ಭಾರತೀಯರು ಈ ಪದವನ್ನು ಕೇಳಿದ್ದರು. ಇದು ಭಾರತಕ್ಕೆ ಬಂದಿಲ್ಲ ಎಂದೇ ಅಂದುಕೊಂಡಿದ್ದರು. ಇತ್ತೀಚೆಗೆ ಮಾದಕ ವಸ್ತು ನಿಯಂತ್ರಣ ಬ್ಯೂರೋ ಸೀಝ್ ಮಾಡುವವರೆಗೆ ಇದು ಭಾರತದಲ್ಲಿ ಇಲ್ಲವೇ ಇಲ್ಲ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅಧಿಕಾರಿಗಳು ವಶಪಡಿಸಿಕೊಂಡ ಆ ಮಾದಕ ವಸ್ತುವಿನ ಹೆಸರು ʻಕ್ಯಾಪ್ಟಗನ್ʼ. ಅದನ್ನು ಜಿಹಾದಿ ಡ್ರಗ್ಸ್ ಅಂತಾನೂ ಕರೀತಾರೆ. ಕೇಂದ್ರದ ಅಧಿಕಾರಿಗಳು ವಶಪಡಿಸಿಕೊಂಡ ಈ ಮಾದಕವಸ್ತುವಿನ ಮೌಲ್ಯ 182 ಕೋಟಿ ರೂ. 227 ಕೆಜಿ. ಅಂದರೆ ಒಂದು ಕೆಜಿಗೆ 80 ಲಕ್ಷ. ಒಂದು ಗ್ರಾಂಗೆ ಎಷ್ಟಾಗಬಹುದು..? ಮಧ್ಯಪ್ರಾಚ್ಯದ ದೇಶಗಳಲ್ಲಿ ಒಂದು ಮಾತ್ರೆಯು (Pill) ಅದರ ಗುಣಮಟ್ಟಕ್ಕೆ ಅನುಗುಣವಾಗಿ ಸುಮಾರು $3 ರಿಂದ $25 (ಅಂದಾಜು ₹250 ರಿಂದ ₹2,000) ವರೆಗೆ ಮಾರಾಟವಾಗುತ್ತದೆ. ಇದನ್ನು ‘ಬಡವರ ಕೊಕೇನ್’ ಎಂದೂ ಕರೆಯಲಾಗುತ್ತದೆ.
ಇಷ್ಟಕ್ಕೂ ಇದನ್ನೇಕೆ ಜಿಹಾದಿ ಡ್ರಗ್ಸ್ ಎಂದು ಕರೆಯುತ್ತಾರೆ.. ಭಯೋತ್ಪಾದಕರೇ ಏಕೆ ಈ ಡ್ರಗ್ಸ್ ಯೂಸ್ ಮಾಡ್ತಾರೆ ಎನ್ನುವುದೂ ಅಷ್ಟೇ ಅಪಾಯಕಾರಿ ವಿಷಯ. ಇದನ್ನು ಚಪಾತಿ ಮಷಿನ್ನು, ಟೀ ಪುಡಿ ಡಬ್ಬ, ಕುರಿ ಉಣ್ಣೆಯಲ್ಲಿ ಅಡಗಿಸಿದ್ದರಂತೆ ಖದೀಮರು.
ಕ್ಯಾಪ್ಟಗನ್ ಡ್ರಗ್ಸ್‌ಗೆ ತವರುಮನೆ ಸಿರಿಯಾ. ಇವತ್ತಿಗೂ ಜಗತ್ತಿನ ಶೇ.80ರಷ್ಟು ಜಿಹಾದಿ ಡ್ರಗ್ಸ್ ಬರುವುದು ಸಿರಿಯಾದಿಂದ. ಇದನ್ನು ತಯಾರಿಸೋಕೆ ಅಂತಾನೇ ಸಿರಿಯಾದಲ್ಲಿ ಸಣ್ಣ ಲ್ಯಾಬ್‌ಗಳನ್ನು ನಡೆಸಲಾಗ್ತಿದೆ. ಅಲ್ಲಿ ಇದು ಕಡಿಮೆ ರೇಟಿನಲ್ಲೇ ರೆಡಿಯಾದರೂ. ಮಾರುಕಟ್ಟೆಗೆ ಬರುವಾಗ ಬೆಲೆ ಹೆಚ್ಚಾಗುತ್ತದೆ.
