ಫೆಬ್ರವರಿ ತಿಂಗಳ ಕೊನೆಯ ದಿನ ಅಮೆರಿಕ ಇಸ್ರೇಲ್ ದಾಳಿಯಲ್ಲಿ ಮೃತಪಟ್ಟ ಇರಾನ್ ಸುಪ್ರೀಂ ಲೀಡರ್ ಅಯತೊಲ್ಲ ಖಮೇನಿ ಅಂತ್ಯಕ್ರಿಯೆ ಪ್ರಕ್ರಿಯೆ 4 ತಿಂಗಳ ನಂತರ ಇದೀಗ ಶುರುವಾಗಿದೆ. ಖಮೇನಿ ಅಂತ್ಯಕ್ರಿಯೆಯೇನೋ 4 ತಿಂಗಳ ನಂತರವಾದರೂ ನಡೆಯುತ್ತಿದೆ. ಆದರೆ ಜಗತ್ತಿನಲ್ಲಿ ಕೆಲವು ನಾಯಕರು ಮೃತಪಟ್ಟು ದಶಕಗಳೇ ಆಗಿದ್ದರೂ ಅವರಿಗೆ ಅಂತ್ಯಕ್ರಿಯೆ ಆಗಿಲ್ಲ. ಈಗಲೂ ಅವರ ಮೃತದೇಹಗಳನ್ನು ಸಂರಕ್ಷಣೆ ಮಾಡಿ ಇಡಲಾಗಿದೆ. ಏಕೆ ಎಂಬುದಕ್ಕೆ ವಿಶೇಷ ಕಾರಣಗಳಿವೆ. ಇದು ಈಜಿಪ್ಟ್ ಮಮ್ಮಿಗಳ ಕಥೆ ಅಲ್ಲ. ಇದು ನಮ್ಮೆಲ್ಲರಿಗೂ ಗೊತ್ತಿರುವ ಚಿರಪರಿಚಿತ ಹೆಸರುಗಳು.
ರಷ್ಯಾದ ಮಾಜಿ ಅಧ್ಯಕ್ಷ ವ್ಲಾಡಿಮಿರ್ ಲೆನಿನ್ : ಸೋವಿಯತ್ ಒಕ್ಕೂಟದ ಸ್ಥಾಪಕರಾಗಿರುವ ಲೆನಿನ್1924ರಲ್ಲಿ 54ನೇ ವಯಸ್ಸಿನಲ್ಲಿ ನಿಧನರಾದರು. ನಂತರ ಅವರ ಮಿದುಳನ್ನು ತೆಗೆದುಹಾಕಲಾಯಿತು. ದೇಹವನ್ನೂ ಸಂರಕ್ಷಿಸಿಡಲಾಯಿತು. ಅವರ ಮೃತದೇಹವನ್ನು ಕಳೆದ 100ಕ್ಕೂ ಹೆಚ್ಚು ವರ್ಷಗಳಿಂದ ಅಂತ್ಯಸಂಸ್ಕಾರ ಮಾಡದೆ, ರಷ್ಯಾದ ಮಾಸ್ಕೋದಲ್ಲಿರುವ ರೆಡ್ ಸ್ಕ್ವೇರ್ (Red Square) ಮೌಸೋಲಿಯಂನಲ್ಲಿ (ಸಮಾಧಿ ಸ್ಮಾರಕ) ಸಂರಕ್ಷಿಸಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿದೆ. ದೇಹದ ಉಸ್ತುವಾರಿಗಾಗಿಯೇ “ಲೆನಿನ್ ಲ್ಯಾಬ್” (Lenin Lab) ಎಂಬ ವಿಜ್ಞಾನಿಗಳ ಮತ್ತು ಅಂಗರಚನಾ ತಜ್ಞರ ಪ್ರತ್ಯೇಕ ತಂಡವನ್ನು ರಚಿಸಲಾಗಿದೆ. ಕೊಳೆಯುವುದನ್ನು ತಡೆಯಲು ದೇಹದ ಒಳಗಿನ ಎಲ್ಲಾ ಮೃದು ಅಂಗಾಂಶಗಳು ಮತ್ತು ಮೆದುಳನ್ನು ಸಂಪೂರ್ಣವಾಗಿ ಹೊರತೆಗೆಯಲಾಗಿದೆ. ಲೆನಿನ್ ಅವರ ಮೆದುಳನ್ನು ಸಂಶೋಧನೆಗಾಗಿ ರಷ್ಯಾದ ಸೈನ್ಸ್ ಅಕಾಡೆಮಿಯಲ್ಲಿ ಇಡಲಾಗಿದೆ. ಪ್ರತಿ 18 ತಿಂಗಳಿಗೆ (ಒಂದೂವರೆ ವರ್ಷಕ್ಕೆ ) ಸಾರ್ವಜನಿಕ ವೀಕ್ಷಣೆಯಿಂದ ಹೊರತೆಗೆದು, ಗ್ಲಿಸರಾಲ್ ಮತ್ತು ಪೊಟ್ಯಾಸಿಯಮ್ ಒಳಗೊಂಡ ವಿಶೇಷ ರಾಸಾಯನಿಕ ದ್ರವದಲ್ಲಿ 30 ದಿನಗಳ ಕಾಲ ಮುಳುಗಿಸಿ ಇಡಲಾಗುತ್ತದೆ.
