ಬ್ಲಾಕ್ ಮೇಲ್‌ಗೆ ಒಳಗಾದ ಉದ್ಯಮಿಯೊಬ್ಬರು ಕಾಂಗ್ರೆಸ್ ಮುಖಂಡರಾದ ನಿಝಾಮ್ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರಿಗೆ 2.77 ಕೋಟಿ ಕೊಟ್ಟಿದ್ಧಾರೆ. ಇಷ್ಟಾದರೂ ನಿಂತಿಲ್ಲ. ಸುಮಾರು 2 ವರ್ಷಗಳಿಂದ ನಡೆಯುತ್ತಿದ್ದ ಬ್ಲಾಕ್ ಮೇಲ್. ಕೊನೆಗೆ ಕಿರುಕುಳ ತಡೆಯಲಾರದೆ ಪೊಲೀಸರಿಗೆ ದೂರು ಕೊಟ್ಟಿದ್ಧಾರೆ. ಅರೆಸ್ಟ್ ಆಗಿರುವ ಇಬ್ರಾಹಿಂ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ. ಅಂದಹಾಗೆ ಅಷ್ಟೆಲ್ಲ ಬಾರಿ ದುಡ್ಡು ಕೇಳಿದಾಗ ಆತ ಕೊಟ್ಟಿದ್ದಾದರೂ ಯಾಕೆ..? ಆ ಉದ್ಯಮಿ ಮಾಡಿಕೊಂಡಿದ್ದ ಎಡವಟ್ಟು ಏನು ಎಂದು ನೋಡಿದರೆ ಬೇರೆಯದೇ ಕಥೆ ಓಪನ್ ಆಗುತ್ತದೆ.
ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್(Nizam) ಮತ್ತು ಆತನ ಸ್ನೇಹಿತ ಜಿತೇಶ್(jitesh) ಬಂಧಿತರು. 2024ರಲ್ಲೇ ಉದ್ಯಮಿಗೆ ಹನಿಟ್ರ್ಯಾಪ್(Honeytrap) ಖೆಡ್ಡಾ ತೋಡ್ತಾರೆ. ಆ ಉದ್ಯಮಿಗೆ ಮದುವೆಯಾಗಿದೆ. ಕುಟುಂಬವೂ ಇದೆ. ಆದರೆ.. ಆ ಉದ್ಯಮಿ ಒಬ್ಬ ಸಲಿಂಗ ಕಾಮಿಯೂ ಹೌದು. ಈತನ ಬಳಿ ಈಗ ಅರೆಸ್ಟ್ ಆಗಿರುವ ಜಿತೇಶ್ ಆತ್ಮೀಯವಾಗಿ ವರ್ತಿಸಿದ್ಧಾನೆ. ಟ್ರ್ಯಾಪ್ ಮಾಡಿದ್ಧಾರೆ. ಆಮೇಲೆ ಜಿತೇಶ್ ದುಡ್ಡು ಕೇಳೋಕೆ ಶುರು ಮಾಡಿದ್ದಾನೆ.
ಜಿತೇಶ್, ಉದ್ಯಮಿಯ ಬಳಿ ಆತ್ಮೀಯವಾಗಿ ವರ್ತಿಸಿದ್ದಷ್ಟೇ ಅಲ್ಲ, ವಿಡಿಯೋವನ್ನೂ ಕೂಡಾ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ಈ ವಿಡಿಯೋವನ್ನು ನಿನ್ನ ಹೆಂಡತಿಗೆ ತೋರಿಸುತ್ತೇನೆ ಎಂದು ಹೇಳಿ ಬ್ಲಾಕ್ ಮೇಲ್ ಮಾಡ್ತಾ ಇದ್ದ. ಹೆದರಿದ ಆ ಉದ್ಯಮಿ ಜಿತೇಶ್‌ಗೆ 35 ಲಕ್ಷ ಕೊಟ್ಟಿದ್ದ. ಅದೂ ಕೂಡಾ ಚೆಕ್ ಮೂಲಕವೇ ಹಣ ನೀಡಿದ್ದ.
