ಕ್ರೀಡಾಪಟುಗಳಲ್ಲಿ ಅದರಲ್ಲೂ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಫಿಟ್ ನೆಸ್ ಬಗ್ಗೆ ದೂಸ್ರಾ ಮಾತಿಲ್ಲ. 37ರಲ್ಲೂ ಚಿರತೆಯಂತಹ ವೇಗ ಇರುವ ವಿರಾಟ್, 20+ ಯುವಕರೂ ನಾಚುವಂತೆ ಓಡುತ್ತಾರೆ. ಫೀಲ್ಡಿಂಗ್, ಕ್ಯಾಚಿಂಗ್, ರನ್ನಿಂಗ್ ಬಿಟ್ವೀನ್ ವಿಕೆಟ್ಸ್.. ಎಲ್ಲವನ್ನೂ ನಿಭಾಯಿಸುತ್ತಾರೆ. ಚೇಸಿಂಗ್ ಮಾಸ್ಟರ್ ಎಂದೇ ಕರೆಸಿಕೊಳ್ಳೋ ವಿರಾಟ್ ಕೊಹ್ಲಿ.. ನೂರಾರು ಮ್ಯಾಚ್ ಗೆಲ್ಲಿಸಿರೋ ರಣಧೀರ. ಇಂತಹ ವಿರಾಟ್‌ಗೆ ಒಂದು ಕಾಯಿಲೆ ಇತ್ತು. ಆ ಕಾಯಿಲೆ ಹೆಸರು ʻಇಂಪೋಸ್ಟರ್ ಸಿಂಡ್ರೋಮ್ʼ. ಆ ಕಾಯಿಲೆ ಬಂದವರ ಮನಸ್ಥಿತಿ ಹೇಗಿರುತ್ತೆ ಗೊತ್ತಾ..?
ಕ್ರಿಕೆಟ್ ನೋಡುವ ಎಲ್ಲರೂ ವಿರಾಟ್ ಕೊಹ್ಲಿ ಕ್ರೀಸಿನಲ್ಲಿರುವವರೆಗೆ ಸೋಲಿನ ಬಗ್ಗೆ ಯೋಚನೆ ಕೂಡಾ ಮಾಡಲ್ಲ. ವಿರಾಟ್ ಇನ್ನೂ ಆಡುತ್ತಿದ್ದಾನೆ ಎಂದರೆ.. ಗೆದ್ದೇ ಗೆಲ್ಲಿಸ್ತಾನೆ ಅನ್ನೋ ನಂಬಿಕೆ ಕ್ರಿಕೆಟ್ ಪ್ರೇಮಿಗಳದ್ದು. ಆದರೆ.. ಅಂತಹ ನಂಬಿಕೆ ವಿರಾಟ್ ಕೊಹ್ಲಿಗೇ ಇಲ್ಲದೇ ಹೋದರೆ.. ಆ ಕಾಯಿಲೆಯ ಹೆಸರೇ ʻಇಂಪೋಸ್ಟರ್ ಸಿಂಡ್ರೋಮ್ʼ. ತನ್ನ ಮೇಲೆ ತನಗೇ ನಂಬಿಕೆ ಇಲ್ಲದೇ ಇರುವುದು ಈ ಕಾಯಿಲೆಯ ಮೂಲ ಗುಣ ಲಕ್ಷಣ.
ಇದನ್ನು ಸ್ವತಃ ವಿರಾಟ್ ಕೊಹ್ಲಿಯವರೇ ಹೇಳಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ‘ಆರ್‌ಸಿಬಿ ಇನ್ನೋವೇಶನ್ ಲ್ಯಾಬ್ಸ್ ಇಂಡಿಯನ್ ಸ್ಪೋರ್ಟ್ಸ್ ಸಮ್ಮಿಟ್’ನಲ್ಲಿ ಮಾತನಾಡಿದ ಕೊಹ್ಲಿ ಈ ಇಬ್ಬರು ತಮ್ಮನ್ನು ‘ಇಂಪೋಸ್ಟರ್ ಸಿಂಡ್ರೋಮ್'(imposter syndrome) (ತನ್ನ ಸಾಮರ್ಥ್ಯದ ಬಗ್ಗೆ ತನಗೇ ಅನುಮಾನ ಮೂಡುವುದು) ಹೊರಬರಲು ಸಹಾಯ ಮಾಡಿದರು ಎಂದು ಹೇಳಿದ್ದಾರೆ.
ವಿರಾಟ್ 20 ನಾಯಕತ್ವದಿಂದ ಕೆಳಗಿಳಿದ ಬಳಿಕ ಏಕದಿನ ನಾಯಕತ್ವ ಹಾಗೂ ಕೆಲವೇ ತಿಂಗಳಲ್ಲಿ ಟೆಸ್ಟ್ ನಾಯಕತ್ವಕ್ಕೂ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡ ರಾಹುಲ್ ದ್ರಾವಿಡ್ ತಮಗೆ ನೀಡಿದ ಸ್ಥೈರ್ಯ ಧೈರ್ಯವನ್ನು ಮೆಚ್ಚಿ ಕೊಂಡಾಡಿದ್ದಾರೆ.