ಇದನ್ನು ಮೂಲತಃ ‘ಫೆನೆಥೈಲಿನ್’ (Fenethylline) ಎಂದು ಕರೆಯಲಾಗುತ್ತದೆ. 1960ರ ದಶಕದಲ್ಲಿ ಇದನ್ನು ಅಟೆನ್ಶನ್ ಡೆಫಿಸಿಟ್ ಹೈಪರ್ ಆಕ್ಟಿವಿಟಿ ಡಿಸಾರ್ಡರ್ (ADHD) ಮತ್ತು ನಾರ್ಕೊಲೆಪ್ಸಿಯಂತಹ ಕಾಯಿಲೆಗಳ ಚಿಕಿತ್ಸೆಗಾಗಿ ಅಭಿವೃದ್ಧಿಪಡಿಸಲಾಗಿತ್ತು. ಆದರೆ ಇದು ಅತಿಯಾದ ವ್ಯಸನಕಾರಿಯಾದ ಕಾರಣ 1980ರ ದಶಕದಲ್ಲಿ ಇದನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ನಿಷೇಧಿಸಲಾಯಿತು.
ಈ ಡ್ರಗ್ಸ್ ತೆಗೆದುಕೊಂಡವರಿಗೆ ಸುಸ್ತಾಗಲ್ಲ. ನಿದ್ರೆ ಬರಲ್ಲ. ಏಕಾಗ್ರತೆ ಹೆಚ್ಚುತ್ತಾ ಹೋಗುತ್ತದೆ. ಮನಸ್ಸಿನಲ್ಲಿ ಏನೋ ಸಂತಸ, ಉತ್ಸಾಹ. ಸಂತೋಷ ಉದ್ಭವವಾಗುತ್ತದೆ. ಹಸಿವೂ ಆಗುವುದಿಲ್ಲ. ಯಾರಾದರೂ ಹೊಡೆದರೂ ನೋವಾಗಲ್ಲ. ಈ ಡ್ರಗ್ಸ್ ತೆಗೆದುಕೊಂಡವರು ಮನುಷ್ಯರಾಗಿ ಇರುವುದೇ ಇಲ್ಲ. ಅದನ್ನು ಕೊಟ್ಟವರು ಹೇಳದ್ದನ್ನು ಚಾಚೂ ತಪ್ಪದೆ ಮಾಡುತ್ತಾರೆ.
ಸಿರಿಯಾ ಯುದ್ಧದ ವೇಳೆ ಉಗ್ರರಿಗೆ ಈ ಡ್ರಗ್ಸ್ ಕೊಡಲಾಗಿತ್ತು. ಕುರ್ದಿಷ್ ಸೈನಿಕರು ಉಗ್ರರಿಗೆ ಗುಂಡು ಹೊಡೆದರೂ, ಕೈಕಾಲು ಕಟ್ ಆಗಿ ಬೀಳುತ್ತಿದ್ರೂ.. ಅದೇ ಉತ್ಸಾಹದಲ್ಲಿ ಆಕ್ರಮಣ ಮಾಡುತ್ತಿದ್ದರು. ಇದೆಲ್ಲ ಹೇಗೆ ಸಾಧ್ಯ ಎಂದು ಸೈನಿಕರೇ ಗೊಂದಲಕ್ಕೀಡಾದರು. ಕೊನೆಗೆ ಅಂತಹ ಉಗ್ರರ ಪರೀಕ್ಷೆ ಮಾಡಿದಾಗ ಅವರು ʻಕ್ಯಾಪ್ಟಗನ್ʼ ಡ್ರಗ್ಸ್ ತೆಗೆದುಕೊಂಡಿರುವುದು ಗೊತ್ತಾಯ್ತು. ಅದಾದ ನಂತರ ಈ ಡ್ರಗ್ಸ್‌ನ್ನು ಹಲವು ದೇಶಗಳಲ್ಲಿ ಬ್ಯಾನ್ ಮಾಡಲಾಯ್ತು. ಕ್ರಿಮಿನಲ್ಸ್ ಈ ಡ್ರಗ್ಸ್‌ನ್ನು ಹೆಚ್ಚಾಗಿ ಬಳಸ್ತಾರೆ. ಈ ಡ್ರಗ್ಸ್ ವ್ಯಸನಕ್ಕೀಡಾದವರು ಹೆಚ್ಚು ಕಾಲ ಬದುಕುವುದಕ್ಕೆ ಸಾಧ್ಯವಿಲ್ಲ.



