ನಾವು ಎಲ್ಲಿಗೇ ಹೋದರೂ ಜೇಬಿನಲ್ಲಿ ಕ್ಯಾಷ್ ಇರುವುದಿಲ್ಲ. ಪರ್ಸ್ ಇದ್ದರೂ ದುಡ್ಡಿರೋದಿಲ್ಲ. ಕೈಲೊಂದು ಮೊಬೈಲ್ ಇಟ್ಟುಕೊಂಡು ಆನ್ ಲೈನ್ ಪೇಮೆಂಟ್ ಮಾಡುತ್ತಿದ್ದೇವೆ. ಒಂದು ರೂಪಾಯಿ ಕೂಡಾ ಕ್ಯಾಷ್ ಇಲ್ಲದವರೇ ಈಗ ಹೆಚ್ಚು. ಆದರೆ ಇನ್ನು ಮುಂದೆ ಆ ರೀತಿ ಪೇಮೆಂಟ್ ಮಾಡುವವರಿಗೆ ಶುಲ್ಕ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಆಲೋಚನೆ ಮಾಡ್ತಿದೆ. ಅಂದಹಾಗೆ ಈ ಬಗ್ಗೆ ಕೇಂದ್ರ ಸರ್ಕಾರ ಸಮೀಕ್ಷೆಯೊಂದನ್ನು ಮಾಡಿದ್ದು, ಆ ಸಮೀಕ್ಷೆ ಪ್ರಕಾರ ದೊಡ್ಡ ಮೊತ್ತದ ಯುಪಿಐ ಪಾವತಿಗಳ ಮೇಲೆ ಎಂಡಿಆರ್ ಶುಲ್ಕದ ವ್ಯವಸ್ಥೆ ತರಲು ಆರ್ಬಿಐ ಚಿಂತಿಸುತ್ತಿದೆ.
ಭಾರತದ ಒಟ್ಟು ಯುಪಿಐ ವಹಿವಾಟಿನ ಬಹುದೊಡ್ಡ ಪಾಲು PhonePe (ಫೋನ್ ಪೇ) (46.2% ಮಾರುಕಟ್ಟೆ ಪಾಲು)ಗೆ ಇದ್ದರೆ, Google Pay (ಜಿಪೇ): ಎರಡನೇ ಅತಿ ದೊಡ್ಡ ಆಪ್ ಆಗಿದ್ದು, ಸುಮಾರು 32.7% ಮಾರುಕಟ್ಟೆ ಪಾಲು ಹೊಂದಿದೆ. Paytm (ಪೇಟಿಎಂ): ಬ್ಯಾಂಕಿಂಗ್ ನಿಯಂತ್ರಣಗಳ ನಂತರವೂ ಇಂದಿಗೂ ಮೂರನೇ ಸ್ಥಾನದಲ್ಲಿದ್ದು, 7.9% ಮಾರುಕಟ್ಟೆ ಪಾಲು ಹೊಂದಿದೆ. ವ್ಯಾಪಾರಿಗಳ ವಲಯದಲ್ಲಿ (QR ಕೋಡ್ ಮತ್ತು ಸೌಂಡ್‌ಬಾಕ್ಸ್) ಇಂದಿಗೂ ಪ್ರಬಲವಾಗಿರುವುದು ಪೇಟಿಎಂ. ಇದಲ್ಲದೆ Navi (ನಾವಿ), Super Money (ಸೂಪರ್ ಮನಿ), CRED (ಕ್ರೆಡ್), Amazon Pay (ಅಮೆಜಾನ್ ಪೇ) ಹಾಗೂ WhatsApp Pay (ವಾಟ್ಸಾಪ್ ಪೇ) ಆಪ್ಸ್ ಇವೆ. ಭಾರತ ಸರ್ಕಾರ ಮತ್ತು NPCI ಅಭಿವೃದ್ಧಿಪಡಿಸಿರುವ ಅಧಿಕೃತ ಮತ್ತು ಅತ್ಯಂತ ಸುರಕ್ಷಿತವಾದ ಸ್ವದೇಶಿ ಆಪ್ BHIM (ಭೀಮ್ – Bharat Interface for Money). ಇದಲ್ಲದೆ ಪ್ರಮುಖ ಬ್ಯಾಂಕ್‌ಗಳು ಕೂಡಾ ಪ್ರತ್ಯೇಕ ಆಪ್ ಸಿಸ್ಟಂ ಹೊಂದಿವೆ. ಇವುಗಳ ಮೂಲಕ ಗ್ರಾಹಕರು ನಡೆಸುವ ವ್ಯವಹಾರ ಸದ್ಯಕ್ಕೆ ಉಚಿತ. ಮುಂದೆ ಶುಲ್ಕ ಪಾವತಿಸಬೇಕಾಗಬಹುದು. ಪ್ರಸ್ತುತ ನಿಯಮಗಳ ಪ್ರಕಾರ ಸಾಮಾನ್ಯ ಗ್ರಾಹಕರಿಗೆ (Users) ಯಾವುದೇ ಯುಪಿಐ ಶುಲ್ಕ ಇರುವುದಿಲ್ಲ.
