ಮಗನ ಚಿತ್ರಕ್ಕೆ ಅಪ್ಪ ಪ್ರೊಡ್ಯೂಸರ್ ಆಗಿದ್ದರು. ವೀರಾಸ್ವಾಮಿ ನಿರ್ಮಾಣದ ಚಿತ್ರಗಳ ಮೂಲಕವೇ ಹೀರೋ ಆದ ರವಿಚಂದ್ರನ್, ತಮ್ಮ ಬಾಲಾಜಿ ಚಿತ್ರಕ್ಕೆ ಸ್ವತಃ ನಿರ್ಮಾಪಕ, ನಿರ್ದೇಶಕ.. ಹೀಗೆ ಸಕಲವೂ ಆಗಿದ್ದರು. ರವಿಚಂದ್ರನ್ ಚಿತ್ರಗಳಿಗೆ ತಮ್ಮ ಬಾಲಾಜಿ ತೆರೆಮರೆಯಲ್ಲಿ ದುಡಿಯುತ್ತಿದ್ದರು. ಈಗ ಅವರ ಮಕ್ಕಳೂ ಕೂಡಾ ಅದೇ ರೀತಿ.. ಒಬ್ಬರಿಗೊಬ್ಬರು ಹೆಗಲಾಗುತ್ತಿದ್ದಾರೆ. ವಿಕ್ರಂ ಚಿತ್ರಕ್ಕೆ ಸಪೋರ್ಟ್ ಆಗಿರುವುದು ಮನು ರವಿಚಂದ್ರನ್.

ತ್ರಿವಿಕ್ರಮ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ವಿಕ್ರಂ ರವಿಚಂದ್ರನ್, ಈಗ ಗ್ಯಾಂಗ್‍ಸ್ಟರ್ ಅವತಾರವೆತ್ತುತ್ತಿದ್ದಾರೆ. ವಿಕ್ರಂ ಹೊಸ ಚಿತ್ರದ ಹೆಸರೇ ಗ್ಯಾಂಗ್‍ಸ್ಟರ್. ತಮಿಳು, ತೆಲುಗು ಚಿತ್ರರಂಗದಲ್ಲಿ ಸಹನಿರ್ದೇಶಕರಾಗಿರುವ ಕಾರ್ತಿಕ್ ರಾಜನ್ ಈ ಚಿತ್ರದ ಮೂಲಕ ಡೈರೆಕ್ಟರ್ ಆಗುತ್ತಿದ್ದಾರೆ. ವಿಶೇಷವೆಂದರೆ ಈ ಚಿತ್ರಕ್ಕೆ ನಿರ್ಮಾಪಕರಾಗುತ್ತಿರುವುದು ಮನುರಂಜನ್ ರವಿಚಂದ್ರನ್.
ಕನ್ನಡದಲ್ಲಿ ಅಣ್ಣ-ತಮ್ಮಂದಿರ ಜೋಡಿಯ ಚಿತ್ರಗಳು ಹೊಸದಲ್ಲ. ರಾಜ್ ಚಿತ್ರಗಳಿಗೆ ಬೆನ್ನೆಲುಬಾಗಿದ್ದವರು ಅವರ ಸೋದರ ವರದಪ್ಪ. ಶಿವಣ್ಣ-ರಾಘವೇಂದ್ರ-ಪುನೀತ್ ಕೂಡಾ ಪರಸ್ಪರರ ಚಿತ್ರಗಳ ನಿರ್ಮಾಣದ ಹೊಣೆ ಹೊತ್ತಿದ್ದವರೇ. ಅನಂತ್ ನಾಗ್ ಮತ್ತು ಶಂಕರ್ ನಾಗ್ ಒಬ್ಬರಿಗೊಬ್ಬರ ಬೆಳವಣಿಗೆಗೆ ಪೂರಕವಾಗಿದ್ದವರು. ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಕೂಡಾ ಅದೇ ರೀತಿ ಇದ್ದವರು. ಜಗ್ಗೇಶ್ ಮತ್ತು ಕೋಮಲ್ ಒಬ್ಬರಿಗೊಬ್ಬರು ಹೆಗಲಾದವರು. ಚಿರಂಜೀವಿ ಸರ್ಜಾ ತಮ್ಮ ಧ್ರುವ ಸರ್ಜಾರನ್ನು ಹೆಗಲ ಮೇಲೆ ಹೊತ್ತು ಮೆರೆದಿದ್ದವರು. ಉಪೇಂದ್ರ ತಮ್ಮ ಅಣ್ಣನ ಮಗನನ್ನು ಹೀರೋ ಮಾಡುತ್ತಿದ್ದಾರೆ. ದೇವರಾಜ್ ಕುಟುಂಬದಲ್ಲಿಯೂ ಅಂತಹುದೇ ವಾತಾವರಣವಿದೆ. ಪ್ರಜ್ವಲ್ ದೇವರಾಜ್ ತಮ್ಮ ತಮ್ಮ ಹೀರೋ ಆದಾಗ ಅದೆಷ್ಟು ಸಂಭ್ರಮದಿಂದ ಓಡಾಡಿದ್ದರು ಅನ್ನೋದನ್ನು ಸ್ಯಾಂಡಲ್‍ವುಡ್ ನೋಡಿದೆ. ಹೊಸ ಜನರೇಷನ್‍ನಲ್ಲಿ ಯುವ ರಾಜಕುಮಾರ್ ಮತ್ತು ವಿನಯ್ ರಾಜಕುಮಾರ್ ಇರುವಂತೆಯೇ ಈಗ ರವಿಚಂದ್ರನ್ ಮಕ್ಕಳೂ ಅದೇ ರೀತಿ ಹೆಜ್ಜೆ ಹಾಕುತ್ತಿದ್ದಾರೆ. ಈ ಲಿಸ್ಟಿಗೀಗ ಮನು ಮತ್ತು ವಿಕ್ರಂ ಸೇರ್ಪಡೆಯಾಗಿದ್ದಾರೆ. ಅಫ್‍ಕೋರ್ಸ್, ತಮ್ಮ ವಿಕ್ರಂ ಹೀರೋ ಆದಾಗ ಅಣ್ಣ ಮನು ಥ್ರಿಲ್ಲಾಗಿದ್ದನ್ನು ಚಿತ್ರರಂಗ ನೋಡಿದೆ. ಸಂಭ್ರಮಿಸಿದೆ.

ಈ ಚಿತ್ರದ ಮೂಲಕ ವೀರಸ್ವಾಮಿ ಕುಟುಂಬದ 3ನೇ ಜನರೇಷನ್ ಕೂಡಾ ನಿರ್ಮಾಣ ವಲಯಕ್ಕೆ ಕಾಲಿಟ್ಟಂತಾಗಿದೆ. ವೀರಾಸ್ವಾಮಿ ಮೊದಲನೇ ಜನರೇಷನ್ ಆದರೆ, ರವಿಚಂದ್ರನ್ ಮತ್ತು ಬಾಲಾಜಿ 2ನೇ ಜನರೇಷನ್. 3ನೇ ಜನರೇಷನ್ ವಿಕ್ರಂ ಮತ್ತು ಮನು. ಅಪ್ಪ ಚಿಕ್ಕಪ್ಪ ಹೇಗೆ ಪರಸ್ಪರ ಸಪೋರ್ಟಿವ್ ಆಗಿದ್ದರೋ, ಅದೇ ರೀತಿ ಅವರ ಮಕ್ಕಳೂ ಕೂಡಾ ಹೆಜ್ಜೆ ಹಾಕುತ್ತಿರುವುದು ಸ್ಯಾಂಡಲ್‍ವುಡ್‍ನಲ್ಲಿ ಸಂಭ್ರಮ ಹೆಚ್ಚಿಸಿದೆ.
ಚಿತ್ರದ ಮುಹೂರ್ತ ನೆರವೇರಿದ್ದು, ಶೀಘ್ರದಲ್ಲೇ ಟೀಸರ್ ಹೊರಬೀಳಲಿದೆಯಂತೆ. ಮದುವೆಯ ನಂತರ ಮನು ರಂಜನ್ ಹೊಸ ಸಾಹಸಕ್ಕೆ ಇಡೀ ಸ್ಯಾಂಡಲ್‍ವುಡ್ ಶುಭ ಹಾರೈಸಿದೆ.



