ಯುಗಾದಿ ಹಿಂದು ಮುಂದು ಮಳೆ ಬರುತ್ತದೆ ಎಂದು ನಾವಿಲ್ಲಿ ಕಾಯುತ್ತಿದ್ದರೆ.. ಮಳೆಯೇ ಬಾರದ ಮರುಭೂಮಿ ಪ್ರದೇಶಗಳಲ್ಲೆಲ್ಲ ಮಳೆ ಹೊಯ್ಯುತ್ತಿದೆ. ಮರಳುಗಾಡಿನ ದೇಶಗಳಾದ ಯುಎಇ, ಒಮಾನ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳ ಹಲವು ಪ್ರದೇಶಗಳಲ್ಲಿ ಕಳೆದ 2 ದಿನಗಳಲ್ಲಿ ಭಾರೀ ಪ್ರಮಾಣದ ಮಳೆ ಸುರಿದಿದೆ. ಪ್ರವಾಹ ಪರಿಸ್ಥಿತಿ ಉಂಟಾಗಿದೆ. 20ಕ್ಕೂ ಹೆಚ್ಚು ಮಂದಿ ಪ್ರವಾಹದಲ್ಲಿ ಮೃತಪಟ್ಟಿದ್ದಾರೆ.
ಭಾರೀ ಮಳೆಯಲ್ಲಿ ಸಿಕ್ಕಿಬಿದ್ದ ಹಲವರನ್ನು ರಕ್ಷಿಸಲಾಗಿದ್ದು, ಹಲ ವಾರು ಜನರು ನಾಪತ್ತೆಯಾಗಿದ್ದಾರೆ. ಏಕಾಏಕಿ ಸುರಿದ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಏಕೆಂದರೆ.. ಅದು ಮಳೆಯನ್ನು ಅಪರೂಪಕ್ಕೆ ನೋಡುವ ದೇಸ. ಅದರಲ್ಲಿಯೂ ಪ್ರವಾಹವನ್ನು ಟಿವಿಗಳಲ್ಲಿ ನೋಡಿರುವ ಜನರೇ ಇರುವ ದೇಶ.
ಯುಎಇ ರಾಜಧಾನಿ ದುಬೈನಾದ್ಯಂತ ಭಾರೀ ಮಳೆಯ ಪರಿಣಾಮ ಹೆದ್ದಾರಿಗಳಲ್ಲಿ ಭಾರೀ ನೀರು ನಿಂತಿದೆ. ಹಲವು ಕಡೆ ಮನೆಗಳಿಗೂ ನೀರು ನುಗ್ಗಿ ನಾಗರಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ವಿಮಾನ ನಿಲ್ದಾಣ ಮತ್ತು ಮೆಟ್ರೋ ರೈಲು ನಿಲ್ದಾಣದೊಳಗೆ ನೀರು ನುಗ್ಗಿದೆ. ವಿಮಾನ ಹಾಗೂ ರೈಲು ಸೇವೆಗೆ ಸಂಚಕಾರ ಒದಗಿದೆ. ಗಾಳಿ ಜೋರಾಗಿ ಬೀಸಿದ ಪರಿಣಾಮ ವಿಮಾನಗಳ ಹಾರಾಟಕ್ಕೂ ಅಡ್ಡಿಯುಂಟಾಗಿದೆ. ಬುಧವಾರ ನಗರದಾದ್ಯಂತ ಮಳೆ ಮುಂದುವರೆಯುವ ಸಾಧ್ಯತೆ ಇದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ.
ವಿಪರೀತ ಮಳೆ ಇರುವ ಕಾರಣ ಯುಎಇಯ ಕೆಲವು ಕಡೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರಿ ಉದ್ಯೋಗಿಗಳಿಗೆ ಕೂಡಾ ವರ್ಕ್ ಫ್ರಂ ಸೂಚನೆ ನೀಡಲಾಗಿದೆ. ಇನ್ನೊಂದೆಡೆ ನೆರೆಯ ಒಮನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ಉಂಟಾಗಿದ್ದು, ಮಳೆ ಸಂಬಂಧಿಘಟನೆಗಳಿಗೆ 18 ಮಂದಿ ಬಲಿಯಾಗಿದ್ದಾರೆ.
