ರಾಜ್ಯದ ಮಹಿಳೆಯರ ಆರೋಗ್ಯ ರಕ್ಷಣೆಗೆ ಹೊಸ ಯೋಜನೆ ಘೋಷಿಸಲಾಗಿದೆ. ಆ ಯೋಜನೆಗೆ ಋತುತಾರೆ ಎಂದು ಹೆಸರು. ಆ ಸ್ಕೀಂಗೆ ನಟಿ, ಮಾಜಿ ಸಂಸದೆಯೂ ಆಗಿರುವ ರಮ್ಯಾ ರಾಯಭಾರಿಯಾಗಿದ್ದಾರೆ. ಅಂದಹಾಗೆ ಇದು ಮೆನೋಪಾಸ್‌ಗೆ ಒಳಗಾಗಿರುವ ಮಹಿಳೆಯರಿಗೆ ರೂಪಿಸಲಾಗಿರುವ ಯೋಜನೆ. ದೂರದೃಷ್ಟಿಯಿಂದ ರೂಪಿಸಲಾಗಿರುವ ಈ ಯೋಜನೆಗೆ ರಮ್ಯಾ ಅವರೇ ಬ್ರಾಂಡ್ ಅಂಬಾಸಿಡರ್. ನಟಿ ರಮ್ಯಾ ಅವರಿಗೆ ಈಗ 43 ವರ್ಷ. ಅವರನ್ನೇ ಏಕೆ ಆಯ್ಕೆ ಮಾಡಿರಬಹುದು.. ಅದಕ್ಕೆ ಕಾರಣಗಳೂ ಇವೆ. ಇಂತಾದ್ದೊಂದು ಸಮಸ್ಯೆ ಬಗ್ಗೆ ಧ್ವನಿ ಎತ್ತಿದ್ದವರೇ ರಮ್ಯಾ.
ಏನಿದು ಋತುತಾರೆ ಯೋಜನೆ..?
ಕರ್ನಾಟಕ ಸರ್ಕಾರವು ಮಹಿಳೆಯರಲ್ಲಿ ಋತುಬಂಧದ (Menopause) ಕಾಲಘಟ್ಟದಲ್ಲಿ ಉಂಟಾಗುವ ದೈಹಿಕ ಬದಲಾವಣೆಗಳು ಮತ್ತು ಮಾನಸಿಕ ಒತ್ತಡ ನಿವಾರಣೆಗಾಗಿ ‘ಋತುತಾರೆ’ ಎನ್ನುವ ನೂತನ ಆರೋಗ್ಯ ಯೋಜನೆಯನ್ನು ಘೋಷಿಸಿದೆ.
ಉದ್ದೇಶ: ಋತುಬಂಧದ ಪೂರ್ವ (Pre-menopause) ಹಾಗೂ ನಂತರದ (Post-menopause) ಹಂತಗಳಲ್ಲಿ ಮಹಿಳೆಯರು ಎದುರಿಸುವ ಆರೋಗ್ಯ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡದ ವೈಜ್ಞಾನಿಕ ನಿರ್ವಹಣೆ ಮಾಡುವುದು.
ಹೇಗೆ ಕೆಲಸ ಮಾಡುತ್ತದೆ..?
ಸ್ತ್ರೀರೋಗ ತಜ್ಞೆ ಡಾ. ಜೋತ್ಸ್ನಾ ಮಿರ್ಲೆ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಸಮಿತಿಯನ್ನು ರಚಿಸಲಾಗಿದ್ದು, ಮುಂದಿನ ಆರು ತಿಂಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ತೆರಳಿ ಮಹಿಳೆಯರ ದತ್ತಾಂಶ ಸಂಗ್ರಹಿಸಿ, ಆರೋಗ್ಯ ಜಾಗೃತಿ ಹಾಗೂ ಜೀವನಶೈಲಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
‘ಋತುತಾರೆ’ ಯೋಜನೆಯ ಮುಖ್ಯ ಕೆಲಸ ಮಹಿಳೆಯರಲ್ಲಿ ಋತುಬಂಧದ (Menopause) ಅವಧಿಯಲ್ಲಿ ಎದುರಾಗುವ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಮತ್ತು ಜಾಗೃತಿ ಮೂಡಿಸುವುದಾಗಿದೆ.
