ವಿಭೂತಿ ಧಾರಣೆಯು ಹಿಂದೂ ಧರ್ಮದಲ್ಲಿ ಮತ್ತು ವಿಶೇಷವಾಗಿ ಶಿವನ ಆರಾಧನೆಯಲ್ಲಿ ಮಹತ್ವದ ಆಚರಣೆ. ಮೂರು ಎಳೆಯಲ್ಲಿ ಸರಿಯಾಗಿ ವಿಭೂತಿ ಹಚ್ಚಿಕೊಳ್ಳುವ ಪದ್ಧತಿಗೆ ತ್ರಿಪುಂಡ್ರ ಎಂಬ ಹೆಸರೂ ಇದೆ. ವಿಭೂತಿ ಎಂದರೆ ಹಿಂದೂಗಳ ಪಾಲಿಗೆ ಕೇವಲ ಬಿಳಿ ಬಣ್ಣದ ಪುಡಿ ಅಲ್ಲ. ಸಗಣಿಯಿಂದ ತಯಾರಾಗಿರುವ ವಿಭೂತಿಯೇ ಶ್ರೇಷ್ಟ. ವಿಭೂತಿಯನ್ನು ಮೂರು ಎಳೆಯಾಗಿ ತ್ರಿಪುಂಡ್ರದಲ್ಲೇ ಏಕೆ ಧರಿಸಬೇಕು ಎನ್ನುವುದಕ್ಕೆ ಕಾರಣಗಳಿವೆ.
ಸಂಖ್ಯಾಶಾಸ್ತ್ರದಲ್ಲಿ ಮತ್ತು ಧಾರ್ಮಿಕ ಗ್ರಂಥಗಳಲ್ಲಿ ಮೂರು ಎಂಬುದು ಗುರು ಗ್ರಹದ ಸಂಖ್ಯೆ. ಇದು ʻಬ್ರಹ್ಮ, ವಿಷ್ಣು, ಮಹೇಶ್ವರʼರ ತ್ರಿಮೂರ್ತಿಗಳು, ಹಾಗೂ ʻಸರಸ್ವತಿ, ಪಾರ್ವತಿ, ಮಹಾಲಕ್ಷ್ಮಿʼಯ ತ್ರಿಶಕ್ತಿಗಳ ಪ್ರತೀಕ. ಸೃಷ್ಟಿ, ಸ್ಥಿತಿ, ಲಯಗಳಿಗೂ ಸಹ ಈ ಮೂರು ನಾಮಗಳು ಸಂಕೇತವಾಗಿವೆ. ಶಿವನ ತ್ರಿಶೂಲವೂ ಮೂರು ಮೊನೆಗಳನ್ನು ಹೊಂದಿದೆ. ತ್ರಿಪುಂಡ್ರದ ಮೊದಲ ಸಾಲು ಅಹಂ ತೆಗೆದುಹಾಕಿದರೆ, ಎರಡನೇ ಸಾಲು ಅಜ್ಞಾನವನ್ನು ತೆಗೆದುಹಾಕುತ್ತದೆ. ಮೂರನೇ ಸಾಲು ಕೆಟ್ಟ ಕರ್ಮಗಳನ್ನು ತೆಗೆದು ಹಾಕುವುದು. ಇದಲ್ಲದೆ ಮಕ್ಕಳಿಗೆ ಭಕ್ತಿ ಮತ್ತು ಶ್ರದ್ಧೆಯಿಂದ ವಿಭೂತಿ ಅಥವಾ ನಾಮಗಳನ್ನು ಧರಿಸಲು ಪ್ರೇರೇಪಿಸಬೇಕು. ಇದನ್ನು ಮೂರು ಬೆರಳುಗಳಲ್ಲಿ (ರವಿ, ಗುರು, ಶನಿ) ಹಚ್ಚಲಾಗುತ್ತದೆ. ರವಿ ಶಕ್ತಿ, ಗುರು ಶಕ್ತಿ ಮತ್ತು ಕರ್ಮಕಾರಕ ಹಾಗೂ ನ್ಯಾಯಾಧೀಶನಾದ ಶನಿಯ ಶಕ್ತಿಯು ಮಕ್ಕಳಲ್ಲಿ ಕೀರ್ತಿ, ಪ್ರತಿಷ್ಠೆ ಮತ್ತು ಉತ್ತಮ ಭವಿಷ್ಯಕ್ಕೆ ಕಾರಣವಾಗುತ್ತದೆ. ಹೆಣ್ಣು ಮಕ್ಕಳು ಹಾಗೂ ಗಂಡು ಮಕ್ಕಳು ಇಬ್ಬರೂ ತಮ್ಮ ಕುಟುಂಬದ ಪದ್ಧತಿಗನುಸಾರವಾಗಿ ವಿಭೂತಿ ಅಥವಾ ನಾಮಗಳನ್ನು ಧರಿಸಬಹುದು.
