ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ(Congress guarantee schemes)ಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ(Gruhalakshmi scheme)’ ಯೋಜನೆಯನ್ನು ಹಂತ ಹಂತವಾಗಿ ರಿಪೇರಿ ಮಾಡಲಾಗ್ತಾ ಇದೆ. ಗೃಹಲಕ್ಷ್ಮಿ ಯೋಜನೆಯಡಿ ಅರ್ಹವಲ್ಲದ ಮತ್ತು ತಪ್ಪು ಮಾಹಿತಿಯಿಂದ ನೊಂದಣಿಯಾಗಿದ್ದ ಒಟ್ಟು 2.13 ಲಕ್ಷಕ್ಕೂ ಹೆಚ್ಚು (2,13,000+) ಫಲಾನುಭವಿಗಳನ್ನು ಇದುವರೆಗೆ ಪಟ್ಟಿಯಿಂದ ಅಧಿಕೃತವಾಗಿ ರದ್ದುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆ ಒಂದರಲ್ಲೇ 12,719 ಗೃಹಲಕ್ಷ್ಮಿ ರದ್ಧಾಗಿದೆ. ಇನ್ನೂ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಅಂದಹಾಗೆ ಗೃಹ ಲಕ್ಷ್ಮಿ ಹಣ ಪಡೆದಿರುವ ಅನರ್ಹರು ಇದುವರೆಗೆ ಪಡೆದಿರುವ ಹಣವನ್ನು ಸರ್ಕಾರಕ್ಕೆ ವಾಪಸ್ ಕಟ್ಟಬೇಕು.
ಯಾವ ಯಾವ ಕಾರಣಕ್ಕೆ ಗೃಹಲಕ್ಷ್ಮಿ ಸ್ಕೀಂ ರದ್ದು..?
ನಿಯಮದ ಪ್ರಕಾರ ಫಲಾನುಭವಿ ಅಥವಾ ಆಕೆಯ ಪತಿ ತೆರಿಗೆ ಪಾವತಿದಾರರಾಗಿರಬಾರದು. ಯಾವುದೇ ರೀತಿಯಲ್ಲಿ ಇನ್ ಕಂ, ಜಿಎಸ್‌ಟಿ ಟ್ಯಾಕ್ಸ್ ಕಟ್ಟುತ್ತಿರಬಾರದು. ಅಂದ್ರೆ ಉದ್ಯಮಿಯೂ ಆಗಿರಬಾರದು.
ಸುಮಾರು 1.08 ಲಕ್ಷ ಮಹಿಳೆಯರು ಆದಾಯ ತೆರಿಗೆ ಪಾವತಿಸುತ್ತಿರುವುದು ‘ಕುಟುಂಬ ಆ್ಯಪ್’ (Kutumba App) ಡೇಟಾ ಮೂಲಕ ಪತ್ತೆಯಾಗಿದ್ದರಿಂದ ಅವರ ಹೆಸರನ್ನು ರದ್ದುಗೊಳಿಸಲಾಗಿದೆ.
ವ್ಯವಹಾರದ ಉದ್ದೇಶಕ್ಕಾಗಿ ಅಥವಾ ಇನ್ಯಾವುದೋ ಕಾರಣಕ್ಕೆ ಜಿಎಸ್‌ಟಿ (GST) ನೊಂದಣಿ ಮಾಡಿಕೊಂಡಿದ್ದ ಸುಮಾರು 1.04 ಲಕ್ಷ ಮಹಿಳೆಯರನ್ನು ಯೋಜನೆಯಿಂದ ಕೈಬಿಡಲಾಗಿದೆ.
ಇತ್ತೀಚಿನ ಫೆಬ್ರವರಿ ವರದಿಯ ಪ್ರಕಾರ, ಮತ್ತೊಂದು ಹಂತದಲ್ಲಿ ತೆರಿಗೆ ಹಿನ್ನೆಲೆ ಹೊಂದಿದ್ದ ಹೆಚ್ಚುವರಿ 52,000 ಕ್ಕೂ ಹೆಚ್ಚು ಮಹಿಳೆಯರ ಖಾತೆಗಳನ್ನು ಸ್ವಯಂಚಾಲಿತವಾಗಿ ರದ್ದು ಮಾಡಲಾಗಿದೆ.
ಮರಣ ಹೊಂದಿದ ಸುಮಾರು 1.04 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಅವರ ಖಾತೆಗಳಿಗೆ ಹಣ ಜಮೆಯಾಗುವುದನ್ನು ತಡೆಹಿಡಿಯುವ ಮತ್ತು ಪಟ್ಟಿಯಿಂದ ತೆಗೆದುಹಾಕುವ ಪ್ರಕ್ರಿಯೆ ನಡೆಯುತ್ತಿದೆ.
ಉದಾಹರಣೆಗೆ, ಕೇವಲ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಇತ್ತೀಚಿನ ತಪಾಸಣೆಯಲ್ಲಿ 9,251 ಮೃತ ಫಲಾನುಭವಿಗಳ ಹೆಸರನ್ನು ರದ್ದುಗೊಳಿಸಲಾಗಿದೆ. ಬೆಂಗಳೂರು ದಕ್ಷಿಣ(Bengaluru south) ಜಿಲ್ಲೆಯೊಂದರಲ್ಲೇ ಈವರೆಗೆ 6,624 ಮೃತರ ಖಾತೆಗೆ ಯೋಜನೆಯ ಹಣ ಜಮಾ ಆಗಿರುವುದು ಪತ್ತೆಯಾಗಿದೆ. ಜೊತೆಗೆ, ಐಟಿ-ಜಿಎಸ್ ಟಿ ಪಾವತಿಸುತ್ತಿರುವ 4,800 ಮಹಿಳೆಯರೂ ಯೋಜನೆಯ ಫಲಾನುಭವಿಗಳಾಗಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಒಟ್ಟು 12,719 ‘ಗೃಹಲಕ್ಷ್ಮಿ’ಯರ ಹೆಸರನ್ನು ಯೋಜನೆಯ ಫಲಾನುಭವಿಗಳ ಪಟ್ಟಿಯಿಂದ ಕೈಬಿಡಲಾಗಿದೆ. ಬಾಗಲಕೋಟೆಯಲ್ಲಿ ಸುಮಾರು ಒಂದು ಸಾವಿರ ಮಹಿಳೆಯರನ್ನು ಗೃಹಲಕ್ಷ್ಮಿಯಿಂದ ಕೈಬಿಡಲಾಗಿದೆ.
‘ಮೃತ ಫಲಾನುಭವಿಗಳ ಖಾತೆಗಳಿಗೆ ಜಮಾ ಆಗಿರುವ ಹಣವನ್ನು ಹಿಂಪಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಮೃತ ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗಿ, ಯೋಜನೆ ದುರುಪಯೋಗ ಆಗುವುದನ್ನು ತಪ್ಪಿಸಲು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತಿದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಜೆ.ಆರ್.ದಿನೇಶ್ ತಿಳಿಸಿದ್ದಾರೆ.



