ಕರಾವಳಿ ಚಿತ್ರ ರಿಲೀಸ್ ಆಗೋಕೆ ರೆಡಿಯಾಗಿದೆ. ಈ ಮಧ್ಯೆ ಪ್ರಜ್ವಲ್ ದೇವರಾಜ್ ಅವರ ವಾಯ್ಸ್ ಇಲ್ಲದೇ ತೆರೆಗೆ ಬರುತ್ತಿರುವ ಚಿತ್ರತಂಡ ವಿವಾದದಲ್ಲಿ ಸಿಕ್ಕಿಕೊಂಡಿದೆ. 1.25 ಕೋಟಿ ಸಂಭಾವನೆಯಲ್ಲಿ 25 ಲಕ್ಷ ಬ್ಯಾಲೆನ್ಸ್ ಇದ್ದ ಕಾರಣಕ್ಕೆ ಪ್ರಜ್ವಲ್ ಡಬ್ ಮಾಡಿಲ್ಲ. ಈ ಮಧ್ಯೆ 2 ತಿಂಗಳು ಪ್ರಜ್ವಲ್ ಅವರಿಗಾಗಿ ಸ್ಟುಡಿಯೋ ಬುಕ್ ಮಾಡಿ ಕಾದಿದ್ದ ಚಿತ್ರತಂಡ, ಬೇರೆಯವರಿಂದ ಡಬ್ ಮಾಡಿಸಿದೆ. ಇದೆಲ್ಲದರ ಮಧ್ಯೆ ಪ್ರಜ್ವಲ್ ಪರ ಮೇಘನಾ ರಾಜ್, ರಕ್ಷಿತಾ ಪ್ರೇಮ್ ಮೊದಲಾದವರು ಸಪೋರ್ಟ್ ನೀಡುತ್ತಿದ್ದರೆ, ಅತ್ತ ನಿರ್ಮಾಪಕ, ನಿರ್ದೇಶಕರು ಒಂಟಿಯಾಗಿದ್ಧಾರೆ.
ಕನ್ನಡದಲ್ಲಿ ಇಂತಹ ಘಟನೆಗಳು ಹೊಸದೇನಲ್ಲ. ಚಿತ್ರಕ್ಕೆ ಹಣ ಹಾಕುವುದು ನಿರ್ಮಾಪಕರು. ಲಾಭ ಬಂದರೆ ಪಾಲು ಕೇಳುವವರಿತ್ತಾರೆ. ನಷ್ಟವಾದರೆ ಹೊರುವುದು ನಿರ್ಮಾಪಕ ಮಾತ್ರ. ಕರಾವಳಿ ಚಿತ್ರದಲ್ಲೂ ಅದೇ ಆಗಿದೆ. ಈಗ ಕರಾವಳಿ ಸಿನಿಮಾ ತಂಡ ಅಧಿಕೃತ ಮಾಧ್ಯಮ ಪ್ರಕಟಣೆ ಮೂಲಕ ಪ್ರಜ್ವಲ್ ದೇವರಾಜ್ ಅವರೊಂದಿಗೆ ಇದ್ದ ಸಂಬಂಧವನ್ನು ಕಡಿದುಕೊಂಡಂತೆ ಕಾಣುತ್ತಿದೆ.
ಕರಾವಳಿ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಬಂದು ಗಲಾಟೆ ಮಾಡಿ ಅಡ್ಡಿ ಪಡಿಸಿದ್ದ ಪ್ರಜ್ವಲ್ ದೇವರಾಜ್ ಫ್ಯಾನ್ಸ್ ವಿರುದ್ಧ ದೂರು ಕೊಟ್ಟಿದ್ದಾರೆ. ಪೊಲೀಸ್ ದೂರು ದಾಖಲಾಗಿದೆ. ಇವರು ಪ್ರಜ್ವಲ್ ದೇವರಾಜ್ ಅವರ ಆಪ್ತ ಸಹಾಯಕರೂ ಹೌದು. ದಿಲೀಪ್, ಅವಿನಾಶ್ ಮತ್ತು ನಂದ ಕುಮಾರ್.