ಚೀನಾದ ಕಮ್ಯುನಿಸ್ಟ್ ಕ್ರಾಂತಿ ಪಿತಾಮಹ ಮಾವೋ ಝೆಡಾಂಗ್ : ಅವರು ಮೃತಪಟ್ಟು 50 ವರ್ಷಗಳಾಗುತ್ತ ಬಂದರೂ (1976 ರಲ್ಲಿ ನಿಧನ) ಅಂತ್ಯಸಂಸ್ಕಾರ ಮಾಡದೆ, ಬೀಜಿಂಗ್‌ನ ಟಿಯಾನನ್ಮೆನ್ ಸ್ಕ್ವೇರ್ (Tiananmen Square) ನಲ್ಲಿರುವ ವಿಶೇಷ ಭವ್ಯ ಸ್ಮಾರಕದಲ್ಲಿ (Mausoleum) ಇಂದಿಗೂ ಸಂರಕ್ಷಿಸಿಡಲಾಗಿದೆ. ಮಾವೋ ತಮಗೆ ಅಂತಿಮವಾಗಿ ಚಿತಾಗಾರದಲ್ಲಿ ದಹನ ಸಂಸ್ಕಾರ (Cremation) ಮಾಡಬೇಕೆಂದು ಬಯಸಿದ್ದರು. ಆದರೆ ಚೀನಾ ಸರ್ಕಾರವು ಕಮ್ಯುನಿಸ್ಟ್ ಪಕ್ಷದ ಸಂಕೇತವಾಗಿ ಅವರ ದೇಹವನ್ನು ಶಾಶ್ವತವಾಗಿ ಸಂರಕ್ಷಿಸಲು ನಿರ್ಧರಿಸಿತು. ಮಾವೋ ನಿಧನರಾದ ಕೆಲವೇ ಗಂಟೆಗಳಲ್ಲಿ ಚೀನಾದ ವೈದ್ಯರ ತಂಡವು ಅವರ ದೇಹಕ್ಕೆ ಸುಮಾರು 22 ಲೀಟರ್ ಫಾರ್ಮಾಲಿನ್ ದ್ರವವನ್ನು ಇಂಜೆಕ್ಟ್ ಮಾಡಿ ಸಂರಕ್ಷಿಸಿ ಇಡಲಾಗಿದೆ. ವಿಶೇಷ ಎಂದರೆ ಹಗಲಿನ ವೇಳೆಯಲ್ಲಿ ಮಾವೋ ದೇಹವನ್ನು ಸಾರ್ವಜನಿಕ ವೀಕ್ಷಣೆಗೆ ಇಡಲಾಗುತ್ತದೆ. ಆದರೆ ರಾತ್ರಿಯಾಗುತ್ತಿದ್ದಂತೆ ಲಿಫ್ಟ್ ಮೂಲಕ ಈ ಗಾಜಿನ ಪೆಟ್ಟಿಗೆಯನ್ನು ಕೆಳಭಾಗದಲ್ಲಿರುವ ರಹಸ್ಯ ಭೂಗತ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತದೆ. ಅಲ್ಲಿ ತಾಪಮಾನ, ಆರ್ದ್ರತೆ ಮತ್ತು ರಾಸಾಯನಿಕಗಳನ್ನು ಮರು-ಹೊಂದಿಸಲಾಗುತ್ತದೆ.
