ರಸ್ತೆಯಲ್ಲಿ ಆದ ಪರ್ಸನಲ್ ಜಗಳವನ್ನು ಸೀರಿಯಸ್ ಆಗಿ ತೆಗೆದುಕೊಂಡು, ತಾವೇ ದೂರನ್ನೂ ಕೊಟ್ಟಿದ್ದ ಜಡ್ಜ್ ಒಬ್ಬರು, ಆನಂತರ ಅದು ವಿಚಾರಣೆಗೆ ಬಂದಾಗ ತಾವೇ ಅದಕ್ಕೆ ಆದೇಶವನ್ನೂ ನೀಡಿದ್ದಾರೆ. ಇದು ಹೈಕೋರ್ಟ್ ಗಮನಕ್ಕೆ ಬಂದು ನ್ಯಾಯಾಧೀಶರಿಗೆ ಛೀಮಾರಿ ಹಾಕಿದೆ. ಜಡ್ಜ್‌ಗೆ ಬುದ್ದಿ ಹೇಳಿದ್ದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಪೀಠ. ಛೀಮಾರಿ ಹಾಕಿಸಿಕೊಂಡವರು ಮಾಲೂರು ಜಡ್ಜ್ ಗಾಯತ್ರಿ . ಇಷ್ಟಕ್ಕೂ ಘಟನೆ ಏನು ಎಂದು ನೋಡಿದರೆ ʻನಿಧಾನವಾಗಿ ಚಲಿಸಿʼ ಎಂದು ಬುದ್ದಿ ಹೇಳಿದ್ದು. ಅಷ್ಟಕ್ಕೆ ಕೇಸು, ಸ್ಟೇಷನ್ನು, ಜಾಮೀನು, ಕೋರ್ಟು ಎಂದು ಅಲೆದಾಡಿದೆ ಒಂದು ಕುಟುಂಬ.
ಘಟನೆಯ ಹಿನ್ನೆಲೆ :
ಮಾಲೂರು ಸಿವಿಲ್ ಕೋರ್ಟ್ ಜಡ್ಜ್ ಗಾಯತ್ರಿ ತಮ್ಮ ಪತಿಯೊಂದಿಗೆ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಹೋಗುತ್ತಿದ್ದಾಗ ನಡೆದಿರುವ ಘಟನೆ ಇದು. ಗಾಯತ್ರಿ ಅವರು ವೇಗವಾಗಿ ಕಾರ್ ಓಡಿಸ್ತಿದ್ರಂತೆ. ತಾಯಿಯನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿದ್ದ ವಿದ್ಯಾರ್ಥಿಯೊಬ್ಬರು ʻರಸ್ತೆಯಲ್ಲಿ ಬೈಕುಗಳೂ ಚಲಿಸುತ್ತವೆ. ದಯವಿಟ್ಟು ನಿಧಾನವಾಗಿ ಕಾರು ಓಡಿಸಿʼʼ ಎಂದಿದ್ದಾನೆ. ಮಾತಿಗೆ ಮಾತು ಬೆಳೆದಿದೆ. ಅದಾದ ನಂತರ ಬೈಕ್ ಸವಾರ ತನ್ನ ತಾಯಿಯನ್ನು ಕರೆದುಕೊಂಡು ಹೋಗಿದ್ದಾನೆ. ಆದರೆ ಗಾಯತ್ರಿ ಅವರು ಸುಮ್ಮನಾಗಿಲ್ಲ. ಜಗಳ ತಾರಕಕ್ಕೇರಿ ಜಡ್ಜ್ ಗಾಯತ್ರಿ ಹಾಗೂ ಅವರ ಪತಿ ಬೈಕ್ ಸವಾರನನ್ನು ಆತನ ಮನೆಯವರೆಗೆ ಚೇಸ್ (Chase) ಮಾಡಿಕೊಂಡು ಹೋಗಿದ್ದಾರೆ. ಬೈಕ್ ಸವಾರನ ಮನೆಯ ಬಳಿಯೂ ಜಗಳ ಮಾಡಿದ್ದಾರೆ.
