ಬೆಂಗಳೂರಿನ ಜಯನಗರದಲ್ಲಿ ವಿಕಸಿತ ಭಾರತ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರದ ವಿತ್ತಸಚಿವರೂ ಆಗಿರುವ ನಿರ್ಮಲಾ ಸೀತಾರಾಮನ್ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಅನ್ಯಾಯ ಆಗಿಲ್ಲ ಎಂದು ಒಂದೊಳ್ಳೆ ಲೆಕ್ಕ ಕೊಟ್ಟಿದ್ದಾರೆ. ಆ ಲೆಕ್ಕದಲ್ಲಿ ಮುದ್ರಾ ಯೋಜನೆ ಸಾಲ, ಅಯುಷ್ಮಾನ್ ಕಾರ್ಡ್, ಉಚಿತ ಅಕ್ಕಿ, ಕಿಸಾನ್ ಕ್ರೆಡಿಟ್ ಕಾರ್ಡ್, ಉಜ್ವಲಾ ಸಿಲಿಂಡರ್, ಇನ್ಷೂರೆನ್ಸ್ ಸ್ಕೀಂ.. ಹೀಗೆ ಎಲ್ಲವನ್ನೂ ಸೇರಿಸಿ ಹೇಳಿದ್ಧಾರೆ. ಅನುದಾನದ ವಿಚಾರದಲ್ಲಿ ಕೇಂದ್ರದಿಂದ ತಾರತಮ್ಯ ವಿಚಾರವಾಗಿ ಮಾತನಾಡಿದ ಅವರು, ಕೇಂದ್ರಕ್ಕೆ ಹೆಚ್ಚು ತೆರಿಗೆ ಪಾಲು ಕೊಡುತ್ತಿದ್ದೇವೆ ಎಂದ ಮಾತ್ರಕ್ಕೆ, ಹೆಚ್ಚು ಅನುದಾನ ಕೊಟ್ಟಿಲ್ಲ ಅನ್ನೋದು ಸರಿಯಲ್ಲ ಎನ್ನುವ ನಿರ್ಮಲಾ ಸೀತಾರಾಮನ್ ಕೊಟ್ಟಿರುವ ಲೆಕ್ಕ ಇದು. ನಿರ್ಮಲಾ ಅವರ ಲೆಕ್ಕವನ್ನೇ ತೆಗೆದುಕೊಂಡರೆ, ಇದನ್ನೂ ಕೂಡಾ ಉತ್ತರದ ರಾಜ್ಯಗಳ ಜೊತೆ ಒಂದು ಹೋಲಿಕೆ ಮಾಡಿ ಕೊಡಲಿ ಎನ್ನುವುದು ವಿರೋಧಿಗಳ ಮಾತು. ಲೆಕ್ಕವನ್ನ ಒಂದ್ಸಲ ನೋಡಿ.. ಜೊತೆಗೆ ಅವುಗಳು ಎತ್ತಿರುವ ಪ್ರಶ್ನೆಗಳನ್ನೂ ನೋಡಿಕೊಂಡು ಬಿಡಿ.
ನಿರ್ಮಲಾ ಸೀತಾರಾಮನ್ ಕೊಟ್ಟ ಲೆಕ್ಕ ಮತ್ತು ಪ್ರಶ್ನೆಗಳು
ನಿರ್ಮಲಾ ಲೆಕ್ಕ : 2 ಕೋಟಿಗೂ ಅಧಿಕ ‘ಪಿಎಂ ಜನ ಧನ್’ ಬ್ಯಾಂಕ್ ಖಾತೆ ಓಪನ್ ಮಾಡಿದ್ದೇವೆ.
ಪ್ರಶ್ನೆ : ಅವು ಬ್ಯಾಂಕ್ ಖಾತೆಗಳಷ್ಟೇ. ಇದರಲ್ಲಿ ಕೇಂದ್ರದ ಪಾಲು ಏನು..? ಅವುಗಳು ಜನರ ವ್ಯವಹಾರಕ್ಕೆ ಅನುಕೂಲವಾಗಿದೆಯೇ ಹೊರತು, ಪಾಲು-ಹಂಚಕೆಗೂ ಇದಕ್ಕೂ ಸಂಬಂಧ ಇಲ್ಲ.