ನಟಿ ರಮ್ಯಾ ಅವರೇ ರಾಯಭಾರಿಯಾಗಿದ್ದು ಏಕೆ..?
ಭಾರತೀಯ ಸಮಾಜದಲ್ಲಿ ಋತುಬಂಧ ಅಥವಾ ಮೆನೋಪಾಸ್‌ನಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಇವತ್ತಿಗೂ ಮಹಿಳೆಯರು ಹಿಂಜರಿಯುತ್ತಾರೆ. ಮೆಡಿಕಲ್ ಸ್ಟೋರ್, ಅಂಗಡಿಗಳಲ್ಲಿ ಸ್ಯಾನಿಟರಿ ಪ್ಯಾಡ್ ಕೇಳುವಾಗಲೂ ಅಷ್ಟೆ.. ಏನೋ ಮಾಡಬಾರದ ಕೆಲಸ ಮಾಡಿದ್ದೇವೆ ಎನ್ನುವಂತೆ ಸೈಡಿಗೆ ನಿಂತು ಗುಟ್ಟು ಗುಟ್ಟಾಗಿ ನಾಚಿಕೆಯಿಂದ ಕೇಳುವವರಿಗೇನು ಕೊರತೆ ಇಲ್ಲ. ರಮ್ಯಾ ಅವರಂತಹ ಪ್ರಭಾವಿ ಮತ್ತು ಜನಪ್ರಿಯ ವ್ಯಕ್ತಿಯ ಮೂಲಕ ಮಾತನಾಡಿಸಿದರೆ, ಮಹಿಳೆಯರಲ್ಲಿರುವ ಮುಜುಗರ ದೂರವಾಗಿ ಮುಕ್ತ ಚರ್ಚೆಗಳು ಆರಂಭವಾಗುತ್ತವೆ ಎಂಬುದು ಸರ್ಕಾರದ ಉದ್ದೇಶ. ರಮ್ಯಾ ಕರ್ನಾಟಕದಲ್ಲಿ ಅಪಾರ ಜನಪ್ರಿಯತೆ ಹೊಂದಿರುವ ನಟಿ. ನಗರ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೆ ಮೆನೋಪಾಸ್‌ನ ಲಕ್ಷಣಗಳು ಮತ್ತು ಚಿಕಿತ್ಸೆಗಳ ಬಗ್ಗೆ ಸುಲಭವಾಗಿ ಅರಿವು ಮೂಡಿಸಲು ಅವರ ಜನಪ್ರಿಯತೆ (Star Value) ದೊಡ್ಡ ಮಟ್ಟದಲ್ಲಿ ನೆರವಾಗುತ್ತದೆ. ಅಷ್ಟೇ.
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಮೆನೋಪಾಸ್ ಬೇಗ ಕಾಣಿಸಿಕೊಳ್ಳುತ್ತದೆ. ಸಿಟಿಯಲ್ಲಿ ಅತಿ ಹೆಚ್ಚಿನ ಮಹಿಳೆಯರು ಮೆನೋಪಾಸ್ ಸಮಯದಲ್ಲಿ ಸಮಸ್ಯೆಯಿಂದ ಬಳಲುತ್ತಾರೆ. ಇದನ್ನು ಸಮರ್ಥವಾಗಿ ನಿಭಾಯಿಸಬೇಕು. ನಮ್ಮ ಮನವಿದೆ ಸ್ಪಂಧಿಸಿ ರಾಜ್ಯ ಸರ್ಕಾರ ಯೋಜನೆ ಜಾರಿಗೆ ತಂದಿದ್ದು ನನ್ನನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಿರುವುದು ಖುಷಿ ಇದೆ ಎಂದಿದ್ದಾರೆ ನಟಿ ರಮ್ಯಾ. ಅಂದಹಾಗೆ . ಕರ್ನಾಟಕದಲ್ಲಿ ಮೆನೋಪಾಸ್ (ಋತುಬಂಧ) ಸಮಸ್ಯೆ ಮತ್ತು ಅದಕ್ಕೊಂದು ವಿಶೇಷ ಯೋಜನೆ ಬೇಕು ಎಂದು ಮೊದಲು ಧ್ವನಿ ಎತ್ತಿ, ಸರ್ಕಾರದ ಗಮನ ಸೆಳೆದವರೇ ನಟಿ ರಮ್ಯಾ.
