ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಇರುತ್ತದೆ. ಸೇಫ್ ಆಗಿಯೇ ಇರುತ್ತದಾದರೂ, ಕೆಲವೊಮ್ಮೆ ಅನಾಹುತಗಳಿಗೂ ಕಾರಣವಾಗುತ್ತದೆ. ಕೆಲವೊಮ್ಮೆ ಅಪಾಯದ ಅಂಚಿನಲ್ಲಿ ಅದೃಷ್ಟವಶಾತ್ ಗುರುತಿಸಿ ಬಚಾವ್ ಆದವರೂ ಇದ್ದಾರೆ. ಮನೆಯಲ್ಲೇ ಇರುವ ಎಲ್‌ಪಿಜಿ ಸಿಲಿಂಡರ್ ಸೋರಿಕೆಯಾಗುತ್ತಿದೆ.. ಲೀಕ್ ಆಗುತ್ತಿದೆ ಎಂದು ಗುರುತಿಸುವುದು ಹೇಗೆ..? ಅನುಮಾನ ಬಂದರೆ ಅದನ್ನು ಪರೀಕ್ಷಿಸುವುದು ಹೇಗೆ..? ಕೆಲವು ಸಲಹೆ ಸೂಚನೆಗಳೂ ಇವೆ. ಇದಕ್ಕೇನೂ ಹಣ ಖರ್ಚು ಮಾಡಬೇಕಿಲ್ಲ. ಬಿ ಅಲರ್ಟ್. ಕೇವಲ ವಾಸನೆ ಬಂದರೆ ಮಾತ್ರ ಗೊತ್ತಾಗಬೇಕಿಲ್ಲ.
ವಾಸನೆ ಬರುವುದು ಕಾಮನ್ ಅಲ್ಲ : ಗ್ಯಾಸ್‌ಗೆ ‘ಈಥೈಲ್ ಮರ್ಕಾಪ್ಟಾನ್’ ಎಂಬ ರಾಸಾಯನಿಕವನ್ನು ಸೇರಿಸಿರುತ್ತಾರೆ. ಇದು ವಾಸನೆ ಬರುವಂತೆ ಮಾಡುತ್ತದೆ. ತಕ್ಷಣ ಗುರುತಿಸುವಂತೆ ಮಾಡುತ್ತದೆ. ಕೊಳೆತ ಮೊಟ್ಟೆಗಳು ಅಥವಾ ಬೆಳ್ಳುಳ್ಳಿಯಂತಹ ಬಲವಾದ ವಾಸನೆ ಬರಬಹುದು.
ಹಿಸ್ ಅಥವಾ ಶಿಳ್ಳೆಯಂತಹ ಸದ್ದು : ಒಂದು ವೇಳೆ ಗ್ಯಾಸ್ ರೆಗ್ಯುಲೇಟರ್ ಅಥವಾ ಪೈಪ್‌ನಿಂದ ಅನಿಲ ಸೋರಿಕೆಯಾಗುತ್ತಿದ್ದರೆ, ಸಾಮಾನ್ಯವಾಗಿ ಹಿಸ್ ಅಥವಾ ಶಿಳ್ಳೆ ಹೊಡೆಯು ವಂತಹ ಶಬ್ದವನ್ನು ಉಂಟುಮಾಡುತ್ತದೆ. ಆಗ ತಕ್ಷಣ ಗ್ಯಾಸ್ ಆಫ್ ಮಾಡಿ. ರಿಸ್ಕ್ ತೆಗೆದುಕೊಳ್ಳಬೇಡಿ.
ಸೋಪಿನ ನೀರಿನ ಪರೀಕ್ಷೆ : ಪೈಪ್ ಅಥವಾ ರೆಗ್ಯುಲೇಟರ್ ಜಾಯಿಂಟ್ ಮೇಲೆ ಸ್ವಲ್ಪ ಸೋಪಿನ ನೀರನ್ನು ಸುರಿದರೆ, ಅಲ್ಲಿ ಅನಿಲ ಗುಳ್ಳೆಗಳು ಮೇಲೇರಲು ಪ್ರಾರಂಭಿಸುತ್ತವೆ. ಇದರಲ್ಲಿ ವಿಶೇಷ ಏನಿಲ್ಲ. ಟ್ಯೂಬುಗಳಲ್ಲಿ ಗಾಳಿ ಹೊಡೆದು, ನೀರಿನೊಳಗಿಟ್ಟು ಪಂಕ್ಚರ್ ಟೆಸ್ಟ್ ಪರೀಕ್ಷೆ ಮಾಡುತ್ತಾರಲ್ಲ.. ಅದೇ ರೀತಿ ಮಾಡ್ತಾರೆ. ಮಾಡಬೇಕು.
ಗ್ಯಾಸ್ ಒಲೆಯ ಬೆಂಕಿಯ ಬಣ್ಣ : ಸಾಮಾನ್ಯವಾಗಿ, ಗ್ಯಾಸ್ ಸ್ಟೌವ್‌ನ ಜ್ವಾಲೆಯು ನೀಲಿ ಬಣ್ಣದ್ದಾಗಿರುತ್ತದೆ. ಅನಿಲ ಸೋರಿಕೆಯಾಗುತ್ತಿದ್ದರೆ, ಜ್ವಾಲೆಯು ಹಳದಿ, ಕಿತ್ತಳೆ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಬಹುದು.
