ಗ್ರಾಮಾಯಣ ಟ್ರೇಲರ್ ಹೊರಬಿದ್ದಿದೆ. ಸಿನಿಮಾ ಸೆಟ್ಟೇರಿ ವರ್ಷಗಳೇ ಆಗಿದ್ದವು. ಇದೀಗ ರಿಲೀಸ್ ಆಗ್ತಿರೋ ಚಿತ್ರದ ಟ್ರೇಲರ್ ನೋಡಿದರೆ ವ್ಹಾವ್ ಎನ್ನಲೇಬೇಕು. ಮೊಂಡ, ಸಿಟ್ಟಿನ ಯುವಕನಾಗಿ ವಿನಯ್ ಅಬ್ಬರಿಸಿದ್ದಾರೆ. ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವೂ ಇರುವ ಸಿನಿಮಾ ಗ್ರಾಮಾಯಣ. ಟ್ರೇಲರ್‌ನಲ್ಲಿ ಕಾಣಿಸಿರುವ ಎಲ್ಲ ಪಾತ್ರಗಳೂ ಒಂದಕ್ಕೊಂದು ಪೈಪೋಟಿ ನೀಡಿವೆ.
ಈ ಹಿಂದೆ ಎಂದೂ ಕಾಣಿಸಿಕೊಳ್ಳದ ಹಳ್ಳಿಯ ರಗಡ್ ಮತ್ತು ಮಾಸ್ ಹುಡುಗ ‘ಸೀನಾ’ ಪಾತ್ರದಲ್ಲಿ ವಿನಯ್ ರಾಜ್‌ಕುಮಾರ್ ಹೊಸ ಭರವಸೆ ಮೂಡಿಸಿದ್ದರೆ, ವಿನಯ್‌ಗೆ ಜೋಡಿಯಾಗಿ ಮೇಘಾ ಶೆಟ್ಟಿ, ಹೀರೋಗೆ ಸವಾಲು ಹಾಕುತ್ತಾರೆ. ವಿನಯ್ ಹಾಗೂ ಮೇಘಾ ಶೆಟ್ಟಿ ನಡುವಿನ ಮುದ್ದಾದ ಹಳ್ಳಿ ಪ್ರೇಮದ ತುಣುಕುಗಳು ಹಳೆಯ ಗ್ರಾಮೀಣ ರೊಮ್ಯಾಂಟಿಕ್ ಹಿಟ್ ಚಿತ್ರಗಳನ್ನು ನೆನಪಿಗೆ ತರುತ್ತವೆ. ಲೂಸ್ ಮಾದ ಯೋಗಿ ಅವರು ಚಿತ್ರದಲ್ಲಿ ಖಡಕ್ ವಿಲನ್ ಆಗಿ ಟಕ್ಕರ್ ಕೊಟ್ಟಿದ್ದಾರೆ. ಅಂದಹಾಗೆ ಇದು ಅಪರ್ಣಾ ಅವರ ಕೊನೆಯ ಸಿನಿಮಾ. ದಿವಂಗತ ನಟಿ ಹಾಗೂ ಪ್ರಸಿದ್ಧ ನಿರೂಪಕಿ ಅಪರ್ಣಾ ಅವರು ವಿನಯ್ ಅವರ ತಾಯಿಯ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ.
ದೇವನೂರು ಚಂದ್ರು ನಿರ್ದೇಶನದ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಅವರ ಹಿನ್ನೆಲೆ ಸಂಗೀತ ಹಾಗೂ ಸಂತೋಷ್ ರೈ ಪಾತಾಜೆ ಕ್ಯಾಮೆರಾ ಕೆಲಸ ಚೇತೋಹಾರಿ ಅನುಭವ ನೀಡುತ್ತದೆ. ಗೋಪಾಲಕೃಷ್ಣ ದೇಶಪಾಂಡೆ, ಅಚ್ಯುತ್ ಕುಮಾರ್ ವಿಲನ್ ಪಾತ್ರದಲ್ಲಿ ತಣ್ಣನೆಯ ಕ್ರೌರ್ಯವನ್ನು ಕಣ್ಣಲ್ಲೇ ದಾಟಿಸಿದರೆ, ಅಪರ್ಣಾ ತನ್ನ ಅಭಿನಯದ ತಾಕತ್ತಿನ ಅನಾವರಣ ಮಾಡಿದ್ದಾರೆ. ಆದರೆ ಅಪರ್ಣಾ ಪಾತ್ರಕ್ಕೆ ಬೇರೆ ಯಾರೋ ಡಬ್ ಮಾಡಿದ್ದಾರೆ. ಅಪರ್ಣಾ ಅವರ ಧ್ವನಿಯ ಗತ್ತು ಗೈರತ್ತು ನೋಡಿರುವ ಕನ್ನಡಿಗರಿಗೆ ಇದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ವಿನಯ್ ಪಾತ್ರದ ಹೆಸರು ಸಿಕ್ಸ್ತ್ ಸೆನ್ಸ್ ಸೀನ, ಮೇಘಾ ಶೆಟ್ಟಿಯ ಪಾತ್ರದ ಹೆಸರು ಕುಸುಮ. ಚಿತ್ರವನ್ನು ಪ್ರಖ್ಯಾತ ಸಂಸ್ಥೆಗಳಾದ ಲಹರಿ ಫಿಲಂಸ್ (Lahari Films) ಮತ್ತು ವೇನಸ್ ಎಂಟರ್‌ಟೈನರ್ಸ್ (Venus Entertainers) ಜಂಟಿಯಾಗಿ ಭಾರಿ ವೆಚ್ಚದಲ್ಲಿ ನಿರ್ಮಿಸಿವೆ.
