ಶನಿ ಮಹಾದಶೆಯು ವೈದಿಕ ಜ್ಯೋತಿಷ್ಯದ ಅತ್ಯಂತ ಸುದೀರ್ಘ ಮತ್ತು ಪ್ರಭಾವಶಾಲಿ ಅವಧಿಗಳಲ್ಲಿ ಒಂದಾಗಿದೆ. ಶನಿದೇವನನ್ನು ನ್ಯಾಯ ಮತ್ತು ಕರ್ಮಗಳ ಅಧಿಪತಿ ಎಂದು ಕರೆಯಲಾಗುತ್ತದೆ.. ವ್ಯಕ್ತಿಯು ಜೀವನದಲ್ಲಿ ಮಾಡಿದ ಸತ್ಕರ್ಮ ಮತ್ತು ದುಷ್ಕರ್ಮಗಳಿಗೆ ಅನುಗುಣವಾಗಿ ಫಲ ನೀಡುವವನೆಂಬ ನಂಬಿಕೆ ಇದೆ. ಶನಿಯ ಹೆಸರು ಕೇಳಿದಾಗ ಕೆಲವರು ಭಯಪಡುತ್ತಾರೆ, ಆದರೆ ಜ್ಯೋತಿಷ್ಯವು ಶನಿ ದಂಡನೆ ಮಾತ್ರ ನೀಡುವುದಿಲ್ಲ, ಶ್ರಮ, ಶಿಸ್ತು ಮತ್ತು ಸತ್ಯನಿಷ್ಠೆಯ ಪಾಠವನ್ನು ಕಲಿಸುತ್ತಾನೆ ಎನ್ನುವುದು ನಂಬಿಕೆ. ಶನಿಯ ಮಹಾದೆಶೆ ಶುರುವಾಗುವ ಮೊದಲು ಕೆಲವು ಸೂಚನೆಗಳನ್ನೂ ನೀಡುತ್ತಾನೆ.
ಶನಿಯ ಮಹಾದಶೆ 19 ವರ್ಷಗಳ ಕಾಲ ಇರುತ್ತದೆ. ಇದು ವ್ಯಕ್ತಿಯ ಜೀವನದ ಅತ್ಯಂತ ಪ್ರಮುಖ ಹಂತ. ಇದು ವ್ಯಕ್ತಿಯ ಹಿಂದಿನ ಜನ್ಮದ ಮತ್ತು ಈ ಜನ್ಮದ ಕರ್ಮಗಳ ಆಧಾರದ ಮೇಲೆ ಫಲ ನೀಡುತ್ತದೆ. ಶನಿಯು ಜಾತಕದಲ್ಲಿ ಉಚ್ಚ ಸ್ಥಾನದಲ್ಲಿದ್ದರೆ (ಉದಾಹರಣೆಗೆ ತುಲಾ, ಮಕರ ಅಥವಾ ಕುಂಭ ರಾಶಿ) ಈ ಅವಧಿಯಲ್ಲಿ ಅಪಾರ ಸಂಪತ್ತು, ಗೌರವ ಮತ್ತು ಯಶಸ್ಸು ದೊರೆಯುತ್ತದೆ. ಒಂದು ವೇಳೆ ಶನಿ ನೀಚ ಸ್ಥಾನದಲ್ಲಿದ್ದರೆ (ಉದಾಹರಣೆಗೆ ಮೇಷ ರಾಶಿ) ಆರೋಗ್ಯ ಸಮಸ್ಯೆ, ಕೆಲಸದಲ್ಲಿ ವಿಳಂಬ, ಆರ್ಥಿಕ ನಷ್ಟ ಮತ್ತು ಮಾನಸಿಕ ಒತ್ತಡ ಉಂಟಾಗಬಹುದು.. ಶನಿ ಮಹಾ ದಶೆಯು ವ್ಯಕ್ತಿಗೆ ಶಿಸ್ತು, ಕಠಿಣ ಪರಿಶ್ರಮ, ತಾಳ್ಮೆ ಮತ್ತು ಸತ್ಯದ ಹಾದಿಯಲ್ಲಿ ನಡೆಯುವುದನ್ನು ಕಲಿಸುತ್ತದೆ.
