ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆಯಾಗ್ತಿದ್ದಂತೆಯೇ ಸಂಕಟವೂ ವಿಸ್ತರಣೆಯಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಪ್ರಮಾಣ ವಚನಕ್ಕೇ ಹೋಗದೆ ಸಂಕಟ ಹೆಚ್ಚಿಸಿದ್ದರೆ, ಕಾಂಗ್ರೆಸ್ ಪಕ್ಷದ ಹಲವು ಶಾಸಕರು ಬಹಿರಂಗವಾಗಿ ಸಿಡಿದು ಬಿದ್ದು ಟೆನ್ಷನ್ ಹೆಚ್ಚಿಸಿದ್ದಾರೆ. ಸಿಎಂ ಡಿಕೆ ʻ ಯಾರು ರಾಜೀನಾಮೆ ಕೊಟ್ಟರೂ 5 ನಿಮಿಷದಲ್ಲಿಯೇ ಅಂಗೀಕಾರʼ ಎಂದು ಡೋಂಟ್ ಕೇರ್ ಉತ್ತರ ಕೊಟ್ಟಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಕಾರ್ಯಕರ್ತರನ್ನು ಆರ್ಡಿನರಿ ಎನ್ನುವ ಮೂಲಕ ಅಸಮಾಧಾನ ಹೆಚ್ಚಿಸಿದ್ಧಾರೆ. ಆದರೆ.. ಇದೆಲ್ಲದರ ಮೂಲ ಯಾವುದು ಗೊತ್ತೇ.. ರಾಹುಲ್ ಗಾಂಧಿ.
ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಷಯದಲ್ಲಿ ಸಿದ್ದರಾಮಯ್ಯ, ಡಿಕೆ ಇಬ್ಬರೂ ತಮ್ಮ ತಮ್ಮ ಬಣದ ಕೆಲವು ಶಾಸಕರ ಪಟ್ಟಿ ಕೊಟ್ಟಿದ್ದರು. ಆದರೆ ಮಾತುಕತೆಗೆ ಸಿದ್ದು, ಡಿಕೆ ಇಬ್ಬರೂ ಬಿಕೆ ಜೊತೆಯಲ್ಲಿ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರ ಮನೆಗೆ ರೌಂಡು ಹೊಡೆದಿದ್ದೇ ಬಂತು. ರಾಹುಲ್ ಗಾಂಧಿಗೆ ಪುರುಸೊತ್ತು ಸಿಗಲೇ ಇಲ್ಲ. ಕೊನೆಗೆ ದೆಹಲಿಯಲ್ಲಿ ಸುಮ್ಮನೆ ಕುಳಿತಿದ್ದು, ಬೇಸರದಿಂದಲೇ ವಾಪಸ್ ಆದರು. ಪಟ್ಟಿಯನ್ನು ತೆಗೆದುಕೊಂಡ ರಾಹುಲ್ ಗಾಂಧಿ ಟಿಕ್ ಮಾಡಿ ಕಳಿಸಿಕೊಟ್ಟರು. ಕೆಲವು ಸ್ಪೆಲ್ಲಿಂಗ್ ಮಿಸ್ಟೇಕ್ ತಿದ್ದಿದ್ದರು. ಪ್ರಾಬ್ಲಂ ಶುರುವಾಗಿದ್ದೇ ಆಗ.
ಒಂದು ಪಟ್ಟಿ ಇರುತ್ತದೆ. ಆದರೆ ಯಾರನ್ನು ಕೈಬಿಟ್ಟರೆ ಸಮಸ್ಯೆ ದೊಡ್ಡದಾಗಿ ಆಗುವುದಿಲ್ಲ ಎಂಬ ಅರಿವು ಸ್ಥಳೀಯ ನಾಯಕರಿಗೆ ಇರುತ್ತದೆ. ಅದನ್ನು ಗಣನೆಗೇ ತೆಗೆದುಕೊಳ್ಳದೆ ಸುರ್ಜೇವಾಲ, ವೇಣುಗೋಪಾಲ್ ಅವರ ಜೊತೆ ಮಾತನಾಡಿ ಕಳುಹಿಸಿದ ಪಟ್ಟಿಯೇ ಎಲ್ಲ ಗೊಂದಲಕ್ಕೆ ಮೂಲ ಕಾರಣ.
