ಸಾಮುದ್ರಿಕಾ ಶಾಸ್ತ್ರ ಮತ್ತು ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಒಬ್ಬ ವ್ಯಕ್ತಿಯ ಉಗುರುಗಳ ಆಕಾರ, ಗಾತ್ರ ಮತ್ತು ಬಣ್ಣವು ಅವರ ವ್ಯಕ್ತಿತ್ವ, ಸ್ವಭಾವ ಹಾಗೂ ಭವಿಷ್ಯದ ಒಳನೋಟಗಳನ್ನು ಪ್ರತಿಬಿಂಬಿಸುತ್ತದೆ. ಉಗುರುಗಳು ಕೇವಲ ದೈಹಿಕ ಸೌಂದರ್ಯದ ಭಾಗವಲ್ಲ. ಅವುಗಳ ಮೂಲಕ ನಮ್ಮ ನಮ್ಮ ವ್ಯಕ್ತಿತ್ವ, ನಡುವಳಿಕೆಗಳನ್ನೂ ತಿಳಿದುಕೊಳ್ಳಬಹುದು.
ಉಗುರುಗಳು ಅಗಲವಾಗಿದ್ದರೆ..
ಈ ರೀತಿಯ ಉಗುರುಗಳನ್ನು ಹೊಂದಿರುವವರ ಸ್ವಭಾವದಲ್ಲಿ ಧೈರ್ಯ, ಕಷ್ಟಪಟ್ಟು ದುಡಿಯುವ ಶ್ರಮಜೀವಿ ಮನೋಭಾವ ಇರುತ್ತದೆ. ಯಾವುದೇ ಕಠಿಣ ಪರಿಸ್ಥಿತಿಯನ್ನು ಎದುರಿಸಿ ನಿಲ್ಲುವ ಸಾಮರ್ಥ್ಯ ಇವರಿಗಿರುತ್ತದೆ. ಇವರು ಸಮಾಜದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮುತ್ತಾರೆ ಮತ್ತು ರಾಜಕೀಯ ಯೋಗವು ಇವರಿಗೆ ಚೆನ್ನಾಗಿರುತ್ತದೆ. ಆದರೆ ಇವರ ಸಮಸ್ಯೆ ಏನೆಂದರೆ.. ಕೋಪ ಮತ್ತು ಹಠ ಜಾಸ್ತಿ ಇರುತ್ತದೆ. ಸಾಮಾನ್ಯವಾಗಿ ಮೇಷ, ಸಿಂಹ ಮತ್ತು ಧನುಸ್ಸು ರಾಶಿಯವರಲ್ಲಿ ಹೆಚ್ಚು ಕಂಡುಬರುತ್ತವೆ.
ಉಗುರುಗಳು ದುಂಡಗೆ ಇದ್ದರೆ..
ವೃತ್ತಾಕಾರದ ಅಥವಾ ದುಂಡಗಿನ ಉಗುರು ಇರುವವರು ಅತ್ಯಂತ ಶಾಂತಪ್ರಿಯರು, ತಾಳ್ಮೆಯುಳ್ಳವರು ಮತ್ತು ಸಹನಶೀಲರು. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲ. ಸಾಮುದ್ರಿಕಾ ಶಾಸ್ತ್ರದ ಪ್ರಕಾರ ದುಂಡಗಿನ ಉಗುರುಗಳು ಅತ್ಯಂತ ಮಂಗಳಕರ ಮತ್ತು ಅದೃಷ್ಟದ ಸಂಕೇತ. ಆರ್ಥಿಕ ತೊಂದರೆಗಳು ಎದುರಾದರೂ ದೂರವಾಗಿ ಸಂಪತ್ತು ಮತ್ತು ಸಂತೋಷ ವೃದ್ಧಿಯಾಗುತ್ತದೆ. ಇವು ಸಾಮಾನ್ಯವಾಗಿ ಕರ್ಕ, ವೃಶ್ಚಿಕ ಮತ್ತು ಮೀನ ರಾಶಿಯವರಲ್ಲಿ ಇರುತ್ತವೆ.
ಉಗುರುಗಳು ಉದ್ದವಾಗಿದ್ದರೆ..