ಸಂಭಾವನೆ ಕ್ಲಿಯರ್ ಮಾಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಅವರಿಗೆ ಕೊಡಲು ಬಾಕಿ ಇದ್ದ ಹಣವನ್ನು ಘಟನೆ ನಡೆದ ಮರುದಿನವೇ ಅಧಿಕೃತವಾಗಿ ಪಾವತಿಸಲಾಗಿದೆ ಗುರುದತ್ ಗಾಣಿಗ ಬಹಿರಂಗಪಡಿಸಿದ್ದಾರೆ. ಇದರ ಮಧ್ಯೆ ಸಂಭಾವನೆ ತಡೆ ಹಿಡಿದಿದ್ದು ಏಕೆ ಎಂಬುದಕ್ಕೂ ಕಾರಣ ಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ಸಿನಿಮಾಗಾಗಿ ಸಿಕ್ಸ್ ಪ್ಯಾಕ್ ಮಾಡಿಸಿಕೊಳ್ಳಬೇಕಿತ್ತಂತೆ. ಆದರೆ ಒಪ್ಪಂದದಂತೆ ಪ್ರಜ್ವಲ್ ಸಿಕ್ಸ್ ಪ್ಯಾಕ್ ಮಾಡಿಕೊಳ್ಳಲಿಲ್ಲ. ಅದರಿಂದಾಗಿ 6 ತಿಂಗಳು ವ್ಯರ್ಥವಾಯಿತು ಎಂದು ಹೇಳಿದ್ದಾರೆ ಗಾಣಿಗ. ಇದೇ ಕಾರಣಕ್ಕೆ ಸಂಭಾವನೆ ಬಾಕಿ ಉಳಿಸಿಕೊಂಡಿದ್ದೆವು ಎಂದಿರುವ ಗಾಣಿಗ ಡಬ್ಬಿಂಗ್ ಸಮಸ್ಯೆಯ ಬಗ್ಗೆಯೂ ಮಾತನಾಡಿದ್ರಂತೆ. 2 ತಿಂಗಳು ಸ್ಟುಡಿಯೋ ಬುಕ್ ಮಾಡಿಕೊಂಡು ಕಾದರೂ ಪ್ರಜ್ವಲ್ ಡಬ್ಬಿಂಗ್‌ಗೆ ಬರಲಿಲ್ಲ. ಸಿನಿರಂಗದ ಪ್ರಮುಖರು ಮತ್ತು ನಿರ್ಮಾಪಕರಾದ ಕೆವಿಎನ್ ಸಂಸ್ಥೆಯ ಸುಪ್ರಿತ್, ನಿರ್ಮಾಪಕ ಜಾಕ್ ಮಂಜು ಮತ್ತು ನಿರ್ಮಾಪಕರಾದ ಲೋಹಿತ್ (ಚಕ್ರವ್ಯೂಹ) ರವರೆಲ್ಲರೂ ಪ್ರತ್ಯೇಕವಾಗಿ ಅವರನ್ನು ಸಂಪರ್ಕಿಸಿದರೂ ಪ್ರಜ್ವಲ್ ಮಣಿಯಲೇ ಇಲ್ಲ. ಹೀಗಾಗಿ ನಾವು ಪ್ರಜ್ವಲ್ ಅವರನ್ನು ಬಿಟ್ಟು ಬೇರೆಯವರಿಂದ ಡಬ್ ಮಾಡಿಸಿದೆವು ಎಂದಿದ್ದಾರೆ.
ಇನ್ನು ಇತ್ತ ಪ್ರಜ್ವಲ್ ಪರ ನಟಿ ಮೇಘನಾ ರಾಜ್, ರಕ್ಷಿತಾ ಪ್ರೇಮ್ ಬಂದಿದ್ಧಾರೆ. ಮೇಘನಾ ರಾಜ್ ಪ್ರಕಾರ ಪ್ರಜ್ವಲ್ ಶಿಸ್ತುಬದ್ಧ ಹುಡುಗ. ಕರಾವಳಿ ಚಿತ್ರದ ಬಗ್ಗೆ ಎಕ್ಸೈಟ್ ಆಗಿದ್ದ. ಪ್ರಜ್ವಲ್ ಅವರಿಂದ ತಪ್ಪಾಗಲು ಸಾದ್ಯವೇ ಇಲ್ಲ. ಕರಾವಳಿ ಚಿತ್ರದ ಕಥೆ ಕೇಳುವುದಕ್ಕೆ ನೀವೂ ಬನ್ನಿ ಅಂತ ನನ್ನನ್ನು ಮತ್ತು ಪನ್ನಗಾಭರಣ ಅವರನ್ನು ಪ್ರಜ್ವಲ್ ಕರೆದಿದ್ದರು. ಆದರೆ ಬೇರೆ ಕೆಲಸ ಇದ್ದ ಕಾರಣ ನಮಗೆ ಹೋಗಲು