ಸಾಡೇಸಾತಿ ಎಂದರೆ ವೈದಿಕ ಜ್ಯೋತಿಷ್ಯದ ಪ್ರಕಾರ ಶನಿ ಗ್ರಹವು ವ್ಯಕ್ತಿಯ ಜನ್ಮ ರಾಶಿಯ ಮೇಲೆ ಪ್ರಭಾವ ಬೀರುವ ಸುಮಾರು ಏಳೂವರೆ (7.5) ವರ್ಷಗಳ ಅವಧಿಯಾಗಿದೆ, ಇದು ಮೂರು ಹಂತಗಳಲ್ಲಿ ಬರುತ್ತದೆ, ಸಾಮಾನ್ಯವಾಗಿ ಆರ್ಥಿಕ, ವೃತ್ತಿ ಮತ್ತು ಆರೋಗ್ಯದಂತಹ ಜೀವನದ ಕ್ಷೇತ್ರಗಳಲ್ಲಿ ಸವಾಲುಗಳನ್ನು ತರುತ್ತದೆ.
2026 ಸಮೀಪಿಸುತ್ತಿರುವ ಹೊತ್ತಿನಲ್ಲಿ ಸಾಡೇಸಾತಿ ಯಾವ ರಾಶಿಗೆ ಇದೆ.. ಯಾವ್ಯಾವ ರಾಶಿಗೆ ಶನಿಕಾಟ ಇರುವುದಿಲ್ಲ ಎಂದು ನೋಡೋಣ.
ಅದಕ್ಕೂ ಮೊದಲು ಶನಿಕಾಟ ಅಥವಾ ಸಾಡೇ ಸಾತಿ ಎನ್ನುವುದು ಪ್ರತಿಯೊಬ್ಬ ಮನುಷ್ಯನಿಗೆ 3 ಹಂತಗಳಲ್ಲಿ ಬರುತ್ತದೆ.
ಮೊದಲ ಹಂತ: ಜನ್ಮ ರಾಶಿಗೆ ಒಂದು ರಾಶಿ ಮೊದಲು ಶನಿ ಪ್ರವೇಶಿಸಿದಾಗ ಪ್ರಾರಂಭ, 2.5 ವರ್ಷ.
ಎರಡನೇ ಹಂತ: ಶನಿ ಜನ್ಮ ರಾಶಿಯಲ್ಲಿರುವಾಗ, ಇದು 2.5 ವರ್ಷ ಮತ್ತು ಅತ್ಯಂತ ಕಷ್ಟಕರ ಎಂದು ಪರಿಗಣಿಸಲಾಗುತ್ತದೆ.
ಮೂರನೇ ಹಂತ: ಶನಿ ಜನ್ಮ ರಾಶಿಯಿಂದ ಮುಂದಿನ ರಾಶಿಗೆ ಚಲಿಸಿದಾಗ, 2.5 ವರ್ಷ, ಶುಭ ಫಲಿತಾಂಶಗಳು ಬರಬಹುದು
ತುಂಬಾ ಕಡಿಮೆ ಜನರ ಪಾಲಿಗೆ ಸಾಡೇಸಾತಿ ಎನ್ನುವುದು ಅವರ ಜೀವನಾವಧಿಯಲ್ಲಿ ಎರಡು ಬಾರಿ ಬರುತ್ತದೆ. ಈಗ 2026 ಬರುತ್ತಿದೆ. ಈ ಪ್ರಕಾರ ನೋಡುವುದಾದರೆ..
ಮೇಷ ರಾಶಿಗೆ ಮೊದಲ ಹಂತದ ಸಾಡೇ ಸಾತಿ
ಮೇಷ ರಾಶಿಯವರಿಗೆ ಸಾಡೇ ಸಾತಿಯ ಮೊದಲ ಹಂತ ಪ್ರಾರಂಭವಾಗಲಿದೆ. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಅನಾವಶ್ಯಕ ಖರ್ಚುಗಳು ಹೆಚ್ಚಾಗುವ ಸಾಧ್ಯತೆಯಿದೆ. ಆರ್ಥಿಕ ಯೋಜನೆಗಳಲ್ಲಿ ಶಿಸ್ತು ಕಾಪಾಡಿಕೊಳ್ಳಿ.
ಸಿಂಹ ರಾಶಿಗೆ ಧೈಯ ಶನಿ
ಹೊಸ ವರ್ಷದಲ್ಲಿ ಸಿಂಹ ರಾಶಿಯವರಿಗೆ ಶನಿ ಧೈಯ ಪ್ರಭಾವ ಇರಲಿದೆ. ಧೈಯ ಎಂದರೆ ಕಡುಕಷ್ಟಗಳಲ್ಲ. ಆದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ ಅಥವಾ ಸಣ್ಣಪುಟ್ಟ ಅಡೆತಡೆಗಳು, ವೈವಾಹಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಬರುತ್ತವೆ. ಯಾವ ಕೆಲಸವೂ ಸಲೀಸಾಗಿ ಆಗುವುದಿಲ್ಲ. ತಾಳ್ಮೆ ಈ ಅವಧಿಯಲ್ಲಿ ಅತ್ಯಂತ ಮುಖ್ಯ.
