ಅಯೋಗ್ಯ 02. ಅಯೋಗ್ಯ ಚಿತ್ರದ ಸೀಕ್ವೆಲ್. ಈ ಸಿನಿಮಾ ಆಗಿದ್ದೇ ಪವಾಡವೇನೋ ಎನ್ನುವಂತೆ ಸ್ಟೋರಿ ಹೇಳಿದೆ ಚಿತ್ರತಂಡ. ಅಯೋಗ್ಯ 02 ಶೂಟಿಂಗ್ ವೇಳೆ ಚಿತ್ರತಂಡದೊಳಗೆ ಸಿಕ್ಕಾಪಟ್ಟೆ ಜಗಳಗಳಾಗಿ, ಮಾತುಕತೆಗಳೇ ಸ್ಟಾಪ್ ಆಗಿದ್ದವಂತೆ. ಜೊತೆಗೆ ಏನಮ್ಮಿ.. ಏನಮ್ಮಿ.. ಹಾಡು. ಆ ಹಾಡಿನಲ್ಲಿ ವಿಜಯ್ ಪ್ರಕಾಶ್ ಬದಲಿಗೆ ಸಿದ್ಧ್ ಶ್ರೀರಾಂ ಕೈಲಿ ಹಾಡಿಸಿದ್ದು ಏಕೆ..? ಆ ಪ್ರಶ್ನೆಯಂತೂ ಬಿಡಿ.. ರಚಿತಾ ರಾಮ್ ಸ್ಟೇಜ್ ಮೇಲಿಂದ ಕೆಳಗೆ ಇಳಿದು ಬಂದು ಡ್ರಾಮಾ ಆಯ್ತು. ಅದನ್ನು ಕೂಲ್ ಆಗಿ ನಿಭಾಯಿಸಬಹುದಿತ್ತಾದರೂ, ಅಯೋಗ್ಯ 02 ಚಿತ್ರತಂಡಕ್ಕೆ ಕಾಂಟ್ರವರ್ಸಿ ಮಾಡುವ ಐಡಿಯಾನೇ ಇತ್ತು ಎನ್ನುವಂತೆ ಇತ್ತು ಅವರ ವರ್ತನೆ.
ಸತೀಶ್ ನಿನಾಸಂ ಹಾಗೂ ರಚಿತಾ ರಾಮ್ ಅಭಿನಯದ ‘ಅಯೋಗ್ಯ 2’ ಸಿನಿಮಾದ ಮೊದಲ ರೊಮ್ಯಾಂಟಿಕ್ ಹಾಡು ಬಿಡುಗಡೆ ಆಗಿದೆ.. ನಟ ಸತೀಶ್ ಹುಟ್ಟುಹಬ್ಬದಂದೆ ಹಾಡು ಬಿಡುಗಡೆ ಆಗಿರೋದು ವಿಶೇಷ.
ಮುದ್ದು ಮುದ್ದು ಪುಟ್ಟಲಕ್ಷ್ಮಿ
ಕದ್ ಕದ್ದು ನನ್ನನ್ನೇ
ಮೆಲ್ಮೆಲ್ಗೆ ಯಾಕೋ ನೋಡ್ತಾವ್ಳೆ
ಮುದ್ದು ಮುದ್ದು ರಂಗಯ್ಯ
ಪಳ್ ಪಳನೆ ಹೊಳ್ಕೊಂಡು
ಬಿರ್ಬಿರ್ನೇ ಕನಸಾಗೇ ಬತ್ತಾವ್ನೆ
ಸಿಡಿಸಿಡ ಕೋಪನೇ ಸಿಂಗಾರ
ಇವಳ ಬಡ ಬಡ ಮಾತೆಲ್ಲ ಬಂಗಾರ
ಸುಮ್ಸುಮ್ನೆ ಇದ್ರೂನೂ ಅರಸಾನೇ ನಂಗೆ
ಬುಳ್ ಬುಳನೆ ನಕ್ಕುಬುಟ್ರೆ ಚಂದಿರ
ಬಾರಿ ವೈನಾಗವ್ಳೆ
ಮಾತಲ್ ಮುತ್ತಿಡುತ್ತಾಳೆ
ಭಾರಿ ವೈನಾಗವ್ನೆ
ಕಣ್ಣಲ್ ಮುದ್ದಾಡ್ತಾನೆ
