ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಕಾಲದಲ್ಲಿ ಒಂದು ಕೆಟ್ಟ ಸಂಪ್ರದಾಯ ಶುರುವಾಗಿತ್ತು. ಬಿಜೆಪಿ ಜೊತೆ ರಾಜಕೀಯ ಹೋರಾಟ ಮಾಡುವುದು ಬೇರೆ.. ಕೇಂದ್ರ ಸರ್ಕಾರದ ಮಾತುಕತೆಯೇ ಬೇರೆ. ಬಿಜೆಪಿ ವಿರುದ್ಧದ ಹೋರಾಟವನ್ನು ಸರ್ಕಾರದ ಹಂತಕ್ಕೂ ವಿಸ್ತರಿಸಿದ್ದ ಸಿದ್ದರಾಮಯ್ಯ ಸರ್ಕಾರ, ಅವರ ಮುತ್ಸದ್ಧಿತನಕ್ಕೆ ತಕ್ಕದಲ್ಲದ್ದ ನಡೆ ಇಟ್ಟಿದ್ದರು. ಆದರೆ ಅದರಲ್ಲಿ ಸಿದ್ದರಾಮಯ್ಯ ಒಂಟಿಯಾಗಿಯೇನೂ ಇರಲಿಲ್ಲ. ಅವರಿಗೆ ಇನ್ನೂ ಕೆಲವರ ಸಪೋರ್ಟ್ ಇತ್ತು. ಇದೀಗ ಆ ಕೆಟ್ಟ ಸಂಪ್ರದಾಯಕ್ಕೆ ಹೊಸ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬ್ರೇಕ್ ಹಾಕಿದ್ದಾರೆ.
ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ದೇಶದ 28 ರಾಜ್ಯಗಳ ಎಲ್ಲಾ ಮುಖ್ಯಮಂತ್ರಿಗಳು (ನೀತಿ ಆಯೋಗ) NITI Aayog Governing Council ಸಭೆಯಲ್ಲಿ ಭಾಗವಹಿಸಿದ್ದಾರೆ. ಒಕ್ಕೂಟ ವ್ಯವಸ್ಥೆಗೆ ಇದೊಂದು ಮೈಲಿಗಲ್ಲು. ಏಕೆಂದರೆ ಈ ಹಿಂದಿನ ಸಭೆಗಳಲ್ಲಿ ಕಾಂಗ್ರೆಸ್, ಡಿಎಂಕೆ, ಟಿಎಂಸಿ ನೇತೃತ್ವದ ಸರ್ಕಾರಗಳು ನೀತಿ ಆಯೋಗದ ಸಭೆಯನ್ನೇ ಬಹಿಷ್ಕರಿಸಿದ್ದವು. ಅಂದರೆ ಕರ್ನಾಟಕದ ಸಿಎಂ ಸಿದ್ದರಾಮಯ್ಯ, ತಮಿಳುನಾಢು ಸಿಎಂ ಸ್ಟಾಲಿನ್, ಕೇರಳದ ಪಿಣರಾಯಿ ವಿಜಯನ್, ಪ.ಬಂಗಾಳದ ಮಮತಾ ಬ್ಯಾನರ್ಜಿ, ದೆಹಲಿಯ ಅರವಿಂದ ಕೇಜ್ರಿವಾಲ್ ಸಭೆಗೇ ಹೋಗುತ್ತಿರಲಿಲ್ಲ. ತಮ್ಮ ಬದಲಿಗೆ ತಮ್ಮ ಸರ್ಕಾರಗಳಲ್ಲಿರುವ ಕಿರಿಯ ಸಚಿವರೊಬ್ಬರನ್ನು ಕಳಿಸುವುದೂ ಇತ್ತು. ಆ ಕೆಟ್ಟ ಸಂಪ್ರದಾಯಕ್ಕೆ ಬ್ರೇಕ್ ಹಾಕಿರುವುದು ಡಿಕೆ ಶಿವಕುಮಾರ್.
ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯು ‘ವಿಕಸಿತ ಭಾರತಕ್ಕಾಗಿ ಸಮಗ್ರ ಮಾನವ ಅಭಿವೃದ್ಧಿ 2047’ ಎಂಬ ವಿಷಯದ ಅಡಿಯಲ್ಲಿ ನಡೆದ ಸಭೆಯಲ್ಲಿ ಯಾವುದೇ ಬಾಯ್‌ಕಾಟ್ ಅಥವಾ ಗೈರುಹಾಜರಿಲ್ಲದೆ ಕರ್ನಾಟಕ, ಕೇರಳ ತಮಿಳು ನಾಡು ಸೇರಿದಂತೆ ಎಲ್ಲ ಮುಖ್ಯಮಂತ್ರಿಗಳು ಭಾಗಿಯಾಗುವ ಮೂಲಕ ರಾಜಕೀಯ ಜಗಳಗಳನ್ನು ಬದಿಗಿಟ್ಟು ಏಕತೆಯ ಸಂದೇಶ ಸಾರಿದ್ದಾರೆ.
ಅಂದಹಾಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀತಿ ಆಯೋಗದ ಸಭೆಯಲ್ಲಿ 7 ಬೇಡಿಕೆಗಳನ್ನಿಟ್ಟಿದ್ದಾರೆ.
