ಇಂತಿಫದಾ. ಇತ್ತೀಚೆಗೆ ಕೇಳಿ ಬಂದ ಹೊಸ ಹೆಸರು. ಇದು ಇತ್ತೀಚೆಗಷ್ಟೇ ದೇಶದಾದ್ಯಂತ ನಿಷೇಧಕ್ಕೊಳಗಾಗಿರುವ ಪಿಎಫ್ಐ ಹೇಳುತ್ತಿರೋ ಪದ. ಮೂಲ ಅರೇಬಿಕ್. ಆ ಮೂಲಕ ಮತ್ತೆ ಮರಳಿ ಬರುತ್ತೇವೆ ಎಂದು ಹೇಳುತ್ತಿದೆ ಪಿಎಫ್ಐ. ಇಂತಿಫದಾ ಎಂದರೆ ಹಿಂಸಾಚಾರ, ಪ್ರತಿರೋಧ, ನಡುಗಿಸುವುದು ಎಂಬರ್ಥಗಳಿವೆ. ಪಿಎಫ್ಐ ಬ್ಯಾನ್ ಕೊಟ್ಟಿರೋ ಹೊಸ ಉಡುಗೊರೆ ಇಂತಿಫದಾ. ಇವೆಲ್ಲದರ ಅರ್ಥ ಡಿಕ್ಷನರಿ ಪ್ರಕಾರ ಇಷ್ಟೆ. ಆದರೆ ಬಳಕೆಯಾಗಿದ್ದು ಬೇರೆ ಬೇರೆ ರೀತಿಗಳಲ್ಲಿ. ಹಿಂಸಾತ್ಮಕ ಸಂಘರ್ಷ, ದಂಗೆ ಎಂಬ ರೀತಿಯಲ್ಲಿ.
ಇದಕ್ಕೂ ಮುನ್ನ ಕೇಳಿ ಬಂದಿದ್ದದ್ದು ಸರ್ ತನ್ ಸೇ ಜುದಾ. ನೂಪುರ್ ಶರ್ಮಾ ವಿವಾದದ ನಂತರ ದೇಶದ ಹಲವೆಡೆ ಗಲಭೆಗಳೆದ್ದಿದ್ದವು. ಆ ಒಂದು ಪದದ ಹೆಸರಲ್ಲಿ ಜೀವ ಬಿಟ್ಟವರ ಸಂಖ್ಯೆಯೂ ಏರುತ್ತಲೇ ಇತ್ತು. ಈಗ ಇಂತಿಫದಾ ಎಂಬ ಹೆಸರು ಕೇಳಿ ಬಂದಿದೆ.
ಇಂತಿಫದಾ ಎಂಬ ಹೆಸರು ಕೇಳಿ ಬಂದಿದ್ದ ದೇಶಗಳಲ್ಲೆಲ್ಲ ಹಿಂಸೆ ತಾಂಡವವಾಡಿದೆ. ದೊಡ್ಡ ಮಟ್ಟದ ದಂಗೆಗಳಾಗಿವೆ. ಕೆಲವು ದೇಶಗಳು ಇಂತಿಫದಾ ಹೆಸರು ಕೇಳಿದ್ರೆ ಸಾಕು, ನಡುಗುತ್ತವೆ. ಈ ಇಂತಿಫದಾ ಎಂಬ ಹೆಸರು ಮೊದಲು ಕೇಳಿ ಬಂದಿದ್ದು 1952ರಲ್ಲಿ. ಈಜಿಪ್ಟ್ ಕ್ರಾಂತಿಯಿಂದ ಸ್ಫೂರ್ತಿಗೊಂಡು ಇರಾಕ್ನಲ್ಲಿ ಹುಟ್ಟಿದ್ದು ಇಂತಿಫದಾ. ಹಶೆಮಿತಿ ಸಾಮ್ರಾಜ್ಯದ ವಿರುದ್ಧ ಕಮ್ಯುನಿಸ್ಟರು ನಡೆಸಿದ ಚಳವಳಿ. 1970ರಲ್ಲಿ ಅದು ಸ್ಪೇನ್ನಲ್ಲಿ ಗದ್ವಾಲ್ ವಿರುದ್ಧ ನಡೆಯಿತು. ಅಲ್ಲಿಯವರೆಗೆ ಅರಬ್ ದೇಶಗಳಲ್ಲಿ ದಬ್ಬಾಳಿಕೆ ನಡೆಸುತ್ತಿರುವವರ ಹೋರಾಟವೇ ಆಗಿತ್ತು.


ಸೆಪ್ಟೆಂಬರ್ 22 ರಂದು ದೇಶದಾದ್ಯಂತ ದಾಳಿ ನಡೆಸಿತ್ತು ಎನ್ಐಎ. ಪಿಎಫ್ಐ ಪ್ರಮುಖ ಕಚೇರಿಗಳು, ಪ್ರಮುಖ ಮುಖಂಡರುಗಳ ಮನೆಗಳ ಮೇಲೆ ದಾಳಿ ನಡೆಸಿ, ಕೆಲವು ಪ್ರಮುಖರನ್ನು ಬಂಧಿಸಲಾಗಿತ್ತು. ಅದಾದ ಏಳನೇ ದಿನಕ್ಕೆ, ಮತ್ತೊಮ್ಮೆ ದಾಳಿ ನಡೆಸಿ ಸೆಪ್ಟೆಂಬರ್ 27 ಕೇಂದ್ರ ಸರ್ಕಾರ, ಪಿಎಫ್ಐ ಮತ್ತು ಅದರ 8 ಅಂಗ ಸಂಸ್ಥೆಗಳನ್ನು ಬ್ಯಾನ್ ಮಾಡಿತ್ತು. ಬ್ಯಾನ್ ಮಾಡಿದ ನಂತರ ಎಲ್ಲ ಸಂಘಟನೆಗಳ ಸೋಷಿಯಲ್ ಮೀಡಿಯಾ ಅಕೌಂಟ್ಗಳು ಬ್ಲಾಕ್ ಆಗಿದ್ದವು. ಅವುಗಳಲ್ಲಿ ಕೇವಲ ಒಂದು ವಾರದ ನಂತರ ಕಾಣಿಸಿಕೊಂಡಿದೆ ಹಮಾಸ್ ಉಗ್ರರ ಇಂತಿಫದಾ.

ತಾಲ್ಲೂಕು ಮಟ್ಟದಲ್ಲಿ ಮತ್ತು ಸ್ಥಳೀಯ ಮಟ್ಟದಲ್ಲಿ ಚಾಲ್ತಿಯಲ್ಲಿದ್ದ ಕೆಲವೊಂದಿಷ್ಟು ಸೋಷಿಯಲ್ ಮೀಡಿಯಾ ಪೇಜ್ಗಳು ಹಾಗೇ ಉಳಿದುಕೊಂಡಿದ್ವು ಅವುಗಳಲ್ಲಿ ಇಂತಿಫದಾ ಹೆಸರು ಕಾಣಿಸಿಕೊಂಡಿದೆ. ಸಿಮಿ ನಿಷೇಧದ ನಂತರ ಅದೇ ಸಂಘಟನೆಯ ಮುಖಂಡರು ಪಿಎಫ್ಐ ಹುಟ್ಟುಹಾಕಿದರು. ಕೇವಲ 4 ವರ್ಷದಲ್ಲಿ. ಈಗ ಮತ್ತೊಮ್ಮೆ ಮತ್ತೊಂದು ಅವತಾರದಲ್ಲಿ ಭುಗಿಲೇಳುವ ಸೂಚನೆ ಕೊಟ್ಟಿದೆ ಪಿಎಫ್ಐ.