ಹಾಡು ಚೆನ್ನಾಗಿದೆ. ಇಷ್ಟವಾಗುವಂತಿದೆ. ಏನಮ್ಮಿ..ಏನಮ್ಮಿ.. ಹಾಡಿನಷ್ಟು ಮ್ಯಾಜಿಕ್ ಆಗಿಲ್ವಾದರೂ, ಹಾಡು ಕೆಟ್ಟದಾಗಿಯೇನೂ ಇಲ್ಲ. ಅರ್ಜುನ್ ಜನ್ಯ ಮ್ಯೂಸಿಕ್ ಇದೆ. ಆದರೆ ಒಂದು ವಿಶೇಷತೆ ಎಂದರೆ.. ಅಯೋಗ್ಯ ಚಿತ್ರದ ಹಾಡನ್ನು ಹಾಡಿದ್ದವರು ವಿಜಯ್ ಪ್ರಕಾಶ್, ಜೊತೆಯಾಗಿ ಪಲಾಕ್ ಮುಚ್ಚಲ್ ಹಾಡಿದ್ದರು. ಏನಮ್ಮಿ ಹಾಡಿಗೆ ಸಾಹಿತ್ಯ ನೀಡಿದ್ದವರು ಚೇತನ್ ಕುಮಾರ್.
ಈಗ ಪುಟ್ಟಲಕ್ಷ್ಮಿ ಹಾಡು ಬಂದಿದ್ಯಲ್ಲ.. ಈ ಹಾಡಿಗೆ ಸಾಹಿತ್ಯ ನೀಡಿರುವುದು ಕೂಡಾ ಅದೇ ಚೇತನ್. ಸಂಗೀತ ಅರ್ಜುನ್ ಜನ್ಯ ಅವರದ್ದೇ. ಆದರೆ ಹಾಡನ್ನು ಹಾಡಿರುವುದು ಸಿದ್ ಶ್ರೀರಾಮ್ ಮತ್ತು ಪೃಥ್ವಿ ಭಟ್. ಪತ್ರಕರ್ತರು ಅದನ್ನೊಂದು ಕಾಂಟ್ರವರ್ಸಿಯೇನೋ ಎಂಬಂತೆ ಕೇಳಿದರು. ಅದಕ್ಕೆ ಉತ್ತರ ಕೊಡೋದಕ್ಕೆ ಕೆಳಗೆ ಬಂತು ಮಾತನಾಡಿದ ರಚಿತಾ ರಾಮ್, ಕಾಂಟ್ರವರ್ಸಿಯನ್ನು ಆಹ್ವಾನ ಮಾಡುವಂತೆ ವರ್ತಿಸಿದರು.
ಆ ಹಾಡು ಬೇರೆ.. ಈ ಹಾಡು ಬೇರೆ.. ಎಲ್ಲವನ್ನೂ ಒಬ್ಬರ ಬಳಿಯಲ್ಲೇ ಹಾಡಿಸೋಕೆ ಸಾಧ್ಯ ಇಲ್ಲ. ಇಷ್ಟಕ್ಕೂ ಸಿದ್ ಶ್ರೀರಾಮ್-ಪೃಥ್ವಿ ಭಟ್ ಹಾಡುವುದು ನಿಮಗೆ ಇಷ್ಟ ಇಲ್ವಾ. ಎಂದು ಹೇಳಿದ್ದರೆ ಮುಗಿಯುತ್ತಿತ್ತೇನೋ.. “ನಾನೀಗ ಕೆಳಗೆ ಬಂದು ನಿಂತುಕೊಂಡು ಬಿಡ್ತೀನಿ ಅಷ್ಟೇ” ಎಂದು ನೇರವಾಗಿ ವೇದಿಕೆಯಿಂದ ಕೆಳಗೆ ಇಳಿದು ಪತ್ರಕರ್ತರಿದ್ದ ಜಾಗಕ್ಕೆ ನಡೆದು ಬಂದ ರಚಿತಾ ರಾಮ್, ಮಾತಿನಲ್ಲಿ ಕಾಂಟ್ರವರ್ಸಿ ಆಗಲಿ ಬಿಡು ಅನ್ನೋ ಧೋರಣೆ ಇತ್ತು.