ಅದಾದ ನಂತರ ತಮ್ಮ ಅಧಿಕಾರ ಬಳಸಿ ಪೊಲೀಸರ ಮೂಲಕ ಬೈಕ್ ಸವಾರ, ಆತನ ತಾಯಿ ಹಾಗೂ 70 ವರ್ಷದ ವೃದ್ಧ ತಾತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ಧಾರೆ. ಮೂವರನ್ನೂ ಅರೆಸ್ಟ್ ಮಾಡಿಸಿದ್ಧಾರೆ. ಅರೆಸ್ಟ್ ಆಗಿದ್ದವರು ಕೆ.ಎಂ.ವಿನಯ್ (24), ಅವರ ತಾಯಿ ಕವಿತಾ (47) ಹಾಗೂ ತಾತ ವೆಂಕಟೇಶ್ (69). ನಂತರ ಜಾಮೀನಿನ ಮೇಲೆ ರಿಲೀಸ್ ಕೂಡಾ ಆಗಿದ್ದಾರೆ.
ಈ ಇಡೀ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು (CCTV Footage) ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದವು. ಹೈಕೋರ್ಟ್ ವಿಚಾರಣೆ ವೇಳೆ ರಾಜ್ಯದ ಎಸ್‌ಪಿಪಿ (SPP) ಬಿ.ಎನ್. ಜಗದೀಶ್ ಅವರು ಈ ವೈರಲ್ ವಿಡಿಯೋ ದೃಶ್ಯಗಳನ್ನು ನ್ಯಾಯಮೂರ್ತಿಗಳಿಗೆ ತೋರಿಸಿದ್ದರು. ಆನಂತರ ಮತ್ತೆ ದೂರು ನೀಡಿದ್ದ ಜಡ್ಜ್ ಗಾಯತ್ರಿ, ಸೋಷಿಯಲ್ ಮೀಡಿಯಾದಿಂದ ವಿಡಿಯೋ ರಿಮೂವ್ ಮಾಡುವಂತೆ ತಾವೇ ಆದೇಶವನ್ನೂ ನೀಡಿದ್ದರು.
ಹೈಕೋರ್ಟ್ ಛೀಮಾರಿ :
ಮಾಲೂರು ಜೆಎಂಎಫ್‌ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಬೈಕ್ ಸವಾರ, ಅಜ್ಜ, ಮಹಿಳೆ ಮೇಲಿನ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಜಡ್ಜ್ ಆದ ಮಾತ್ರಕ್ಕೆ ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ. ಜಡ್ಜ್ ನಡವಳಿಕೆ ಕೋರ್ಟ್ ನೊಳಗೂ ಹೊರಗೂ ವಿಶ್ವಾಸ ಮೂಡಿಸುವಂತಿರಬೇಕು. ಜಡ್ಜ್ ತಮ್ಮ ಹುದ್ದೆಯನ್ನು ದುರುಪಯೋಗಡಿಸಿಕೊಂಡಿದ್ದಾರೆ ಎಂದು ಹೇಳಿ ಜಡ್ಜ್ ದಾಖಲಿಸಿದ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದೆ. ಸದ್ಯಕ್ಕೆ ನ್ಯಾಯಾಧೀಶರಿಗೆ ನಿಧಾನವಾಗಿ ಚಲಿಸಿ ಎಂದು ಬುದ್ದಿ ಹೇಳಿದ ತಪ್ಪಿಗೆ ಕೇಸು, ಕೋರ್ಟು, ಜಾಮೀನು ಎಂದು ಅಲೆದಾಡಿದ್ದ ಕುಟುಂಬಕ್ಕೆ ಚಿಕ್ಕದೊಂದು ರಿಲೀಫ್ ಸಿಕ್ಕಿದೆ.