ಧನು ರಾಶಿಗೂ ಶನಿ ಧೈಯ
ಧನು ರಾಶಿಯವರಿಗೂ ಶನಿಯ ಧೈಯ ಪ್ರಭಾವವಿರಲಿದೆ. ಮಾನಸಿಕ ಶಾಂತಿಗಾಗಿ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗುವುದು ಒಳ್ಳೆಯದು. ಆರೋಗ್ಯದ ಮೇಲೆ ಸಣ್ಣ ಮಟ್ಟದ ಏರುಪೇರುಗಳಾಗಬಹುದು. ಅಪರಿಚಿತರೊಂದಿಗೆ ವ್ಯವಹರಿಸುವಾಗ ಎಚ್ಚರಿಕೆ ಅಗತ್ಯ.
ಕುಂಭ ರಾಶಿಗೆ ಸಾಡೇ ಸಾತಿ ಕೊನೆಯ ಹಂತ
ಕುಂಭ ರಾಶಿಯವರಿಗೆ ಸಾಡೇ ಸಾತಿಯ ಅಂತ್ಯಕಾಲ ಅಥವಾ ಮೂರನೇ ಹಂತ ನಡೆಯಲಿದೆ. ಶನಿಯು ಇಲ್ಲಿ ‘ಬೆಳ್ಳಿ ಪಾದ’ದೊಂದಿಗೆ ಸಂಚರಿಸುತ್ತಿರುತ್ತಾನೆ. ಇತರೆ ರಾಶಿಗಳಿಗೆ ಹೋಲಿಸಿದರೆ ಕುಂಭ ರಾಶಿಯವರಿಗೆ ಅಷ್ಟಾಗಿ ತೊಂದರೆ ಇರುವುದಿಲ್ಲ. ಬದಲಾಗಿ, ಶನಿಯು ಸಕಾರಾತ್ಮಕ ಫಲಗಳನ್ನು ನೀಡಲಿದ್ದಾನೆ. ಕಳೆದುಕೊಂಡ ಗೌರವ ಮತ್ತು ಸಂಪತ್ತನ್ನು ಮರಳಿ ಪಡೆಯಬಹುದು.
ಮೀನ ರಾಶಿಗೆ ಸಾಡೇ ಸಾತಿ ಎರಡನೇ ಹಂತ
2026ರಲ್ಲಿ ಮೀನ ರಾಶಿಯವರು ಶನಿ ಸಾಡೇ ಸಾತಿಯ ಮಧ್ಯಭಾಗ ಅಂದರೆ ಎರಡನೇ ಹಂತದಲ್ಲಿದ್ದಾರೆ. ಜ್ಯೋತಿಷ್ಯದ ಪ್ರಕಾರ ಇದು ಅತ್ಯಂತ ಕಠಿಣ ಸಮಯ. ಮಾನಸಿಕ ಒತ್ತಡ, ವೃತ್ತಿಯಲ್ಲಿ ಅಡೆತಡೆಗಳು ಮತ್ತು ಹಣಕಾಸಿನ ಮುಗ್ಗಟ್ಟು ಎದುರಾಗುತ್ತವೆ. ಪ್ರತಿ ನಿರ್ಧಾರವನ್ನು ಆಲೋಚಿಸಿ ತೆಗೆದುಕೊಳ್ಳುವುದು ಉತ್ತಮ. ತಾಳ್ಮೆಗೆ ಗೋಡೆಯನ್ನಲ್ಲ, ಕೋಟೆಯನ್ನೇ ಕಟ್ಟಿಕೊಳ್ಳಬೇಕು.
ಸಾಸಿವೆ ಎಣ್ಣೆಯ ದೀಪ ಹಚ್ಚಿ
ಶನಿಯ ಪ್ರಭಾವವನ್ನು ತಗ್ಗಿಸಲು ಶನಿವಾರದಂದು ಸಾಸಿವೆ ಎಣ್ಣೆಯ ದೀಪ ಹಚ್ಚುವುದು, ಹನುಮಾನ್ ಚಾಲೀಸಾ ಪಠಿಸುವುದು ಮತ್ತು ಬಡವರಿಗೆ ಅನ್ನದಾನ ಮಾಡುವುದು ಅತ್ಯಂತ ಪರಿಣಾಮಕಾರಿ ಮಾರ್ಗಗಳು. ವಿಶೇಷ ಎಂದರೆ ಶನಿ ದೇವನು ಶಿಸ್ತು, ಧರ್ಮ ಮತ್ತು ನ್ಯಾಯದ ಸಂಕೇತ; ಸನ್ಮಾರ್ಗದಲ್ಲಿ ನಡೆಯುವವರಿಗೆ ಆತ ಎಂದಿಗೂ ಕೆಟ್ಟದ್ದು ಮಾಡುವುದಿಲ್ಲ.



