ಟೀಂ ಇಂಡಿಯಾ ಕ್ಯಾಪ್ಟನ್ ಚೇಂಜ್ ಆಗಿದ್ದಾರೆ. ರೋಹಿತ್ ಶರ್ಮಾ ಈಗ ಒನ್ ಡೇ ತಂಡಕ್ಕೂ ಕ್ಯಾಪ್ಟನ್ ಅಲ್ಲ. ಹಾಗೆಂದು ರೋಹಿತ್ ಶರ್ಮಾ, ಒನ್ ಡೇ ಕ್ರಿಕೆಟ್ ನಾಯಕತ್ವ ಬೇಡ ಎಂದೇನೂ ಹೇಳಿರಲಿಲ್ಲ. ಟೆಸ್ಟ್ ಹಾಗೂ ಟಿ-20ಗೆ ಗುಡ್ ಬೈ ಹೇಳಿರುವ ರೋಹಿತ್ ಶರ್ಮಾ, ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತಕ್ಕೆ ಕ್ಯಾಪ್ಟನ್ ಅಲ್ಲ. ಕೇವಲ ಆಟಗಾರ. ಶುಭ್ ಮನ್ ಗಿಲ್ ಹೊಸ ಕ್ಯಾಪ್ಟನ್.
ಧೋನಿ ಇರುವಾಗಲೇ ಕೊಹ್ಲಿ ನಾಯಕರಾಗಿದ್ದರು. ಆದರೆ ಧೋನಿ, ಹೊಸ ನಾಯಕನನ್ನು ಬೆಳೆಸುವ ಕಾರಣದಿಂದ ನಾಯಕತ್ವ ಬೇಡ ಎಂದಿದ್ದರು. ಇನ್ನು ಕೊಹ್ಲಿ ನಾಯಕತ್ವ ಬಿಟ್ಟ ಕಾರಣಕ್ಕೇ ರೋಹಿತ್ ಕ್ಯಾಪ್ಟನ್ ಆಗಿದ್ದರು. ಅದರಲ್ಲಿ ವಿಶೇಷ ಏನಿರಲಿಲ್ಲ. ಏಕೆಂದರೆ ಅವರು ಬಿಟ್ಟ ಮೇಲೆಯೇ, ಉಳಿದವರು ಕ್ಯಾಪ್ಟನ್ ಆಗಿದ್ದವರು. ಆದರೆ, ಅದೇ ವ್ಯವಸ್ಥೆಯಲ್ಲಿ ರೋಹಿತ್ ಶರ್ಮಾ ಇದ್ದಂತೆಯೇ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ.
ಭಾರತ ತಂಡದ ನಾಯಕತ್ವವಹಿಸುವುದು ಗೌರವದ ವಿಷಯ. ಭಾರತ ತಂಡ ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಲ್ಲಿ ಒಂದಾಗಿದ್ದು, ಅನೇಕ ದಿಗ್ಗಜ ಆಟಗಾರರು ಈ ತಂಡವನ್ನು ಕಟ್ಟಿದ್ದಾರೆ. ಇಂತಹ ತಂಡದ ನಾಯಕತ್ವ ವಹಿಸುವುದು ಸಂತಸದ ಜೊತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದಿದ್ದಾರೆ ಗಿಲ್. ಆದರೆ.. ಇದು ಸಹಜವಾಗಿಯೇ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಬೇಸರ ತರಿಸಿರುವುದು ನಿಜ. ರೋಹಿತ್ ಶರ್ಮಾ ಮಗ್ತು ವಿರಾಟ್ ಕೊಹ್ಲಿ ಅವರಂತ ಹಿರಿಯ ಮತ್ತು ಅನುಭವಿ ಆಟಗಾರರು, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗಾಗಿ ಭಾರತ ತಂಡದ ಭಾಗವಾಗಿದ್ದಾರೆ. ಆದರೆ.. ಅಜಿತ್ ಆಗರ್ಕರ್ ಮಾತು ಕೇಳಿದರೆ ಇದೇ ಇವರಿಗೆ ಲಾಸ್ಟ್ ಚಾನ್ಸ್ ಎನಿಸುತ್ತಿರುವುದು ಸುಳ್ಳಲ್ಲ.
ರೋಹಿತ್ ಶರ್ಮಾ ನಾಯಕರಾಗಿ ಒಂದು ಟಿ-20 ವಿಶ್ವಕಪ್, ಎರಡು ಏಷ್ಯಾ ಕಪ್ ಗೆದ್ದುಕೊಟ್ಟಿದ್ದರೆ, ಒನ್ ಡೇ ವಿಶ್ವಕಪ್ ರನ್ನರ್ ಅಪ್ ಸ್ಥಾನ ಗಳಿಸಿರುವ ಕ್ಯಾಪ್ಟನ್. ಎರಡು ಬಾರಿ ಟೆಸ್ಟ್ ವಿಶ್ವ ಚಾಂಪಿಯನ್ ರನ್ನರ್ ಅಪ್ ಸಾಧನೆಯೂ ಸೇರಿದೆ. ಇಷ್ಟು ಸಾಧನೆಯ ಹೊರತಾಗಿಯೂ ರೋಹಿತ್ ಶರ್ಮಾ ಅವರಿಗೆ ಒಂದು ಗೌರವದ ಗುಡ್ ಬೈ ಸಿಗಬೇಕಿತ್ತು ಎನಿಸುವುದು ಸಹಜ. ರೋಹಿತ್ ಶರ್ಮಾ ಅವರೇ ನಾಯಕತ್ವವನ್ನು ಬಹಿರಂಗವಾಗಿ ತ್ಯಜಿಸಿ, ಆಟವಾಡಿದ್ದರೆ ಅದು ಬೇರೆಯ ವಿಷಯ. ಈ ರೀತಿ ದಿಢೀರ್ ಎಂದು ಘೋಷಣೆ ಮಾಡುವುದು ಸೂಕ್ತ ಅಲ್ಲ.
ಅಜಿತ್ ಅಗರ್ಕರ್ ಅವರೇನೋ ಪರೋಕ್ಷವಾಗಿ ವಿಶ್ವಕಪ್ ಟೂರ್ನಿಗೆ ರೋಹಿತ್ ಮತ್ತು ಕೊಹ್ಲಿ ಇಬ್ಬರೂ ಆಡುವ ಚಾನ್ಸ್ ಕಡಿಮೆ ಎಂದು ಹೇಳಿದ್ದಾರೆ. ಮಹಮ್ಮದ್ ಶಮಿಗೆ ತಂಡದಲ್ಲಿ ಅವಕಾಶ ಮುಚ್ಚಿದ ಬಾಗಿಲು ಎಂಬ ಸಂದೇಶ ಸಿಕ್ಕಂತಾಗಿದೆ. ನಾಯಕತ್ವ ಬದಲಾವಣೆ ಕುರಿತಂತೆ ನಾವು ರೋಹಿತ್ ಶರ್ಮಾ ಜತೆ ಮಾತನಾಡಿದ್ದೇವೆ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027ರ ಏಕದಿನ ವಿಶ್ವಕಪ್ ಆಡುವ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಹೊಂದಿಲ್ಲ ಎಂದು ಅಗರ್ಕರ್ ತಿಳಿಸಿದ್ದಾರೆ. ಇದರ ಅರ್ಥ ಸಿಂಪಲ್. ವಿರಾಟ್ ಮತ್ತು ರೋಹಿತ್ ಅವರಿಗೆ ಇದೇ ಲಾಸ್ಟ್ ಚಾನ್ಸ್.



