ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಅಲೆಕ್ಸ್ ಕ್ಯಾರಿ ಕ್ಯಾಚ್ ಹಿಡಿಯುವಾಗ, ಎಡ ಪಕ್ಕೆ ಎಲುಬಿಗೆ ಗಂಭೀರವಾಗಿ ಗಾಯ ಮಾಡಿಕೊಂಡಿದ್ದ ಟೀಂ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್. ಆವತ್ತು ಆ ಕ್ಯಾಚ್ʻನ್ನು ವ್ಹಾರ್.. ವ್ಹಾಟ್ ಎ ಕ್ಯಾಚ್ ಎಂದಿದ್ದ ಕ್ರಿಕೆಟ್ ಅಭಿಮಾನಿಗಳೇ.. ಆ ಕ್ಯಾಚ್ ಬಿಟ್ಟು, ಮ್ಯಾಚ್ ಕೂಡಾ ಸೋತಿದ್ದರೆ ಪ್ರಪಂಚ ಮುಳುಗಿ ಹೋಗ್ತಿರಲಿಲ್ಲ ಎನ್ನುತ್ತಿದ್ದಾರೆ. ಏಕೆಂದರೆ ಅದೊಂದು ಕ್ಯಾಚ್, ಶ್ರೇಯಸ್ ಅಯ್ಯರ್ ಜೀವಕ್ಕೆ ಅಪಾಯ ತಂದೊಡ್ಡಿದೆ. ಐಸಿಯುಗೆ ಸೇರಿದಾಗ ʻಔಟ್ ಆಫ್ ಡೇಂಜರ್ʼ ಎಂದು ಹೇಳುವುದಕ್ಕೆ ಹಿಂದೆ ಮುಂದೆ ನೋಡಿರುವ ಡಾಕ್ಟರ್ 48 ಗಂಟೆ ಟೈಮ್ ಕೇಳಿದ್ದಾರೆ. ವಿಷಯ ಸೀರಿಯಸ್ ಆಗಿದೆ.
ಅಯ್ಯರ್ ಅವರಿಗೆ ಏನಾಗಿದೆ..?
ಭಾರತದ ಫೀಲ್ಡಿಂಗ್ ವೇಳೆ ಅದ್ಭುತ ಕ್ಯಾಚ್ ಹಿಡಿಯುವ ಯತ್ನದಲ್ಲಿ ಶ್ರೇಯಸ್ ಅಯ್ಯರ್ ಅವರು ಬಿದ್ದು ಗಾಯಗೊಂಡಿದ್ದರು. ಎಡ ಪಕ್ಕೆಲುಬಿನ ಕೆಳಭಾಗದಲ್ಲಿ ಗಾಯವಾಗಿತ್ತು. ಆದರೆ ಪಕ್ಕೆಲುಬಿನ ಕೆಳಗೆ ಮೂಳೆಯೇ ಸೀಳು ಬಿಟ್ಟಿತ್ತು. ವೈದ್ಯಕೀಯ ತಂಡ ಅವರನ್ನು ಮೈದಾನದಿಂದ ಡ್ರೆಸ್ಸಿಂಗ್ ರೂಂಗೆ ಕರೆದೊಯ್ದ ನಂತರ ಕ್ರಮೇಣ ಪರಿಸ್ಥಿತಿ ಗಂಭೀರವಾಗುತ್ತ ಹೋಗಿದೆ. ರಕ್ತದೊತ್ತಡ(BP) ತೀವ್ರವಾಗಿ ಕುಸಿದಿದೆ. ತಕ್ಷಣವೇ ಅವರನ್ನು ಸಿಡ್ನಿಯಲ್ಲೇ ಇರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವೈದ್ಯರ ಪ್ರಕಾರ, ಅಯ್ಯರ್ ಅವರ ಎಲುಬಿನ ಸ್ಪೀಲನ್ ಮುರಿದಿದ್ದು, ಆಂತರಿಕ ರಕ್ತಸ್ರಾವವಾಗುತ್ತಿದೆ. ಅದು ಕಂಟ್ರೋಲಿಗೆ ಬರುತ್ತಿಲ್ಲ.
