ಡಿಕೆ ಶಿವಕುಮಾರ್ ಅವರೀಗ ಸಿಎಂ ಆಗುತ್ತಿದ್ಧಾರೆ. ಆದರೆ ಆರಂಭದಿಂದ ಒಂದು ನಂಬಿಕೆ ಠುಸ್ ಆಗಿದೆ. ಏನೆಂದರೆ ಡಿಕೆ ಪರ ಹೈಕಮಾಂಡ್ ಇರಬಹುದು, ಆದರೆ ಶಾಸಕರಲ್ಲಿ ಜನಮತ ಲೆಕ್ಕ ಹಾಕಿದರೆ ಡಿಕೆ ಪರ ಯಾರೂ ಬರಲ್ಲ. ಬಂದರೆ ಮ್ಯಾಕ್ಸಿಮಮ್ ಹತ್ತೋ.. ಇಪ್ಪತ್ತೋ.. ಶಾಸಕರು ಬರಬಹುದು. 136 ಶಾಸಕರ ಬಲದಲ್ಲಿ ಸಿದ್ದರಾಮಯ್ಯ ಮುಂದೆ ಡಿಕೆ ಏನೇನೂ ಅಲ್ಲ ಎಂಬ ನಂಬಿಕೆ ಇತ್ತು. ಆದರೆ ಆ ನಂಬಿಕೆಯೇ ಸುಳ್ಳಾಗಿದೆ. ನಿಧಾನವಾಗಿ ಒಂದೊಂದೇ ಮಾಹಿತಿಗಳು ಹೊರಬರುತ್ತಿವೆ. ಅಂದಹಾಗೆ ಇದು ಗೊತ್ತಾಗಿದ್ದು ಪ್ರಿಯಾಂಕಾ ಗಾಂಧಿಯಿಂದ. ಒಂದು ಪತ್ರದಿಂದ. ಸಿದ್ದರಾಮಯ್ಯ ಅವರ ಅತಿಯಾದ ಆತ್ಮವಿಶ್ವಾಸದಿಂದ ಎನ್ನಲಾಗುತ್ತಿದೆ. ಅವರು ಡಿಕೆಯನ್ನು ಅಂಡರ್ ಎಸ್ಟಿಮೇಟ್ ಮಾಡಿಬಿಟ್ಟರಾ..?
ಆಗಿದ್ದು ಏನೆಂದರೆ ರಾಹುಲ್ ಗಾಂಧಿ ಅವರು ಡಿಕೆ ಶಿವಕುಮಾರ್ ಕೈಗೆ ಸಿಗದೆ ಓಡಾಡುತ್ತಿದ್ದಾಗ ಡಿಕೆ ಅನಿವಾರ್ಯವಾಗಿ ಪ್ರಿಯಾಂಕಾ ಅವರ ಸಂಪರ್ಕಕ್ಕೆ ಬಂದಿದ್ದಾರೆ. ಈ ವೇಳೆ ಡಿಕೆ ಅವರು ತಮಗಿರುವ ಶಾಸಕರ ಬೆಂಬಲವನ್ನೂ ಹೇಳಿಕೊಂಡಿದ್ಧಾರೆ. ಪ್ರಿಯಾಂಕಾ ಕೇವಲ ಡಿಕೆಯ ಮಾತು ಕೇಳಿ ಸುಮ್ಮನಾಗಿಲ್ಲ. ತಮ್ಮ ನಿಷ್ಟರಾಗಿ ಇರುವವರೊಬ್ಬರನ್ನು ಸಿದ್ದು ಪಾಳೆಯಕ್ಕೆ ಕಳಿಸ್ತಾರೆ. ಅವರ ಮೂಲಕವೇ ಆಕ್ಚುವಲ್ ರಿಪೋರ್ಟ್ ಬರುತ್ತೆ. ಇದರ ಜೊತೆಗೆ ಡಿಕೆ ಶಿವಕುಮಾರ್ ಕೂಡಾ ಸಹಿ ಸಂಗ್ರಹ ಪ್ರಕ್ರಿಯೆ ಶುರು ಮಾಡ್ತಾರೆ. ಡಿಕೆ ಸಿಎಂ ಆಗಬೇಕು ಎಂದು ಎಂದು ಸಹಿ ಹಾಕಿದವರ ಸಂಖ್ಯೆ 93 ಇತ್ತಂತೆ. ಪ್ರಿಯಾಂಕಾ ಅವರಿಗೂ ಶಾಕ್ ಕೊಟ್ಟ ನಂಬರ್ ಅದು.
