ಹೆಂಡತಿ ಹೆಸರಲ್ಲಿದ್ದ ಕೋಟಿ ಕೋಟಿ ಆಸ್ತಿಗೆ ಆಸೆ ಪಟ್ಟ ಗಂಡ.. ಹೆಂಡತಿ ಮಲಗಿದ್ಧಾಗ ಉಸಿರುಗಟ್ಟಿಸಿ ಕೊಂದ ಘಟನೆ ಮಂಡ್ಯದಲ್ಲಿ ನಡೆದಿದೆ. . ಎಸ್.ಶೃತಿ (32) ಎಂಬಾಕೆಯೇ ಕೊಲೆಯಾದವಳು. ಟಿ.ಎನ್.ಸೋಮಶೇಖರ್ (41) ಎಂಬಾತನೇ ಕೊಲೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿರುವ ಪತಿ. ಘಟನೆ ನಡೆದಿರುವುದು ಮಂಡ್ಯದ ವಿವಿ ನಗರ ಬಡಾವಣೆಯಲ್ಲಿ. ಕೊಲೆಯಾದ ಶೃತಿಯ ಹೆಸರಿಗೆ ಬಂದ ಕೋಟಿ ಕೋಟಿ ಆಸ್ತಿಯೇ ಕೊಲೆಗೆ ಕಾರಣ. ಈಗ ಶೃತಿಯೂ ಇಲ್ಲ. ಗಂಡ ಜೈಲಿನಲ್ಲಿ. ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಒಡೆಯರೂ ಇಲ್ಲ. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಅವರಿಗೆ ಆಸ್ತಿಯ ಮಾಲೀಕತ್ವ ಸಿಕ್ಕರೂ ಸಿಗಬಹುದು. ಆದರೆ ಅಮ್ಮ ಇಲ್ಲ. ಅಪ್ಪ ಜೈಲಿನಲ್ಲಿ.
ಶೃತಿಗೆ ಕೋಟಿ ಕೋಟಿಯ ಆಸ್ತಿ ಬಂದಿದ್ದು ಹೇಗೆ?
ಮೈಸೂರಿನ ಹೆಬ್ಬಾಳ ಬಡಾವಣೆಯ ಪಿ.ಷಣ್ಮುಖಸ್ವಾಮಿ ಮತ್ತು ರಾಜೇಶ್ವರಿ ಪುತ್ರಿ ಎಸ್.ಶೃತಿ. ಶೃತಿ ಹೆಸರಿನಲ್ಲಿ ಮೈಸೂರಿನ ವಿಜಯನಗರ 1ನೇ ಹಂತದಲ್ಲಿ ಮೂರಂತಸ್ತಿನ ಮನೆ ಕಟ್ಟಿಸಿಕೊಡಲಾಗಿತ್ತು. ತಂದೆ ಷಣ್ಮುಖಸ್ವಾಮಿ, ತಾಯಿ ರಾಜೇಶ್ವರಿ ಮೃತಪಟ್ಟಿದ್ದರು. 6 ತಿಂಗಳ ಹಿಂದೆ ಶೃತಿಯ ತಂಗಿ ಸುಶ್ಮಿತಾ ಕೂಡಾ ಅಪಘಾತದಲ್ಲಿ ಮೃತಪಟ್ಟ ಕಾರಣ ಎಲ್ಲ ಆಸ್ತಿಯೂ ಶೃತಿ ಹೆಸರಿಗೆ ಬಂದಿತ್ತು. ಆಗ ಆಕೆಯ ಒಟ್ಟಾರೆ ಆಸ್ತಿ ಮೇಲೆ ಗಂಡ ಸೋಮಶೇಖರ್ ಕಣ್ಣು ಬಿತ್ತು.
2013ರಲ್ಲಿ ಸೋಮಶೇಖರ್ ಜೊತೆ ಮದುವೆಯಾಗಿದ್ದ ಶೃತಿಗೆ ಇಬ್ಬರು ಮಕ್ಕಳಿದ್ದರು. ಸುಖ ಸಂಸಾರವೇನೂ ಆಗಿರಲಿಲ್ಲ. ಗರ್ಭಿಣಿಯಾಗಿದ್ದಾಗಲೂ ತಂಗಳು ಅನ್ನ ಕೊಟ್ಟು ಬಲವಂತವಾಗಿ ತಿನ್ನಿಸುತ್ತಿದ್ದನಂತೆ ಸೋಮಶೇಖರ. ಹೆಂಡತಿಗೆ ಕೋಟಿ ಕೋಟಿಯ ಆಸ್ತಿ ಯಾವಾಗ ಬಂತೋ ಆಗಿನಿಂದ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಡುವಂತೆ ಸೋಮಶೇಖರ್ ಪೀಡಿಸುತ್ತಿದ್ದನೆನ್ನಲಾಗಿದೆ. ಇದಕ್ಕೆ ಶೃತಿ ಒಪ್ಪಿರಲಿಲ್ಲವಂತೆ. ಇದೆಲ್ಲವೂ ಆಕೆಯ ಚಿಕ್ಕಪ್ಪ ಕುಮಾರಸ್ವಾಮಿ ಹೇಳಿರುವ ಮಾತು.
ಶೃತಿ ತನ್ನ ಹೆಸರಿನಲ್ಲಿದ್ದ ಎಲ್ಲ ಚರ ಮತ್ತು ಸ್ಥಿರಾಸ್ಥಿಗಳನ್ನು ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಲು ಬಯಸಿದ್ದಳು. ಆದರೆ ಇದನ್ನು ಬಲವಾಗಿ ಪತಿ ಟಿ.ಎನ್. ಸೋಮಶೇಖರ್ ವಿರೋಧಿಸಿ ಎಲ್ಲ ಆಸ್ತಿಯನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹೇರುತ್ತಿದ್ದ ಎಂದು ಕುಮಾರಸ್ವಾಮಿ ದೂರಿನಲ್ಲಿ ವಿವರಿಸಿದ್ದಾರೆ.
ಶೃತಿಯ ಹೆಸರಿನಲ್ಲಿದ್ದ ಕೋಟ್ಯಂತರ ರು. ಆಸ್ತಿಯನ್ನು ತನ್ನದಾಗಿಸಿಕೊಳ್ಳುವ ಉದ್ದೇಶದಿಂದ ಸೋಮಶೇಖರ್ ಆಕೆಯನ್ನು ಕೊಲೆ ಮಾಡಿ ಅದನ್ನು ಸಹಜ ಸಾವೆಂದು ಬಿಂಬಿಸಲು ಆರಂಭದಲ್ಲಿ ಪ್ರಯತ್ನಿಸಿದ್ದನು. ಆದರೆ, ಮೃತೆಯ ಸಾವಿನ ಬಗ್ಗೆ ಸಂಬಂಧಿ ಪಿ.ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿ ಪತಿ ಟಿ.ಎನ್.ಸೋಮಶೇಖರ್, ಅತ್ತೆ ನೀಲಾಂಬಿಕೆ, ಅತ್ತಿಗೆ ಹೇಮಲತಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಶವ ಪರೀಕ್ಷೆ ನಡೆಸಿ ಆರೋಪಿ ಸೋಮಶೇಖರನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆ ವೇಳೆ ಶೃತಿಯನ್ನು ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಸಂಬಂಧ ಪಶ್ಚಿಮ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.