ರಮ್ಯಾಗೆ ಈಗ 43 ವರ್ಷ. ಮೆನೋಪಾಸ್‌ಗೆ ಹತ್ತಿರದಲ್ಲಿದ್ದಾರೆ. ರಮ್ಯಾ ಅವರು ತಮ್ಮದೇ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು (ಪೆರಿಮೆನೋಪಾಸ್ ಲಕ್ಷಣಗಳು) ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಈ ಹಂತದಲ್ಲಿ ಮಹಿಳೆಯರು ಎದುರಿಸುವ ಕಷ್ಟಗಳು ಅವರಿಗೆ ಮನವರಿಕೆಯಾಯಿತು. ಇದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆಸಿ, ಇತರ ದೇಶಗಳ ಆರೋಗ್ಯ ನೀತಿಗಳನ್ನು ಅಭ್ಯಾಸ ಮಾಡಿದರು. ಭಾರತೀಯ ಮಹಿಳೆಯರು ಜಾಗತಿಕ ಸರಾಸರಿಗಿಂತ (51 ವರ್ಷ) ಐದು ವರ್ಷ ಮುಂಚಿತವಾಗಿಯೇ, ಅಂದರೆ ಸುಮಾರು 46 ವರ್ಷಕ್ಕೆ ಮೆನೋಪಾಸ್ ತಲುಪುತ್ತಾರೆ. ಆದರೂ ಇದರ ಬಗ್ಗೆ ಯಾರಿಗೂ ಸರಿಯಾದ ಅರಿವಿಲ್ಲ ಎಂಬುದನ್ನು ಮನಗಂಡ ರಮ್ಯಾ, ಯುಟಿ ಖಾದರ್ ಅವರನ್ನು ಭೇಟಿ ಮಾಡಿದರು.
ಮೆನೋಪಾಸ್‌ನಂತಹ ಸೂಕ್ಷ್ಮ ವಿಷಯವನ್ನು ಸಚಿವರು ಯಾವುದೇ ಹಿಂಜರಿಕೆಯಿಲ್ಲದೆ ಮುಕ್ತವಾಗಿ ಆಲಿಸಿ, ತಕ್ಷಣವೇ ಒಪ್ಪಿಗೆ ಸೂಚಿಸಿದರು. ಇದರ ಫಲವಾಗಿಯೇ ಕರ್ನಾಟಕ ಆರೋಗ್ಯ ಇಲಾಖೆಯು ಇಡೀ ದೇಶದಲ್ಲೇ ಮೊದಲ ಬಾರಿಗೆ ಮೆನೋಪಾಸ್ ಅನ್ನು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಡಿ ತಂದು ‘ಋತುತಾರೆ’ ಯೋಜನೆಯನ್ನು ಜಾರಿಗೆ ತಂದಿದೆ.
ಮೆನೋಪಾಸ್ (Menopause) ಎಂದರೆ ಮಹಿಳೆಯರ ದೇಹದಲ್ಲಿ ಮುಟ್ಟು ಅಥವಾ ಋತುಚಕ್ರವು ಶಾಶ್ವತವಾಗಿ ನಿಲ್ಲುವ ಹಂತ. ಕನ್ನಡದಲ್ಲಿ ಇದನ್ನು ‘ಋತುಬಂಧ’ ಎಂದು ಕರೆಯಬಹುದು. ಮಹಿಳೆಗೆ ಸತತವಾಗಿ 12 ತಿಂಗಳುಗಳ ಕಾಲ (ಒಂದು ವರ್ಷ) ಮುಟ್ಟು ಆಗದಿದ್ದರೆ, ಆಕೆ ಮೆನೋಪಾಸ್ ಹಂತ ತಲುಪಿದ್ದಾಳೆ ಎಂದು ನಿರ್ಧರಿಸಲಾಗುತ್ತದೆ. ಭಾರತೀಯ ಮಹಿಳೆಯರಲ್ಲಿ ಸಾಮಾನ್ಯವಾಗಿ 45 ರಿಂದ 50 ವರ್ಷದ ವಯಸ್ಸಿನಲ್ಲಿ ಈ ಬದಲಾವಣೆ ಕಂಡುಬರುತ್ತದೆ.



