ಷೇರು ಪೇಟೆ. ಸಾಮಾನ್ಯರಿಗೆ ಅರ್ಥವಾಗಲ್ಲ. ಆರ್ಥಿಕ ಪಂಡಿತರಿಗೆ ಸುಲಭವಾಗಿ ಅರ್ಥವಾಗಲ್ಲ. ಅದೊಂದು ಮಾಯಾಜಿಂಕೆ. ಸಿಕ್ಕವರಿಗೆ ಸೀರುಂಡೆ ಎನ್ನುವವರೇ ಹೆಚ್ಚು. ಆದರೆ ಅದು ಪರ್ಫೆಕ್ಟ್ ಬಿಸಿನೆಸ್. ಅರ್ಥ ಮಾಡಿಕೊಂಡವರು ಕಡಿಮೆ. ಆದರೆ ಅದರಲ್ಲಿ ಬರುವ ಲಾಭದ ಆಸೆ ಇಟ್ಟುಕೊಂಡವರು ಹೆಚ್ಚು. ಇಂತಹ ಆಸೆಬುರುಕರನ್ನೇ ಟಾರ್ಗೆಟ್ ಮಾಡಿದ್ದ ಈತ ಗಳಿಸಿದ್ದು ನಾಲ್ಕೂವರೆ ಸಾವಿರ ಕೋಟಿಗೂ ಹೆಚ್ಚು. ಈತನ ಹೆಸರು ಶಿವಾನಂದ ನೀಲಣ್ಣವರ್.
ಈತ ಒಬ್ಬ ಸೈನಿಕನ ಮಗ. ಹುಬ್ಬಳ್ಳಿಯ ಉಣಕಲ್ ಮೂಲದ ಶಿವಾನಂದನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ. ಸೈನ್ಯದಿಂದ ನಿವೃತ್ತಿಯಾಗಿ ಕೆಇಬಿಯಲ್ಲಿ ಕೆಲಸಕ್ಕೆ ಸೇರಿದ್ದ ಈತನ ತಂದೆ, ವೃತ್ತಿಯಲ್ಲಿದ್ದಾಗಲೇ ನಿಧನರಾದರು. ಆಗ ಅನುಕಂಪದ ನೌಕರಿ ಈತನ ಅಣ್ಣನಿಗೆ ಸಿಕ್ಕಿತು. ಕೇವಲ ಪಿಯು ಓದಿದ್ದ ಶಿವಾನಂದನಿಗೆ ದೊಡ್ಡ ಕೆಲಸಗಳಂತೂ ಸಿಗಲಿಲ್ಲ. ಗೂರ್ಕಾ, ಆಟೋ ರಿಕ್ಷಾದಲ್ಲಿ ಐಸ್ ಕ್ರೀಂ ಮಾರೋದು ಮಾಡ್ತಿದ್ದವನು ಸಾಲಸೋಲ ಮಾಡಿ ಷೇರುಪೇಟೆಯಲ್ಲಿ ಇನ್ವೆಸ್ಟ್ ಮಾಡಿದ್ದ. ದುಡ್ಡು ಹೋಯ್ತು. ಆದರೆ ಹಠ ಬಿಡಲಿಲ್ಲ. ಮತ್ತೆ ಹಣ ಹೂಡಿಕೆ ಮಾಡಿದ. ಆದರೆ ಈ ಬಾರಿ ಆತನ ಹಣ ಹಾಕಲಿಲ್ಲ. ಬೇರೆಯವರ ದುಡ್ಡು ಹಾಕಿದ.