ಆರಂಭದಿಂದಲೂ ಡಿಕೆ ಪರ ಗಟ್ಟಿಯಾಗಿಯೇ ನಿಂತಿದ್ದ ಪ್ರಿಯಾಂಕಾ ಗಾಂಧಿ ಶಾಸಕರ ನಂಬರ್ ನೋಡಿದ್ಧಾರೆ. ಅದನ್ನು ನೇರವಾಗಿ ರಾಹುಲ್ ಗಾಂಧಿ ಅವರ ಮುಂದಿಟ್ಟಿದ್ದಾರೆ. ಆ ನಂಬರ್ ನೋಡಿ ರಾಹುಲ್ ಕೂಡಾ ಶಾಕ್ ಆದರಂತೆ. ರಾಹುಲ್ ಅವರೂ ನಂಬಿದ್ದ ಪ್ರಕಾರ ಶಾಸಕರಲ್ಲಿ ಸಿದ್ದುಗೆ ಇರುವಷ್ಟು ಬಲ ಡಿಕೆಗೆ ಇಲ್ಲ. ಆದರೆ ತಾವು ಅಂದುಕೊಂಡಿದ್ದಕ್ಕೆ ವಿರುದ್ಧವಾಗಿ ಬಂದಿರುವ ಈ ಬೆಳವಣಿಗೆ ಕಂಡು ಶಾಕ್ ಆದ ರಾಹುಲ್, ಆನಂತರ ತಡ ಮಾಡಿಲ್ಲ.
ಡಿಕೆ ಪರ ಇದ್ದ 93 ಶಾಸಕರ ನಂಬರ ಕಂಡು ಮರುಮಾತನಾಡದೇ ಕೆಸಿ ವೇಣುಗೋಪಾಲ್ ಅವರಿಗೆ ಫೋನ್ ಮಾಡಿ ಕರೆಸಿಕೊಂಡರಂತೆ ರಾಹುಲ್ ಗಾಂಧಿ. ಅಲ್ಲಿಂದ ಮುಂದೆ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಬಗ್ಗೆ ಪ್ಲಾನ್ ಶುರುವಾಗಿದೆ. ಏನು ಮಾತನಾಡಬೇಕು.. ಎಷ್ಟು ಮಾತನಾಡಬೇಕು.. ಎಲ್ಲವನ್ನೂ ಲೆಕ್ಕ ಹಾಕಿಯೇ ತೀರ್ಮಾನ ಮಾಡಿದ್ಧಾರೆ. ವಿಶೇಷ ಎಂದರೆ ಡಿಕೆ ತಮ್ಮ ಪರವಾಗಿ 93 ಶಾಸಕರ ಸಹಿ ಸಂಗ್ರಹ ಮಾಡಿದ್ದಾರೆ ಅನ್ನೋ ವಿಷಯ ಸಿದ್ದರಾಮಯ್ಯಗೆ ಗೊತ್ತೇ ಆಗಲಿಲ್ಲ ಎನ್ನುವುದು.
ವಿಚಿತ್ರವೆಂದರೆ ಡಿಕೆ ತಮ್ಮ ಪರವಾಗಿ ಸಹಿ ಮಾಡ್ತಿದ್ಧಾರೆ ಎನ್ನುವುದು ಸಿದ್ದುಗೆ ಗೊತ್ತಾಗಿತ್ತಾದರೂ.. ಅವರಿಗೆ ಎಲ್ಲಿ ಬೆಂಬಲ ಕೊಡ್ತಾರೆ ಎನ್ನುವ ಓವರ್ ಕಾನ್ಫಿಡೆನ್ಸ್‌ನಲ್ಲಿಯೇ ಸಿದ್ದರಾಮಯ್ಯ ಸುಮ್ಮನಿದ್ದರು. ಸಿದ್ದರಾಮಯ್ಯ ಅವರ ಈ ಅತಿಯಾದ ಆತ್ಮವಿಶ್ವಾಸವೇ ಡಿಕೆಯ ಹಾದಿಯನ್ನು ಸುಲಭಗೊಳಿಸಿತು. ಕೊನೆಯ ಕ್ಷಣದಲ್ಲಿ ಸಿದ್ದರಾಮಯ್ಯ ಈ ರೀತಿಯ ಸಂಖ್ಯಾಬಲದ ಬಗ್ಗೆ ಪ್ರಯತ್ನ ನಡೆಸಲೂ ಹೈಕಮಾಂಡ್ ಅವಕಾಶ ಕೊಟ್ಟಿಲ್ಲ. ವಿಶೇಷ ಎಂದರೆ ದೆಹಲಿಯ ಇಂದಿರಾ ಭವನದಲ್ಲಿ ರಾಹುಲ್ ಗಾಂಧಿ ಜೊತೆ ಮಾತನಾಡುವವರೆಗೆ ಸಿದ್ದುಗೆ ಇಂತಾದ್ದೊಂದು ಬೆಳವಣಿಗೆ ನಡೆದಿತ್ತು ಎಂಬ ಮಾಹಿತಿಯೇ ಇರಲಿಲ್ಲವಂತೆ. ಇದು ಸದ್ಯಕ್ಕೆ ಹೊರಬರುತ್ತಿರುವ ಹೈಕಮಾಂಡ್ ಜೊತೆಗಿನ ಮಾತುಕತೆಯ ಇನ್ನೊಂದು ಇನ್ ಸೈಡ್ ಸ್ಟೋರಿ.



