ಅಭಿಷೇಕ್ ಶರ್ಮಾ ಈಗಾಗಲೇ ಐಸಿಸಿ ಟಿ20 ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ನಂ. 1 ಸ್ಥಾನದಲ್ಲಿದ್ದರು. ಈ ವಾರವೂ ಅಗ್ರಸ್ಥಾನದಲ್ಲಿ ಕಂಟಿನ್ಯೂ ಆಗಿದ್ದಾರೆ. ಐಸಿಸಿ ಶ್ರೇಯಾಂಕಿತರಲ್ಲಿ ಅತ್ಯಧಿಕ ರೇಟಿಂಗ್ ಪಾಯಿಂಟ್ ಕಲೆಹಾಕಿದ್ದಾರೆ. ಆ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಭಾರತದ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ಗೂ ಸಾಧಿಸಲು ಸಾಧ್ಯವಾಗದೇ ಇದ್ದ ರೆಕಾರ್ಡ್ ಮಾಡಿದ್ಧಾರೆ.
ಜೊತೆಗೆ ಇನ್ನೂ ಒಂದು ವಿಷಯ ಗಮನಿಸಬೇಕು. ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಟ್‌ನಲ್ಲಿ ಗಳಿಸಿರುವ ಒಟ್ಟಾರೆ ರನ್ 849 ರನ್. ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್ಟಿನಲ್ಲಿ ಅದರಲ್ಲೂ ಟಿ-20ಯಲ್ಲಿ ಅಭಿಷೇಕ್ ಶರ್ಮಾ ಈವರೆಗೆ ಆಡಿರುವುದೇ 24 ಮ್ಯಾಚ್. 23 ಇನಿಂಗ್ಸ್. ಆ 23 ಇನ್ನಿಂಗ್ಸ್ ಮೂಲಕ ಗಳಿಸಿರುವುದು 849 ರನ್. ಆ ಸ್ಕೋರಿನಲ್ಲಿ ಅತ್ಯಧಿಕ 135 ರನ್ ಸಂಪಾದಿಸಿದ್ದಾರೆ. 2 ಶತಕಗಳಿವೆ. 5 ಅರ್ಧ ಶತಕಗಳಿವೆ. 78 ಫೋರ್, 60 ಸಿಕ್ಸರ್ಸ್ ಇವೆ. 11 ಕ್ಯಾಚ್ ಪಡೆದಿದ್ದಾರೆ. ಸರಾಸರಿ 36.91. ಸ್ಟ್ರೈಕ್ ರೇಟ್ 196.07. ಆದರೆ ರೇಟಿಂಗ್ ಮಾತ್ರ.. 931. ಇದು ವಿಚಿತ್ರವಾದರೂ.. ಸತ್ಯ.
ಇದರ ಜೊತೆಗೆ ಐಸಿಸಿ ಶ್ರೇಯಾಂಕದಲ್ಲಿ ಅತಿ ಹೆಚ್ಚು ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದ ವಿಶ್ವ ದಾಖಲೆಯನ್ನು ಡೇವಿಡ್ ಮಲನ್ ಈ ಹಿಂದೆ ಹೊಂದಿದ್ದರು. ಈ ಇಂಗ್ಲೆಂಡ್ ಬ್ಯಾಟ್ಸ್‌ಮನ್ 919 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಅಭಿಷೇಕ್ ಶರ್ಮಾ 931 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮಲನ್ ಅವರ ದಾಖಲೆಯನ್ನು ಮೀರಿಸಿದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ 900 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ ಅಥವಾ ಮೀರಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿರುವ ಅಭಿಷೇಕ್, 931 ರೇಟಿಂಗ್ ಪಾಯಿಂಟ್‌ಗಳನ್ನು ಕಲೆಹಾಕಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್. ಟಿ20 ಶ್ರೇಯಾಂಕದಲ್ಲಿ ಭಾರತದ ಸೂರ್ಯಕುಮಾರ್ ಯಾದವ್ ಅತ್ಯಧಿಕ ಅಂದರೆ 912 ರೇಟಿಂಗ್ ಪಾಯಿಂಟ್‌ಗಳನ್ನು ತಲುಪಿದ್ದರೆ, ವಿರಾಟ್ ಕೊಹ್ಲಿ 909 ರೇಟಿಂಗ್ ಪಾಯಿಂಟ್‌ಗಳನ್ನು ಕಲೆಹಾಕಿದ್ದರು. ಆದರೆ, ಅಭಿಷೇಕ್ ಶರ್ಮಾ ಈ ವಿಷಯದಲ್ಲಿ ಇಬ್ಬರನ್ನೂ ಹಿಂದಿಕ್ಕಿದ್ದಾರೆ.
ಅಭಿಷೇಕ್ ಶರ್ಮಾ ಪ್ರಸ್ತುತ ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ವಿಶ್ವ ದಾಖಲೆಯ ರೇಟಿಂಗ್ ಅಂಕಗಳೊಂದಿಗೆ ನಂ. 1 ಸ್ಥಾನದಲ್ಲಿದ್ದಾರೆ. ತಿಲಕ್ ವರ್ಮಾ ಕೂಡ 819 ರೇಟಿಂಗ್ ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. 844 ರೇಟಿಂಗ್ ಅಂಕಗಳನ್ನು ಹೊಂದಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಫಿಲ್ ಸಾಲ್ಟ್ ಎರಡನೇ ಸ್ಥಾನದಲ್ಲಿದ್ದಾರೆ.
ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಪ್ರಸ್ತುತ 698 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿರುವ ಸೂರ್ಯ ಹೊಸ ಶ್ರೇಯಾಂಕದಲ್ಲಿ ಆರನೇ ಸ್ಥಾನದಿಂದ ಎಂಟನೇ ಸ್ಥಾನಕ್ಕೆ ಕುಸಿದಿದ್ದಾರೆ. 2025 ರ ಏಷ್ಯಾ ಕಪ್‌ನಲ್ಲಿ ಕಳಪೆ ಪ್ರದರ್ಶನದ ಪರಿಣಾಮಗಳನ್ನು ಯಾದವ್ ಅನುಭವಿಸಿದ್ದಾರೆ.
ಅಂದಹಾಗೆ ಸೂರ್ಯನ ಇತ್ತೀಚಿನ ಆಟ ನೋಡಿದವರು ಸೂರ್ಯನ ಖದರ್ ಕಾಲ ಮುಗಿಯಿತು ಎಂದು ಷರಾ ಬರೆಯುತ್ತಿದ್ದಾರೆ.



