ನಾನು ಈ ಬಾರಿ ಬಾದಾಮಿಯಲ್ಲಿ ನಿಲ್ಲಲ್ಲ. ಈ ಮಾತನ್ನು ಸಿದ್ದರಾಮಯ್ಯ ಹಲವು ಬಾರಿ ಸ್ಪಷ್ಟವಾಗಿ ಹೇಳಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣ ಬಾದಾಮಿ ದೂರ ಎನ್ನುವುದೊಂದೇ. ಕ್ಷೇತ್ರಕ್ಕೆ ಬೇಕೆಂದಾಗ ಹೋಗೋಕೆ ಆಗಲ್ಲ ಎನ್ನುವ ಸಿದ್ದು ಕ್ಷೇತ್ರವನ್ನು ಈ ಬಾರಿಯೂ ಬದಲಾವಣೆ ಮಾಡುವ ಪ್ರಯತ್ನದಲ್ಲಿದ್ದಾರೆ. ಸ್ಸೋ.. ಮತ್ತೊಮ್ಮೆ ಸಿದ್ದರಾಮಯ್ಯ ಕ್ಷೇತ್ರ ಬದಲಿಸುತ್ತಿದ್ದಾರೆ. ಪ್ರತಿಪಕ್ಷಗಳು ಏನೇ ಟೀಕಿಸಿದ್ರೂ ಅದಕ್ಕೆ ಸಿದ್ದು ಅವರದ್ದು ಡೋಂಟ್ ಕೇರ್ ಉತ್ತರ. ಸಿದ್ದು ಮುಂದೆ ಅವರೇ ಹೇಳುವಂತೆ ಹಲವಾರು ಕ್ಷೇತ್ರಗಳಿವೆ. ಮಗ ಯತೀಂದ್ರನಿಗೆ ಬಿಟ್ಟುಕೊಟ್ಟ ವರುಣಾ, ಜಮೀರ್ ಅಹ್ಮದ್ ಖಾನ್‍ರ ಚಾಮರಾಜಪೇಟೆ ಸೇರಿದಂತೆ ಹಲವು ಕ್ಷೇತ್ರಗಳಿಂದ ಆಫರ್ ಇದೆ. ಇದರ ಮಧ್ಯೆ ಒಂದು ಸೀಕ್ರೆಟ್ ಸಮೀಕ್ಷೆಯೂ ನಡೆದಿದೆ.
ಖಾಸಗಿ ಸಮೀಕ್ಷೆಯೊಂದರ ಪ್ರಕಾರ ನಡೆಸಿರುವ ಸಮೀಕ್ಷೆಯಲ್ಲಿ ಕೋಲಾರವೇ ಸುರಕ್ಷಿತ ಹಾಗೂ ಗೆಲ್ಲುವ ಕ್ಷೇತ್ರ ಎಂಬ ಬಗ್ಗೆ ನಂಬಿಕೆಯೂ ಕುದುರಿದೆ. ಕೋಲಾರದಲ್ಲಿ ನಿಂತರೆ ಅಲ್ಲಿ ಎದುರಾಗುವ ಪ್ರತಿಸ್ಪರ್ಧಿ ಬಿಜೆಪಿ ಅಲ್ಲ, ಜೆಡಿಎಸ್ ಎಂದು ಸಮೀಕ್ಷೆ ಹೇಳಿದೆ. ಕುರುಬರು ಹಾಗೂ ಅಲ್ಪಸಂಖ್ಯಾತ ಮುಸ್ಲಿಮರ ಸಂಖ್ಯೆ ಕ್ಷೇತ್ರದಲ್ಲಿ ನಿರ್ಣಾಯಕ. ದಲಿತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ ಕೋಲಾರ ಅಹಿಂದ ಚಳುವಳಿಗೆ ನಾಂದಿ ಹಾಡಿದ್ದ ಜಿಲ್ಲೆ. 1998ರಲ್ಲಿ ಜಾಲಪ್ಪ ನೇತೃತ್ವದಲ್ಲಿ ಮೊದಲ ಅಹಿಂದ ಸಮಾವೇಶ ನಡೆದಿತ್ತು. ಈಗ ಸಿದ್ದರಾಮಯ್ಯ ಅಹಿಂದ ನಾಯಕ. ಇದೂ ಕೂಡಾ ಸಹಾಯಕಾರಿಯಾಗಲಿದೆ.
ಈಗ ಕೋಲಾರಕ್ಕೆ ಸಿದ್ದರಾಮಯ್ಯ ನಿಲ್ಲಬೇಕೆಂದರೆ ಕಾಂಗ್ರೆಸ್ ಬಾಗಿಲು ತಟ್ಟಿರುವ ಕೋಲಾರದ ಜೆಡಿಎಸ್ ಶಾಸಕ ಕೆ. ಶ್ರೀನಿವಾಸ ಗೌಡ ತ್ಯಾಗ ಮಾಡಬೇಕು. ಈಗ ಬಿಜೆಪಿಯಲ್ಲಿರುವ ಸಿದ್ದರಾಮಯ್ಯ ಶಿಷೈ ವರ್ತೂರು ಪ್ರಕಾಶ್ ಕೂಡಾ ಇದೇ ಕ್ಷೇತ್ರದವರು. ಆದರೆ ಸಿದ್ದರಾಮಯ್ಯ ಕ್ಷೇತ್ರದಲ್ಲಿ ನಿಲ್ಲುವುದಾದರೆ ಗೆಲುವು ಶೇ.70ರಷ್ಟು ಫಿಕ್ಸ್ ಎಂದು ಸೀಕ್ರೆಟ್ ಸರ್ವೆ ಹೇಳಿದೆ.
