ಬ್ರೂಸ್ ಲೀ. ಚೀನಾದ ಹಾಂಗ್‍ಕಾಂಗ್‍ನ ಈ ಮಾರ್ಷಲ್ ಆಟ್ರ್ಸ್ ಫೈಟರ್ ಆಕ್ಟರ್ ಬಗ್ಗೆ ಅದೆಷ್ಟು ದಂತಕಥೆಗಳಿವೆಯೋ.. ಬ್ರೂಸ್ ಲೀ ಕುಂಗ್ ಫು ಪ್ರವೀಣ. ಹುರಿಗಟ್ಟಿದ ದೇಹ. ಮಾರ್ಷಲ್ ಆಟ್ರ್ಸ್ ಪಟ್ಟುಗಳು ಹೇಗಿರುತ್ತಿದ್ದವೆಂದರೆ ಸ್ಲೋ ಮೋಷನ್ ಕ್ಯಾಮೆರಾಗೂ ಸಿಗದಷ್ಟು ವೇಗದಲ್ಲಿರುತ್ತಿದ್ದವು. ಬ್ರೂಸ್ ಲೀ ಮೃತಪಟ್ಟಾಗ ಆತನಿಗಿನ್ನೂ 32 ವರ್ಷ. ಫಿಸ್ಟ್ ಆಫ್ ಫ್ಯೂರಿ, ವೇ ಆಫ್ ದಿ ಡ್ರಾಗನ್, ಎಂಟರ್ ದಿ ಡ್ರಾಗನ್, ದಿ ಗೇಮ್ ಆಫ್ ಡೆತ್.. ನಟಿಸಿದ್ದು ಕೆಲವೇ ಚಿತ್ರಗಳಾದರೂ ಎಬ್ಬಿಸಿದ ಹವಾ ಇಡೀ ಜಗತ್ತಿಗೆ ಕೇಳಿಸಿತ್ತು. ಜಾಕಿ ಚಾನ್, ಜಾನ್ ವೂ, ಜೆಟ್ ಲೀ.. ಸೇರಿದಂತೆ ಹಲವು ಸ್ಟಾರ್‍ಗಳಿಗೆ ಈತನೇ ಸ್ಫೂರ್ತಿ. ಈತನ ಹಠಾತ್ ಮರಣ ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದಷ್ಟೇ ಅಲ್ಲ, ಚಿತ್ರ ವಿಚಿತ್ರಗಳ ಕಥೆಗಳೂ ಹುಟ್ಟಿಕೊಂಡಿದ್ದವು.
ಬ್ರೂಸ್ ಲೀ ಕಥೆಗಳು ಒಂದೆರಡಲ್ಲ. ಕೇವಲ ಒಂದು ಇಂಚು ಮೂವ್ ಆಗಿ ಎದುರಾಳಿಗಳನ್ನು ಹೊಡೆಯಬಲ್ಲ, ಆತನ ವೇಗ ಮಿಂಚು, 4 ನಿಮಿಷಕ್ಕೆ ಒಂದು ಮೈಲಿ ಓಡುತ್ತಿದ್ದ, 75 ಕೆಜಿ ತೂಕದ ಬೇರ್‍ಬೆಲ್‍ನ್ನು ಒಂದೇ ಕೈಯಲ್ಲಿ 20 ಸೆಕೆಂಡ್ ಹಿಡಿಯಬಲ್ಲವನಾಗಿದ್ದ, ಒಂದು ಕೈ ಹಾಗೂ ಎರಡು ಬೆರಳುಗಳಲ್ಲಿ ಪುಷ್ ಅಪ್ಸ್ ಮಾಡುತ್ತಿದ್ದ, ಬೆನ್ನ ಮೇಲೆ ಮೋಟರ್ ಬೈಕ್ ಹೊತ್ತುಕೊಂಡು 45 ನಿಮಿಷದಲ್ಲಿ 10 ಮೈಲಿ ಓಡುತ್ತಿದ್ದ, ಆತನ ತಲೆಗೆ ರಾಡ್‍ನಲ್ಲಿ ಹೊಡೆದಾಗ ಕಬ್ಬಿಣದ ರಾಡ್ ಬೆಂಡಾಗಿತ್ತು, ಆತನ ಮೇಲೆ ಹಾಂಗ್‍ಕಾಂಗ್‍ನಲ್ಲಿ ಒಮ್ಮೆ ನೂರಕ್ಕೂ ಹೆಚ್ಚು ಜನ ಅಟ್ಯಾಕ್ ಮಾಡಿದ್ದರು, ಹತ್ತೇ ನಿಮಿಷದಲ್ಲಿ ಅವರನ್ನೆಲ್ಲ ಹೊಡೆದು ಹಾಕಿದ್ದ, ಶತ್ರುಗಳನ್ನು ಕೇವಲ 2 ಬೆರಳುಗಳಲ್ಲಿ ಸಾಯಿಸುತ್ತಿದ್ದ, ಆಕಾಶಕ್ಕೆ ಅಕ್ಕಿ ಕಾಳುಗಳನ್ನು ಎಸೆದು, ಅವುಗಳನ್ನು ಸ್ಟಿಕ್‍ಗಳಲ್ಲಿ ಸಂಗ್ರಹಿಸುತಿದ್ದ.. ಇಂತಹ ದಂತಕಥೆಗಳೇ ಇವೆ. ಕೆಲವು ನಿಜ, ಇನ್ನೂ ಕೆಲವು ಕೇವಲ ಕಲ್ಪನೆ. ಅಷ್ಟೆ.