ನಿರ್ಮಲಾ ಲೆಕ್ಕ : ಕರ್ನಾಟಕಕ್ಕೆ 3.4 ಲಕ್ಷ ಕೋಟಿ ಮುದ್ರಾ ಲೋನ್ ಕೊಡಲಾಗಿದೆ. ಸಣ್ಣ ಉದ್ಯಮಗಳಿಗೆ ಸಾಲ ನೀಡಲಾಗಿದೆ.
ಪ್ರಶ್ನೆ : ಪ್ರಧಾನ ಮಂತ್ರಿ ಮುದ್ರಾ ಯೋಜನೆ (PMMY) ಅಡಿಯಲ್ಲಿ ಇದುವರೆಗೆ (ಮಾರ್ಚ್ 2026 ರ ಅಂತ್ಯದ ವೇಳೆಗೆ) ಒಟ್ಟು ₹40.07 ಲಕ್ಷ ಕೋಟಿ ಸಾಲವನ್ನು ವಿತರಿಸಲಾಗಿದೆ. ಎಲ್ಲ 28 ರಾಜ್ಯಗಳ ಲೆಕ್ಕವನ್ನೂ ತೆಗೆದುಕೊಂಡರೆ. ಇಲ್ಲಿಯೂ ಅಷ್ಟೇ, ಯೋಜನೆ ಶುರುವಾದಾಗಿನಿಂದ ಇಲ್ಲಿಯವರೆಗೆ ಅತೀ ಹೆಚ್ಚು ಸಾಲ ಪಡೆದ ರಾಜ್ಯ ತಮಿಳುನಾಡು. ಉ.ಪ್ರದೇಶ ನಂ.2. ಕರ್ನಾಟಕ ನಂ.3. ಈ ಅರ್ಥಿಕ ವರ್ಷದಲ್ಲಿ ಸಾಲ ಪಡೆದ ಟಾಪ್ 3 ರಾಜ್ಯಗಳು ಉ.ಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರ.
ನಿರ್ಮಲಾ ಲೆಕ್ಕ : 1.9 ಕೋಟಿ ಆಯುಷ್ಮಾನ್ ಕಾರ್ಡ್. 5 ಲಕ್ಷದ ಆರೋಗ್ಯ ವಿಮೆ ನೀಡಲಾಗಿದೆ
ಪ್ರಶ್ನೆ : ಕರ್ನಾಟಕದ ಪಾಲು 1.9 ಕೋಟಿ ಆದರೆ, ಉ.ಪ್ರದೇಶದ ಪಾಲು 5.1 ಕೋಟಿ, ಮ.ಪ್ರದೇಶದ ಪಾಲು 4 ಕೋಟಿ, ಬಿಹಾರದ ಪಾಲು 3.5 ಕೋಟಿ. ಬಳಕೆ ಮಾಡಿರುವವರಲ್ಲಿ ತಮಿಳುನಾಡಿನ 90 ಲಕ್ಷ ಮತ್ತು ಕರ್ನಾಟಕದ 66 ಲಕ್ಷ ಜನರಿದ್ಧಾರೆ. ಅದು ಓಕೆ, ಆದರೆ ಲಾಭ ಕೇವಲ ಕರ್ನಾಟಕಕ್ಕೆ ಅಲ್ಲ.
ನಿರ್ಮಲಾ ಲೆಕ್ಕ : 43 ಲಕ್ಷ ರೈತರಿಗೆ ಪಿಎಂ-ಕಿಸಾನ್ ಸಹಾಯಧನ ಹಾಗೂ 31.7 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್
ಪ್ರಶ್ನೆ : ಇಲ್ಲಿಯೂ ಗೊಂದಲ ಇದೆ. ಕರ್ನಾಟಕದಲ್ಲಿ ವಿತರಣೆಯಾಗಿರುವ ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡುಗಳ ಲೆಕ್ಕ 24.66 ಲಕ್ಷಕ್ಕೂ ಹೆಚ್ಚು. ರಾಜ್ಯದಲ್ಲಿ ₹53,720 ಕೋಟಿಗೂ ಅಧಿಕ ಮೊತ್ತದ ಸಾಲವನ್ನು KCC ಮೂಲಕ ವಿತರಿಸಲಾಗಿದೆ. ಉಳಿದಂತೆ ಕರ್ನಾಟಕ: ಒಟ್ಟು ₹18,500 ಕೋಟಿಗೂ ಹೆಚ್ಚು ನೇರ ಸಹಾಯಧನವನ್ನು ರಾಜ್ಯದ ರೈತರು ಪಡೆದಿದ್ದಾರೆ.
