ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸಿನಿಮಾ ಪೆದ್ದಿ ಬ್ಲಾಕ್ ಬಸ್ಟರ್ ಆಗುವ ದಾರಿಯಲ್ಲಿದೆ. ಈಗಾಗಲೇ ಶಿವಣ್ಣ ಪೋಷಕ ನಟರಾಗಿ ನಟಿಸಿದ್ದ ಜೈಲರ್ ಸೂಪರ್ ಡ್ಯೂಪರ್ ಹಿಟ್ ಆಗಿತ್ತು. ಇದೀಗ ಪೆದ್ದಿ ಕೂಡಾ ಅದೇ ಹಾದಿಯಲ್ಲಿದೆ. ಮೊದಲ ದಿನವೇ ಜಗತ್ತಿನಾದ್ಯಂತ 100 ಕೋಟಿ ರೂ. ಗಳಿಸಿ ಬಾಕ್ಸ್ ಆಫೀಸ್ ದಾಖಲೆ ಬರೆದಿದೆ.
ನಿರ್ದೇಶಕ ಬುಚಿ ಬಾಬು ಸನಾ ನಿರ್ದೇಶನದ ಈ ಕ್ರೀಡಾ ಸಾಹಸ ಪ್ರಧಾನ ಸಿನಿಮಾದಲ್ಲಿ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕ. ಶ್ರೀದೇವಿ ಮಗಳು ಜಾಹ್ನವಿ ಕಪೂರ್ ನಾಯಕಿ. ಕನ್ನಡದ ಶಿವಣ್ಣ ಕೂಡಾ ಪ್ರಧಾನ ಪಾತ್ರದಲ್ಲಿರುವ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ‘ಪೆದ್ದಿ’ ಮೊದಲ ದಿನ ಅದ್ದೂರಿಯಾಗಿ ತೆರೆಕಂಡಿದ್ದು, ಹೈದರಾಬಾದ್, ಬೆಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಮುಂಜಾನೆಯ ಶೋಗಳು ಸಕ್ಸಸ್ ಆಗಿವೆ. ಮೊದಲ ದಿನ ಸಿನಿಮಾಗೆ ಸಿಕ್ಕಿದ್ದು ಬರೋಬ್ಬರಿ 12,412 ಶೋಗಳು. ಭಾರರದಲ್ಲಿ ಈ ಸಿನಿಮಾ ಮೊದಲ ದಿನ ನೆಟ್ ಕಲೆಕ್ಷನ್ 69.50 ಕೋಟಿ ರೂಪಾಯಿ. ಭಾರತದಲ್ಲಿ ಇದುವರೆಗೆ ಒಟ್ಟು 82.49 ಕೋಟಿ ಗ್ರಾಸ್ ಕಲೆಕ್ಷನ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾ 30.00 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ರಾಮ್ ಚರಣ್ ಅವರ ವೃತ್ತಿಜೀವನದಲ್ಲೇ ಈ ಸಿನಿಮಾ ಮತ್ತೊಂದು ಮೈಲಿಗಲ್ಲು ಸೃಷ್ಟಿಸುವುದು ಖಚಿತ ಎನ್ನಲಾಗುತ್ತಿದೆ.
ರಾಮ್ ಚರಣ್‌ಗೆ RRR ನಂತರ ದೊಡ್ಡ ಸಕ್ಸಸ್ ಸಿಕ್ಕಿಲ್ಲ. ಹೀಗಾಗಿ ಪೆದ್ದಿಯ ಮೇಲೆ ಭಾರೀ ನಿರೀಕ್ಷೆಗಳಿದ್ದವು. ಇನ್ನು ಚಿತ್ರದ ಬಜೆಟ್ ಸುಮಾರು 250 ಕೋಟಿ ಎನ್ನಲಾಗಿದೆ. ನಾಯಕ ರಾಮ್ ಚರಣ್ ಬರೋಬ್ಬರಿ 100 ಕೋಟಿ ರೂಪಾಯಿಗಳ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಇದ್ದು, ನಿರ್ದೇಶಕ ಬುಚ್ಚಿ ಬಾಬು ಸನಾ ಅವರಿಗೆ ಸುಮಾರು 30 ಕೋಟಿ ರೂಪಾಯಿಗಳನ್ನು ನೀಡಲಾಗಿದೆಯಂತೆ. ನಟ ಶಿವಣ್ಣ ಅವರ ಪುಟ್ಟ ಪಾತ್ರಕ್ಕೆ 3 ರಿಂದ 4 ಕೋಟಿ ನೀಡಲಾಗಿದೆಯಂತೆ. ಯಕಿ ಜಾನ್ವಿ ಕಪೂರ್, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್, ಛಾಯಾಗ್ರಾಹಕ ರತ್ನವೇಲು ಮತ್ತು ಇತರ ಪ್ರಮುಖ ನಟರ ಸಂಭಾವನೆಗಾಗಿಯೇ ಸುಮಾರು 35 ರಿಂದ 40 ಕೋಟಿ ರೂಪಾಯಿಗಳವರೆಗೆ ವೆಚ್ಚ ಮಾಡಲಾಗಿದೆ ಎಂದು ವರದಿಗಳಿವೆ.
‘ಆರ್ಆರ್ಆರ್ ಬಳಿಕ ರಾಮ್ ಚರಣ್ ಅವರ ‘ಆಚಾರ್ಯ’ ಹಾಗೂ ‘ಗೇಮ್ ಚೇಂಜರ್’ ಸಿನಿಮಾಗಳು ಬಂದವು. ಎರಡೂ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಮಕಾಡೆ ಮಲಗಿದವು. ಹೀಗಾಗಿ, ಅವರಿಗೆ ಒಂದು ದೊಡ್ಡ ಗೆಲುವಿನ ಅಗತ್ಯ ಇತ್ತು. ಕೆಲವರು ‘ಪೆದ್ದಿ’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಕೊಟ್ಟಿದ್ದರೂ, ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿದೆ. ರಾಮ್ ಚರಣ್ ಅವರ ಅದ್ಭುತ ನಟನೆ ಮತ್ತು ಸಿನಿಮಾದ ಮಾಸ್ ಎಲಿಮೆಂಟ್‌ಗಳಿಗೆ ಫಿದಾ ಆಗಿರುವ ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬೀಳುತ್ತಿದ್ದಾರೆ. ಅಂದಹಾಗೆ ಚಿತ್ರಕ್ಕೆ ಎಆರ್ ರೆಹಮಾನ್ ಸಂಗೀತದ ಹಾಡುಗಳು ಹಾಗೂ ಡ್ಯಾನ್ಸ್ ಕೂಡಾ ಕಾರಣವಾಗಿರುವುದು ವಿಶೇಷ.