ಸಗಣಿಯಿಂದ ತಯಾರಾಗಿರುವ ವಿಭೂತಿಯೇ ಶ್ರೇಷ್ಟ. ಯಾವುದೇ ವಸ್ತುವಿನ ಸುಟ್ಟ ಬೂದಿಯು ವಿಭೂತಿಯಾಗುವುದಿಲ್ಲ. ಹಾಲು, ತುಪ್ಪ, ಜೇನುತುಪ್ಪದ ಜೊತೆಗೆ ಹಸುವಿನ ಸೆಗಣಿಯನ್ನು ಸುಟ್ಟ ನಂತರ ಉಂಟಾಗುವ ಭಸ್ಮವನ್ನು ಪವಿತ್ರ ವಿಭೂತಿಯೆಂದು ಕರೆಯಲಾಗುತ್ತದೆ. ಇದು ಶಿವನ ಆರಾಧನೆಯಲ್ಲಿ ಬರುವಂತಹ ಒಂದು ತತ್ವ ಸಂಸ್ಕಾರವಾಗಿದೆ.
ವಿಭೂತಿಯನ್ನು ಸಾಮಾನ್ಯವಾಗಿ ಅನಾಹತ ಚಕ್ರದ ಮೇಲೆ ಧಾರಣೆ ಮಾಡಿಕೊಳ್ಳಲಾಗುತ್ತದೆ, ಹಣೆಯ ಮೇಲಿನ ವಿಭೂತಿಯು ನಿಮ್ಮ ಪ್ರಭಾವಳಿಯನ್ನು ಹೆಚ್ಚಿಸುತ್ತದೆ. ನೀವು ಸುಮ್ಮನೆ ಕುಳಿತ್ತಿದ್ದರೂ ನೀವು ನಿಮ್ಮ ಸುತ್ತಲಿನ ಸನ್ನಿವೇಶದ ಮೇಲೆ ಪ್ರಭಾವನ್ನು ಬೀರುವಿರಿ. ಆಜ್ಞಾ ಚಕ್ರದಲ್ಲಿ ವಿಭೂತಿ ಧಾರಣೆ ಮಾಡಿದರೆ ನೀವು ಚೇತನವನ್ನು ಜ್ಞಾನವಾಗಿ ಸ್ವೀಕರಿಸುವಿರಿ. ವಿಭೂತಿಯೆನ್ನುವುದು ಶಿವನಾಗಲಿ ಅಥವಾ ಯಾವುದೇ ದೇವರಾಗಲಿ ನೀಡಿದ ವಸ್ತುವಲ್ಲ. ಯುಕ್ತರೀತಿಯಲ್ಲಿ ಸಿದ್ಧಪಡಿಸಿದ ಪವಿತ್ರ ಭಸ್ಮದಲ್ಲಿ ಆಯಸ್ಕಾಂತೀಯ ಶಕ್ತಿ ಇರುತ್ತದೆ.