ಲಂಬವಾದ ಅಥವಾ ಉದ್ದನೆಯ ಉಗುರು ಇರುವವರು ಕಲ್ಪನಾ ಶಕ್ತಿ ಹೊಂದಿರುವ ರಸಿಕರು. ಬೇಗನೆ ಆಕರ್ಷಿಸುವ ಮತ್ತು ಆಕರ್ಷಣೆಗೆ ಒಳಗಾಗುವ ಗುಣದವರು ಸೃಜನಶೀಲರು. ಚಲನಚಿತ್ರ ನಟರು, ಸಾಹಿತಿಗಳು, ಬರಹಗಾರರು ಮತ್ತು ಕಲಾಕ್ಷೇತ್ರದಲ್ಲಿರುವವರಲ್ಲಿ ಈ ಆಕಾರ ಹೆಚ್ಚಾಗಿ ಕಾಣಸಿಗುತ್ತದೆ. ಇವರು ಸಮಾಜದಲ್ಲಿ ಹೆಸರು, ಕೀರ್ತಿ ಮತ್ತು ಪ್ರತಿಷ್ಠೆಯನ್ನು ಗಳಿಸುತ್ತಾರೆ. ಇವು ಸಾಮಾನ್ಯವಾಗಿ ವೃಷಭ, ಕನ್ಯಾ ಮತ್ತು ಮಕರ ರಾಶಿಯವರಲ್ಲಿ ಕಂಡುಬರುತ್ತವೆ.
ಚೌಕಾಕಾರದ ಉಗುರುಗಳು
ಇವರು ತುಂಬಾ ಗಂಭೀರ ವ್ಯಕ್ತಿತ್ವದವರು ಮತ್ತು ರಹಸ್ಯಗಳನ್ನು ಕಾಪಾಡುವ ಸ್ವಭಾವದವರು. ತಮ್ಮ ವೈಯಕ್ತಿಕ ವಿಚಾರಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಹಣ ಮತ್ತು ಉದ್ಯೋಗದ ವಿಷಯದಲ್ಲಿ ಇವರು ತುಂಬಾ ಅದೃಷ್ಟವಂತರು. ಸ್ವತಂತ್ರವಾಗಿ ಉದ್ಯೋಗ ಅಥವಾ ವ್ಯಾಪಾರ ಮಾಡಲು ಬಯಸುತ್ತಾರೆ. ಸೋತರೂ ಗೆದ್ದಿದ್ದೇವೆ ಎಂದು ಹೇಳುವ, ಗೆದ್ದರೂ ಸೋತಿದ್ದೇವೆ ಎಂದು ಹೇಳಿಕೊಳ್ಳುವ ಧೈರ್ಯಶಾಲಿಗಳು. ಇನ್ನೊಬ್ಬರ ಮೇಲೆ ಡಿಪೆಂಡ್ ಆಗುವವರೇ ಅಲ್ಲ. ಮಿಥುನ, ತುಲಾ ಮತ್ತು ಕುಂಭ ರಾಶಿಯವರಲ್ಲಿ ಈ ಗುಣಗಳು ಸಹಜ ಸಾಮಾನ್ಯ.
ಉಗುರುಗಳ ಬಣ್ಣ, ಮಚ್ಚೆಯಲ್ಲಿ..
ಉಗುರಿನ ಮೇಲೆ ಬಿಳಿ ಮಚ್ಚೆಗಳು ಕೆಳಗಿನಿಂದ ಮೇಲಕ್ಕೆ ಚಲಿಸಿದರೆ, ಅದು ಮಾಡುವ ಕೆಲಸದಲ್ಲಿ ಶ್ರಮವಿಲ್ಲದೆ ಯಶಸ್ಸು ಮತ್ತು ಹಣ ಸಿಗುವುದನ್ನು ಸೂಚಿಸುತ್ತದೆ. ಉಗುರುಗಳು ನೈಸರ್ಗಿಕವಾಗಿ ಸುಂದರ ಹಾಗೂ ಕೆಂಪಾಗಿದ್ದರೆ ಅದನ್ನು ಅತ್ಯಂತ ಮಂಗಳಕರ ಎನ್ನಲಾಗುತ್ತದೆ. ಕಪ್ಪು ಕಲೆಗಳು ಅಥವಾ ಅಸಮ ಆಕಾರವಿದ್ದರೆ ಜೀವನದಲ್ಲಿ ಸವಾಲುಗಳು ಎದುರಾಗಬಹುದು



