ಚರಂಡಿಯಲ್ಲಿ ಚಿನ್ನ ಸಿಗುತ್ತಾ..? ಹೋಗ್ರೀ.. ಏನ್ ತಮಾಷೆ ಮಾಡ್ತೀರಾ ಅಂತೀರೇನೋ.. ಬೆಂಗಳೂರಿನಲ್ಲಷ್ಟೇ ಅಲ್ಲ, ಬಹುತೇಕ ಎಲ್ಲ ಕಡೆ ಈ ಟೀಂ ಕೆಲಸ ಮಾಡುತ್ತೆ. ಬೆಂಗಳೂರಿನ ನಗರ್ತಪೇಟೆ, ಕಬ್ಬನ್ ಪೇಟೆ ಅಥವಾ ತಮಿಳುನಾಡಿನ ಕೊಯಮತ್ತೂರು ಕಡೆಗಳಲ್ಲಿ ಇಂಥಾದ್ದೊಂದು ವಿಚಿತ್ರ ತಂಡವೇ ಕೆಲಸ ಮಾಡುತ್ತೆ. ಅಂಥಾದ್ದೊಂದು ಟೀಂನಲ್ಲಿದ್ದ ಮೂವರನ್ನ ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ಧಾರೆ. ಅವರ ಬಳಿ ಸಿಕ್ಕಿರೋದು 12 ಲಕ್ಷ ಮೌಲ್ಯದ ಚಿನ್ನ.
ಸಾಮಾನ್ಯವಾಗಿ ಇಂತಹ ಕಳ್ಳರು ಚಿನ್ನದ ಆಭರಣ ತಯಾರಿಕಾ ಘಟಕಗಳು (Jewellery Manufacturing Units) ಅಥವಾ ಅಂಗಡಿಗಳು ಇರುವ ಪ್ರದೇಶಗಳಲ್ಲಿ ಇರುತ್ತಾರೆ. ಉದಾಹರಣೆಗೆ ಬೆಂಗಳೂರಿನ ನಗರ್ತಪೇಟೆ, ಕಬ್ಬನ್ ಪೇಟೆ ಅಥವಾ ತಮಿಳುನಾಡಿನ ಕೊಯಮತ್ತೂರು ಕಡೆಯಲ್ಲೂ ಇದ್ದಾರೆ. ಚಿನ್ನದ ಕೆಲಸ ಮಾಡುವ ಅಂಗಡಿಗಳಿಂದ ಹೊರಬರುವ ತ್ಯಾಜ್ಯ ನೀರು ಮತ್ತು ಧೂಳಿನಲ್ಲಿ ಚಿನ್ನವನ್ನು ಹುಡುಕುವುದು ಇವರ ಕೆಲಸ. ಅಂತಹ ಕೆಲಸ ಮಾಡುತ್ತಲೇ ಚಿನ್ನದಂಗಡಿಗೆ ಕನ್ನ ಹಾಕಿದ್ದ ಮೂವರು ಈಗ ಸಿಕ್ಕಿಬಿದ್ದಿದ್ದಾರೆ. ಮೂವರು ಖತರ್ನಾಕ್ ಖದೀಮರನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ಬಳಿಕ ಆರೋಪಿಗಳ ಹಿನ್ನೆಲೆ ಹಾಗೂ ಅವರು ಕಳ್ಳತನಕ್ಕೆ ಸ್ಕೆಚ್ ಹಾಕಿದ ರೋಚಕ ಕತೆಯನ್ನು ಕೇಳಿ ಸ್ವತಃ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ. ಶ್ರೀರಾಮಪುರ ಪೊಲೀಸ್ ಠಾಣೆಯ ರೌಡಿ ಶೀಟರ್ ‘ಆರ್ ಎಕ್ಸ್ ನಾಗ’ ಸೇರಿದಂತೆ ಅರ್ಜುನ್ ಅಲಿಯಾಸ್ ರೋಲೆಕ್ಸ್ ಮತ್ತು ರಾಕ್ ಬಂಧಿತ ಆರೋಪಿಗಳಾಗಿದ್ದಾರೆ.
ಕಳೆದ ಮೇ 6 ರಂದು ನಗರತ್ ಪೇಟೆಯ ಪ್ರಸಿದ್ಧ ‘ಆರುಮ್ ಜ್ಯುವೆಲ್ಲರ್ಸ್’ನ 5ನೇ ಮಹಡಿಯಲ್ಲಿ ಕಳ್ಳತನ ಆಗಿತ್ತು. ಶೌಚಾಲಯದ ಕಿಟಕಿ ಮೂಲಕ ಅತ್ಯಂತ ಚಾಣಾಕ್ಷತನದಿಂದ ಒಳನುಗ್ಗಿ, ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಗಟ್ಟಿಗಳನ್ನು ಕದ್ದು ಪರಾರಿಯಾಗಿದ್ದರು. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಆರೋಪಿಗಳು ಕಳ್ಳತನ ಮಾಡಿ ಎಸ್ಕೇಪ್ ಆಗುವ ದೃಶ್ಯಗಳು ಸೆರೆಯಾಗಿದ್ದವು.