ಆದರೆ ಅಲ್ಲಿಗೆ ಪ್ರಕರಣ ಮುಗಿದಿರಲಿಲ್ಲ. ಜಿತೇಶ್ ಮತ್ತೆ ಮತ್ತೆ ಹಣಕ್ಕೆ ಡಿಮ್ಯಾಂಡ್ ಇಡೋಕೆ ಶುರು ಮಾಡಿದ. ಜಿತೇಶ್ ಕಾಟ ತಡೆಯೋಕೆ ಆಗದೆ ಆ ಉದ್ಯಮಿ ಯುವ ಕಾಂಗ್ರೆಸ್ ಮುಖಂಡ ನಿಝಾಮ್‌ಗೆ ತಿಳಿಸಿ ಬಚಾವ್ ಮಾಡುವಂತೆ ತಿಳಿಸಿದ್ದ. ಆದರೆ ದುಡ್ಡು ಇರುವ ಮಿಕ ಎಂದು ಗೊತ್ತಾಗಿದ್ದೇ ತಡ, ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಂ ಕೂಡ ಜಿತೇಶ್ ಜೊತೆ ಕೈಜೋಡಿಸಿದ್ದ.
ನಿಝಾಂ ಇಬ್ರಾಹಿಂ ಏನು ಮಾಡಿದ್ದನೆಂದರೆ ಉದ್ಯಮಿಗೆ ತೊಂದರೆ ಕೊಡ್ತಿದ್ದ ಜಿತೇಶ್ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ ಎಂದು ಕಥೆ ಕಟ್ಟಿದ್ದ. ನಿಝಾಮ್ ಮಾತನ್ನು ನಂಬಿದ್ದ ಉದ್ಯಮಿ ಕೇಸ್ ಮುಚ್ಚಿ ಹಾಕೋಕೆ ಮತ್ತೆ ದುಡ್ಡು ಕೊಟ್ಟಿದ್ದ. ಪದೇ ಪದೇ ಕೊಡುವಂತೆ ಮಾಡಿದ್ದ ನಿಝಾಂ ಇಬ್ರಾಹಿಂ. ಆದರೆ ಒಂದು ದಿನ ಸತ್ತಿದ್ದಾನೆ ಎಂದು ನಂಬಿಸಿದ್ದ ಜಿತೇಶ್, ಉದ್ಯಮಿಯ ಕಣ್ಣಿಗೆ ಬಿದ್ದಿದ್ದ. ಅರೆ.. ಆತ್ಮಹತ್ಯೆ ಮಾಡಿಕೊಂಡು ಸತ್ತವನು ಇನ್ನ ಬದುಕಿದ್ದಾನಾ ಎಂದು ಗೊತ್ತಾಗುತ್ತಿದ್ದಂತೆಯೇ ಉದ್ಯಮಿಗೆ ತಪ್ಪಾಗಿರುವುದು ಎಲ್ಲಿ ಎಂದು ಗೊತ್ತಾಗಿತ್ತು.
ಉದ್ಯಮಿಗೆ ನ್ಯಾಯ ಕೊಡಿಸುವ ಬದಲು, ನಿಝಾಮ್ ಇಬ್ರಾಹಿಂ ಆರೋಪಿ ಜಿತೇಶ್ ಜೊತೆ ಕೈಜೋಡಿಸಿದ. ಇಬ್ಬರೂ ಸೇರಿ ಉದ್ಯಮಿಯನ್ನು ಮತ್ತಷ್ಟು ಹೆದರಿಸಿ, ಹಂತ ಹಂತವಾಗಿ ಒಟ್ಟು ₹2 ಕೋಟಿ 77 ಲಕ್ಷ ರೂಪಾಯಿಗಳನ್ನು ದೋಚಿದ್ದಾರೆ.
ಕೂಡಲೇ ಮಂಗಳೂರಿನ ಉರ್ವ ಪೊಲೀಸ್ ಠಾಣೆಗೆ ಉದ್ಯಮಿ ದೂರು ನೀಡಿದ್ದಾರೆ. ಪೊಲೀಸರು ಜಿತೇಶ್ ಜಾಗೂ ನಿಝಾಮ್‌ನನ್ನು ಬಂಧಿಸಿದ್ದಾರೆ. ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆ, ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವದಿಂದ ನಿಝಾಂನನ್ನು ತಕ್ಷಣದಿಂದಲೇ ಉಚ್ಛಾಟನೆ ಮಾಡಿರುವುದಾಗಿ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ತಿಳಿಸಿದ್ದಾರೆ.