ಒಂದು ವೇಳೆ ಮುಂದಿನ 48 ಗಂಟೆಗಳಲ್ಲಿ ರಕ್ತಸ್ರಾವ ಕಡಿಮೆಯಾಗದಿದ್ದರೆ, ಅವರ ಆಸ್ಪತ್ರೆ ವಾಸ್ತವ್ಯವನ್ನು ವಿಸ್ತರಿಸುವ ಸಾಧ್ಯತೆಯಿದೆ. ಪರಿಸ್ಥಿತಿ ಸುಧಾರಿಸದಿದ್ದರೆ, ಮುಂದಿನ ವಾರವೂ ಅವರು ವೈದ್ಯರ ನಿಗಾದಲ್ಲಿರಬೇಕಾಗಬಹುದು. ಕನಿಷ್ಠ ಏಳು ದಿನಗಳ ಕಾಲ ಅವರು ಆಸ್ಪತ್ರೆಯಲ್ಲಿಯೇ ಇರಬೇಕಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬಿಸಿಸಿಐ ಪ್ರಕಾರ..
ಹೆದರುವ ಅಗತ್ಯ ಇಲ್ಲ. ಜೀವಕ್ಕೆ ಅಪಾಯ ಇಲ್ಲ. ಅವರು ಚಿಕಿತ್ಸೆಯಲ್ಲಿದ್ದಾರೆ, ವೈದ್ಯಕೀಯವಾಗಿ ಸ್ಥಿರವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ. ಬಿಸಿಸಿಐ (BCCI) ವೈದ್ಯಕೀಯ ತಂಡವು ಸಿಡ್ನಿ ಮತ್ತು ಭಾರತದ ತಜ್ಞರೊಂದಿಗೆ ಸಮಾಲೋಚಿಸಿ ಅವರ ಗಾಯದ ಸ್ಥಿತಿಯನ್ನು ಹತ್ತಿರದಿಂದ ಗಮನಿಸುತ್ತಿದೆ. ಭಾರತ ತಂಡದ ವೈದ್ಯರು ಶ್ರೇಯಸ್ ಅವರ ದಿನನಿತ್ಯದ ಸ್ಥಿತಿಯನ್ನು ಗಂಭೀರವಾಗಿ ನೋಡ್ತಿದ್ದಾರೆ.
ಅಯ್ಯರ್ ಕುಟುಂಬ ದಿಢೀರ್ ಆಸ್ಟ್ರೇಲಿಯಾಕ್ಕೆ
ಅಯ್ಯರ್ ಅವರ ಕುಟುಂಬಕ್ಕೂ ನಿರಂತರವಾಗಿ ಮಾಹಿತಿ ನೀಡಲಾಗಿದ್ದು, ಅಯ್ಯರ್ ಅವರ ತಂದೆ, ತಾಯಿ, ಸೋದರಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ. ಗಾಯವಾಗಿದ್ದು ಶನಿವಾರ. ಆಸ್ಪತ್ರೆಗೆ ಸೇರಿದ್ದೂ ಶನಿವಾರ. ಆದರೆ.. ಅಯ್ಯರ್ ಕುಟುಂಬ ಆಸ್ಟ್ರೇಲಿಯಾಗೆ ತೆರಳಿದ್ದು ಸೋಮವಾರ. ಈ ನಡುವೆ ಆಗಿರುವ ಎರಡು ದಿನದ ಗ್ಯಾಪ್, ಎರಡು ದಿನದ ನಂತರ ಇಡೀ ಕುಟುಂಬವೇ ಆಸ್ಟ್ರೇಲಿಯಾಗೆ ಹೋಗಿರುವುದೇ ಆತಂಕಕ್ಕೆ ಕಾರಣ.
ಕ್ರಿಕೆಟ್ ಅಭಿಮಾನಿಗಳಲ್ಲಿನ ಆತಂಕ ಬೇರೆ. ಅವರು ಬಾಯಿಬಿಟ್ಟು ಏನೂ ಹೇಳ್ತಿಲ್ಲ. ಆದರೆ.. ಅವರ ಆತಂಕ ಏನು ಎಂಬುದು ಸ್ಪಷ್ಟ. ಅಭಿಮಾನಿಗಳ ವಿಷಯ ಬಿಡಿ.. ಶ್ರೇಯಸ್ ಅಯ್ಯರ್ ಕುಟುಂಬದ ಆತಂಕವೇ ಬೇರೆ. ದೇವರು ಕರುಣೆ ತೋರಲಿ ಎನ್ನುವುದಷ್ಟೇ ಈಗಿರುವ ಪ್ರಾರ್ಥನೆ.