ಒಮನ್, ಯುಎಇ ಜೊತೆಗೆ ಬಹರೈನ್, ಕತಾರ್, ಸೌದಿ ಅರೇಬಿಯಾದಲ್ಲಿಯೂ ಭಾರೀ ಮಳೆಯಾಗಿದೆ. ಬಹುತೇಕ ಕೊಲ್ಲಿ ದೇಶಗಳಲ್ಲಿ ಬುಧವಾರವೂ ಭಾರೀ ಮಳೆ ಮುಂದುವರೆಯುವ ಎಚ್ಚರಿಕೆ ನೀಡಲಾಗಿದೆ. ಮರಳುಗಾಡಿನ ಕೊಲ್ಲಿ ರಾಷ್ಟ್ರಗಳಲ್ಲಿ ಮಳೆ ವಿರಳ. ಆದರೆ ಶುಷ್ಕವಾತಾವರಣವಿರುವ ಸಂದರ್ಭದಲ್ಲಿ ಇಲ್ಲಿ ಮಳೆ ಬೀಳುತ್ತದೆ. ಭಾರೀ ಮಳೆ ನಿರ್ವಹಿಸುವ ವ್ಯವಸ್ಥೆ ಇಲ್ಲದ ಕಾರಣ ಏಕಾಏಕಿ ಮಳೆ ಸುರಿದಾಗ ಇಡೀ ನಗರವೇ ನದಿಯಂತೆ ಭಾಸವಾಗುತ್ತದೆ.
ವಿಚಿತ್ರವೆಂದರೆ.. ಇವ್ಯಾವುವೂ ಭಾರಿ ಮಳೆ ಬೀಳುವ ಪ್ರದೇಶಗಳಲ್ಲ. ಮರುಭೂಮಿ ದೇಶಗಳು. ಮಳೆ ಬರುತ್ತೆ ಎಂದರೆ.. ಅವರಿಗೆ ಹಬ್ಬ. ಆದರೆ.. ಪ್ರವಾಹ ಎಂದರೆ.. ಅದು ನರಕ. ಏಕೆಂದರೆ ಪ್ರವಾಹ ಬರಲಿದೆ ಎನ್ನುವುದನ್ನು ಕಲ್ಪಿಸಿಕೊಳ್ಳದ ಜನ, ಅಲ್ಲಿನ ಯಾವುದೇ ನಗರ ಪ್ರವಾಹಕ್ಕೆ ಪೂರ್ವ ಸಿದ್ಧತೆ ಮಾಡಿಕೊಂಡಿರುವುದಿಲ್ಲ. ಬಿಸಿಲು ಇರುವ ಕಾರಣ.. ಬೆಂಕಿ ಸಂಭವಿಸಬಹುದು ಎಂಬ ಎಚ್ಚರಿಕೆ ವಹಿಸುತ್ತಾರೆಯೇ ಹೊರತು.. ಮಳೆ.. ಪ್ರವಾಹಗಳಿಗೆ ಅಲ್ಲ.
ಇತ್ತ ಭಾರತದಲ್ಲಿ ಮಳೆಯ ಪ್ರಮಾಣ ಕಳೆದ ವರ್ಷಕ್ಕಿಂತ ಶೇ.28ರಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹಾಗೆ ನೋಡಿದರೆ.. ಕಳೆದ ವರ್ಷ ಮಳೆ ಕಡಿಮೆಯೇನೂ ಆಗಿರಲಿಲ್ಲ. ಆದರೆ.. ಬರಬೇಕಾದ ಸಂದರ್ಭದಲ್ಲಿ.. ಸುರಿಯಬೇಕಾದ ಪ್ರಮಾಣದಲ್ಲಿ ಮಳೆ ಸುರಿಯಲಿಲ್ಲ. ಮೊಳಕೆ ಒಡೆಯುವಾಗ ಹಾಗೂ ಫಸಲು ಕಟಾವಿಗೆ ಬರುವ ಸಂದರ್ಭದಲ್ಲಿ ಮಳೆ ಧಾರಾಕಾರವಾಗಿ ಸುರಿದು ಬೆಳೆ ಹಾಳಾದರೆ.. ಚಿಗುರು ಫಲ ಕೊಡುವ ಸಂದರ್ಭದಲ್ಲಿ ಮಳೆಯೇ ಬರಲಿಲ್ಲ.



