್ರವಾಸ ಕೈಗೊಂಡು ಅಗತ್ಯ ಮಾರ್ಗದರ್ಶನ ಮತ್ತು ನೆರವು ಒದಗಿಸಲು ಸೂಚಿಸಲಾಗಿದೆ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ನನಗೆ ಇತಿಹಾಸವನ್ನು ಓದಲಾಗಲಿ, ಬರೆಯಲಾಗಲಿ ಆಸಕ್ತಿ ಇಲ್ಲ. ಇತಿಹಾಸವನ್ನು ನಿರ್ಮಾಣ ಮಾಡಬೇಕು ಎಂದ ಮುಖ್ಯಮಂತ್ರಿಗಳು ಅವಕಾಶಗಳು ಸಿಕ್ಕಾಗ ಸಾಕ್ಷಿಗಳನ್ನು ಬಿಟ್ಟುಹೋಗಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ ಹಾಗೂ ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.
ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಡಿ.ಕೆ. ಶಿವಕುಮಾರ್ (DK Shivakumar) ಅವರು ತಮ್ಮ ರಾಜಕೀಯ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಿರಂತರ ಶ್ರಮಕ್ಕೆ ಮಹತ್ವ ನೀಡುತ್ತೇನೆ ಎಂದು ಹಲವು ಬಾರಿ ಹೇಳಿಕೊಂಡಿದ್ದಾರೆ. ತಮ್ಮ ಪದಗ್ರಹಣದ ಸಂದರ್ಭದಲ್ಲಿಯೂ ಸಹ, ತಾವು ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಪ್ರಗತಿಪರ, ಸಮಗ್ರ ಮತ್ತು ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಶ್ರಮಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.



