ಸಿನಿಮಾ, ಟಿವಿ ಧಾರಾವಾಹಿಗಳಲ್ಲಿ ನೋಡಿರ್ತೇವೆ. ಹಾವು ಕಚ್ಚಿದ ಕೂಡಲೇ ನಾಯಕನೋ, ನಾಯಕಿಯೋ ಬಂದು ಹಾವು ಕಚ್ಚಿದ ಜಾಗದಲ್ಲಿ ತುಟಿ ಹಾಕಿ, ವಿಷವನ್ನು ಹೀರುತ್ತಾರೆ. ಹಾವು ಕಚ್ಚಿಸಿಕೊಂಡವರು ಬದುಕಿ ಬಿಡ್ತಾರೆ. ಆದರೆ ಇದರಂತಹ ಡೇಂಜರ್ ಇನ್ನೊಂದಿಲ್ಲ. ಚೀನಾದ ಯುನ್ನಾನ್ ಪ್ರಾಂತ್ಯದ ಯುವಾನ್ಯಾಂಗ್ ಜಿಲ್ಲೆಯಲ್ಲಿ ಹೀಗೆಯೇ ಮಾಡಲು ಹೋಗಿ ದಂಪತಿ ಆಸ್ಪತ್ರೆ ಪಾಲಾಗಿದ್ಧಾರೆ. ಇದು ಹೊಸದೇನೂ ಅಲ್ಲ. ಆದರೂ ಜನರಲ್ಲಿ ಸಿನಿಮಾ, ಟಿವಿಗಳಿಂದ ಮೂಡಿರುವ ಈ ಮೌಢ್ಯ ತೊಲಗುತ್ತಲೇ ಇಲ್ಲ.
ಹಾವು ಕಚ್ಚಿದಾಗ ಬಾಯಿನಿಂದ ವಿಷ ಹೀರುವುದು ಅತ್ಯಂತ ತಪ್ಪು ಮತ್ತು ಅಪಾಯಕಾರಿ ವಿಧಾನ. ಚೀನಾದ ಯುನ್ನಾನ್ ಪ್ರಾಂತ್ಯದ ಯುವಾನ್ಯಾಂಗ್ ಜಿಲ್ಲೆಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತರೊಬ್ಬರಿಗೆ ತೀವ್ರ ವಿಷಕಾರಿ ಕೋಬ್ರಾ ಅಂದ್ರೆ ನಾಗರಹಾವು ಕಚ್ಚಿತ್ತು. ಇದರಿಂದ ಅವರ ಕೈ ಬೆರಳು ಬಾತುಕೊಂಡು, ತಲೆಸುತ್ತು ಕಾಣಿಸಿಕೊಂಡಿತು. ಪತಿ ಅಪಾಯದಲ್ಲಿ ಇರುವುದನ್ನು ಕಂಡ ಪತ್ನಿ, ಸಿನಿಮಾಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ತೋರಿಸುವಂತೆ ತಕ್ಷಣವೇ ಯಾವುದೇ ಸುರಕ್ಷತೆಯಿಲ್ಲದೆ ಪತಿಯ ಕೈಯಿಂದ ಬಾಯಿಯ ಮೂಲಕ ವಿಷವನ್ನು ಹೀರಿದರು. ವಿಷ ಹೀರಿದ ಕೆಲವೇ ಗಂಟೆಗಳಲ್ಲಿ ಪತ್ನಿಯ ಮುಖ, ನಾಲಿಗೆ ಮತ್ತು ಕೈಕಾಲುಗಳು ಮರಗಟ್ಟಲು (Numbness) ಆರಂಭವಾದವು. ಬಾಯಿಯೊಳಗಿನ ಸೂಕ್ಷ್ಮ ರಕ್ತನಾಳಗಳ (Capillaries) ಮೂಲಕ ವಿಷವು ಆಕೆಯ ರಕ್ತವನ್ನೂ ಸೇರಿತ್ತು. ಕೊನೆಗೆ ದಂಪತಿಗಳಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿ, ಆಂಟಿ-ವೆನಮ್ (ವಿಷನಿರೋಧಕ) ಚಿಕಿತ್ಸೆ ನೀಡಿದ ನಂತರ ಅವರು ಪ್ರಾಣಾಪಾಯದಿಂದ ಪಾರಾದರು. ಅಕಸ್ಮಾತ್ ಆಂಟಿ-ವೆನಮ್ ಸಿಕ್ಕದೇ ಹೋಗಿದ್ದರೆ ಪರಿಸ್ಥಿತಿ ಬೇರೆಯೇ ಆಗುತ್ತಿತ್ತು.