ಇತ್ತೀಚಿನ ಕೇಂದ್ರ ಸರ್ಕಾರದ ಪ್ರಸ್ತಾವನೆಗಳು ಮತ್ತು ನಿಯಮಗಳ ಪ್ರಕಾರ ಯುಪಿಐ ಶುಲ್ಕದ ಸಂಪೂರ್ಣ ವಿವರ ಇಲ್ಲಿದೆ.
ಗ್ರಾಹಕರಿಗೆ ಶುಲ್ಕ ಇಲ್ಲ
ಯಾವುದೇ ಶುಲ್ಕವಿಲ್ಲ: ನೀವು ಸ್ನೇಹಿತರಿಗೆ ಹಣ ಕಳುಹಿಸುವಾಗ (P2P) ಅಥವಾ ಅಂಗಡಿಗಳಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿಸುವಾಗ (P2M) ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಂಡರೆ 0% ಶುಲ್ಕ ಇರುತ್ತದೆ.
ರೂಪಾಯಿ ಮಿತಿ: ದಿನಕ್ಕೆ ಸಾಮಾನ್ಯ ವಹಿವಾಟಿಗೆ ₹1 ಲಕ್ಷದವರೆಗೆ ಮತ್ತು ತೆರಿಗೆ, ಆಸ್ಪತ್ರೆ ಹಾಗೂ ಶಿಕ್ಷಣ ಸಂಸ್ಥೆಗಳ ಪಾವತಿಗೆ ₹5 ಲಕ್ಷದವರೆಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಹಣ ವರ್ಗಾಯಿಸಬಹುದು.
ವ್ಯಾಪಾರಿಗಳಿಗೆ ಶುಲ್ಕ ಇದೆ
ಯುಪಿಐ ಉಚಿತವಾಗಿದ್ದರೂ, ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ದೊಡ್ಡ ವ್ಯಾಪಾರಿಗಳಿಗೆ ಮಾತ್ರ ಶುಲ್ಕ ಅನ್ವಯಿಸುತ್ತದೆ. ಅವುಗಳ ಪ್ರಕಾರ..
ಪಿಪಿಐ ವ್ಯಾಲೆಟ್ ಪಾವತಿ (PPI Wallets): ಗ್ರಾಹಕರು ತಮ್ಮ ಬ್ಯಾಂಕ್ ಖಾತೆಯ ಬದಲಾಗಿ ಫೋನ್ ಪೇ, ಪೇಟಿಎಂ ಅಥವಾ ಅಮೆಜಾನ್ ವ್ಯಾಲೆಟ್‌ಗಳ ಮೂಲಕ ₹2,000 ಕ್ಕಿಂತ ಹೆಚ್ಚು ಹಣವನ್ನು ವ್ಯಾಪಾರಿಗೆ ಪಾವತಿಸಿದರೆ, ಆ ವ್ಯಾಪಾರಿಗೆ 1.1% ವರೆಗೆ ಇಂಟರ್‌ಚೇಂಜ್ ಶುಲ್ಕ ಅನ್ವಯಿಸುತ್ತದೆ.
ರುಪೇ ಕ್ರೆಡಿಟ್ ಕಾರ್ಡ್ (RuPay Credit Card): ಯುಪಿಐಗೆ ಲಿಂಕ್ ಮಾಡಿದ ಕ್ರೆಡಿಟ್ ಕಾರ್ಡ್ ಬಳಸಿ ಪಾವತಿ ಮಾಡಿದಾಗ ವ್ಯಾಪಾರಿಗಳು ಸರಿಸುಮಾರು 1.1% ರಿಂದ 2% ವರೆಗೆ MDR ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ದೊಡ್ಡ ವ್ಯಾಪಾರಿಗಳಿಗೆ MDR ಶುಲ್ಕ: ವಾರ್ಷಿಕ ₹1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ಕಂಪನಿಗಳಿಗೆ (ಉದಾಹರಣೆಗೆ: Amazon, Flipkart) ₹2,000 ಕ್ಕಿಂತ ಹೆಚ್ಚಿನ ಯುಪಿಐ ಪಾವತಿಗಳ ಮೇಲೆ 0.3% ರಿಂದ 0.5% ವರೆಗೆ ಮರ್ಚೆಂಟ್ ಶುಲ್ಕ (MDR) ವಿಧಿಸಲು ಕಾನೂನು ಚೌಕಟ್ಟು ಸಿದ್ಧಪಡಿಸಲಾಗುತ್ತಿದೆ.
ಸಣ್ಣ ವ್ಯಾಪಾರಿಗಳು ಮತ್ತು ಗ್ರಾಹಕರು ಸುರಕ್ಷಿತ: ಬೀದಿ ಬದಿಯ ವ್ಯಾಪಾರಿಗಳು, ಸಣ್ಣ ಅಂಗಡಿಯವರು ಮತ್ತು ಸಾಮಾನ್ಯ ಗ್ರಾಹಕರಿಗೆ ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ.