ಈ ಅವಧಿಯಲ್ಲಿ ಕೆಲವರಿಗೆ ಆರ್ಥಿಕ ನಷ್ಟ, ಉದ್ಯೋಗದಲ್ಲಿ ಅಡಚಣೆ, ವ್ಯವಹಾರದಲ್ಲಿ ಕುಸಿತ, ಕಾನೂನು ಸಂಬಂಧಿತ ಸಮಸ್ಯೆಗಳು ಅಥವಾ ಸುಳ್ಳು ಆರೋಪಗಳು ಎದುರಾಗಬಹುದು. ಕೆಲವೊಮ್ಮೆ ಗಂಭೀರ ಆರೋಗ್ಯ ಸಮಸ್ಯೆಗಳು, ಮಾನಸಿಕ ಖಿನ್ನತೆ, ಒಂಟಿತನದ ಭಾವನೆ, ಕೌಟುಂಬಿಕ ಕಲಹ, ಸಂಬಂಧಗಳಲ್ಲಿ ದೂರಾವಸ್ಥೆ, ಗೌರವ ಹಾನಿ ಅಥವಾ ಹಠಾತ್ ವಾಸಸ್ಥಳ ಬದಲಾವಣೆ ಕೂಡ ಸಂಭವಿಸಬಹುದು ಎಂದು ನಂಬಲಾಗುತ್ತದೆ. ಮಹಾದಶೆ ಆರಂಭವಾಗುವ ಮೊದಲು ಹಠಾತ್ ನಷ್ಟಗಳು, ನಿರಂತರ ವಿಫಲತೆಗಳು ಅಥವಾ ಅಸಹಜ ಅಡಚಣೆಗಳು ಕಾಣಿಸಿಕೊಳ್ಳುವುದು ಸಂಕೇತಗಳೆಂದು ತಜ್ಞರು ಹೇಳುತ್ತಾರೆ.
ಆದರೆ ಶನಿಯ ಮಹಾದಶೆ ಸಂಪೂರ್ಣ ದುಃಖಕರವಾಗಿರುತ್ತದೆ ಎಂದಲ್ಲ.ಶ್ರಮಪಟ್ಟು ಕೆಲಸ ಮಾಡುವವರು, ಸತ್ಯನಿಷ್ಠರಾಗಿರುವವರು ಮತ್ತು ಸಂಯಮದಿಂದ ಜೀವನ ನಡೆಸುವವರು ಈ ಅವಧಿಯಲ್ಲಿ ದೊಡ್ಡ ಸಾಧನೆಗಳನ್ನೂ ಮಾಡಬಹುದು. ಶನಿ ದೇವರು ವ್ಯಕ್ತಿಯನ್ನು ಪರೀಕ್ಷಿಸುವ ಮೂಲಕ ಅವನನ್ನು ಇನ್ನಷ್ಟು ಶಕ್ತಿಶಾಲಿ ಮತ್ತು ಅನುಭವಸಂಪನ್ನನನ್ನಾಗಿ ಮಾಡುತ್ತಾನೆ ಎಂಬ ನಂಬಿಕೆ ಇದೆ.ಮಹಾದಶೆಯ ದುಷ್ಪರಿಣಾಮಗಳನ್ನು ತಗ್ಗಿಸಲು ಜ್ಯೋತಿಷ್ಯದಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ವಿಶೇಷವಾಗಿ ಹನುಮಂತನ ಪೂಜೆ.ಆರಾಧನೆ ಶನಿ ದೋಷಗಳನ್ನು ಕಡಿಮೆ ಮಾಡುತ್ತದೆ. ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚುವುದು, ಕಪ್ಪು ಎಳ್ಳು, ಕಪ್ಪು ಬೇಳೆ ಮತ್ತು ಕಪ್ಪು ಬಟ್ಟೆಗಳನ್ನು ದಾನ ಮಾಡುವುದು ಶುಭಕರವೆಂದು ನಂಬಿಕೆ. “ಓಂ ಶಂ ಶನೈಶ್ಚರಾಯ ನಮಃ” ಮಂತ್ರ ಜಪಿಸುವುದು ಹಾಗೂ ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದು ಮನಶಾಂತಿ ನೀಡುತ್ತದೆ.ಶನಿವಾರದಂದು ಅಶ್ವತ್ಥ (ಅರಳಿ) ಮರದ ಕೆಳಗೆ ಎಳ್ಳೆಣ್ಣೆಯ ದೀಪವನ್ನು ಹಚ್ಚುವುದು ಅತ್ಯಂತ ಪ್ರಭಾವಶಾಲಿ ಪರಿಹಾರ.ಡವರಿಗೆ, ಅಂಗವಿಕಲರಿಗೆ ಅಥವಾ ಕಾರ್ಮಿಕರಿಗೆ ಕಪ್ಪು ಬಣ್ಣದ ಬಟ್ಟೆ, ಎಳ್ಳು ಅಥವಾ ಆಹಾರವನ್ನು ದಾನ ಮಾಡುವುದು ಒಳ್ಳೆಯದು.