ಹಾವು ಕಚ್ಚಿದಾಗ.. ಗಾಬರಿಯಾಗಬೇಡಿ. ಭಯದಿಂದ ಹೃದಯ ಬಡಿತ ಹೆಚ್ಚಾಗಿ ವಿಷ ದೇಹದಲ್ಲಿ ವೇಗವಾಗಿ ಹರಡುತ್ತದೆ. ಕಚ್ಚಿದ ಭಾಗವನ್ನು (ಕೈ ಅಥವಾ ಕಾಲು) ಅಲುಗಾಡಿಸದೆ ಸ್ಥಿರವಾಗಿ ಇಡಿ. ಕಚ್ಚಿದ ಜಾಗದ ಸುತ್ತ ಉಂಗುರ, ಬಳೆ ಅಥವಾ ಗಡಿಯಾರಗಳಿದ್ದರೆ ತಕ್ಷಣ ತೆಗೆಯಿರಿ. ಊತ ಬಂದರೆ ರಕ್ತ ಪರಿಚಲನೆ ನಿಲ್ಲುವ ಅಪಾಯ ಇರುತ್ತದೆ. ಸ್ವಚ್ಚವಾದ ನೀರು ಮತ್ತು ಸಾಬೂನಿನಿಂದ ಗಾಯದ ಮೇಲ್ಭಾಗವನ್ನು ನಿಧಾನವಾಗಿ ತೊಳೆಯಿರಿ. ಯಾವುದೇ ನಾಟಿ ಔಷಧ, ಮಂತ್ರಗಳ ಮೊರೆ ಹೋಗದೆ ಆಂಟಿ-ವೆನಮ್ (Anti-venom) ಲಭ್ಯವಿರುವ ಹತ್ತಿರದ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ಹೋಗಿ.
ಇದನ್ನು ಅಪ್ಪಿ ತಪ್ಪಿಯೂ ಮಾಡಬೇಡಿ
ಬಾಯಿಯಿಂದ ವಿಷವನ್ನು ಹೀರಬೇಡಿ.
ಗಾಯದ ಸುತ್ತ ಬ್ಲೇಡ್‌ನಿಂದ ಕತ್ತರಿಸುವುದು ಅಥವಾ ರಕ್ತ ಒರೆಸುವುದು ಮಾಡಬೇಡಿ.
ಗಾಯಕ್ಕೆ ಐಸ್ ಹಚ್ಚುವುದು ಅಥವಾ ಬೆಂಕಿಯಿಂದ ಸುಡುವುದು ಮಾಡಬೇಡಿ.
ರಕ್ತದ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಗಟ್ಟಿಯಾಗಿ ಹಗ್ಗ ಕಟ್ಟಬೇಡಿ.
ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಬಾಯಿಯಿಂದ ವಿಷ ಹೀರುವ (Mouth Suction) ಪದ್ಧತಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಇತಿಹಾಸದಲ್ಲಿ ಮತ್ತು ಕೆಲವು ಹಳೆಯ ಸಂಸ್ಕೃತಿಗಳಲ್ಲಿ ಈ ಪದ್ಧತಿ ಅಸ್ತಿತ್ವದಲ್ಲಿತ್ತು.
ಇತಿಹಾಸದಲ್ಲಿ ಏನಿತ್ತು..?
ರೋಮನ್ನರು, ಗ್ರೀಕರು ಮತ್ತು 10ನೇ ಶತಮಾನದ ಪ್ರಸಿದ್ಧ ಪರ್ಷಿಯನ್ ವೈದ್ಯ ಅವಿಸೆನ್ನಾ (Avicenna) ಬರೆದ ವೈದ್ಯಕೀಯ ಗ್ರಂಥಗಳಲ್ಲಿ ಹಾವು ಕಚ್ಚಿದಾಗ ವಿಷವನ್ನು ಹೀರಲು ಸಿದ್ಧರಿರುವ ವ್ಯಕ್ತಿಯನ್ನು ಹುಡುಕುವಂತೆ ಉಲ್ಲೇಖಿಸಲಾಗಿತ್ತು. ಆಫ್ರಿಕಾ, ಅಮೆರಿಕ ಮತ್ತು ಏಷ್ಯಾದ ಕೆಲವು ಹಳೆಯ ಗ್ರಾಮೀಣ ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ಸಾಂಪ್ರದಾಯಿಕ ಪ್ರಥಮ ಚಿಕಿತ್ಸೆಯಾಗಿ ಬಾಯಿಯಿಂದ ವಿಷ ಹೀರುವ ಪದ್ಧತಿ ಬಳಕೆಯಲ್ಲಿತ್ತು. ಪಾಶ್ಚಿಮಾತ್ಯ ದೇಶಗಳಲ್ಲಿ (ಉದಾಹರಣೆಗೆ ಅಮೆರಿಕಾದಲ್ಲಿ) ಮಾರಾಟವಾಗುತ್ತಿದ್ದ “ಸ್ನೇಕ್ ಬೈಟ್ ಫಸ್ಟ್ ಏಡ್ ಕಿಟ್‌ಗಳಲ್ಲಿ” ಗಾಯವನ್ನು ಕತ್ತರಿಸಿ ರಬ್ಬರ್ ಕಪ್‌ಗಳಿಂದ ವಿಷ ಹೀರುವ ಸಲಕರಣೆಗಳನ್ನು (Suction Cups) ನೀಡಲಾಗುತ್ತಿತ್ತು.
ಪ್ರಸ್ತುತ ಜಗತ್ತಿನ ಯಾವುದೇ ಅಧಿಕೃತ ವೈದ್ಯಕೀಯ ಸಂಸ್ಥೆ ಅಥವಾ ದೇಶವು ಬಾಯಿಯಿಂದ ವಿಷ ತೆಗೆಯುವ ಪದ್ಧತಿಯನ್ನು ಅನುಮೋದಿಸುವುದಿಲ್ಲ. ಹಾವು ಕಡಿತಕ್ಕೆ ಜಗತ್ತಿನಲ್ಲಿರುವ ಏಕೈಕ ಮತ್ತು ಅಧಿಕೃತ ಚಿಕಿತ್ಸೆ ಎಂದರೆ ಆಂಟಿ-ವೆನಮ್ (Anti-venom) ಇಂಜೆಕ್ಷನ್.



