ರಾಜಕಾರಣಿಗಳು ಹೋದರೆ ಜನ ಅವರಿಗೆ ಬೇಡಿಕೆ ಇಡುವುದು ಸಾಮಾನ್ಯ. ಊರಿನ ಕೆಲಸವೋ, ವೈಯಕ್ತಿಕ ಬೇಡಿಕೆಗಳೋ, ಸರ್ಕಾರದ ನೆರವು, ಸರ್ಕಾರಿ ಕೆಲಸ, ಊರಿನ ದೇವಸ್ಥಾನಗಳ ಕೆಲಸ.. ಇತ್ಯಾದಿ..ಇತ್ಯಾದಿ.. ಜನರ ಜೊತೆ ಸದಾ ಬೆರೆಯುವ ಕುಮಾರಸ್ವಾಮಿಗೆ ಇಂತಹ ಬೇಡಿಕೆಗಳು ಇನ್ನೂ ಹೆಚ್ಚು. ಸದ್ಯಕ್ಕೆ ಪಂಚರತ್ನ ಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ಕೋಲಾರಕ್ಕೆ ಭೇಟಿ ನೀಡಿದಾಗ ಬಂದ ಮನವಿ ಚಿತ್ರವಾಗಿದೆ. ಜಿಲ್ಲೆ ಜಿಲ್ಲೆಗಳ ನಡುವೆ ಮದುವೆ ನಿಷೇಧಿಸಿ ಎಂಬ ಮನವಿ ಖುದ್ದು ಕುಮಾರಸ್ವಾಮಿಗೂ ಅಚ್ಚರಿ ತಂದಿದ್ದರೆ ಆಶ್ಚರ್ಯವಿಲ್ಲ.
ಕಾಲ ಬದಲಾಗಿದೆ. ಈಗ ದೇಶ ದೇಶಗಳ ನಡುವೆ ಲವ್ ಸ್ಟೋರಿ ಹುಟ್ಟುತ್ತವೆ. ಭಾರತ-ಪಾಕ್ ಶತ್ರು ರಾಷ್ಟ್ರಗಳಾಗಿದ್ದರೂ ಅಲ್ಲಿಯ ಹೃದಯಗಳಲ್ಲಿ ಪರಸ್ಪರ ಪ್ರೀತಿ ಅರಳುತ್ತದೆ. ಜಾತಿಯೇ ಏನು, ಧರ್ಮವೇ ಬೇರೆಯಾಗಿದ್ದರೂ ಪ್ರೀತಿ ಅರಳಿ ಹೂ ಬಿಡುತ್ತದೆ. ಹೀಗೆ ಪ್ರೀತಿ ದೇಶ-ಭಾಷೆ-ಗಡಿ-ಧರ್ಮ ಎಲ್ಲವನ್ನೂ ಮೀರಿರುವಾಗ ಕೇವಲ ಜಿಲ್ಲೆ ಜಿಲ್ಲೆಗಳ ನಡುವೆ ಮದುವೆ ಬೇಡ ಎನ್ನುತ್ತಿರುವುದೇಕೆ ಎಂಬ ಕುತೂಹಲ ಸಹಜ. ಅಷ್ಟೇ ಅಲ್ಲ, ಅದಕ್ಕೊಂದು ಕಾರಣವೂ ಇದೆ.
ಕೋಲಾರದ ಮುದುವತಿ ಎಂಬ ಗ್ರಾಮಕ್ಕೆ ಭೇಟಿ ಕೊಟ್ಟಾಗ ಅಲ್ಲಿನ ರೈತ ಧನಂಜಯ ಎಂಬುವವರು ಈ ಮನವಿ ಮಾಡಿದ್ದಾರೆ. ಅಣ್ಣಾ, ನೀವು ಮುಖ್ಯಮಂತ್ರಿಯಾಗುತ್ತೀರಿ. ಆಗ ನೀವು ಜಿಲ್ಲೆ ಜಿಲ್ಲೆಗಳ ನಡುವೆ ಮದುವೆಗಳನ್ನು ಬ್ಯಾನ್ ಮಾಡಿ ಎಂದು ಕೋರಿದ್ದಾರೆ. ಕುಮಾರಸ್ವಾಮಿ ನಕ್ಕು, ಮನವಿ ಪತ್ರ ತೆಗೆದುಕೊಂಡು ನಡೆದಿದ್ದಾರೆ.
