ತೆಲುಗಿನ ಸೂಪರ್ ಸ್ಟಾರ್ ನಟ ಮಹೇಶ್ ಬಾಬುಗೆ ಒಂದೇ ವರ್ಷ ಮೇಲಿಂದ ಮೇಲೆ ಆಘಾತ. ಒಂದೇ ವರ್ಷದಲ್ಲಿ ತಾಯಿ, ಅಣ್ಣನನ್ನು ಕಳೆದುಕೊಂಡಿದ್ದ ಮಹೇಶ್ ಬಾಬು ಈಗ ತಂದೆಯನ್ನೂ ಕಳೆದುಕೊಂಡಿದ್ದಾರೆ. ದಕ್ಷಿಣ ಭಾರತದ ಮೊದಲ ಸೂಪರ್ ಸ್ಟಾರ್ ಎನಿಸಿಕೊಂಡಿದ್ದ ನಟ ಕೃಷ್ಣ ನಿಧನರಾಗಿದ್ದಾರೆ. ವಯಸ್ಸಿನ್ನೂ 79 ವರ್ಷ. ಬೆಳಗಿನಜಾವ ಅವರಿಗೆ ಲಘು ಹೃದಯಾಘಾತ ಸಂಭವಿಸಿತ್ತು. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ನಿಗಾ ಘಟಕದಲ್ಲಿ ಇರಿಸಿ, ಕೃಷ್ಣ ಅವರ ಆರೋಗ್ಯದ ಬಗ್ಗೆ ಕಾಳಜಿವಹಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಕೃಷ್ಣ ಅವರು ಮಂಗಳವಾರ ಬೆಳಗ್ಗೆ 4 ಗಂಟೆ ಸುಮಾರಿಗೆ ನಿಧನರಾಗಿದ್ದಾರೆ.
ಮಹೇಶ್ ಬಾಬು ಅವರ ಸಹೋದರ ರಮೇಶ್ ಬಾಬು. ಇದೇ ವರ್ಷ ಅವರು ನಿಧನರಾಗಿದ್ದರು. ರಮೇಶ್ ಬಾಬು ಕೂಡಾ ಚಿತ್ರರಂದಲ್ಲಿದ್ದರೂ ತಂದೆ, ತಾಯಿ, ತಮ್ಮನಿಗೆ ಸಿಕ್ಕಷ್ಟು ಯಶಸ್ಸು ಸಿಕ್ಕಿರಲಿಲ್ಲ. ಜನವರಿ 8ರಂದು ರಮೇಶ್ ಬಾಬು ನಿಧನರಾಗಿದ್ದರು. ಅದು ಮಹೇಶ್ ಬಾಬು ಅವರಿಗೆ ಮೊದಲ ಆಘಾತ.
ಅದಾದ ನಂತರ ಮಗನ ಸಾವಿನ ದುಃಖದಲ್ಲಿಯೇ ತಾಯಿ ಇಂದಿರಾ ದೇವಿ ಕೂಡಾ ನಿಧನರಾದರು. ಅದು ಆಗಿದ್ದು ಸೆಪ್ಟೆಂಬರ್ 28ರಂದು. ಈಗ ತಂದೆ ಕೃಷ್ಣ ನಿಧನರಾಗಿದ್ದಾರೆ. ಎರಡೇ ತಿಂಗಳ ಅವಧಿಯಲ್ಲಿ ತಾಯಿ ತಂದೆ ಇಬ್ಬರನ್ನೂ ಕಳೆದುಕೊಂಡಿದ್ದಾರೆ ಮಹೇಶ್ ಬಾಬು. ಅಣ್ಣ ರಮೇಶ್ ಬಾಬು ಅವರನ್ನೂ ಕೂಡಾ ಅಷ್ಟೆ. ತಂದೆ ತಾಯಿಯ ಬ್ಯುಸಿ ಶೆಡ್ಯೂಲ್‍ನಲ್ಲಿ ತಮ್ಮನ್ನು ನೋಡಿಕೊಂಡಿದ್ದ ಅಣ್ಣನ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದರು ಮಹೇಶ್ ಬಾಬು. ಕೃಷ್ಣ ನಿಧನಕ್ಕೆ ಇಡೀ ಚಿತ್ರರಂಗ ಕಣ್ಣೀರು ಹಾಕುತ್ತಿದೆ. ಚಿತ್ರರಂಗದ ಎಲ್ಲರೂ ಮಹೇಶ್ ಬಾಬು ಮತ್ತವರ ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ.



