ಒಬ್ಬ ನಿರ್ದೇಶಕ. ಹೆಸರು ಪ್ರಕಾಶ್ ರಾಜ್ ಮೆಹು. ಡಾ.ರಾಜ್ ಕುಟುಂಬಕ್ಕೆ ಆಪ್ತರಂತೆ. ಇತ್ತೀಚೆಗೆ ಫೇಸ್`ಬುಕ್‍ನಲ್ಲಿ ಬರೆದುಕೊಂಡಿದ್ದರು. ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ. ಅದಕ್ಕೆ ಸಂಬಂಧಪಟ್ಟ ದಾಖಲೆ, ಸಾಕ್ಷಿಗಳೂ ಇವೆ ಎಂದು ಹೇಳಿ, ಅವುಗಳನ್ನು ಬಹಿರಂಗಪಡಿಸಿದ್ದರು. ವಿನೋದ್ ರಾಜ್ ಅವರಿಗೆ ಮದುವೆಯಾಗಿಲ್ಲ ಎಂಬ ಸುದ್ದಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದರು. ಲೀಲಾವತಿ ಅವರ ಫ್ಯಾಮಿಲಿ ಫೋಟೋ ಶೇರ್ ಮಾಡಿ, ಫೋಟೋದಲ್ಲಿ ಇರುವವರು ವಿನೋದ್ ರಾಜ್ ಪತ್ನಿ ಮತ್ತು ಪುತ್ರ ಎಂದಿದ್ದರು. ಯುವರಾಜ್.ವಿ ಎಂಬುವರ ಮಾರ್ಕ್ಸ್ ಕಾರ್ಡ್ ಅನ್ನೂ ಶೇರ್ ಮಾಡಿ ಮಾರ್ಕ್ಸ್ ಕಾರ್ಡ್ನಲ್ಲಿ ತಂದೆ/ಗಾರ್ಡಿಯನ್ ಸ್ಥಾನದಲ್ಲಿ ವಿನೋದ್ ರಾಜ್.ಎಂ.ಎಲ್ ಮತ್ತು ತಾಯಿಯ ಸ್ಥಾನದಲ್ಲಿ ಅನು.ಬಿ ಎಂಬ ಉಲ್ಲೇಖವಿದೆ. ವಿನೋದ್ ರಾಜ್ ಇನ್ಷಿಯಲ್ ಎಂ.ಎಲ್. ಎಂಬುದನ್ನೂ ಒತ್ತಿ ಹೇಳುವ ಮೂಲಕ ಮತ್ತೊಂದು ವಿವಾದಕ್ಕೆ ಅಂತ್ಯ ಹಾಡುವ ಪ್ರಯತ್ನವನ್ನೂ ಮಾಡಿದ್ದರು. ಅದನ್ನು ಲೀಲಾವತಿ ಒಪ್ಪಿಕೊಂಡರೂ ಕೂಡಾ.
ಹೌದು, ಮಗನಿಗೆ ಮದುವೆ ಮಾಡಿದ್ದೀನಿ. ನಾನೇ ಇಷ್ಟ ಪಟ್ಟು ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿದ್ದೆ. ಯಾಕೆ ಹೇಳಲಿಲ್ಲ ಅಂದ್ರೆ, ಎಂತೆಂಥವರ ಮದುವೆಯೆಲ್ಲಾ ಆ ಹಾಲ್ನಲ್ಲಿ, ಈ ಹಾಲ್ನಲ್ಲಿ, ಪ್ಯಾಲೇಸ್ನಲ್ಲಿ ಮಾಡಿದ್ದಾರೆ. ನನಗೆ ಅವತ್ತು ಆ ಚೈತನ್ಯ ಇರಲಿಲ್ಲ. ಅದನ್ನ ರಹಸ್ಯವಾಗಿ ಇಡೋದೇ ಒಳ್ಳೆಯದ್ದು ಅಂತ ನನಗೆ ಅನಿಸಿತು. ಅವನೇನು ಹುಡುಗಿ ಅಲ್ಲ.. ಕದ್ದು ಬಸುರಿಯಾಗಿ ಮದುವೆ ಮಾಡಿಸಿದೆ ಅನ್ನೋಕೆ. ಪವಿತ್ರವಾಗಿ ಇದ್ದಾನೆ. ನನಗೆ ಒಳ್ಳೆಯ ಮಗನಾಗಿ ಇದ್ದಾನೆ ಎಂದು ಹೇಳಿಕೊಂಡಿದ್ದರು ಲೀಲಾವತಿ.


ಸಾಮರ್ಥ್ಯ ಇದ್ದರೆ ಉಲ್ಟಾ ಮಾತನಾಡಿ ನೋಡಲಿ.. ಲೀಲಾವತಿ, ವಿನೋದ್ ರಾಜ್ ಬಗ್ಗೆ ಹೆಚ್ಚು ಕಮ್ಮಿ ಏನಾದರೂ ಮಾತನಾಡಿದರೆ ಅದರ ಪರಿಸ್ಥಿತಿ, ಪರಿಣಾಮ ಏನಾಗಬಹುದು ಅಂತ ಪ್ರತಿಯೊಬ್ಬರಿಗೂ ಅರ್ಥವಾಗಬೇಕು. ನಮಗೇನೂ ಬೇಕಾಗಿಲ್ಲ. ನಾವು ಸಿನಿಮಾ ಮಾಡಲ್ಲ. ಇದೆಲ್ಲಾ ಯಾಕೆ? ಎಂದು ವಿನೋದ್ ರಾಜ್ ಪ್ರಶ್ನಿಸಿದ್ದಾರೆ.





