ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಅವರ ಸ್ಥಾನಕ್ಕೆ ಹೊಸಬರನ್ನು ತರುವ ಹೈಕಮಾಂಡ್ ಚಿಂತನೆ, ಈ ಕ್ಷಣಕ್ಕೆ ಜಾರಿಯಾಗುತ್ತಿಲ್ಲ. ಮುಂದಕ್ಕೆ ಹೋಗಿದೆ. ವಿಶೇಷ ಎಂದರೆ ತಮ್ಮ ಸ್ಥಾನ ಉಳಿಯುವುದಿಲ್ಲ ಎಂದು ಗೊತ್ತಿದ್ದರೂ, ವಿಜಯೇಂದ್ರ ಕೆಲಸ ಮಾಡಬೇಕು ಎಂದು ನಿರೀಕ್ಷೆ ಮಾಡುವುದು. ಹೈಕಮಾಂಡ್ ಬದಲಾಗಿಲ್ಲ. ಅಧ್ಯಕ್ಷ ಸ್ಥಾನ ಕೊಟ್ಟಾಗಲೂ ಪ್ರತೀ ಹಂತದಲ್ಲಿ ಬ್ರೇಕ್ ಹಾಕುತ್ತಲೇ ಬಂದಿದ್ದ ಹೈಕಮಾಂಡ್, ಯಶಸ್ಸನ್ನು ತನ್ನ ಕೊರಳಿಗೂ, ವೈಫಲ್ಯವನ್ನೂ ವಿಜಯೇಂದ್ರ ಅವರಿಗೂ ಸುತ್ತಿತ್ತು. ಈಗ ಇನ್ನೊಂದು ಪಾಠವನ್ನೂ ಹೇಳಿದೆ. ಅದು RSS ನಾಯಕರ ಮೂಲಕ.
ಆಪರೇಷನ್ ವಿಜಯೇಂದ್ರ ಪೋಸ್ಟ್ ಪೋನ್ : ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಾರ್ಯ ಮುಂದಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಆಪರೇಷನ್ ವಿಜಯೇಂದ್ರ ಮುಂದಕ್ಕೆ ಹೋಗಿದೆಯಂತೆ. ಜುಲೈ ಹನ್ನೊಂದರ ನಂತರ ಕೇಂದ್ರ ಸಂಪುಟ ಪುನಾರಚನೆ ಸಾಧ್ಯವಿದೆ ಎಂಬ ಮಾತಿದೆಯಾದರೂ, ಸಂಸತ್ತಿನ ಅಧಿವೇಶನ ತುಂಬ ಹತ್ತಿರದಲ್ಲಿರುವುದರಿಂದ ರಿಸ್ಕ್ ಬೇಕಾ ಎಂಬ ಆಲೋಚನೆಯೂ ಹೈಕಮಾಂಡ್ ಮಟ್ಟದಲ್ಲಿದೆ.
ಒಂದು ವೇಳೆ ಹಾಗಾಗದೆ ಜುಲೈ ಆರರಂದೇ ಸಂಪುಟ ಪುನರ್ರಚನೆಯಾಗಿದ್ದರೆ ಕೇಂದ್ರ ಸಂಪುಟದಲ್ಲಿರುವ ಕರ್ನಾಟಕದ ಇಬ್ಬರು ನಾಯಕರು ರಾಜ್ಯದಲ್ಲಿ ಪಕ್ಷದ ಕೆಲಸಕ್ಕೆ ನಿಯೋಜಿತರಾಗುತ್ತಿದ್ದರು.
ಈ ಪೈಕಿ ಒಬ್ಬರು ವಿ.ಸೋಮಣ್ಣ. ಅವರನ್ನು ಪಕ್ಷದ ರಾಜ್ಯಾದ್ಯಕ್ಷ ಸ್ಥಾನಕ್ಕೆ ನಿಯೋಜಿಸಿ, ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಇಲ್ಲವೇ ಗದ್ದಿಗೌಡರ್ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳುವ ಕೆಲಸವಾಗುತ್ತಿತ್ತು.
ಆದರೆ ಈಗ ಸಂಪುಟ ಪುನರ್ರಚನೆ ಕಾರ್ಯ ಮುಂದಕ್ಕೆ ಹೋಗಿರುವುದರಿಂದ ಆಪರೇಷನ್ ವಿಜಯೇಂದ್ರ ಕಾರ್ಯಾಚರಣೆ ಮುಂದಕ್ಕೆ ಹೋಗಿದೆ. ಆದರೆ ಮುಂದಕ್ಕೆ ಹೋಗಿದ್ದರೂ ಆ ಕಾರ್ಯಾಚರಣೆ ಎನಿ ಟೈಮ್ ನಡೆದೇ ನಡೆಯುತ್ತದೆ ಎಂಬುದು ವಿಜಯೇಂದ್ರ ವಿರೋಧಿಗಳ ಮಾತು.
