ಆರೋಗ್ಯ ಇಲಾಖೆಯು ಪದವಿ ಮತ್ತು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ HIV ಟೆಸ್ಟ್ ಕಡ್ಡಾಯ ಮಾಡಿದೆ. ಒಂದೊಂದೇ ಕಾಲೇಜಿನಲ್ಲಿ ಈ ರೀತಿಯ ಪರೀಕ್ಷೆ ಶುರುವಾಗಲಿದೆ. ಎಲ್ಲ ವಿದ್ಯಾರ್ಥಿಗಳೂ ಟೆಸ್ಟ್ ಮಾಡಿಸಿಕೊಳ್ಳಬೇಕು. ಇದಕ್ಕೆ ಕಾರಣ ಇದೆ. ಅದು ಸೀರಿಯಸ್ ಆಗಿದೆ. ಕರ್ನಾಟಕದ 18 ರಿಂದ 25 ವರ್ಷದೊಳಗಿನ 7,000ಕ್ಕೂ ಹೆಚ್ಚು ಕಾಲೇಜು ವಿದ್ಯಾರ್ಥಿಗಳಲ್ಲಿ ಹೆಚ್‌ಐವಿ (HIV) ಸೋಂಕು ದೃಢಪಟ್ಟಿದೆ. ಆತಂಕ ಹುಟ್ಟಿಸಿರುವುದೇ ಅದು.
18 ರಿಂದ 35 ವರ್ಷದ ಯುವಜನರಲ್ಲಿ ಹೆಚ್‌ಐವಿ ಸೋಂಕು ವೇಗವಾಗಿ ಹರಡುತ್ತಿರುವುದು ಎಂತಹವರಿಗೂ ಭಯ ಹುಟ್ಟಿಸುತ್ತದೆ. ಕರ್ನಾಟಕದಲ್ಲಿ ಸುಮಾರು 54,000 ಸೋಂಕಿತರಿಗೆ ತಮಗೆ ಸೋಂಕು ಇದೆ ಎಂಬುದೇ ಗೊತ್ತಿಲ್ಲ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶ. ಗುಣ ಪಡಿಸುವುದಕ್ಕಂತೂ ಆಗಲ್ಲ. ಆದರೆ ಕನಿಷ್ಠ ಮುಂಜಾಗ್ರತೆ ವಹಿಸಬಹುದಲ್ಲವೇ..
ಹೆಚ್‌ಐವಿ ಸೋಂಕಿತರ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. ಅಂದಹಾಗೆ ಇದು ಕಡ್ಡಾಯ ಎನ್ನಲಾಗುತ್ತಿದ್ದರೂ ಕಡ್ಡಾಯ ಅಲ್ಲ. ರೋಗ್ಯ ಶಿಬಿರಗಳನ್ನು ಕಡ್ಡಾಯವಾಗಿ ಆಯೋಜಿಸಲು ಸೂಚಿಸಲಾಗಿದ್ದರೂ, ವಿದ್ಯಾರ್ಥಿಗಳ ಒಪ್ಪಿಗೆಯಿಲ್ಲದೆ ಯಾವುದೇ ಪರೀಕ್ಷೆ ಮಾಡಲಾಗುವುದಿಲ್ಲ. ವಿದ್ಯಾರ್ಥಿಗಳ ಮುಜುಗರ ತಪ್ಪಿಸಲು ಸಂಪೂರ್ಣ ಗೌಪ್ಯತೆ ಕಾಯ್ದುಕೊಳ್ಳಲಾಗುತ್ತಿದ್ದು, ಸ್ವಯಂ ಅಪಾಯ ಮೌಲ್ಯಮಾಪನಕ್ಕಾಗಿ ‘ನಿಮ್ಮ ಹೆಚ್‌ಐವಿ ಸ್ಥಿತಿ ತಿಳಿದುಕೊಳ್ಳಿ’ ಎಂಬ QR ಕೋಡ್ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ.