ನಗರತ್ ಪೇಟೆಯ ಶೌಚಾಲಯಗಳನ್ನು ಸ್ವಚ್ಛಗೊಳಿಸುವವರ ಮೇಲೆ ಅನುಮಾನ ಬಿದ್ದ ಪೊಲೀಸರು ಶ್ರೀರಾಮಪುರ ನಿವಾಸಿಗಳಾದ ಮೂವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದರು. ಅರೆಸ್ಟ್ ಆದವರು ಟಾಯ್ಲೆಟ್ ಕ್ಲೀನ್ ಮಾಡ್ತಾ ಇರಲಿಲ್ಲ. ಅದರ ಜೊತೆಗೆ ಚಿನ್ನ ಹುಡುಕುವ ಕಾಯಕವನ್ನೂ ಮಾಡುತ್ತಿದ್ದರು. ನಗರತ್ ಪೇಟೆಯ ಚಿನ್ನದ ಅಂಗಡಿಗಳ ವಾಶ್‌ರೂಮ್ ಹಾಗೂ ಚರಂಡಿಗಳಿಂದ ಬರುವ ಕೊಳಚೆ ನೀರನ್ನು ಶೇಖರಿಸಿ, ಅದರಲ್ಲಿ ಕೊಚ್ಚಿಹೋಗುತ್ತಿದ್ದ ಸಣ್ಣ ಸಣ್ಣ ವೇಸ್ಟೇಜ್ ಚಿನ್ನದ ಕಣಗಳನ್ನು ಹುಡುಕಿ ಮಾರುವುದು ಇವರ ಕೆಲಸವಾಗಿತ್ತು.
ಚರಂಡಿ ನೀರಿನಲ್ಲಿ ಚಿನ್ನ ಹೇಗೆ ಸಿಗುತ್ತದೆ..?
ಚಿನ್ನದ ಆಭರಣಗಳನ್ನು ತಯಾರಿಸುವಾಗ ಅಥವಾ ಪಾಲಿಶ್ ಮಾಡುವಾಗ ಅತಿ ಸೂಕ್ಷ್ಮವಾದ ಚಿನ್ನದ ಕಣಗಳು (Gold Dust) ಅಲ್ಲಿನ ಕಾರ್ಮಿಕರ ಕೈ-ಕಾಲು ತೊಳೆದ ನೀರು, ನೆಲ ಒರೆಸಿದ ನೀರು ಮತ್ತು ಚರಂಡಿ ನೀರಿನಲ್ಲಿ ಕೊಚ್ಚಿ ಹೋಗುತ್ತವೆ. ಈ ಕೆಲಸದಲ್ಲೇ ನೈಪುಣ್ಯತೆ ಹೊಂದಿರುವ “ಅಕ್ಕಸಾಲಿಗ ಧೂಳು ಸಂಗ್ರಹಕಾರರು” (ಸ್ಥಳೀಯವಾಗಿ ಇವರನ್ನು ‘ನ್ಯಾರೆಯವರು’ ಅಥವಾ ‘ಧೂಳು ಆಯುವವರು’ ಎನ್ನಲಾಗುತ್ತದೆ), ಮಧ್ಯರಾತ್ರಿ ಅಥವಾ ಮುಂಜಾನೆ ಹೊತ್ತಿನಲ್ಲಿ ಈ ಅಂಗಡಿಗಳ ಮುಂಭಾಗದ ಚರಂಡಿ ಅಥವಾ ವೇಸ್ಟೇಜ್ ನೀರನ್ನು ಸಂಗ್ರಹಿಸುತ್ತಾರೆ.
ಚಿನ್ನವನ್ನು ಹೇಗೆ ಬೇರ್ಪಡಿಸುತ್ತಾರೆ?
ಚರಂಡಿಯ ತಳದಲ್ಲಿರುವ ಕೆಸರು ಮಣ್ಣು ಮತ್ತು ಕರಗಿದ ಕಸದ ನೀರನ್ನು ಬಕೆಟ್‌ಗಳಲ್ಲಿ ತುಂಬಿಕೊಳ್ಳುತ್ತಾರೆ. ಆ ನೀರು ಮತ್ತು ಮಣ್ಣನ್ನು ತೊಳೆಯಲು ಆಸಿಡ್ (Acid) ಅಥವಾ ಮರ್ಕ್ಯುರಿ (ಪಾದರಸ) ಬಳಸಲಾಗುತ್ತದೆ. ಮಣ್ಣನ್ನು ಸಂಪೂರ್ಣವಾಗಿ ತೊಳೆದು, ಕೊನೆಯಲ್ಲಿ ಉಳಿಯುವ ಅತಿ ಸಣ್ಣ ಚಿನ್ನದ ರೇಣುಗಳನ್ನು ಕರಗಿಸಿ ಸಣ್ಣ ಬಿಲ್ಲೆಗಳನ್ನಾಗಿ ಮಾರ್ಪಡಿಸಿ ಮಾರಾಟ ಮಾಡುತ್ತಾರೆ. ಅಂಗಡಿಯವರು ತಮ್ಮ ವೇಸ್ಟೇಜ್ ನೀರನ್ನು ಸಂಸ್ಕರಿಸಲು ಪ್ರತ್ಯೇಕ ಟ್ಯಾಂಕ್‌ಗಳನ್ನು ಇಟ್ಟಿರುತ್ತಾರೆ. ಆದರೆ ಚರಂಡಿಗೆ ಹರಿಯುವ ನೀರನ್ನು ಕದ್ದು, ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ತೊಂದರೆ ಕೊಟ್ಟು ಚರಂಡಿ ಅಗೆಯುವುದು ಕಾನೂನುಬಾಹಿರ.