ಅಪರೇಷನ್ ವಿಜಯೇಂದ್ರ ಸುದ್ದಿಯೇ ಸುಳ್ಳಾ..?
ಈ ಕುರಿತೂ ಕೂಡಾ ಕೆಲವು ಅನುಮಾನಗಳಿವೆ. ಕೇಂದ್ರದಲ್ಲಿ ಆ ರೀತಿಯ ಆಲೋಚನೆಗಳೇ ಇಲ್ಲ. ಆದರೆ ರೆಬಲ್ ಟೀಂನ ಕೆಲವು ನಾಯಕರು ʻತಮಗೆ ಬೇಕಾದ ಪತ್ರಕರ್ತರ ಮೂಲಕʼ ಈ ರೀತಿಯ ಸುದ್ದಿಯನ್ನು ಹಬ್ಬಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಆದರೆ ಖಚಿತವಿಲ್ಲ. ಈ ಹಿಂದೆ ಈ ಪತ್ರಕರ್ತರು ಹೇಳಿದ ಯಾವುದೂ ನಿಜವಾಗಿ ಆಗಿಲ್ಲ ಎನ್ನುವ ಮಾಹಿತಿ ಆಧಾರದ ಮೇಲೆ ಕಾರ್ಯಕರ್ತರು ಜಡ್ಜ್ ಮಾಡ್ತಿದ್ದಾರೆ.
ಇದರ ನಡುವೆ ಆರ್‌ಎಸ್‌ಎಸ್ ನಾಯಕರು ಬಿಕೆ ಹರಿಪ್ರಸಾದ್ ಮತ್ತು ಪ್ರಿಯಾಂಕ್ ಖರ್ಗೆ ಅವರ ಮಾತಿಗೆ ಹೆಚ್ಚು ರಿಯಾಕ್ಷನ್ ಕೊಡೋದು ಬೇಡ ಎಂದು ಹೇಳಿದ್ದಾರಂತೆ. ದಿನದಿಂದ ದಿನಕ್ಕೆ ಕರ್ನಾಟಕದಲ್ಲಿ ಆರೆಸ್ಸೆಸ್ ಅನ್ನು ರಾಜಕೀಯದ ರಣಾಂಗಣಕ್ಕೆ ಎಳೆ ತರುವಲ್ಲಿ ಬಿಕೆ-ಪಿಕೆ ಜೋಡಿ ಯಶಸ್ವಿಯಾಗುತ್ತಿದೆ.
ಹೀಗೆ ಬಿಕೆ-ಪಿಕೆ ಜೋಡಿ ತಮ್ಮ ವಿರುದ್ಧ ಮಾಡುತ್ತಿರುವ ಧಾಳಿಯನ್ನು ದಕ್ಕಿಸಿಕೊಳ್ಳುವ ಶಕ್ತಿ ನಮಗಿದೆ. ಆದರೆ ಆರೆಸ್ಸೆಸ್ ವಿರುದ್ಧ ಅವರು ಆರ್ಭಟಿಸಿದರು ಅಂತ ನೀವು ಆರೆಸ್ಸೆಸ್ ಪರವಾಗಿ ಹೋರಾಟಕ್ಕಿಳಿಯಬೇಡಿ. ಹಾಗಾದಾಗ ಬಿಕೆ-ಪಿಕೆ ಜೋಡಿ ತುಂಬ ಕಾಲ ಆರೆಸ್ಸೆಸ್ ವಿರುದ್ಧ ಮಾತ ನಾಡುತ್ತಾ ಕೂರಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಅವರ ಮಾತಿಗೆ ಜವಾಬು ಕೊಡುತ್ತೀರೋ? ಅಲ್ಲಿಯವರೆಗೆ ಇದು ಮುಂದುವರಿಯುತ್ತದೆ. ಮಾತು ನಿಲ್ಲಿಸಿದರೆ ಲೈಮ್ ಲೈಟಿನಿಂದ ಹಿಂದೆ ಸರಿಯುತ್ತದೆ ಎಂಬುದು ಆರೆಸ್ಸೆಸ್ ನಾಯಕರ ಮಾತು.
ಆರ್‌ಎಸ್‌ಎಸ್ ಸಮರ್ಥನೆಗೆ ಇಳಿಯುವ ಬದಲು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಆಕ್ಟಿವ್ ಎಂದು ಸೂಚನೆ ಕೊಟ್ಟಿದೆಯಂತೆ.