ಗೌಪ್ಯತೆ ಕಾಪಾಡಿಕೊಳ್ಳುತ್ತಾರೆ. ಭಯ ಬೇಡ :
QR ಕೋಡ್ ಸ್ವಯಂ ಮೌಲ್ಯಮಾಪನ ವ್ಯವಸ್ಥೆಯು ವಿದ್ಯಾರ್ಥಿಗಳ ಗೌಪ್ಯತೆಯನ್ನು ಕಾಪಾಡುತ್ತಾ, ಅವರು ಹೆಚ್‌ಐವಿ (HIV) ಅಪಾಯದ ಮಟ್ಟದಲ್ಲಿದ್ದಾರೆಯೇ ಎಂಬುದನ್ನು ಸ್ವತಃ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಕಾಲೇಜುಗಳಲ್ಲಿ ಪ್ರದರ್ಶಿಸಲಾದ ಕರಪತ್ರಗಳು ಅಥವಾ ಗೋಡೆಗಳ ಮೇಲಿರುವ ‘ನಿಮ್ಮ ಹೆಚ್‌ಐವಿ ಸ್ಥಿತಿ ತಿಳಿದುಕೊಳ್ಳಿ’ QR ಕೋಡ್ ಅನ್ನು ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕ ಸ್ಕ್ಯಾನ್ ಮಾಡಬೇಕು. ಸ್ಕ್ಯಾನ್ ಮಾಡಿದ ತಕ್ಷಣ ಅದು ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (KSACS) ಅಧಿಕೃತ ಮತ್ತು ಸುರಕ್ಷಿತ ವೆಬ್ ಪುಟಕ್ಕೆ ಕರೆದೊಯ್ಯುತ್ತದೆ. ಅಲ್ಲಿ ವಿದ್ಯಾರ್ಥಿಯ ಜೀವನಶೈಲಿ, ಲೈಂಗಿಕ ನಡವಳಿಕೆ ಹಾಗೂ ಮಾದಕ ವಸ್ತು ಬಳಕೆಯ ಅಭ್ಯಾಸಗಳಿಗೆ ಸಂಬಂಧಿಸಿದ ಕೆಲವು ಸರಳ ಪ್ರಶ್ನೆಗಳಿರುತ್ತವೆ. ವಿದ್ಯಾರ್ಥಿ ನೀಡುವ ಉತ್ತರಗಳ ಆಧಾರದ ಮೇಲೆ, ಆನ್‌ಲೈನ್ ಸಿಸ್ಟಮ್ ಅವರ ಅಪಾಯದ ಮಟ್ಟವನ್ನು (Risk Level) ಸ್ವಯಂಚಾಲಿತವಾಗಿ ಲೆಕ್ಕಾಚಾರ ಮಾಡುತ್ತದೆ. ಮೌಲ್ಯಮಾಪನದ ಕೊನೆಯಲ್ಲಿ, ವಿದ್ಯಾರ್ಥಿಗೆ ಹೆಚ್‌ಐವಿ ಪರೀಕ್ಷೆಯ ಅಗತ್ಯವಿದೆಯೇ ಅಥವಾ ಇಲ್ಲವೇ ಎಂಬ ಸಲಹೆಯನ್ನು ಸಿಸ್ಟಮ್ ನೀಡುತ್ತದೆ.
ಈ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಯ ಹೆಸರು, ಫೋನ್ ನಂಬರ್ ಅಥವಾ ಯಾವುದೇ ವೈಯಕ್ತಿಕ ವಿವರಗಳನ್ನು ಸಂಗ್ರಹಿಸುವುದಿಲ್ಲ. ಆದ್ದರಿಂದ ಯಾವುದೇ ಮುಜುಗರವಿಲ್ಲದೆ ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು.
KSAPS ಪ್ರಕಾರ, ಈ HIV ತಪಾಸಣಾ ಆರೋಗ್ಯ ಶಿಬಿರ ಕಾರ್ಯಕ್ರಮ ಮುಂದಿನ 8 ತಿಂಗಳ ಕಾಲ ನಡೆಯಲಿದೆ. ಮೊದಲ 2 ತಿಂಗಳಿನಲ್ಲಿ ಓರಿಯಂಟೇಶನ್, ಅಭಿಯಾನ ಉದ್ಘಾಟನೆ ಮತ್ತು ಕ್ಯಾಂಪಸ್ ಜಾಗೃತಿ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಆಗಸ್ಟ್ 12ರಂದು ಅಂತರಾಷ್ಟ್ರೀಯ ಯುವ ದಿನಾಚರಣೆಯಂದು ಎಚ್‌ಐವಿ ತಡೆಗಟ್ಟುವಿಕೆ ಮತ್ತು ರೋಗ ನಿಯಂತ್ರಣದ ಕುರಿತ ಫ್ಲ್ಯಾಶ್ ಮಾಬ್‌ಗಳು, ಬೀದಿ ನಾಟಕಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಜಾಗೃತಿ ಪ್ರದರ್ಶನಗಳನ್ನು ನಡೆಸಲಾಗುತ್ತಿದೆ.