ರಾಶಿ ಪ್ರಕಾರ ಶನಿಮಹಾದಶೆಯಲ್ಲಿ ಯಾವ್ಯಾವ ರಾಶಿಯವರಿಗೆ ಏನೇನು ಪರಿಹಾರ ಎಂದು ನೋಡುವುದಾದರೆ..
ಮೇಷ: ಪ್ರತಿ ಮಂಗಳವಾರ ಮತ್ತು ಶನಿವಾರ ಹನುಮಾನ್ ಚಾಲೀಸಾ ಪಠಿಸುವುದು ಮತ್ತು ಸುಂದರಕಾಂಡ ಓದುವುದು.
ವೃಷಭ: ಪ್ರತಿ ಶನಿವಾರ ಬಡವರಿಗೆ ಆಹಾರ ದಾನ ಮಾಡುವುದು ಮತ್ತು ಕಪ್ಪು ಎಳ್ಳನ್ನು ಅರ್ಪಿಸುವುದು.
ಮಿಥುನ: ಶನಿವಾರದಂದು ಶನಿ ಚಾಲೀಸಾ ಪಠಿಸಿ ಮತ್ತು ನಿರ್ಗತಿಕರಿಗೆ ಕಪ್ಪು ಬಟ್ಟೆಯನ್ನು ದಾನ ಮಾಡಿ.
ಕರ್ಕಾಟಕ: ಶಿವನಿಗೆ ಅಭಿಷೇಕ ಮಾಡುವುದು ಮತ್ತು “ಓಂ ನಮಃ ಶಿವಾಯ” ಮಂತ್ರ ಜಪಿಸುವುದು.
ಸಿಂಹ: ಪ್ರತಿದಿನ ಸೂರ್ಯನಿಗೆ ಅರ್ಘ್ಯ ಅರ್ಪಿಸುವುದು ಮತ್ತು ಶನಿವಾರ ಎಣ್ಣೆ ದೀಪ ಹಚ್ಚುವುದು.
ಕನ್ಯಾ: ಅಗತ್ಯವಿರುವವರಿಗೆ ಕಪ್ಪು ಎಳ್ಳು ಅಥವಾ ಉದ್ದಿನ ಬೇಳೆಯನ್ನು ದಾನ ಮಾಡಿ ಮತ್ತು ಅರಳಿ ಮರಕ್ಕೆ ನೀರು ಹಾಕಿ.
ತುಲಾ: ಶಿಸ್ತು ಕಾಪಾಡಿಕೊಳ್ಳಿ ಮತ್ತು ಶನಿವಾರದಂದು ಉಕ್ಕಿನ ಪಾತ್ರೆಗಳನ್ನು ದಾನ ಮಾಡಿ.
ವೃಶ್ಚಿಕ: ಶನಿ ದೇವನಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿಸುವುದು ಮತ್ತು ಸುಳ್ಳು ಹೇಳುವುದನ್ನು ಬಿಡುವುದು.
ಧನು: ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ ಮತ್ತು ಹಿರಿಯರಿಗೆ ಹಾಗೂ ಗುರುಗಳಿಗೆ ಗೌರವ ನೀಡಿ.
ಮಕರ ಮತ್ತು ಕುಂಭ: ಕಾರ್ಮಿಕರಿಗೆ ಸಹಾಯ ಮಾಡುವುದು ಮತ್ತು ಅವರ ಹಕ್ಕುಗಳನ್ನು ರಕ್ಷಿಸುವುದು.
ಮೀನ: ಪಕ್ಷಿಗಳಿಗೆ ಆಹಾರ ನೀಡುವುದು ಮತ್ತು ಶನಿವಾರದಂದು ಕಪ್ಪು ಛತ್ರಿ ದಾನ ಮಾಡುವುದು