ರೈತರಲ್ಲಿ ಮದುವೆ ವಯಸ್ಸಿಗೆ ಗಂಡು ಮಕ್ಕಳು ಹೆಚ್ಚುತ್ತಿದ್ದಾರೆ. ಆದರೆ ಅವರಿಗೆ ಯುವತಿಯರೇ ಇಲ್ಲ. ಹೆಣ್ಣುಗಳೇ ಸಿಗುತ್ತಿಲ್ಲ. ರೈತರನ್ನು ಮದುವೆಯಾಗಲು ಯಾರೂ ಹೆಣ್ಣು ಮಕ್ಕಳು ಹಾಗೂ ಹೆಣ್ಣು ಕೊಡಲು ಹೆಣ್ಣು ಹೆತ್ತವರಾಗಲಿ ಮುಂದೆ ಬರುತ್ತಿಲ್ಲ. ಒಕ್ಕಲಿಗರಲ್ಲಂತೂ ರೈತ ಯುವಕರು ಮದುವೆಯ ಆಸೆಯನ್ನೇ ಬಿಡುತ್ತಿದ್ದಾರೆ ಎನ್ನುವುದು ಧನಂಜಯ್ ವಾದ. ಅದು ವಾಸ್ತವವೂ ಹೌದು. ಹೀಗಾಗಿಯೇ ಒಂದು ಜಿಲ್ಲೆಯ ವಧು-ವರರು ಆಯಾ ಜಿಲ್ಲೆಯಲ್ಲೇ ಮದುವೆಯಾಗಬೇಕು. ಯಾವುದೇ ಕಾರಣಕ್ಕೂ ಬೇರೆ ಜಿಲ್ಲೆಗೆ ಹೋಗಿ, ಬೇರೆ ಜಿಲ್ಲೆಯ ಯುವಕ-ಯುವತಿಯರ ಜೊತೆ ಮದುವೆಯಾಗಬಾರದು ಎನ್ನುವ ವಾದ ಮುಂದಿಟ್ಟಿದ್ದಾರೆ. ಇದು ಶಾಶ್ವತವಾಗಿಯಲ್ಲದಿದ್ದರೂ ಒಂದಿಷ್ಟು ಪರಿಹಾರ ನೀಡಲಿದೆ ಎಂದಿದ್ದಾರೆ.
ಇದು ಹೊಸ ವಿಚಾರವೇನೂ ಅಲ್ಲ. ಇತ್ತೀಚೆಗೆ ಆದಿ ಚುಂಚನಗಿರಿ ಮಠದಲ್ಲಿ 250+ ಹೆಣ್ಣು ಮಕ್ಕಳಿಗಾಗಿ 11,500 ಸಾವಿರಕ್ಕೂ ಹೆಚ್ಚು ಗಂಡಸರು ಅರ್ಜಿ ಹಾಕಿದ್ದರು. ಮಂಡ್ಯದ ಆದಿಚುಂಚನಗಿರಿಯಲ್ಲಿ ನಡೆದ ವಧುವರರ ವೇದಿಕೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು ಸೃಷ್ಟಿಯಾಗಿತ್ತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ವ್ಯಾನ್ ಬಂದಿತ್ತು.
ಮೊದ ಮೊದಲು ಹೆಣ್ಣು ಮಕ್ಕಳ ಕೊರತೆ ಶುರುವಾಗಿದ್ದು ಹವ್ಯಕರಲ್ಲಿ. ನಂತರ ಬ್ರಾಹ್ಮಣರು, ಲಿಂಗಾಯತರಲ್ಲಿ ಶುರುವಾಗಿತ್ತು. ಈಗ ಒಕ್ಕಲಿಗರಲ್ಲೂ ಅದೇ ಪರಿಸ್ಥಿತಿ ಸೃಷ್ಟಿಯಾಗಿದೆ. ಅದರಲ್ಲಿಯೂ ವ್ಯವಸಾಯವನ್ನೇ ನಂಬಿಕೊಂಡಿರುವ ಗಂಡು ಮಕ್ಕಳಿಗೆ ಹೆಣ್ಣು ಸಿಗುತ್ತಿಲ್ಲ.