ಗ್ಯಾಸ್ ಪಕ್ಕ ಗಿಡಗಳು ಒಣಗುತ್ತಿದ್ದರೆ..
ಮನೆಯಲ್ಲಿ ಅನಿಲ ಸೋರಿಕೆಯಾಗುತ್ತಿದ್ದರೆ ಅಥವಾ ಸೋರಿಕೆಯಾಗುವ ಸಂಭಾವ್ಯ ಸ್ಥಳಗಳ ಹತ್ತಿರವಿರುವ ಸಸ್ಯಗಳು ಇದ್ದಕ್ಕಿದ್ದಂತೆ ಒಣಗಲು ಶುರವಾಗುತ್ತವೆ.
ತಲೆನೋವು, ತಲೆ ಸುತ್ತು, ಹೊಟ್ಟೆ ತೊಳಸುವುದು ಇತ್ಯಾದಿ..
ಕೋಣೆಯಲ್ಲಿ ಅನಿಲ ಸೋರಿಕೆಯಾಗಿ ಹರಡಿದಾಗ ಮತ್ತು ಆಮ್ಲಜನಕದ ಮಟ್ಟ ಕಡಿಮೆಯಾಗಲು ಪ್ರಾರಂಭಿಸಿದಾಗ, ತಲೆನೋವು ಮತ್ತು ತಲೆತಿರುಗುವಿಕೆ: ಹಠಾತ್ ತೀವ್ರ ತಲೆನೋವು ಅಥವಾ ತಲೆ ತಿರುಗುವಿಕೆ, ಹೊಟ್ಟೆ ತೊಳಸುವುದು, ವಾಂತಿಯ ಸೆನ್ಸೇಷನ್ ಆಗುವುದು ಸಂಭವಿಸುತ್ತದೆ.
ಆಮ್ಲಜನಕದ ಕೊರತೆಯಿಂದಾಗಿ ಇದ್ದಕ್ಕಿದ್ದಂತೆ ತುಂಬಾ ಆಲಸ್ಯ ಅಥವಾ ದಣಿದ ಭಾವನೆ ಬರುತ್ತದೆ. ಇಂತಹ ಸಂದರ್ಭದಲ್ಲಿ ಕಣ್ಣುಗಳು ತುರಿಸಿದರೂ ಅಥವಾ ಉರಿಯುತ್ತಿದ್ದರೂ ಕೈಯಿಂದ ಉಜ್ಜಿಕೊಳ್ಳಬೇಡಿ. ಕೂಡಲೇ ಮನೆಯಿಂದ ಹೊರಬಂದು ಗಾಳಿ ಬರುವ ಕಡೆ ಅಥವಾ ತೆರೆದ ಪ್ರದೇಶಕ್ಕೆ ಇರುವ ಸ್ಥಳದಲ್ಲಿ ಕುಳಿತುಕೊಳ್ಳಿ.
ಇಂತಹ ಸಂದರ್ಭದಲ್ಲಿ ತಕ್ಷಣವೇ ಆ ಜಾಗವನ್ನು ಬಿಟ್ಟು ತೆರೆದ ಪ್ರದೇಶಕ್ಕೆ ಬನ್ನಿ. ಸಾಧ್ಯವಾದರೆ ಮನೆಯೊಳಗೆ ಗಾಳಿ ಬರುವಂತಾಗಲು ಬಾಗಿಲು ಮತ್ತು ಕಿಟಕಿ ಗಳನ್ನು ತೆರೆಯಿರಿ. ಮನೆಯ ಸ್ವಿಚ್‌ಗಳನ್ನು ಆನ್ ಅಥವಾ ಆಫ್ ಮಾಡಬೇಡಿ ಬೆಂಕಿ ಹೊತ್ತಿಕೊಳ್ಳುವ ಅಪಾಯವಿರುತ್ತದೆ.
ಗ್ಯಾಸ್ ಸೋರಿಕೆ ಗೊತ್ತಾದ ಮೇಲೆ..
ಬೆಂಕಿಕಡ್ಡಿಗಳು, ಧೂಪದ್ರವ್ಯದ ಕಡ್ಡಿಗಳು ಅಥವಾ ಲೈಟರ್‌ಗಳನ್ನು ಹೊತ್ತಿಸಬೇಡಿ. ಮನೆಯಲ್ಲಿರುವ ಯಾವುದೇ ದೀಪಗಳು, ಫ್ಯಾನ್ ಗಳು ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಸ್ವಿಚ್ ಆನ್ & ಆಫ್ ಮಾಡಬೇಡಿ. ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಿರಿ. ರೆಗ್ಯುಲೇಟರ್ ಆಫ್ ಮಾಡಿ, ತೆಗೆದುಹಾಕಿ ಮತ್ತು ಸುರಕ್ಷತಾ ಕ್ಯಾಪ್ ಚೇಂಜ್ ಮಾಡಿ. ಸುರಕ್ಷಿತ ಸ್ಥಳಕ್ಕೆ ತೆರಳಿ, ನಿಮ್ಮ ಎಲ್‌ಪಿಜಿ ವಿತರಕರಿಗೆ ಅಥವಾ ತುರ್ತು ಸೇವೆಗೆ ಕರೆ ಮಾಡಿ. ಗ್ಯಾಸ್ ಪೈಪ್ ಅನ್ನು ಪ್ರತಿ 2 ವರ್ಷಗಳಿಗೊಮ್ಮೆ ಬದಲಾಯಿಸಿ.