“ನಾನು ರಾಹುಲ್ ಭಾಯ್ ಮತ್ತು ವಿಕ್ರಮ್ ರಾಥೋಡ್ ಅವರ ಬಗ್ಗೆ ಹಲವು ಬಾರಿ ಹೇಳಿದ್ದೇನೆ. ಏಕೆಂದರೆ ಅವರು ನನ್ನನ್ನು ನೋಡಿಕೊಂಡಿದ್ದು ಹಾಗೆ. ಅವರಿಗಾಗಿ ನಾನು ಮೈದಾನಕ್ಕಿಳಿದು ಆಡಬೇಕು, ಅವರಿಗಾಗಿ ಕಷ್ಟಪಟ್ಟು ಪ್ರದರ್ಶನ ನೀಡಬೇಕು ಎನ್ನುವ ಭಾವನೆ ನನ್ನಲ್ಲಿ ಮೂಡುವಂತೆ ಮಾಡಿದರು. ಅವರು ನನ್ನ ಮೇಲೆ ತೋರಿಸಿದ ಕಾಳಜಿ, ಪ್ರೀತಿಯನ್ನು ಎಂದೆಂದೂ ಮರೆಯಲಾರೆ. ನಾನು ಮರೆತಿದ್ದ ವಿಷಯಗಳನ್ನು ನನಗೆ ನೆನಪಿಸಿಕೊಟ್ಟರುʼʼ ಎಂದಿರುವ ವಿರಾಟ್ ಕೊಹ್ಲಿ
ʻʻಆಟಗಾರರು ಹೆಚ್ಚಾಗಿ ‘ಇಂಪೋಸ್ಟರ್ ಸಿಂಡ್ರೋಮ್’ನಿಂದ ಬಳಲುತ್ತಾರೆ ಮತ್ತು ದ್ರಾವಿಡ್-ರಾಥೋಡ್ ಜೋಡಿ ತಮ್ಮ ಈ ದುಸ್ಥಿತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿತ್ತು. ನಾವು ಎಂದಿಗೂ ಶ್ರೇಷ್ಠ ಆಟಗಾರರಲ್ಲ ಎಂಬ ಭಾವನೆ ನಿರಂತರವಾಗಿ ಕಾಡುತ್ತಿರುತ್ತದೆ. ಇಂದಿಗೂ ನಾನು ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಲು ಹೋದಾಗ, ಯುವ ಆಟಗಾರರು ನನ್ನನ್ನು ಗಮನಿಸುತ್ತಿರುತ್ತಾರೆ ಎಂದು ಯೋಚಿಸುತ್ತೇನೆ. ಒಂದು ವೇಳೆ ನನ್ನ ಬ್ಯಾಟಿಂಗ್ ಸೆಷನ್ ಕಳಪೆಯಾಗಿದ್ದರೆ, ‘ಕಳೆದ 20 ವರ್ಷಗಳಿಂದ ಆಡುತ್ತಿರುವ ಆಟಗಾರನ ಆಟ ಇದೇನಾ?’ ಎಂದು ಆಘಾತಗೊಳ್ಳಬಹುದು. ಇದು ರಾಹುಲ್ ಅವರಿಗೆ ಗೊತ್ತಿತ್ತು. ಏಕೆಂದರೆ ಅವರೂ ಈ ಪರಿಸ್ಥಿತಿ ಎದುರಿಸಿದ್ದವರುʼʼ ಎಂದಿದ್ಧಾರೆ ಕೊಹ್ಲಿ.
ವಿರಾಟ್ ಎದುರಿಸಿದ್ದ ಸವಾಲುಗಳನ್ನೇ ದ್ರಾವಿಡ್ ಕೂಡಾ ಒಂದು ಕಾಲದಲ್ಲಿ ಎದುರಿಸಿದ್ದರು. ಕ್ರಿಕೆಟಿಗರಷ್ಟೇ ಅಲ್ಲ, ಬಹುತೇಕ ಎಲ್ಲ ಕ್ರೀಡಾಪಟುಗಳನ್ನೂ ಈ ಸಮಸ್ಯೆ ಕಾಡುತ್ತದೆ. ಅದರಲ್ಲೂ ಲೆಜೆಂಡ್ ಎನ್ನಿಸಿಕೊಂಡವರಿಗೆ ಈ ಸಮಸ್ಯೆ ತಪ್ಪಿದ್ದಲ್ಲ. ಯಾವುದೋ ಒಂದು ಹಂತದಲ್ಲಿ.. ಒಂದು ಬ್ಯಾಡ್ ಫಾರ್ಮ್ ಎದುರಾದಾಗ ತಮ್ಮ ಮೇಲೆಯೇ ತಾವು ನಂಬಿಕೆ ಕಳೆದುಕೊಳ್ತಾರೆ. ಅದೇ ‘ಇಂಪೋಸ್ಟರ್ ಸಿಂಡ್ರೋಮ್’.