ವ್ಯಾಪಾರಿಗಳು ಡಿಜಿಟಲ್ ಪಾವತಿಗಳನ್ನು ಸ್ವೀಕರಿಸಲು ಬ್ಯಾಂಕುಗಳು ಮತ್ತು ಪಾವತಿ ಕಂಪನಿಗಳಿಗೆ (ಉದಾಹರಣೆಗೆ: Paytm, PhonePe) ಪಾವತಿಸಬೇಕಾದ ಸೇವಾ ಶುಲ್ಕವೇ MDR. 2020 ರ ಜನವರಿಯಲ್ಲಿ ಸರ್ಕಾರವು ಯುಪಿಐ ಮೇಲಿನ MDR ಅನ್ನು ಸಂಪೂರ್ಣವಾಗಿ ರದ್ದುಗೊಳಿಸಿತ್ತು. ಆದರೆ, ಇದರಿಂದ ಪಾವತಿ ಕಂಪನಿಗಳಿಗೆ ಆದಾಯವಿಲ್ಲದಂತಾಗಿ, ತಂತ್ರಜ್ಞಾನದ ಸುಧಾರಣೆಗೆ ಹಿನ್ನಡೆಯಾಯಿತು. ಆಗಸ್ಟ್ 2026 ರ ಹೊಸ ಪ್ರಸ್ತಾವನೆ: ಹಣಕಾಸು ಸಚಿವಾಲಯವು ‘ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, 2007’ ರ ಸೆಕ್ಷನ್ 10A ಗೆ ತಿದ್ದುಪಡಿ ತರಲು ಪಾರ್ಲಿಮೆಂಟ್‌ನಲ್ಲಿ ಮಸೂದೆ ಮಂಡಿಸಿದೆ. ವಾರ್ಷಿಕ ₹1.5 ಕೋಟಿಗಿಂತ ಹೆಚ್ಚು ವಹಿವಾಟು ನಡೆಸುವ ದೊಡ್ಡ ವ್ಯಾಪಾರಿಗಳಿಗೆ, ₹2,000 ಕ್ಕಿಂತ ಹೆಚ್ಚಿನ ಮೊತ್ತದ ಪಾವತಿಗಳ ಮೇಲೆ 0.3% ರಿಂದ 0.5% ವರೆಗೆ ಮಾತ್ರ ಶುಲ್ಕ ವಿಧಿಸಲು ಚರ್ಚೆ ನಡೆಯುತ್ತಿದೆ.
ಸಮೀಕ್ಷೆ ಹೇಳಿದ್ದು ಏನು..?
ಇದೇನಾದರೂ ಜಾರಿಗೆ ಬಂದರೆ ಶೇ. 53ರಷ್ಟು ಜನರು ದೊಡ್ಡ ಮೊತ್ತದ ಯುಪಿಐ ಪಾವತಿ ನಿಲ್ಲಿಸಬಹುದು ಎನ್ನುತ್ತಿದೆ ಒಂದು ಸಮೀಕ್ಷೆ. ಶೇ. 20ರಷ್ಟು ಜನರು ನಗದು ಬಳಕೆಗೆ ಮರಳಬಹುದು ಎನ್ನುತ್ತಿದೆ ಲೋಕಲ್ ಸರ್ಕಲ್ಸ್ ಸಮೀಕ್ಷೆ.
ಸಮೀಕ್ಷೆ ಪ್ರಕಾರ ಶೇ.53ರಷ್ಟು ಜನ ಯುಪಿಐ ಪಾವತಿಯನ್ನೇ ಬಂದ್ ಮಾಡೋದಾಗಿ ಹೇಳಿದ್ದಾರೆ. ಕ್ಯಾಷ್ ಪೇಮೆಂಟ್‌ಗೆ ವಾಪಸ್ ಆಗೋದಾಗಿ ಶೇ.20 ಜನ ಹೇಳಿದ್ಧರೆ, ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್‌ಗೆ ಬದಲಾಗುವುದಾಗಿ 22% ಜನ ಹೇಳಿದ್ಧಾರೆ. ಪಾವತಿ ಆದರೂ ಯುಪಿಐ ಪೇಮೆಂಟ್ ಕಂಟಿನ್ಯೂ ಮಾಡೋದಾಗಿ ಹೇಳಿರುವವರ ಪ್ರಮಾಣ ಕೇವಲ 5%.
ಯುಪಿಐ ಉಚಿತ ಎನ್ನುವ ಕಾರಣಕ್ಕೆ ಸಣ್ಣ ಹಾಗೂ ದೊಡ್ಡ ವಹಿವಾಟುಗಳಿಗೆ ಜನರು ಆನ್‌ಲೈನ್ ಪಾವತಿ ಮಾಡುತ್ತಿದ್ದರು. ಒಮ್ಮೆ ಶುಲ್ಕ ಅಥವಾ ಹೆಚ್ಚುವರಿ ಹೊರೆ ಬಿದ್ದರೆ, ಜನರು ಮತ್ತೆ ನಗದು (Cash) ಬಳಕೆಗೆ ಮರಳುವ ಸಾಧ್ಯತೆಯಿದೆ.