ಬ್ರೂಸ್ ಸಾವಿನ ಬಗ್ಗೆಯೂ ಅಷ್ಟೆ, ಚಿತ್ರ ವಿಚಿತ್ರ ಕಥೆಗಳಿವೆ. 1973ರ ಜುಲೈನಲ್ಲಿ ಬ್ರೂಸ್ ಲೀ ಮೃತಪಟ್ಟಾಗ ಎಂಟರ್ ದಿ ಡ್ರಾಗನ್ ಸಿನಿಮಾ ಶೂಟಿಂಗ್ ಮುಗಿದಿತ್ತು. ಜುಲೈ 20ರಂದ ಸಂಜೆ ಬ್ರೂಸ್ ಲೀ ತಲೆನೋವೆಂದು ನರಳುತ್ತಿದ್ದ. ಆಗ ಒಂದು ಆಸ್ಪಿರಿನ್ ಮಾತ್ರೆ ನುಂಗಿ ಮಲಗಿದ. ಆದರೆ ರಾತ್ರಿಯ ಊಟಕ್ಕೂ ಕೆಳಗೆ ಬರದಿದ್ದಾಗ ಪರಿಶೀಲಿಸಿದವರಿಗೆ ಬ್ರೂಸ್ ಸತ್ತಿರುವುದು ಗೊತ್ತಾಯ್ತು. ಅಲ್ಲಿಂದ ಶುರುವಾದವು ಸಂಚಿನ ಕಥೆಗಳು.
ಬ್ರೂಸ್ ಲೀಗೆ ಹಲವರ ಜೊತೆ ಅಫೇರ್ ಇತ್ತು. ಇದನ್ನು ಸಹಿಸದ ಪ್ರೇಮಿ ಟಿಂಗ್ ಆತನನ್ನು ಕೊಂದಿದ್ದಾಳೆ. ಡ್ರಗ್ಸ್ ನೀಡಿ ಕೊಂಡಿದ್ದಾಳೆ. ಗಾಜನ್ನು ಪುಡಿ ಪುಡಿ ಮಾಡಿ ನುಂಗಿಸಿ ಸಾಯಿಸಿದ್ದಾಳೆ. ವಜ್ರವನ್ನು ಪುಡಿ ಮಾಡಿ ನುಂಗಿಸಿದ್ದಾಳೆ ಎಂದೆಲ್ಲ ಆರೋಪ ಕೇಳಿಬಂದವು. ಅಭಿಮಾನಿಗಳು ಟಿಂಗ್‍ಳನ್ನು ಕೊಲ್ಲುವುದಕ್ಕೂ ಮುಂದಾದರು. ಟಿಂಗ್ ಹೇಗೋ ಪಾರಾದಳು. ಆ ದಿನವನ್ನು ನೆನಪಿಸಿಕೊಂಡು ಇವತ್ತಿಗೂ ನಡುಗುತ್ತಾಳೆ ಟಿಂಗ್. ಬ್ರೂಸ್ ಲೀ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಅದು ಓವರ್ ಡೋಸ್ ಆಗಿ ಸತ್ತ. ಹಾಲಿವುಡ್‍ನವರು ಭವಿಷ್ಯದ್ಲಲ್ಲಿ ನಮ್ಮ ಸಿನಿಮಾಗಳಿಗೆ ಅಪಾಯ ಎಂದು ಅಂದುಕೊಂಡು ಕೊಲ್ಲಿಸಿದರು. ಬ್ರೂಸ್ ಲೀ ವಿದೇಶಿಯರಿಗೆ ಚೀನಾ ಕುಂಗ್ ಫುನ ಸೀಕ್ರೆಟ್ಸ್ ಹೇಳಿಕೊಡುತ್ತಿದ್ದ. ಆ ರಹಸ್ಯ ಚೀನೀಯರಿಗೆ ಬಿಟ್ಟು ಬೇರೆಯವರಿಗೆ ಗೊತ್ತಾಗಬಾರದೆಂದು ಆತನಿಗೆ ಕುಂಗ್ ಫು ಕಲಿಸಿದವರೇ ಕೊಲ್ಲಿಸಿದರು.. ಹೀಗೆ ಚಿತ್ರ ವಿಚಿತ್ರ ಥಿಯರಿಗಳಿವೆ. ಅಂತಹ ಥಿಯರಿಗಳಿಗೆಲ್ಲ ಈಗ ಬ್ರೇಕ್ ಬಿದ್ದಿದೆ. ಅಂತಿಮ ಸತ್ಯ ಹೊರಬಿದ್ದಿದೆ.

