ರಾಹುಲ್ ಗಾಂಧಿ ಒಬ್ಬ ನಾಯಕರಾಗಿ ಸೋಲುತ್ತಿದ್ದಾರಾ..? ಪದೇ ಪದೇ ಅನಿಸ್ತಿರೋದಕ್ಕೆ ಕಾರಣಗಳಿವೆ. ರಾಹುಲ್ ಗಾಂಧಿಗೆ ಕೇಳಿಸಿಕೊಳ್ಳೋದು ಗೊತ್ತಿಲ್ಲ. ಅವರು ನಂಬಿದ್ದೇ ನ್ಯಾಯ. ನಂಬಿದ್ದೇ ಸಿದ್ಧಾಂತ. ಅವರು ಅರ್ಥ ಮಾಡಿಕೊಂಡಿದ್ದು ಮಾತ್ರವೇ ಸತ್ಯ ಎನ್ನುವವರು. ಈ ಬಾರಿಯೂ ಹಾಗೆಯೇ ಆಗಿದೆ. ಆಗುತ್ತಿದೆ. ಕರ್ನಾಟಕದಲ್ಲಿ ಡಿಕೆ ಶಿವಕುಮಾರ್ ಸಿಎಂ ಆಗಿ ಎರಡು ತಿಂಗಳಾಗುತ್ತಾ ಬಂದಿದೆ. ವಿಧಾನಮಂಡಲ ಅಧಿವೇಶನ ಘೋಷಿಸಿ ಆಗಿದೆ. ಆದರೆ ಕ್ಯಾಬಿನೆಟ್ ವಿಸ್ತರಣೆಗಾಗಿ ಅನುಮತಿ ಪಡೆಯಲು ಹೋದವರಿಗೆ ರಾಹುಲ್ ಗಾಂಧಿ ಸಿಗುತ್ತಿಲ್ಲ. ಅಷ್ಟೇ ಅಲ್ಲ, ಸಂಸತ್ತಿನಲ್ಲೂ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ಧಾರೆ.
ಕರ್ನಾಟಕ ಲೀಡರ್ಸ್‌ಗೆ ಟೈಂ ಕೊಡ್ತಿಲ್ಲ : ಕರ್ನಾಟಕ ಕಾಂಗ್ರೆಸ್ ಸರ್ಕಾರದ, ಸಿಎಂ ಡಿಕೆ ಶಿವಕುಮಾರ್ ನೇತೃತ್ವ ಸಂಪುಟ ವಿಸ್ತರಣೆ ಕಂಪ್ಲೀಟ್ ಆಗಬೇಕೆಂದರೆ ಖಾಲಿ ಇರುವ 20 ಸಚಿವ ಸ್ಥಾನ ಭರ್ತಿಯಾಗಬೇಕು. ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದರೂ, ಸಚಿವರ ಪಟ್ಟಿ ಅಂತಿಮವಾಗುತ್ತಿಲ್ಲ. ಸಚಿವರ ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಬೇಕಿರುವ ರಾಹುಲ್ ಗಾಂಧಿ ಭೇಟಿಗೆ ಸಮಯವನ್ನೇ ಕೊಡ್ತಿಲ್ಲ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಒಂದು ಪಟ್ಟಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬಳಿ ಮತ್ತೊಂದು ಪಟ್ಟಿ ಹಾಗೂ ಹೈಕಮಾಂಡ್ ಸಿದ್ಧಪಡಿಸಿರುವ ಮತ್ತೊಂದು ಪಟ್ಟಿ ಸಿದ್ಧವಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ಮಾತುಕತೆ ಆಗಿದೆ. ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಕೂಡ ದೆಹಲಿಯಲ್ಲೇ ಇದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಅವರಿದ್ದರೂ, ಅವರು ರಾಹುಲ್ ಗಾಂಧಿ ಹೇಳಿದ್ದಕ್ಕೆ ಯೆಸ್ ಹೇಳಬೇಕು. ನೋ ಎನ್ನುವುದಕ್ಕೆ ಖರ್ಗೆ ಅವರಿಗೂ ಬರಲ್ಲ. ಹೀಗಿರುವಾಗ ರಾಹುಲ್ ಗಾಂಧಿ ʻಭೇಟಿಗೆ ಸಮಯ ಕೊಡ್ತಿಲ್ಲʼ ಎನ್ನುವುದೇ ವಿವಾದದ ಮೂಲ.
ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಹಲವು ನಾಯಕರನ್ನು ಕಳೆದುಕೊಂಡಿದೆ. ಪಕ್ಷದಿಂದ ಹೊರನಡೆದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್ ಮತ್ತು ಅಸ್ಸಾಂ ಸಿಎಂ ಆಗಿರುವ ಹಿಮಂತ ಬಿಸ್ವಾ ಶರ್ಮಾ, ಜ್ಯೋತಿರಾಧಿತ್ಯ ಸಿಂಧ್ಯಾ, ಕ್ಯಾಪ್ಟನ್ ಅಮರಿಂದರ್ ಸಿಂಗ್, ಆರ್.ಪಿ.ಎನ್ ಸಿಂಗ್, ಹಾರ್ದಿಕ್ ಪಟೇಲ್, ಪ್ರಿಯಾಂಕ್ ಚತುರ್ವೇದಿ, ಜಿತಿನ್ ಪ್ರಸಾದ್, ಮಿಲಿಂದ್ ದಿಯೋರಾ.. ಪಟ್ಟಿ ದೊಡ್ಡದಾಗುತ್ತದೆ. ಆದರೆ ರಾಹುಲ್ ಗಾಂಧಿ ಬದಲಾಗಿಲ್ಲ. ಈಗಲೂ ಅಷ್ಟೇ..
ಇನ್ನು ನಾಯಕರಾಗಿ ರಾಹುಲ್ ಗಾಂಧಿ ಅವರ ವರ್ತನೆಯೂ ಚರ್ಚೆಯಾಗುತ್ತಲೇ ಇದೆ. ಇದೀಗ ಲೋಕಸಭೆಯಲ್ಲಿ ಮೈಕ್ ಆನ್ ಇದ್ದರೂ ಆಫ್ ಆಗಿದೆ ಎಂದು ಹೇಳಿರುವುದು ವಿಡಿಯೋ ಸಮೇತ ಸಿಕ್ಕಿದೆ. ತಾವೇ ಮೈಕ್ ಆಫ್ ಮಾಡಿಕೊಂಡು, ಸುಳ್ಳು ಹೇಳುವ ವರ್ತನೆ ಪ್ರತಿಪಕ್ಷ ನಾಯಕನಿಗೆ ಶೋಭೆಯಂತೂ ಖಂಡಿತಾ ಅಲ್ಲ. ಸಂಸತ್ತಿನಲ್ಲಿ ಅವಿಶ್ವಾಸ ನಿರ್ಣಯದ ಮೇಲಿನ ಭಾಷಣ ಮುಗಿಸಿ ಹೊರಡುವಾಗ ಆಡಳಿತ ಪಕ್ಷದ ಸಂಸದರ ಕಡೆಗೆ ‘ಫ್ಲೈಯಿಂಗ್ ಕಿಸ್’ ನೀಡುವುದು, ಧಾನಿ ನರೇಂದ್ರ ಮೋದಿ ಅವರನ್ನು ದಿಢೀರ್ ಅಪ್ಪಿಕೊಂಡ ನಂತರ, ತಮ್ಮ ಸಹೋದ್ಯೋಗಿ ಸಂಸದರ ಕಡೆಗೆ ನೋಡಿ ಕಣ್ಣು ಮಿಟುಕಿಸಿದ್ದು, ಗುಜರಾತ್ ಚುನಾವಣಾ ರ‍್ಯಾಲಿಯಲ್ಲಿ “ಒಂದು ಕಡೆಯಿಂದ ಆಲೂಗಡ್ಡೆ ಹಾಕಿದರೆ ಇನ್ನೊಂದು ಕಡೆಯಿಂದ ಚಿನ್ನ ಬರುತ್ತದೆ” ಎಂಬ ಹೇಳಿಕೆ (ವಾಸ್ತವವಾಗಿ ಹೇಳಬೇಕಿದ್ದ ವಿಷಯ ಬೇರೆ. ಹಿಂದಿ ಸರಿಯಾಗಿ ಬಾರದ ಕಾರಣ ವ್ಯಂಗ್ಯ ಮಾಡಲು ಹೋಗಿ ಟ್ರೋಲ್ ಆದರು) ದೇಶದಲ್ಲಿ ಪ್ರಮುಖ ಚುನಾವಣೆಗಳು ಅಥವಾ ಪಕ್ಷದ ಬಿಕ್ಕಟ್ಟುಗಳು ಇರುವ ನಿರ್ಣಾಯಕ ಸಮಯದಲ್ಲೇ ದಿಢೀರ್ ವಿದೇಶಿ ಪ್ರವಾಸ ಕೈಗೊಳ್ಳುವ ಅವರ ನಡೆ ರಾಜಕೀಯ ಅಪ್ರಬುದ್ಧತೆ ಎಂದೇ ಟೀಕಿಸಲ್ಪಡುತ್ತಿದೆ.
ಈ ಬಾರಿಯ ಕರ್ನಾಟಕ ಕ್ಯಾಬಿನೆಟ್ ವಿಚಾರವನ್ನೇ ತೆಗೆದುಕೊಂಡರೆ ಸಂಪುಟ ವಿಸ್ತರಣೆ ಆಗಬಹುದು. ಆದರೆ ಅದು ಮಾಡಬೇಕಿರುವ ಡ್ಯಾಮೇಜ್ ಮಾಡಿ ಆಗಿರುತ್ತದೆ.