ಅಷ್ಟೇ ಅಲ್ಲ, “‘ಅಯೋಗ್ಯ 2’ ಸಿನಿಮಾ ಶೂಟಿಂಗ್ ಸಮಯದಲ್ಲಿ ಚಿತ್ರತಂಡದೊಳಗೆ ಸಿಕ್ಕಾಪಟ್ಟೆ ಜಗಳಗಳಾಗಿವೆ. ಮಾತುಕತೆಗಳೂ ಬಂದ್ ಆಗಿದ್ದವು” ಎಂದು ರಚಿತಾ ಹೇಳಿಕೊಂಡರು. ಈ ಮುನಿಸುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳದೆ, ಸಿನಿಮಾ ಚೆನ್ನಾಗಿ ಬರಬೇಕು ಎಂಬ ಒಂದೇ ಕಾರಣಕ್ಕೆ ನಾವೆಲ್ಲರೂ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಮರೆತು ಒಂದಾಗಿ ಕೆಲಸ ಮಾಡಿದ್ದೇವೆ ಎಂದೂ ಹೇಳಿದರು.
ಅದು ಒಂದು ಕಾಂಟ್ರವರ್ಸಿ. ಅದನ್ನೆಲ್ಲ ಒಂದು ಪಕ್ಕಕ್ಕೆ ಇಟ್ಟರೆ ನಾಯಕ ನಟ ನೀನಾಸಂ ಸತೀಶ್ ನಿರ್ಮಾಪಕರ ಕುರಿತಂತೆ ಆಡಿರುವ ಮಾತುಗಳು ಹೊಸ ವಿವಾದ ಹುಟ್ಟುಹಾಕಿವೆ. ʻʻಸಿನಿಮಾ ಸೋಲುತ್ತೆ ಎನ್ನುವುದು ಗೊತ್ತಿದ್ದಾಗ ಸಿನಿಮಾ ಯಾಕ್ರೀ ನಿರ್ಮಾಣ ಮಾಡ್ತೀರಾ..? ಬರೀ ದುಡ್ಡು ಹಾಕಿದ್ರೆ ಆಗಲ್ಲ, ತನುಮನಧನ ಅರ್ಪಣೆ ಮಾಡಬೇಕುʼʼ ಎಂದು ಹೇಳಿದ್ದು ವಿವಾದವಾಗಿದೆ. ನಿರ್ಮಾಪಕರ ಸಂಘವೂ ಕೆರಳಿದೆ. ಕೊನೆಗೆ ನೀನಾಸಂ ಸತೀಶ್ ಅವರೇ ನಾನು ಹೇಳಿದ್ದು ಹಾಗಲ್ಲ.. ಹೀಗೆ ಎಂದು ಸ್ಪಷ್ಟನೆ ಕೊಟ್ಟಿದ್ಧಾರೆ.
ನಾನು ಸಿನಿಮಾ ಬಗ್ಗೆ ಅಧ್ಯಯನ ಮಾಡಬೇಕು ಎಂದು ಹೇಳಿದ್ದೇನೆಯೇ ಹೊರತು, ನಾನು ನಿಮ್ಮ ಶಿಕ್ಷಣದ ಕುರಿತು ಮಾತನಾಡಿಲ್ಲ ಎಂದಿದ್ದಾರೆ. ನಿರ್ಮಾಪಕರಿಂದಲೇ ನಾವು ಮತ್ತು ಚಿತ್ರರಂಗ ಎಂದು ಕೂಡ ಹೇಳಿರುವ ಸತೀಶ್ ನೀನಾಸಂ ತಮ್ಮ ಹೇಳಿಕೆಯನ್ನು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ಮಾಪಕನಾಗಿ ನಾನು ಕೂಡ ಸೋತು ತುಂಬಾ ವಿಚಾರ ಕಲಿತುಕೊಂಡಿದ್ದೇನೆ ಈ ಹಿನ್ನೆಲೆ ಚಿತ್ರರಂಗಕ್ಕೆ ಬರುವ ಹೊಸಬರು ಎಲ್ಲ ವಿಭಾಗವನ್ನು ತಿಳಿದುಕೊಂಡು ಬರಬೇಕು ಎಂದು ಹೇಳುವುದಷ್ಟೇ ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟೀಕರಣ ನೀಡಿದ್ದಾರೆ.