ಸೆರಬ್ರಲ್ ಎಡಿಮಾದಿಂದಾಗಿ ಬ್ರೂಸ್ ಲೀ ಸತ್ತಿದ್ದಾರೆ. ಸೆರಬ್ರಲ್ ಎಡಿಮಾ ಮೆದುಳಿಗೆ ಸಂಬಂಧಪಟ್ಟ ಕಾಯಿಲೆ. ಮೆದುಳಿನ ಸರಾಸರಿ ತೂಕ 1400 ಗ್ರಾಂ. ಅದರೆ ಬ್ರೂಸ್ ಲೀ ಮೆದುಳು ಸತ್ತಾಗ 1575 ಗ್ರಾಂ ತೂಗುತ್ತಿತ್ತು. ಅದಕ್ಕೆ ಮೆದುಳಿನ ಊತ ಅರ್ಥಾತ್ ಸೆರಬ್ರಲ್ ಎಡಿಮಾ ಕಾರಣ ಎಂದು ಸಂಶೋಧಕರು ಊಹಿಸಿದ್ದಾರೆ. ಬ್ರೂಸ್ ಲೀ ಹೆಚ್ಚು ಹೆಚ್ಚು ನೀರು ಕುಡಿಯುತ್ತಿದ್ದ. ಆದರೆ ಅದೇ ರೀತಿ ಮೂತ್ರ ವಿಸರ್ಜನೆ ಮಾಡತ್ತಿರಲಿಲ್ಲ. ಇದರಿಂದಾಗಿ ಕಿಡ್ನಿಗಳು ಸರಿಯಾಗಿ ಕೆಲಸ ಮಾಡಲಾಗದೆ ಮೃತಪಟ್ಟರು. ಅಲ್ಲದೆ ಅತಿಯಾದ ದೇಹ ದಂಡನೆ, ಹೆಚ್ಚು ಪ್ರೊಟೀನ್ ಯುಕ್ತ ಜ್ಯೂಸ್ ಕುಡಿಯುತ್ತಿದ್ದ ಬ್ರೂಸ್ ಲೀಗೆ ಹೈಪೋನಾಟ್ರಿಮಿಯಾ ಇತ್ತು.

ಇದರ ಜೊತೆಗೆ ಮೃತಪಟ್ಟ ದಿನ ಗಾಂಜಾ ಸೇವಿಸಿದ್ದರು. ನೀರನ್ನೂ ಹೆಚ್ಚಾಗಿ ಕುಡಿದರು. ದೇಹ ದಂಡನೆಯನ್ನೂ ಮಾಡಿದರು. ಇದರಿಂದಾಗಿ ತಲೆನೋವು ಕಾಣಿಸಿಕೊಂಡಿತು. ಆಗ ಈಕ್ವಿಜಿನ್ ಅನ್ಣೋ ಪೇನ್ ಕಿಲ್ಲರ್ ಟ್ಯಾಬ್ಲೆಟ್ ನುಂಗಿದರು. ಎಲ್ಲವೂ ಒಟ್ಟಾಗಿ ಮೆದುಳಿನಲ್ಲಿ ನೀರು ಸೇರಿ, ಮೆದುಳು ಊದಿಕೊಂಡು ಮೃತಪಟ್ಟರು ಎನ್ನುವುದು ಸಂಶೋಧಕರ ವರದಿ. ಬ್ರೂಸ್ ಸಾವಿನ ರಹಸ್ಯಕ್ಕೆ ಫುಲ್ ಸ್ಟಾಪ್ ಬಿತ್ತಾ? ಗೊತ್ತಿಲ್ಲ. ಇನ್ನೊಂದು ಹೊಸ ಥಿಯರಿ ಹುಟ್ಟಿಕೊಂಡರೂ ಹುಟ್ಟಿಕೊಳ್ಳಬಹುದು.