ನಿರ್ಮಲಾ ಲೆಕ್ಕ : 4 ಕೋಟಿ ಜನರಿಗೆ ಉಚಿತ ಅಕ್ಕಿ ಯೋಜನೆ. (ಪಿಎಂ ಗರೀಬ್ ಕಲ್ಯಾಣ ಅನ್ನ ಯೋಜನಾ )
ಪ್ರಶ್ನೆ : ಈ ಉತ್ತರದಲ್ಲಿ ಗೊಂದಲಗಳೇನಿಲ್ಲ. ಆದರೆ ಜನಸಂಖ್ಯೆ ನೋಡಿದರೆ ಇದು ಯಾತಕ್ಕೂ ಸಾಲವುದಿಲ್ಲ ಎನ್ನುವುದು ನಿಜ.
ನಿರ್ಮಲಾ ಲೆಕ್ಕ : ಜಲಜೀವನ್ ಯೋಜನೆ ಅಡಿ 87 ಲಕ್ಷ ಮನೆಗಳಿಗೆ ಕುಡಿಯುವ ನೀರು
ಪ್ರಶ್ನೆ : ಜಲಜೀವನ್ ಯೋಜನೆ ಜಾರಿಯಾಗಿದೆ. ಬಹುತೇಕ ಕಡೆ ನಲ್ಲಿಯೂ ಇಲ್ಲ. ನೀರೂ ಬಂದಿಲ್ಲ. ಕಾಗದಗಳಲ್ಲಿ ಮಾತ್ರ ಯೋಜನೆ ಸಕ್ಸಸ್
ನಿರ್ಮಲಾ ಲೆಕ್ಕ : 41 ಲಕ್ಷ ಉಜ್ವಲಾ ಎಲ್‌ಪಿಜಿ ಕನೆಕ್ಷನ್ಸ್
ಪ್ರಶ್ನೆ : ಇದನ್ನೂ ಜನಸಂಖ್ಯೆ ಆಧಾರದಲ್ಲಿಯೇ ಲೆಕ್ಕ ಮಾಡಿ, ಅತಿ ಹೆಚ್ಚು ಉಜ್ಜವಲಾ ಸಂಪರ್ಕ ಪಡೆದ ಟಾಪ್ 5 ರಾಜ್ಯಗಳು ಉ.ಪ್ರದೇಶ, ಪ.ಬಂಗಾಳ, ಬಿಹಾರ, ಮಧ್ಯಪ್ರದೇಶ, ರಾಜಸ್ತಾನ. ಕರ್ನಾಟಕಕ್ಕೆ 12ನೇ ಸ್ಥಾನವಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಅತಿ ಹೆಚ್ಚು ಉಜ್ಜವಲಾ ಸಂಪರ್ಕಗಳನ್ನು ವಿತರಿಸಿರುವ ರಾಜ್ಯಗಳಲ್ಲಿ ಕರ್ನಾಟಕವು ಮೊದಲ ಸ್ಥಾನದಲ್ಲಿದೆ.
ಅಂದಹಾಗೆ ನಿರ್ಮಲಾ ಸೀತರಾಮನ್ ಅವರೇ.. ಅನುದಾನ ಹಂಚಿಕೆಯಲ್ಲಿ ಇಷ್ಟು ಕೊಟ್ಟಿದ್ದೇವೆ.. ಅಷ್ಟು ಕೊಟ್ಟಿದ್ದೇವೆ.. ಅನುದಾನ ಹಂಚಿಕೆಯಲ್ಲಿ ಎಷ್ಟು ಕೊಟ್ಟಿರಿ ಎಂದು ಕೇಳುವ ಹಕ್ಕು ಕರ್ನಾಕಟದವರಿಗೆ ಇದೆ. ಅದನ್ನು ಕೇಳುವುದೇ ತಪ್ಪು ಎನ್ನುವ ವಾದವೇ ತಪ್ಪು. ಹೆಚ್ಚು ತೆರಿಗೆ ಪಾಲು ಕೊಟ್ಟವರಿಗೆ ಹೆಚ್ಚು ಕೇಳುವ ಹಕ್ಕೂ ಇರುತ್ತದೆ. ಇದು ಸೃಷ್ಟಿಸುವ ಆತಂಕಗಳು ಬೇರೆಯದೇ ಇರುತ್ತವೆ.