ಸಾಂಪ್ರದಾಯಿಕವಾಗಿ ವಿಭೂತಿಯನ್ನು ನಿಮ್ಮ ಹೆಬ್ಬೆರಳು ಮತ್ತು ಉಂಗುರದ ಬೆರಳುಗಳಲ್ಲಿ ಒಂದು ಚಿಟಿಕೆಯಷ್ಟು ತೆಗೆದುಕೊಳ್ಳಬೇಕು. ನೀವು ಹೆಚ್ಚಿನ ಪ್ರಮಾಣದಲ್ಲಿ ತೆಗೆದುಕೊಳ್ಳುವ ಅಗತ್ಯವಿಲ್ಲ. ಅದನ್ನು ಆಜ್ಞಾ ಚಕ್ರವೆಂದು ಹೆಸರಿಸುವ ಎರಡು ಹುಬ್ಬುಗಳ ನಡುವಿನ ಜಾಗ, ಗಂಟಲಿನ ಕುಳಿಯಲ್ಲಿ ಅಂದರೆ ವಿಶುದ್ಧಿ ಚಕ್ರದಲ್ಲಿ ಮತ್ತು ಎದೆಯ ಮಧ್ಯಭಾಗದಲ್ಲಿ, ಎದೆಯೆಲುಬು ಸಂಧಿಸುವ ಸ್ಥಳವಾದ ಅನಾಹತ ಚಕ್ರದ ಮೇಲೆ ಧರಿಸಬೇಕು. ಈ ನಿರ್ದಿಷ್ಟ ಬಿಂದುಗಳ ಮೇಲೆ ವಿಭೂತಿಯನ್ನು ಧರಿಸಿದಾಗ ಅವುಗಳ ಸಂವೇದನಾಶಕ್ತಿಯು ವೃದ್ಧಿಯಾಗುತ್ತದೆ.
ವಿಭೂತಿಗೆ ಕೆಟ್ಟದ್ದನ್ನು ನಾಶ ಮಾಡುವ ಶಕ್ತಿ ಇರುತ್ತದೆ. ಜೊತೆಗೆ ಯಾವುದೇ ದುಷ್ಟಶಕ್ತಿ ಹಾಗೂ ಋಣಾತ್ಮಕ ಶಕ್ತಿಗಳಿಂದಲೂ ಇದು ನಮ್ಮನ್ನು ರಕ್ಷಿಸುತ್ತದೆ. ಸರ್ವಲೋಕ ರಕ್ಷಕನಾದ ಶಿವನು ತನ್ನ ಮೈಪೂರ್ತಿ ಹಚ್ಚಿಕೊಂಡಿರುತ್ತಾರೆ. ಭೃಗು ಮಹರ್ಷಿಯನ್ನು ಪರೀಕ್ಷೆ ಮಾಡುವ ವೇಳೆ ಶಿವನು ತನ್ನ ಬೆರಳನ್ನು ಕತ್ತರಿಸಿಕೊಂಡನಂತೆ. ಆಗ ರಕ್ತದ ಬದಲು ವಿಭೂತಿಯೇ ಬಂತು ಎನ್ನುತ್ತದೆ ಶಿವ ಪುರಾಣ. ಶಿವನ ಅಂಶವಾಗಿರುವ ವಿಭೂತಿಯನ್ನು ಈ ಕಾರಣದಿಂದಾಗಿ ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂದಿಗೂ ಹಿಂದೂ ಧರ್ಮದಲ್ಲಿ ಅನೇಕರು ದುಷ್ಟಶಕ್ತಿಗಳನ್ನು ದೂರವಿಡಲು ಹಾಗೂ ನಕಾರಾತ್ಮಕ ಆಲೋಚನೆಗಳನ್ನು ದೂರವಿರಿಸಲು ಭಸ್ಮ ಅಥವಾ ವಿಭೂತಿಯನ್ನು ಹಚ್ಚಿಕೊಳ್ಳುತ್ತಾರೆ.