ಅನುಭವದ ಜೊತೆಗೆ ಲಾಭವೂ ಬಂತು. ಬೆಳಗಾವಿಯ ಶಿವಬಸವ ನಗರದಲ್ಲಿ ಪ್ರಧಾನ ಕಚೇರಿ ಹೊಂದಿರುವ ‘ಶಿವಂ ಅಸೋಸಿಯೇಟ್ಸ್’ ಮತ್ತು ‘ಶಿವಂ ಸೇವಾ’ ಸಂಸ್ಥೆ ಎಂಬ ಎನ್‌ಜಿಓ ಹುಟ್ಟುಹಾಕಿದ. ವಿಚಿತ್ರ ಎಂದರೆ ತಾನು ದೇವರ ಅವತಾರ, ನೋಡ್ತಾ ಇರಿ.. 2028ಕ್ಕೆ ಕರ್ನಾಟಕಕ್ಕೆ ನಾನೇ ಸಿಎಂ ಆಗೋದು ಎಂದು ಪುಂಗಿ ಊದುತ್ತಿದ್ದ ಈತನನ್ನು ಸೀರಿಯಸ್ ಆಗಿ ನಂಬಿದವರೂ ಇದ್ರು.
ಈತ ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದ ಈತ ಚಾಂಪಿಯನ್ ಅನ್ನೋ ಸಿನಿಮಾ ಮಾಡಿದ್ದ. ತೋಪಾಗಿತ್ತು. ಇದೆಲ್ಲದರ ಮಧ್ಯೆ ಈತ ಸಾರ್ವಜನಿಕರಿಂದ ಕಾನೂನುಬಾಹಿರವಾಗಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿದ್ದ. ಅದೂ ಎಷ್ಟು ಹಣ ಅಂತೀರಿ.. ಬರೋಬ್ಬರಿ 4500 ಕೋಟಿಗೂ ಹೆಚ್ಚು. ಅಕ್ಯೂಮೆನ್ ಎಂಬ ಆ್ಯಪ್ ಅಭಿವೃದ್ದಿ ಪಡಿಸುವ ಮೂಲಕ ಜನರಿಂದ ಹಣ ಹೂಡಿಕೆ ಸ್ವೀಕರಿಸುತ್ತಿದ್ದ ಈತ ಈ ಆ್ಯಪ್ ಮೂಲಕ ಜನರಿಂದ ಅನಧಿಕೃತವಾಗಿ ಹಣ ಸಂಗ್ರಹ ಮಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಶಿವಂ ಅಸೋಸಿಯೇಟ್ಸ್ ಮೂಲಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದ. ಸೋಶಿಯಲ್ ಮೀಡಿಯಾದಲ್ಲಿ ತನ್ನ ಫೈರಿಂಗ್ ಸ್ಪೀಚ್ ಮೂಲಕ ಸಡನ್ ಫೇಮಸ್ ಆಗಿದ್ದ.
ಶುಕ್ರವಾರ ಬೆಳಗಾವಿಯ ಶಿವಬಸವ ನಗರದ ನಿವಾಸದಿಂದ ಕರೆದೊಯ್ದು ವಿಚಾರಣೆ ನಡೆಸಿದ ಎಸಿ ಶ್ರವಣಕುಮಾರ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಸೂಚನೆಯಂತೆ 24 ಗಂಟೆಯೊಳಗೆ ಪ್ರಾಥಮಿಕ ತನಿಖೆ ಪೂರ್ಣಗೊಳಿಸಿ ವರದಿ ಒಪ್ಪಿಸಿದೆ. 45ಸಾವಿರ ಜನರಿಂದ ಕೋಟಿ ಕೋಟಿ ಹಣ ಸಂಗ್ರಹ ಮಾಡಿದ ಆರೋಪ ಈತನ ಮೇಲಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿವಂ ಅಸೋಸಿಯೇಟ್‌ನ ಎರಡು ಕಚೇರಿಗಳು, ನೀಲಣ್ಣವರ ಅವರ ಮನೆ ಹಾಗೂ ಅಪಾರ್ಟ್‌ನೆಂಟ್‌ನಲ್ಲಿ ಶೋಧ ನಡೆಸಿರುವ ಅಧಿಕಾರಿಗಳು, ಬ್ಯಾಂಕ್ ಖಾತೆಗಳು, ಬಾಂಡ್, ಲ್ಯಾಪ್‌ಟಾಪ್, ಮೊಬೈಲ್‌ಗಳು ಮತ್ತು ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.