ಚಿತ್ರದ ಟ್ರೇಲರ್ ಮತ್ತು ಈ ಹಿಂದಿನ ಟೀಸರ್, ಹಾಡುಗಳನ್ನೆಲ್ಲ ನೋಡಿದರೆ ಹಳ್ಳಿಯ ದೇವಾಲಯ ಮತ್ತು ಜಮೀನಿನ ವಿಷಯವಾಗಿ ಸ್ಥಳೀಯ ವಿಲನ್ ಲೂಸ್ ಮಾದ ಯೋಗಿ ಮುಖಾಮುಖಿಯಾಗುತ್ತಾರೆ. ದುಷ್ಟ ಶಕ್ತಿಗಳಿಂದ ತನ್ನ ಊರು, ಭೂಮಿ ಮತ್ತು ಜನರನ್ನು ಸೀನಾ ತನ್ನ ಬುದ್ಧಿವಂತಿಕೆ ಹಾಗೂ ಸಾಹಸದಿಂದ ಹೇಗೆ ರಕ್ಷಿಸುತ್ತಾನೆ ಎಂಬ ಕಥೆ ಇದೆ. ಇದರ ಮಧ್ಯೆ ಸೀನಾ ಮತ್ತು ಕುಸುಮರ ಲವ್ ಸ್ಟೋರಿ, ಸೀನನ ಜೀವನದಲ್ಲಿ ಬರುವ ಪ್ರೀತಿ ಮೇಘಾ ಶೆಟ್ಟಿ, ತಾಯಿಯೊಂದಿಗಿನ ಭಾವನಾತ್ಮಕ ಬಂಧಗಳ ತೊಳಲಾಟವೂ ಇದೆ. ತೀಕ್ಷ್ಣ ಬುದ್ಧಿವಂತಿಕೆ ಮತ್ತು ಚುರುಕಾದ ಆಲೋಚನೆಗಳಿರುವ ಸಿಕ್ಸ್ತ್ ಸೆನ್ಸ್ ಸೀನನ ನೆಮ್ಮದಿ ಕೆಡಿಸಲು ಅಚ್ಯುತ್ ಮತ್ತು ಗೋಪಾಲ ಕೃಷ್ಣ ದೇಶಪಾಂಡೆ ಪಾತ್ರಗಳ ಸಂಚು ಎಲ್ಲವೂ ಇದೆ. ‘ಗ್ರಾಮಾಯಣ’ ಟ್ರೇಲರ್ ಹೆಸರಿಗೆ ತಕ್ಕಂತೆ ಪಕ್ಕಾ ಹಳ್ಳಿಯ ಕತೆಯನ್ನು ಒಳಗೊಂಡಿದ್ದು, ಪ್ರೀತಿ, ಪ್ರೇಮ, ದ್ವೇಷ, ರಾಜಕೀಯ, ಅಸೂಯೆ, ಕುಟುಂಬ, ಶ್ರದ್ಧೆ, ಭಕ್ತಿ ಎಲ್ಲವನ್ನೂ ಒಳಗೊಂಡ ಪ್ಯಾಕೇಜಿನಂತೆ ಭಾಸವಾಗುತ್ತಿದೆ. ತಮಿಳಿನ ವೆಟ್ರಿಮಾರನ್ ಶೈಲಿಯ ಸಿನಿಮಾಗಳು ನೆನಪಾಗುತ್ತವೆ.