ಆಗಿರಲಿಲ್ಲ. ಅವರು ಈ ಕಥೆ ಕೇಳಿದ ತಕ್ಷಣ ಎಗ್ಸೈಟೆಡ್ ಆಗಿದ್ದರು. ತಮ್ಮ ವೃತ್ತಿಜೀವನಕ್ಕೆ ಇದು ಬಹಳ ಮುಖ್ಯವಾದ ಪಾತ್ರ ಅಂತ ಅವರು ಹೇಳಿದ್ದರು. ಅಂದು ಅವರು ಈ ಸಿನಿಮಾ ಬಗ್ಗೆ ಎಷ್ಟು ಅಭಿಮಾನ ಇಟ್ಟುಕೊಂಡಿದ್ದರೋ ಇಂದು ಕೂಡ ಅಷ್ಟೇ ಅಭಿಮಾನ ಹೊಂದಿದ್ದಾರೆ. ಇಂದಿಗೂ ಅವರು ಈ ಚಿತ್ರಕ್ಕೆ ಬೆಂಬಲ ನೀಡುತ್ತಾರೆ. ಇದು ಪ್ರಜ್ವಲ್ ದೇವರಾಜ್ ಅವರ ಸಿನಿಮಾ. ಅವರ ಬಗ್ಗೆ ಯಾರು ಏನೇ ಅಂದರೂ ಕನ್ನಡ ಕಲಾಭಿಮಾನಿಗಳು ಅವರಿಗೆ ಬೆಂಬಲ ನೀಡುತ್ತಾ ಬಂದಿದ್ದೀರಿ. ಅದೇ ಬೆಂಬಲ ಮುಂದುವರಿಯಲಿ’ ಎಂದು ಮೇಘನಾ ರಾಜ್ ಅವರು ಹೇಳಿದ್ದಾರೆ.
ಇತ್ತ ರಕ್ಷಿತಾ ಪ್ರೇಮ್ ಕೂಡಾ ‘ಸಂಭಾವನೆ ಕಾರಣಕ್ಕೆ ನಾಯಕಿಯರ, ಪೋಷಕ ನಟರುಗಳಿಂದ ಡಬ್ಬಿಂಗ್ ಮಾಡಿಸದೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸುವುದನ್ನು ವರ್ಷಗಳಿಂದಲೂ ನೋಡುತ್ತಾ ಬರುತ್ತಿದ್ದೇವೆ. ಆದರೆ ಅದ್ಯಾವುದೂ ಸಹ ಇಷ್ಟು ದೊಡ್ಡ ಸುದ್ದಿ ಆಗುತ್ತಿರಲಿಲ್ಲ. ಆದರೆ ಈ ಬಾರಿ ನಾಯಕ ನಟನ ಧ್ವನಿಯನ್ನೇ ಕೈ ಬಿಡಲಾಗಿದೆ. ಹಾಗಾಗಿ ದೊಡ್ಡ ಸುದ್ದಿ ಆಗಿದೆ. ನಟ-ನಟಿ ಯಾರೇ ಇರಲಿ, ಅವರ ಲುಕ್, ನಟನೆಯ ಜೊತೆಗೆ ಅವರ ಧ್ವನಿಯಿಂದಲೂ ಅವರು ತಮ್ಮನ್ನು ಗುರುತಿಸಿಕೊಂಡಿರುತ್ತಾರೆ’ ಎಂದು ರಕ್ಷಿತಾ ಹೇಳಿದ್ದಾರೆ. ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕೂಡಾ ಪ್ರಜ್ವಲ್ ಪರ ನಿಂತಿದ್ಧಾರೆ.
ಈ ನಡುವೆ ಏಕಾಂಗಿಯಾಗಿರುವುದು ನಿರ್ದೇಶಕ ನಿರ್ಮಾಪಕ ಗುರುದತ್ ಗಾಣಿಗ ಮಾತ್ರ. ಚಿತ್ರತಂಡದವರೂ ಕೂಡಾ ಪ್ರಜ್ವಲ್ ಪರ ಬಹಿರಂಗವಾಗಿ ಮಾತನಾಡಿದಂತೆ ನಿರ್ಮಾಪಕರ ಪರ ಮಾತನಾಡುತ್ತಿಲ್ಲ. ಸಿನಿಮಾ ಹಿಟ್ ಆದರೆ ಗುರುದತ್ ಗಾಣಿಗ ಉಳಿಯಬಹುದು. ಫೇಯ್ಲ್ ಆದರೆ ಎಲ್ಲವನ್ನೂ ನಿರ್ದೇಶಕ, ನಿರ್ಮಾಕರ ತಲೆ ಮೇಲೆ ಹಾಕುವುದು ಸುಳ್ಳಲ್ಲ.



