ಕನ್ನಡಿಗರ ಕುಳ್ಳ, 50ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಾಣ ಮಾಡಿದ ನಿರ್ಮಾಪಕ, ನಟ, ನಿರ್ದೇಶಕ ದ್ವಾರಕೀಶ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಬೆಂಗಳೂರು ವಿಶ್ವವಿದ್ಯಾಲಯದ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಜ್ಞಾನಜ್ಯೋತಿ ಆಡಿಟೋರಿಯಂ ನಲ್ಲಿ ನಡೆದ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೊಟ್ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ವಿಶ್ವವಿದ್ಯಾಲಯದ ಅನುದಾನ ಆಯೋಗದ ಅಧ್ಯಕ್ಷ ಪ್ರೊ.ಎಂ.ಜಗದೀಶ್, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಭಾಗವಹಿಸಿದ್ರು. ಘಟಿಕೋತ್ಸವದಲ್ಲಿ ಚಿತ್ರ ನಟ ದ್ವಾರಕೀಶ್, ಖ್ಯಾತ ಕಲಾವಿದ ಅಮರನಾಥ್ ಗೌಡ, ಸಮಾಜ ಸೇವಕ ಡಾ.ಟಿ. ಅನಿಲ್ ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.

ದ್ವಾರಕೀಶ್ ನಟರಾಗಿ, ನಿರ್ದೇಶಕರಾಗಿ ನಿರ್ಮಾಪಕರಾಗಿ ಗೆದ್ದವರು. ಡಾ.ರಾಜ್ ಅವರ ಮೇಯರ್ ಮುತ್ತಣ್ಣ ಚಿತ್ರದ ಮೂಲಕ ಪರಿಪೂರ್ಣ ನಿರ್ಮಾಪಕರಾದ ದ್ವಾರಕೀಶ್, ನೀ ಬರೆದ ಕಾದಂಬರಿ ಮೂಲಕ ನಿರ್ದೇಶಕರಾಗಿಯೂ ಗೆದ್ದರು. ಕುಳ್ಳ ಏಜೆಂಟ್ 000 ಮೂಲಕ ಹೀರೋ ಆಗಿಯೂ ಗೆದ್ದು ಸ್ಟಾರ್ ಆದರು. ವಿಷ್ಣುವರ್ಧನ್-ದ್ವಾರಕೀಶ್ ಜೋಡಿಯ ಚಿತ್ರಗಳು ಕಳ್ಳ-ಕುಳ್ಳ ಜೋಡಿಯೆಂದೇ ಫೇಮಸ್. ವಿದೇಶದಲ್ಲಿ ಶೂಟಿಂಗ್ ಮಾಡಿದ ಮೊದಲ ಸಿನಿಮಾ ದ್ವಾರಕೀಶ್ ಅವರದ್ದು. ಸಂಪೂರ್ಣವಾಗಿ ವಿದೇಶದಲ್ಲಿ ಚಿತ್ರೀಕರಿಸಿ ಪ್ಯಾನ್ ಇಂಡಿಯಾ ಸಿನಿಮಾ ಕಾನ್ಸೆಪ್ಟ್ ಮಾಡಿದ್ದ ದ್ವಾರಕೀಶ್, ಕನ್ನಡಕ್ಕೆ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದವರು. 




