ವೈಭವ್ ಸೂರ್ಯವಂಶಿ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ಕೊಟ್ಟಿದ್ಧಾರೆ. ದಾಖಲೆಗಳ ಸರದಾರರ ದಾಖಲೆಗಳನ್ನೇ ಧೂಳೀಪಟ ಮಾಡುತ್ತಿರುವ ವೈಭವ್ ಸೂರ್ಯವಂಶಿ ಇದೀಗ ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ವೈಭವ್ ಅಖಾಡಕ್ಕೆ ಇಳಿದ ದಿನದಿಂದ ಚರ್ಚೆಯಾಗುತ್ತಿರುವುದಕ್ಕೆ ಪೂರಕವಾಗಿಯೇ ದಾಖಲೆಗಳು ಬರುತ್ತಿವೆ. ʻಬಾಸ್ ಬೇಬಿʼ ಎಂದೇ ಯುವರಾಜ್ ಸಿಂಗ್ ಅವರಿಂದ ಕರೆಸಿಕೊಂಡಿರುವ ವೈಭವ್ ಕೂಡಾ ಸಚಿನ್ ತೆಂಡೂಲ್ಕರ್ ಹಾದಿಯಲ್ಲಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಕಾರಣ ಒಂದಲ್ಲ..
ಈ ಐಪಿಎಲ್‌ನಲ್ಲಿ ವೈಭವ್ ಸೂರ್ಯವಂಶಿ ಅತಿವೇಗವಾಗಿ 1000 IPL ರನ್ ಹಾಗೂ ಒಂದು ಋತುವಿನಲ್ಲಿ 700+ ರನ್ ಗಳಿಸಿದ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೆಟರ್ ಪಂದ್ಯದಲ್ಲಿ 97 ರನ್‌ಗಳಿಗೆ ಔಟಾಗಿ ಕೇವಲ 3 ರನ್ಗಳಿಂದ ಶತಕ ವಂಚಿತರಾಗಿದ್ದ ವೈಭವ್ ಸೂರ್ಯವಂಶಿ, ಇದೀಗ ಗುಜರಾತ್ ಟೈಟಾನ್ಸ್ ವಿರುದ್ಧದ ಎರಡನೇ ಕ್ವಾಲಿಫೈಯರ್‌ನಲ್ಲಿ 96 ರನ್‌ಗಳಿಗೆ ಔಟಾಗಿದ್ದಾರೆ. ಬೇಸರದ ಸಂಗತಿಯೆಂದರೆ ಸನ್‌ರೈಸರ್ಸ್ ವಿರುದ್ಧ ವೈಭವ್ ಯಾವ ರೀತಿಯಾಗಿ ಔಟಾಗಿದ್ದರೋ, ಇದೀಗ ಗುಜರಾತ್ ವಿರುದ್ಧ ಅದೇ ರೀತಿಯಾಗಿ ವಿಕೆಟ್ ಒಪ್ಪಿಸಿರುವುದು. ಎರಡು ಬಾರಿಯೂ ಶತಕ ವಂಚಿತರಾಗಿ ಮಾಡಿದ್ದು ಕನ್ನಡಿಗರು. ಸನ್‌ರೈಸರ್ಸ್ ವಿರುದ್ಧ ಕನ್ನಡಿಗ ಸ್ಮರಣ್ ಹಿಡಿದರೆ, ಗುಜರಾತ್ ಪಂದ್ಯದಲ್ಲಿ ಮತ್ತೊಬ್ಬ ಕನ್ನಡಿಗ ಪ್ರಸಿದ್ಧ್ ಕೃಷ್ಣ, ವೈಭವ್ ಅವರ ಕ್ಯಾಚ್ ಹಿಡಿದರು.
ವೈಭವ್ ಸೂರ್ಯವಂಶಿ ಈ ಆವೃತ್ತಿಯಲ್ಲಿ ಅಸಾಧಾರಣ ಪ್ರದರ್ಶನ ನೀಡಿದ್ದು, ಮೂರು ಬಾರಿ ಶತಕ ವಂಚಿತರಾಗಿದ್ದಾರೆ. , ಲಕ್ನೋ ವಿರುದ್ಧ 93, ಹೈದರಾಬಾದ್ ವಿರುದ್ಧ 97 ರನ್ ಈಗ ಗುಜರಾತ್ ವಿರುದ್ಧ 96 ರನ್ ಗಳಿಸಿ ಔಟಾಗಿದ್ದಾರೆ.
ಗುಜರಾತ್ ವಿರುದ್ಧದ ಈ ಇನ್ನಿಂಗ್ಸ್ ಮೂಲಕ ವೈಭವ್, 776 ರನ್ ಬಾರಿಸಿರುವ ವೈಭವ್ 63 ಬೌಂಡರಿಗಳು ಮತ್ತು 72 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಈಗಲೂ ಅವರೇ ಆರೆಂಜ್ ಕ್ಯಾಪ್ ಹೋಲ್ಡರ್. ಆ ದಾಖಲೆ ಪುಡಿಗಟ್ಟುವ ಸಾಧ್ಯತೆ ಇರುವುದು ಸದ್ಯಕ್ಕೆ ಶುಭಮನ್ ಗಿಲ್ (722 ರನ್) ಮತ್ತು ಸಾಯಿ ಸುದರ್ಶನ್ (710 ರನ್)ಗೆ ಮಾತ್ರ. RCB ತಂಡದಲ್ಲಿ ಅತೀ ಹೆಚ್ಚು ರನ್ ಗಳಿಸಿರುವ ಕೊಹ್ಲಿ 600 ರನ್ ಗಳಿಸಿದ್ದಾರೆ. ಕೊಹ್ಲಿ ಬ್ರೇಕ್ ಮಾಡಬೇಕು ಎಂದರೆ ಇನ್ನೂ 178 ರನ್ ಹೊಡೆಬೇಕು. ಇದು ಅಸಾಧ್ಯ ಎನ್ನುವುದು ನಂಬಿಕೆ.