ಟೆನ್ಷನ್ ಇರೋದು ಕೆ.ಎಚ್.ಮುನಿಯಪ್ಪನವರದ್ದು. ಇತ್ತೀಚೆಗೆ ಪಕ್ಷದಿಂದ ಒಂದು ಕಾಲು ಹೊರಗಿಟ್ಟಿದ್ದ ಮುನಿಯಪ್ಪನವರನ್ನು ಹರಸಾಹಸ ಮಾಡಿ ಉಳಿಸಿಕೊಳ್ಳಲಾಗಿದೆ. ಕೋಲಾರ ವಿಧಾನಸಭಾ ಕ್ಷೇತ್ರ ಜಾತಿ ಲೆಕ್ಕಾಚಾರ ನೋಡಿದರೆ, ದಲಿತ ನಾಯಕ ಮುನಿಯಪ್ಪ ಅಡ್ಡೇಟು ಹೊಡೆದರೆ 60 ಸಾವಿರಕ್ಕೂ ಹೆಚ್ಚು ದಲಿತ ಮತದಾರರಿರುವ ಕ್ಷೇತ್ರದಲ್ಲಿ ಸಿದ್ದುಗೆ ಕಷ್ಟವಾಗಬಹುದು. ಮುಸ್ಲಿಮರ ಓಟು ಸುಮಾರು 50 ಸಾವಿರದಷ್ಟಿದೆ. ಆ ವೋಟುಗಳ ಬಗ್ಗೆ ಸಿದ್ದರಾಮಯ್ಯ ವಿಶ್ವಾಸದಲ್ಲಿದ್ದಾರೆ. ಕುರುಬರದ್ದು 25 ಸಾವಿರಕ್ಕೂ ಹೆಚ್ಚು ವೋಟುಗಳಿವೆ. ಆ ವೋಟುಗಳೂ ಸಿದ್ದುಗೇ. ಒಕ್ಕಲಿಗರು 45 ಸಾವಿರದಷ್ಟಿದ್ದು ಡಿಕೆ ಹೆಸರಿನಿಂದ ಆ ಮತಗಳು ಕಾಂಗ್ರೆಸ್ಸಿಗೆ ಬರುವ ನಿರೀಕ್ಷೆ ಇಟ್ಟುಕೊಳ್ಳಬಹುದು. ಜೊತೆಗೆ ಹಾಲಿ ಶಾಸಕ ಶ್ರೀನಿವಾಸ ಗೌಡರ ಸಪೋರ್ಟೂ ಸಿಕ್ಕಿ, ಸುಲಭವಾಗಿ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಇದರ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಾದಾಮಿಯಲ್ಲಿ ಸೀಕ್ರೆಟ್ ರೌಂಡ್ಸ್ ಹಾಕಿದ್ಧಾರೆ. ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದ್ದಾರೆ. ಆದರೆ ಎಲ್ಲವೂ ಗುಟ್ಟು ಗುಟ್ಟಾಗಿ ನಡೆದಿದ್ದು ಮುನ್ಸೂಚನೆ ಇಲ್ಲದೇ ನಡೆದಿದೆ. ಇದು ಒಂದಿಷ್ಟು ಕುತೂಹಲ ಹುಟ್ಟಿಸಿದೆ.
ಇನ್ನು ವರುಣಾದಿಂದ ಬೇಡ ಎನ್ನುವುದಕ್ಕೂ ಕಾರಣವಿದೆ. ವರುಣಾದಲ್ಲಿ ಯತೀಂದ್ರ ಸಿದ್ದರಾಮಯ್ಯ ಪರ ಜನವಿರೋಧಿ ಅಲೆಯೇನೂ ಇಲ್ಲ. ಗೆಲ್ಲುವ ಸಾಧ್ಯತೆ ಇದೆ. ಅಲ್ಲದೆ ಸಿದ್ದರಾಮಯ್ಯ ವರುಣಾದಿಂದ ನಿಂತರೆ ಯತೀಂದ್ರ ಸಿದ್ದರಾಮಯ್ಯ ರಾಜಕೀಯ ಭವಿಷ್ಯಕ್ಕೆ ಪೆಟ್ಟು ಬಳುತ್ತೆ ಎನ್ನುವ ದೂರಗಾಮಿ ಚಿಂತನೆಯೂ ಇದೆ. ಇದೆಲ್ಲಕ್ಕಿಂತಲೂ ಹೆಚ್ಚಿನದಾಗಿ ಸಿದ್ದರಾಮಯ್ಯ ಮೈಸೂರು ಭಾಗದಲ್ಲಿ ಚುನಾವಣೆಗೆ ನಿಂತರೆ ಒಕ್ಕಲಿಗರು, ಲಿಂಗಾಯತರ ಮತಗಳು ಕೈ ತಪ್ಪುವ ಆತಂಕ ಹೆಚ್ಚಿದೆ. ಇದು ಪಕ್ಷಕ್ಕೇ ಏಟು. ಹೀಗಾಗಿ ವರುಣಾ ಬೇಡ ಎನ್ನಲಾಗುತ್ತಿದೆ.