ಸಂಪುಟದಲ್ಲಿ ಸೇರುವ ಸಚಿವರ ಪಟ್ಟಿಯೂ ಅಷ್ಟೆ.. ರೇಷನ್ ಅಂಗಡಿಯಿಂದ ತಿಂಗಳ ಸಾಮಾನು ತರುವಾಗ ಪಟ್ಟಿ ಬದಲಾಗುವಂತೆ ಬದಲಾಗುತ್ತಾ ಹೋಯ್ತು. ಅದರ ಪರಿಣಾಮ ಆಗಿದ್ದು ಡಿಕೆ ಮೇಲೆ. ಏಕೆಂದರೆ ಸಿದ್ದರಾಮಯ್ಯ ಈಗ ಮಾಜಿ ಸಿಎಂ. ಹೆಚ್ಚು ತಲೆನೋವಿಲ್ಲ. ಇನ್ನು ಬಿಕೆ ಹರಿಪ್ರಸಾದ್ ಅವರಿಗೆ ಇಂತಹ ಸ್ಥಿತಿಗಳನ್ನು ಹೆಚ್ಚು ನಿಭಾಯಿಸಿದ ಅನುಭವವೇ ಇಲ್ಲ. ಜೊತೆಗೆ ರಾಹುಲ್ ಗಾಂಧಿ ಕೊಟ್ಟ ಸಂದೇಶ ʻಯಾರೇ ರಾಜೀನಾಮೆ ಕೊಟ್ಟರೂ ಅಂಗೀಕಾರ ಮಾಡಿʼ ಎನ್ನುವುದು. ಬಹುಶಃ ಇದೆಲ್ಲದರಿಂದ ತಲೆ ಕೆಟ್ಟಂತಾಗಿರುವ ಡಿಕೆ ಶಿವಕುಮಾರ್ ರಾಜೀನಾಮೆ ಕೊಟ್ಟರೆ 5 ನಿಮಿಷದಲ್ಲೇ ತೆಗೆದುಕೊಳ್ತೇನೆ ಎಂದರಾ..? ಗೊತ್ತಿಲ್ಲ.
ಆದರೆ ಸಾವಧಾನದಿಂದ ನಿಭಾಯಿಸಬಹುದಾಗಿದ್ದ ಸಮಸ್ಯೆಯೊಂದನ್ನ ಹೆದರಿಸಿ ಬೆದರಿಸಿ ನಿಭಾಯಿಸೋಕೆ ಹೊರಟಿರುವ ರೀತಿಯೇ ರಾಜಕೀಯಕ್ಕೆ ಸೂಟ್ ಆಗುತ್ತಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡೋಕೆ ಶುರು ಮಾಡಿದರೆ ಅಧಿಕಾರ ಇರುವವರೆಗೂ ಸಹಿಸಿಕೊಳ್ತಾರೆ. ಆದರೆ ಅದು ಮುಗಿಯುತ್ತಿದ್ದಂತೆ ತಿರುಗಿಬೀಳ್ತಾರೆ. ಅಧಿಕಾರ ಹೋದ ಮೇಲೆ ತಿರುಗಿಬಿದ್ದವರನ್ನು ಮತ್ತೆ ಒಲಿಸಿಕೊಳ್ಳುವುದು ಎಷ್ಟು ಕಷ್ಟ ಎನ್ನುವ ಅರಿವು ಡಿಕೆ ಶಿವಕುಮಾರ್ ಅವರಿಗೆ ಆಗಿದೆಯೋ.. ಇಲ್ಲವೋ… ಸಿದ್ದರಾಮಯ್ಯ ಅವರಿಗಂತೂ ಆಗಿದೆ. ಬಿಕೆ ಹರಿಪ್ರಸಾದ್ ಅವರಿಗಾಗಲೀ, ರಾಹುಲ್ ಗಾಂಧಿ ಅವರಿಗಾಗಲೀ ಆ ಸಮಸ್ಯೆಯ ಅನುಭವವೇ ಆಗಿಲ್ಲ. ಹೆದರಿಸಿ ಬೆದರಿಸಿ ರಾಜಕೀಯ ಮಾಡುವುದಕ್ಕೆ ಹೊರಟಿರುವ ಕಾಂಗ್ರೆಸ್, ತಲೆಯ ಮೇಲಿಂದ ಸ್ವಲ್ಪ ದೂರದಲ್ಲೇ ಇರುವ ಕಲ್ಲು ಚಪ್ಪಡಿಯನ್ನೂ ಬಾಬಾ ಎಂದು ಕರೆಯುತ್ತಿದೆ ಎಂದರೂ ತಪ್ಪಲ್ಲ.
ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ನಲ್ಲಿ ಆಂತರಿಕ ಸಂಘರ್ಷ ಭುಗಿಲೆದ್ದಿದ್ದು, ಸಚಿವ ಸ್ಥಾನ ವಂಚಿತ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. 20ಕ್ಕೂ ಹೆಚ್ಚು ಶಾಸಕರು ಪ್ರತ್ಯೇಕ ಸಭೆಗೆ ಯೋಜನೆ ರೂಪಿಸುತ್ತಿದ್ದಾರೆ. ಅಲ್ಲದೆ, ರೆಬಲ್ ಶಾಸಕರು ಹೈಕಮಾಂಡ್ ಭೇಟಿಗೂ ಚಿಂತನೆ ನಡೆಸಿದ್ದಾರೆ.
ಇಂಡಿ ಶಾಸಕ ಯಶವಂತರಾಯಗೌಡ ವಿ. ಪಾಟೀಲ್ ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿ.ಬಿ. ಜಯಚಂದ್ರ ಹಂಗಾಮಿ ಸ್ಪೀಕರ್ ಹುದ್ದೆಯನ್ನೇ ತಿರಸ್ಕರಿಸಿದ್ದಾರೆ. ಬೇಳೂರು ಗೋಪಾಲಕೃಷ್ಣ ತಣ್ಣಗಾಗಿದ್ದರೂ, ಬಹಿರಂಗವಾಗಿ ಆಡಿರುವ ಮಾತುಗಳು ಮಾಡಬೇಕಾದ ಕೆಲಸ ಮಾಡಿ ಆಗಿದೆ. ಯಶವಂತರಾಯಗೌಡ ವಿ. ಪಾಟೀಲ್, ಡಾ. ಎಚ್.ಸಿ. ಮಹದೇವಪ್ಪ, ಎಂ.ವೈ. ಗೋಪಾಲಕೃಷ್ಣ, ತನ್ವೀರ್ ಸೇಠ್, ಆರ್.ವಿ. ದೇಶಪಾಂಡೆ, ಅಪ್ಪಾಜಿ ನಾಡಗೌಡ, ಎಂ.ವೈ. ಪಾಟೀಲ್, ಕೆ. ವೆಂಕಟೇಶ್, ಎಸ್.ಆರ್. ಶ್ರೀನಿವಾಸ್, ಎಂ.ಸಿ. ಸುಧಾಕರ್, ವೆಂಕಟಶಿವಾರೆಡ್ಡಿ, ಬಸವರಾಜ ನೀಲಪ್ಪನವರ್, ರಹೀಂ ಖಾನ್, ಬಿ.ಕೆ. ಸಂಗಮೇಶ್ವರ, ಪ್ರಸಾದ್ ಅಬ್ಬಯ್ಯ, ಬೇಳೂರು ಗೋಪಾಲಕೃಷ್ಣ, ಹಂಪನಗೌಡ ಬಾದರ್ಲಿ, ಎಸ್.ಎನ್. ನಾರಾಯಣಸ್ವಾಮಿ, ಎಚ್.ಕೆ. ಪಾಟೀಲ್, ಆರ್.ಬಿ. ತಿಮ್ಮಾಪುರ, ಕೆ. ಷಡಕ್ಷರಿ ಹಾಗೂ ಕೆ.ವೈ. ನಂಜೇಗೌಡ ಸೇರಿದಂತೆ ಹಲವರು ಪ್ರತ್ಯೇಕ ಸಭೆ ನಡೆಸುವ ಸಾಧ್ಯತೆ ಇದೆ. ಈ ಮಧ್ಯೆ ಕಾರ್ಯಕರ್ತರು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿರುವುದು ಕಾಂಗ್ರೆಸ್ ಪಕ್ಷಕ್ಕೆ ಟೆನ್ಷನ್ ಸೃಷ್ಟಿಸಿದೆ.