ಇನ್ನು ವೈಭವ್ ಇತರೆ ದಾಖಲೆಗಳನ್ನು ನೋಡುವುದಾದರೆ..
ಐಪಿಎಲ್ / ಟಿ20 ದಾಖಲೆಗಳು (ಪ್ರಮುಖ ದಾಖಲೆಗಳು ಮಾತ್ರ)
ಐಪಿಎಲ್ ಪಾದಾರ್ಪಣೆ ಅತ್ಯಂತ ಕಿರಿಯ: 14 ವರ್ಷ 23 ದಿನ (ರಾಜಸ್ಥಾನ್ ರಾಯಲ್ಸ್‌ಗೆ)
ಟಿ20 ಸೆಂಚುರಿ (ಮೆನ್ಸ್) ಅತ್ಯಂತ ಕಿರಿಯ: 101 (38 ಎಸೆತ, 35 ಬಾಲ್ ಸೆಂಚುರಿ) vs ಗುಜರಾತ್ ಟೈಟನ್ಸ್ (ಐಪಿಎಲ್ 2025).
ಐಪಿಎಲ್‌ನಲ್ಲಿ 2ನೇ ಅತಿ ವೇಗದ ಸೆಂಚುರಿ (ಭಾರತೀಯರಲ್ಲಿ 1ನೇ)
ಐಪಿಎಲ್‌ನಲ್ಲಿ 3ನೇ ಅತಿ ವೇಗದ ಸೆಂಚುರಿ: 36 ಬಾಲ್ (2026)
ಟಿ20ನಲ್ಲಿ 1000 ರನ್ ಅತ್ಯಂತ ಕಿರಿಯ: 15 ವರ್ಷ 29 ದಿನ
ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸ್ : 2026ರಲ್ಲಿ ವೈಭವ್ 72 ಸಿಕ್ಸರ್ ಸಿಡಿಸಿದ್ಧಾರೆ.
ಇಡೀ ಟೂರ್ನಿಯಲ್ಲಿ ಸ್ಟ್ರೈಕ್ ರೇಟ್ 237.30.
1 ಶತಕ, 5 ಅರ್ಧ ಶತಕ
63 ಫೋರ್ & 72 ಸಿಕ್ಸರ್. ಫೋರುಗಳಿಗಿಂತ ಸಿಕ್ಸರುಗಳೇ ಹೆಚ್ಚು. ಟಿ20 ಟೂರ್ನಿಯಲ್ಲಿ ಬ್ಯಾಟರ್ರೊಬ್ಬರು 200+ ಸ್ಟ್ರೈಕ್ ರೇಟ್ನಲ್ಲಿ 700+ ರನ್ ಕಲೆಹಾಕಿರುವುದು ಇದೇ ಮೊದಲು.
ಇನ್ನು ಸಚಿನ್ ತೆಂಡೂಲ್ಕರ್ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದಾಗ 16 ವರ್ಷ ವಯಸ್ಸಾಗಿತ್ತು. ಮತ್ತು ಅವರು ತಮ್ಮ ಚೊಚ್ಚಲ (ಮೊದಲ) ಅಂತರರಾಷ್ಟ್ರೀಯ ಶತಕ ಬಾರಿಸಿದಾಗ 17 ವರ್ಷ ವಯಸ್ಸಾಗಿತ್ತು. 17 ವರ್ಷ ಮತ್ತು 112 ದಿನಗಳಾಗಿದ್ದಾಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದರು.
ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಒಟ್ಟು 28 ಬಾರಿ ‘ನರ್ವಸ್ 90’ (90 ರಿಂದ 99 ರನ್‌ಗಳ ನಡುವೆ) ಔಟ್ ಆಗಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿಯೇ 90ರ ದಶಕದಲ್ಲಿ ಅತಿ ಹೆಚ್ಚು ಬಾರಿ ಔಟ್ ಆದ ದಾಖಲೆ ಇವರ ಹೆಸರಿನಲ್ಲಿದೆ. ಏಕದಿನ ಪಂದ್ಯಗಳು (ODI): ಒಟ್ಟು 18 ಬಾರಿ 90 ರನ್‌ಗಳ ಗಡಿ ದಾಟಿ ಶತಕ ವಂಚಿತರಾಗಿದ್ದಾರೆ. ಇದರಲ್ಲಿ ವಿಶೇಷವೆಂದರೆ 2007 ರೊಂದೇ ವರ್ಷದಲ್ಲಿ 3 ಬಾರಿ 99 ರನ್‌ಗೆ ಔಟ್ ಆಗಿದ್ದರು. ಟೆಸ್ಟ್ ಪಂದ್ಯಗಳು: ಒಟ್ಟು 10 ಬಾರಿ 90ರ ರನ್‌ಗಳಲ್ಲಿ ಔಟ್ ಆಗಿದ್ದಾರೆ.