ಉ.ಕೊರಿಯಾದ ಕಿಮ್ ಇಲ್-ಸಂಗ್ & ಕಿಮ್ ಜೊಂಗ್-ಇಲ್ : ಈಗ ಉ.ಕೊರಿಯಾದ ಸರ್ವಾಧಿಕಾರಿಯಾಗಿರುವ ಕಿಮ್ ಜಾಂಗ್ ಉನ್ ಅವರ ತಂದೆ ಮತ್ತು ತಾತ, ಇಬ್ಬರಿಗೂ ಸಂಸ್ಕಾರ ಆಗಿಲ್ಲ. ಕಿಮ್ ಇಲ್-ಸಂಗ್ (ತಾತಾ), ಉತ್ತರ ಕೊರಿಯಾದ ಸಂಸ್ಥಾಪಕರಾದ ಇವರು ಜುಲೈ 8, 1994 ರಂದು ನಿಧನರಾದರು. ಕಿಮ್ ಜೊಂಗ್-ಇಲ್ (ತಂದೆ): ಇವರ ಮಗ ಹಾಗೂ ಪ್ರಸ್ತುತ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ತಂದೆಯಾದ ಇವರು ಡಿಸೆಂಬರ್ 17, 2011 ರಂದು ನಿಧನರಾದರು. ಉತ್ತರ ಕೊರಿಯಾಕ್ಕೆ ದೇಹ ಸಂರಕ್ಷಣೆಯ ಸ್ವಂತ ತಂತ್ರಜ್ಞಾನ ಇರಲಿಲ್ಲ. ಹಾಗಾಗಿ ರಷ್ಯಾದ ಮಾಸ್ಕೋದಲ್ಲಿರುವ ಪ್ರಸಿದ್ಧ “ಲೆನಿನ್ ಲ್ಯಾಬ್” ವಿಜ್ಞಾನಿಗಳ ಮೂಲಕ, ಇವರ ದೇಹವನ್ನು ರಕ್ಷಿಸಲಾಗಿದೆ.
ವಿಯೆಟ್ನಾಂ ಕ್ರಾಂತಿಕಾರಿ ನಾಯಕ ಹೋ ಚಿ ಮಿನ್ಹ್ ಅವರ ಮೃತದೇಹವನ್ನೂ 57 ವರ್ಷಗಳಿಂದ ಸಂರಕ್ಷಿಸಿ ಇಡಲಾಗಿದೆ. ಇನ್ನೂ ಕೆಲವು ಅಗರ್ಭ ಶ್ರೀಮಂತರುತಮ್ಮ ಪೂರ್ಜಜರನ್ನು ಮಣ್ಣುಮಾಡದೆ, ಈಗಲೂ ಕ್ರಯೋಜೆನಿಕ್ಸ್ ಫ್ರೀಜರ್‌ಗಳಲ್ಲಿ ಸಂರಕ್ಷಿಸಿಟ್ಟಿದ್ದಾರೆ. ವಿಜ್ಞಾನ ಮುಂದುವರಿದು, ಸತ್ತವರನ್ನೂ ಬದುಕಿಸುವ ದಿನ ಮುಂದೆಂದಾದರೂ ಬಂದರೆ, ತಮ್ಮ ತಂದೆ-ತಾಯಿ, ಅಜ್ಜ- ಅಜ್ಜಿಯ ಪುನಃ ಜೀವ ಕೊಡಬಹುದು ಎಂಬ ಆಸೆಯೂ ಇದೆ.
ಈ ರೀತಿ ಮೃತದೇಹವನ್ನ ರಕ್ಷಿಸುವ ಪ್ರಕ್ರಿಯೆಯನ್ನು ಎಂಬಾಮಿಂಗ್ ಎನ್ನುತ್ತಾರೆ.



