ದೇಶದ ಎಲ್ಲ ಭಾಷೆಗಳಲ್ಲಿ ಗೆದ್ದು ಬೀಗಿದ ಕಾಂತಾರ ಈಗ ವಿಶ್ವವನ್ನೇ ಗೆಲ್ಲೋಕೆ ಹೊರಟಿದೆ. ಚಿತ್ರ ವಿಮರ್ಶಕರಿಂದ, ಪ್ರೇಕ್ಷಕರಿಂದ ಎರಡೂ ಕಡೆ ಜನ ಮೆಚ್ಚುಗೆ ಗಳಿಸಿದ ಕಾಂತಾರದ ಗುರಿ ಈಗ ಆಸ್ಕರ್.

ಗಾಂಧಿ ಚಿತ್ರಕ್ಕೆ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದ ಭಾನು ಆಚಾರ್ಯ, ಸ್ಲಂಡಾಗ್ ಮಿಲಿಯನೇರ್ ಚಿತ್ರದ ಜೈಹೋ ಹಾಡಿಗೆ ಎ.ಆರ್.ರೆಹಮಾನ್, ಸಾಹಿತ್ಯ ಬರೆದಿದ್ದ ಗುಲ್ಜಾರ್, ಇದೇ ಚಿತ್ರದ ಸೌಂಡ್ ಎಂಜಿಯರ್ ಆಗಿದ್ದ ರಸೂಲ್ ಪೂಕುಟ್ಟಿ ಹಾಗೂ ಜೀವಮಾನ ಸಾಧನೆಗಾಗಿ ಸತ್ಯಜಿತ್ ರೇ ಬಿಟ್ಟರೆ, ಇದೂವರೆಗೆ ಭಾರತೀಯರೇ ನಿರ್ಮಾಣ ಮಾಡಿದ ಯಾವುದೇ ಚಿತ್ರಗಳು ಪ್ರಶಸ್ತಿ ಗೆದ್ದಿಲ್ಲ.
ಈ ಕನಸಿನ ಗುರಿಗೆ ಕಣ್ಣಿಟ್ಟು ಈ ಬಾರಿ ಭಾರತೀಯ ಚಿತ್ರರಂಗದಲ್ಲಿ ಅಧಿಕೃತವಾಗಿ ಎಂಟ್ರಿ ಕೊಟ್ಟಿರುವ ಚಿತ್ರ ಗುಜರಾತಿ ಚಿತ್ರ ಚೆಲ್ಲೋ ಶೋ (ದಿ ಲಾಸ್ಟ್ ಶೋ). ಫಿಲ್ಮ್ ಫೆಡರೇಷನ್ ಇಂಡಿಯಾ ವತಿಯಿಂದ ಅಧಿಕೃತವಾಗಿ ಮಾನ್ಯತೆ ಪಡೆದಿರುವ ಚಿತ್ರವಿದು. 

ನಾವು ಚಿತ್ರವನ್ನು ಆಸ್ಕರ್ ರೇಸ್‍ಗೆ ಕಳಿಸಿದ್ದೇವೆ. ಅಧಿಕೃತವಾಗಿ ಅಪ್ಲಿಕೇಷನ್ ಹಾಕಿದ್ದೇವೆ. ಫೈನಲ್ ಲಿಸ್ಟ್‍ಗಾಗಿ ಕಾಯುತ್ತಿದ್ದೇವೆ. ಕಾಂತಾರ ಈ ನೆಲದ ಮಣ್ಣಿನ ಕಥೆಯಾದರೂ ಯುನಿವರ್ಸಲ್ ಗುಣಗಳನ್ನು ಹೊಂದಿದೆ ಎಂದು ಇಂಡಿಯಾ ಟುಡೇಗೆ ಹೇಳಿಕೆ ನೀಡಿದ್ದಾರೆ ನಿರ್ಮಾಪಕ ವಿಜಯ್ ಕಿರಗಂದೂರು.

ಕಾಂತಾರ ಮೊದಲು ಕನ್ನಡದಲ್ಲಿಯಷ್ಟೇ ನಿರ್ಮಾಣವಾದ ಸಿನಿಮಾ. ನಂತರ ಚಿತ್ರದ ಸಕ್ಸಸ್ ಹಾಗೂ ಡಿಮ್ಯಾಂಡ್ ಕಂಡು ಬೇರೆ ಭಾಷೆಗಳಿಗೆ ಡಬ್ ಮಾಡಲಾಯಿತು. ಎಲ್ಲ ಭಾಷೆಗಳಲ್ಲಿಯೂ ಸಕ್ಸಸ್ ಕಂಡ ಸಿನಿಮಾ ಗಳಿಸಿದ್ದು 400 ಕೋಟಿಗೂ ಹೆಚ್ಚು. ಅಷ್ಟೇ ಅಲ್ಲ, ಇಂಗ್ಲಿಷಿಗೂ ಡಬ್ ಆಗಿ ನೆಟ್ ಫ್ಲಿಕ್ಸ್‍ನಲ್ಲಿ ರಿಲೀಸ್ ಆಗಿದೆ. ಅಲ್ಲಿಯೂ ಟ್ರೆಂಡಿಂಗ್‍ನಲ್ಲಿದೆ.
ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ್ದ ಕಾಂತಾರ ಚಿತ್ರ ಕರಾವಳಿಯಲ್ಲಿ ನಡೆಯುವ ಪ್ರಕೃತಿ ಮತ್ತು ಮನುಷ್ಯರ ನಡುವಿನ ಹೋರಾಟದ ಕಥೆಯನ್ನು ಹೇಳಿತ್ತು. ಚಿತ್ರದ ಕ್ಲೈಮಾಕ್ಸ್ ಚಿತ್ರಕ್ಕೊಂದು ದೈವೀಕ ಸೊಬಗು ನೀಡಿತ್ತು. ಆಸ್ಕರ್ ಕೂಡಾ ಗೆದ್ದರೆ.. ವ್ಹೋ.. ಎನ್ನಲು ಅಡ್ಡಿಯಿಲ್ಲ.

ಇನ್ನು ಆರ್.ಆರ್.ಆರ್. ವಿಷಯಕ್ಕೆ ಬಂದರೆ ಈಗಾಗಲೇ ಈ ರೇಸಿನಲ್ಲಿ ರಾಜಮೌಳಿ ದೊಡ್ಡ ಹೆಜ್ಜೆಯನ್ನೇ ಇಟ್ಟಿದ್ದಾರೆ. ಕೆಜಿಎಫ್ ಬಿಟ್ಟರೆ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಆರ್.ಆರ್.ಆರ್. ರಾಜಮೌಳಿ ಈಗಾಗಲೇ ನ್ಯೂಯಾರ್ಕ್, ಲಾಸ್ ಏಂಜಲೀಸ್, ಅಟ್ಲಾಂಟಗಳಲ್ಲಿ ನಡೆದ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಗೆದ್ದ ಚಿತ್ರಗಳಿಗೆ ಆಸ್ಕರ್ ಜ್ಯೂರಿಗಳು ವಿಶೇಷ ಮನ್ನಣೆ ನೀಡುತ್ತಾರೆ. ಇನ್ನು ಗಂಗೂಬಾಯಿ ಸಿನಿಮಾ ಸಂಜಯ್ ಲೀಲಾ ಬನ್ಸಾಲಿ ಸಿನಿಮಾ. ಬಾಕ್ಸಾಫೀಸಿನಲ್ಲಿ ಓಕೆ ಓಕೆ ಎನ್ನುವ ಜನಮನ್ನಣೆ ಪಡೆದಿತ್ತು.



