ಸಿದ್ದರಾಮಯ್ಯ ಮಾಜಿಯಾಗುತ್ತಿದ್ದಂತೆಯೇ ಸಿದ್ದರಾಮಯ್ಯ ಅವರಷ್ಟೇ ಅಲ್ಲ, ಅವರ ಟೀಂನಲ್ಲಿದ್ದ ಎಲ್ಲರೂ ಸೈಡ್ ಲೈನ್ ಆಗ್ತಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆ ಸದಸ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಬಂದಿದ್ದಾಗ ಏಕಾಂಗಿಯಾಗಿರುವ ಸಿದ್ದರಾಮಯ್ಯ ಅವರ ವಿಡಿಯೋ ವೈರಲ್ ಆಗುತ್ತಿದೆ. ಇದರ ಜೊತೆಗೆ ಸಿದ್ದು ಕಾಲದಲ್ಲಿ ನೇಮಕಗೊಂಡಿದ್ದ ಅಧಿಕಾರಿಗಳು, ಟಾನ್ಸ್‌ಫರ್ ಆಗಿದ್ದವರನ್ನು ಆಚೆಗೆ ಕಳುಹಿಸಲಾಗಿದೆ. ಇದರ ಹಿಂದೆ ಒಂದು ಮುಂಜಾಗ್ರತೆಯೂ ಇದೆ ಎಂಬ ಮಾತು ಕೇಳಿ ಬರುತ್ತಿದೆ. ಅದು ಯಡಿಯೂರಪ್ಪ ಕಾಲದಲ್ಲಿ ದೇವೇಗೌಡ-ಕುಮಾರಸ್ವಾಮಿ ಟೀಂನ ಜಂಟಿ ಕಾರ್ಯಾಚರಣೆಯ ಅನುಭವದ ಪಾಠ ಎನ್ನಲಾಗಿದೆ.
ಸಿದ್ದರಾಮಯ್ಯ ಕಾಲದ ಅಧಿಕಾರಿಗಳು, ಸಿಬ್ಬಂದಿಗೆ ಕೊಕ್ ನೀಡಲಾಗಿದೆ. 400 ಕ್ಕೂ ಹೆಚ್ಚು ವಿಧಾನಸೌಧದ ಸಿಬ್ಬಂದಿ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ವಿಧಾನಸೌಧ ಸಿಬ್ಬಂದಿಗೆ ಶಾಕ್ ನೀಡಲಾಗಿದೆ. ಹಿಂದಿನ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಸರಕಾರದಲ್ಲಿ ನೇಮಕಗೊಂಡಿದ್ದ ಎಲ್ಲರನ್ನೂ ವಜಾ ಮಾಡಾಗಿದೆ. ಸಿಎಂ ಸಚಿವಾಲಯ ಮತ್ತು ಸಲಹೆಗಾರರ ಕಚೇರಿ ಸಿಬ್ಬಂದಿ ಬಿಡುಗಡೆಗೊಳಿಸಿ ಆದೇಶ ಪ್ರತಿಯೂ ಹೊರಬಿದ್ದಾಗಿದೆ.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಸಿಬ್ಬಂದಿಯನ್ನು ದಿಢೀರ್ ವಜಾಗೊಳಿಸಿ ಆದೇಶಗೊಳಿಸಿದ್ದಕ್ಕೆ ಸಿಬ್ಬಂದಿಗಳಲ್ಲಿ ಅಸಮಾಧಾನ ಮೂಡಿರುವುದು ನಿಜ. ವಿಶೇಷ ಎಂದರೆ ಯಾರೊಬ್ಬರಿಗೂ ಕನಿಷ್ಠ ಮುನ್ಸೂಚನೆಯನ್ನೂ ನೀಡಿಲ್ಲವಂತೆ.
ವಜಾಗೊಂಡಿದ್ದು ಯಾರು ಯಾರು..?