ಖಾಸಗಿ ವಲಯಕ್ಕೆ ಸಮನಾಗಿ ಗುಣಮಟ್ಟದ ಶಿಕ್ಷಣವನ್ನು ನೀಡಲು ಸರ್ಕಾರಿ ಶಾಲೆ ಮತ್ತು ಕಾಲೇಜುಗಳಿಗೆ ಒಂದು ಬಾರಿಯ ಮೂಲಸೌಕರ್ಯ ಅನುದಾನ ನೀಡುವುದು.
ಪೌಷ್ಟಿಕಾಂಶ, ಆರೋಗ್ಯ, ಕಲಿಕೆಯ ಫಲಿತಾಂಶಗಳು, ಕೌಶಲ್ಯ, ಉದ್ಯೋಗ ಸೃಷ್ಟಿ ಮತ್ತು ಸುಸ್ಥಿರತೆಯ ಸೂಚಕಗಳಲ್ಲಿನ ಅಳೆಯಬಹುದಾದ ಸುಧಾರಣೆಗಳಿಗಾಗಿ ರಾಜ್ಯಗಳಿಗೆ ಉತ್ತೇಜನ ನೀಡುವುದು.
ತಂತ್ರಜ್ಞಾನ, ಸಂಶೋಧನೆ ಮತ್ತು ಮಾನವ ಬಂಡವಾಳದಲ್ಲಿ ಹೂಡಿಕೆ ಮಾಡುವ ಮೂಲಕ ಜಾಗತಿಕ ಆರ್ಥಿಕ ಮತ್ತು ಭೌಗೋಳಿಕ-ರಾಜಕೀಯ ಅನಿಶ್ಚಿತತೆಗಳನ್ನು ಎದುರಿಸುವ ವಾತಾವರಣ ನಿರ್ಮಿಸುವುದು.
ನಿರ್ದಿಷ್ಟ ಸಮಯದೊಳಗೆ ಗ್ರಾಮೀಣ ಆರೋಗ್ಯ ಮತ್ತು ಶಿಕ್ಷಣ ಮೂಲಸೌಕರ್ಯಗಳನ್ನು ಸುಧಾರಿಸುವಲ್ಲಿ ಗಮನಹರಿಸಲು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಮೂಲಕ ಸಿಎಸ್‌ಆರ್ (CSR) ನಿಯಮಗಳನ್ನು ಜಾರಿಗೊಳಿಸುವುದು.
ಸರ್ಕಾರವು ವ್ಯಾಪಾರ ಸುಲಭಗೊಳಿಸುವಿಕೆಯನ್ನು ಖಚಿತಪಡಿಸುತ್ತಿರುವಾಗ, ಉದ್ಯಮಗಳು ಮುಂದಿನ 3 ವರ್ಷಗಳ ಕೌಶಲ್ಯ ಮಾನದಂಡ ಕೇಂದ್ರೀಕೃತ ಉದ್ಯೋಗ ಪೋರ್ಟಲ್ ಮೂಲಕ ಉದ್ಯೋಗದ ಅಗತ್ಯತೆಗಳನ್ನು ಹಂಚಿಕೊಳ್ಳಬೇಕು.
ಬೆಂಗಳೂರನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಗುಣಮಟ್ಟದ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ನಗರ ಮತ್ತು ಪ್ರಾದೇಶಿಕ ಆರ್ಥಿಕ ಬೆಳವಣಿಗೆಯ ಕೇಂದ್ರಗಳನ್ನು ಬಲಪಡಿಸುವುದು.
ಬೆಂಗಳೂರು ಭಾರತದ ಬೆಳವಣಿಗೆಯ ಕೇಂದ್ರವಾಗಿರುವುದರಿಂದ, ಇತರ ರಾಜ್ಯಗಳಿಂದ ಹೆಚ್ಚಿನ ವಲಸೆಯ ಕಾರಣದಿಂದಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ನಿಭಾಯಿಸಲು ಹೆಚ್ಚುವರಿ ಮೂಲಸೌಕರ್ಯ ಅನುದಾನವನ್ನು ನೀಡಬೇಕು. ಬೆಂಗಳೂರನ್ನು ನೆರೆಯ ಸ್ಯಾಟಲೈಟ್ ಟೌನ್‌ಗಳಾದ ಕೋಲಾರ, ಮೈಸೂರು, ತುಮಕೂರು ಮತ್ತು ಚಿಕ್ಕಬಳ್ಳಾಪುರ ನಗರಗಳಿಗೆ ಸಂಪರ್ಕಿಸಲು ರಾಪಿಡ್ ರೈಲ್ ಟ್ರಾನ್ಸಿಟ್ ಸಿಸ್ಟಮ್ಸ್ (RRTS) ಮಂಜೂರು ಮಾಡುವಂತೆ ನಾವು ವಿನಂತಿಸಿದ್ದೇವೆ.
ಇದಾದ ನಂತರ ಪ್ರಧಾನಮಂತ್ರಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೂ ಭೇಟಿಯಾಗಿದ್ದರು. ನೀರಾವರಿ ಯೋಜನೆಗಳಿಗೆ ಅನುಮತಿ, ಕೇಂದ್ರದ ಬಾಕಿ ಅನುದಾನ, ಬೆಂಗಳೂರಿಗೆ ವಿಶೇಷ ಅನುದಾನ, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಸಹಕರಿಸ ಬೇಕೆಂದು, ಪ್ರಧಾನಿಗಳಿಗೆ ಸಿಎಂ ಡಿಕೆ ಶಿವಕುಮಾರ್ ಮನವಿ ಮಾಡಿದ್ದಾರೆ.