ಸಿಎಂ ಸಚಿವಾಲಯ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿದ್ದ ಗ್ರೂಪ್ ಸಿ ಗ್ರೂಪ್‌ನ 212 ನೌಕರರು, ಗ್ರೂಪ್ ಡಿ ಮತ್ತು ವಾಹನ ಚಾಲಕರಾದ 80 ಸಿಬ್ಬಂದಿ, ಗ್ರೂಪ್ ಬಿ ವಿಭಾಗದಲ್ಲಿ ಕೆಲಸ ಮಾಡ್ತಿದ್ದ ಆರು ಜನರಿಗೆ ಕೊಕ್ ನೀಡಲಾಗಿದೆ. ಸಿಎಂ ಕಾನೂನು ಸಲಹೆಗಾರ ಮತ್ತು ಮಾಧ್ಯಮ ಸಲಹೆಗಾರರನ್ನೂ ಕೆಲಸದಿಂದ ವಿಮುಕ್ತಿಗೊಳಿಸಲಾಗಿದೆ. ದೆಹಲಿ ವಿಶೇಷ ಪ್ರತಿನಿಧಿಗಳ ಶಾಖೆಯಲ್ಲಿ ಕೆಲಸ ಮಾಡ್ತಿದ್ದ 150ಕ್ಕೂ ಹೆಚ್ಚು ಸಿಬ್ಬಂದಿಯನ್ನೂ ವಜಾ ಮಾಡಲಾಗಿದೆ.
ಇದು ಮೇಲ್ನೋಟಕ್ಕೆ ಸಹಜ ಪ್ರಕ್ರಿಯೆ ಎನ್ನಬಹುದಾದರೂ, ಇದರ ಹಿಂದೆ ಮುಂಜಾಗ್ರತೆಯೂ ಇದೆ. ಈ ಹಿಂದೆ ಯಡಿಯೂರಪ್ಪ ಮೊದಲ ಬಾರಿ ಸಿಎಂ ಆಗಿದ್ದಾಗ ವಿಧಾನಸೌಧದ ದಾಖಲೆಗಳ ಒಂದು ಪ್ರತಿ ಹೊರಗಡೆ ಲಭ್ಯವಾಗುತ್ತಿತ್ತು. ಯಡಿಯೂರಪ್ಪ ಸರ್ಕಾರದ ದಾಖಲೆಗಳು ಆಚೆ ಬಂದವು. ಹಗರಣಗಳೂ ಆಚೆ ಬಂದವು. ದಿನಕ್ಕೊಂದು ಹಗರಣ ಹೊರಬಂದಿದ್ದು ಇದೇ ಕಾರಣದಿಂದ. ಮೂಲ ಹುಡುಕಿದರೆ ವಿಧಾನಸೌಧದಲ್ಲಿದ್ದ ಸಿಬ್ಬಂದಿಯ ಮೂಲ ಗೊತ್ತಾಗಿತ್ತು. ಆದರೆ ಆಗ ಕಾಲ ಮಿಂಚಿ ಹೋಗಿತ್ತು. ಈಗ ಡಿಕೆ ಶಿವಕುಮಾರ್ ಇಟ್ಟಿರುವ ಹೆಜ್ಜೆ ಅಂತಹ ಪರಿಸ್ಥಿತಿ ರಿಪೀಟ್ ಆಗಬಾರದು ಎಂದೇ ಆಗಿದೆ ಎನ್ನಲಾಗ್ತಾ ಇದೆ.
ಕರ್ನಾಟಕದ ರಾಜಕಾರಣದಲ್ಲಿ ಸಿದ್ದರಾಮಯ್ಯ ಬಣದವರ ಪರಿಸ್ಥಿತಿಯು ಬದಲಾವಣೆಗಳ ಪರ್ವದಲ್ಲಿದೆ. ದೀರ್ಘಾವಧಿ ಮುಖ್ಯಮಂತ್ರಿಯಾಗಿ ತಮ್ಮದೇ ಆದ ಪ್ರಭಾವವನ್ನು ಹೊಂದಿದ್ದರು. ಇದು ತಮ್ಮ ಸರ್ಕಾರಕ್ಕೆ ಕಂಟಕವಾಗಬಾರದು ಎಂದು ತಮ್ಮ ಸುತ್ತಲೂ ಸುರಕ್ಷತಾ ಕವಚ ಸೃಷ್ಟಿಸಿಕೊಂಡಿದ್ದಾರೆ ಎನ್ನವುದು ಹಲವು ಅಧಿಕಾರಿಗಳ ವಿಶ್ಲೇಷಣೆ. ಆದರೆ ಇದಕ್ಕೆ ಎರಡೂ ಬಣಕ್ಕೆ ಸೇರದವರೂ ಬಲಿಯಾಗಿದ್ದಾರೆ ಎನ್ನುವುದು ರಾಜಕೀಯ ಯಾವ ಮಟ್ಟಕ್ಕೆ ಹೋಗಿದೆ ಎಂಬುದಕ್ಕೆ ನಿದರ್ಶನ.



