ಕರ್ನಾಟಕದಲ್ಲಿ ಬಿಜೆಪಿ ಹಣೆಬರಹ ಬದಲಾಗುತ್ತಿಲ್ಲ. ವಿಜಯೇಂದ್ರ ಅಧ್ಯಕ್ಷರಾಗುವುದಕ್ಕೆ ಮುನ್ನ ಮತ್ತು ಈಗ, ಬಿಜೆಪಿಯಲ್ಲಿ ಯಾವುದೇ ಚೇಂಜ್ ಕಾಣಿಸುತ್ತಿಲ್ಲ. ಯಡಿಯೂರಪ್ಪ ಮ್ಯಾಜಿಕ್ ಮಾಡುತ್ತಾರೆ ಎಂದು ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ ಕೊಟ್ಟು 2 ವರ್ಷ ಕಳೆದು ಹೋಗಿದೆ. 2023ರ ನವೆಂಬರ್ 10 ರಿಂದಲೂ ಅಧ್ಯಕ್ಷರಾಗಿರುವ ವಿಜಯೇಂದ್ರ, ಪಕ್ಷದ ಕೆಲಸಗಳಿಗಿಂತ ಹೆಚ್ಚಾಗಿ ತಮ್ಮ ವಿರುದ್ಧ ನಿಂತಿರುವ ನಾಯಕರನ್ನು ಸಂಭಾಳಿಸುವುದೇ ಆಗಿದೆ. ಇದೀಗ ಅವರು ಬದಲಾಗಬಹುದು ಎಂಬ ಸೂಚನೆ ಬಂದಿದೆ. ಸುಳಿವು ಕೊಟ್ಟಿರುವುದು ರಾಧಾ ಮೋಹನ್. ಬಿಜೆಪಿ ರಾಜ್ಯ ಉಸ್ತುವಾರಿ. ವಿಜಯೇಂದ್ರ ಅಧಿಕಾರದ ಅವಧಿ ಮುಗಿಯುತ್ತಾ ಬಂದಿದೆ ಎನ್ನುವ ಸುಳಿವು ಕೊಟ್ಟಿದ್ದಾರೆ.
ರಾಜ್ಯಾಧ್ಯಕ್ಷ ಸ್ಥಾನದ ಗೊಂದಲ ಸುದೀರ್ಘವಾಗಿ ಮುಂದುವರೆದಿದೆ, ಯಾವಾಗ ಬಗೆಹರಿಯಬಹುದು ಎಂಬ ಪ್ರಶ್ನೆಗೆ ಶೀಘ್ರದಲ್ಲೇ ಈ ಎಲ್ಲ ಗೊಂದಲಕ್ಕೆ ತೆರೆ ಬೀಳಲಿದೆ. ಯಾವುದೇ ಕ್ಷಣದಲ್ಲಿ ಹೈಕಮಾಂಡ್‌ನಿಂದ ನಿರ್ಣಯ ಪ್ರಕಟವಾಗುವ ಸಾಧ್ಯತೆಯಿದೆ ಎಂದಿದ್ದಾರೆ ರಾಧಾ ಮೋಹನ್. ಕನ್ನಡಪ್ರಭದ ಜೊತೆ ಮಾತನಾಡಿರುವ ರಾಧಾ ಮೋಹನ್ ಯಾವುದೇ ಕ್ಷಣದಲ್ಲಾದರೂ ನೂತನ ಅಧ್ಯಕ್ಷರ ನೇಮಕ ಆಗಬಹುದು ಎಂದು ಹೇಳಿದ್ಧಾರೆ.
ರಾಜ್ಯಾಧ್ಯಕ್ಷರ ನೇಮಕ ರಾಷ್ಟ್ರೀಯ ಅಧ್ಯಕ್ಷರ ಅಧಿಕಾರ ವ್ಯಾಪ್ತಿಯ ವಿಷಯ. ರಾಜ್ಯ ರಾಜಕೀಯ ಬೆಳವಣಿಗೆಗಳು ಮತ್ತು ನಾಯಕತ್ವ ಬದಲಾವಣೆ ಬಗ್ಗೆ ಪಕ್ಷದ ಕೇಂದ್ರ ನಾಯಕರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆ ಸಮಯ ಈಗ ಸಮೀಪಿಸಿದೆ ಎಂದಿರುವ ರಾಧಾ ಮೋಹನ್, ಪಕ್ಷದ ನಿರ್ಧಾರ ವಿಳಂಬವಾಗಿಲ್ಲ ಎಂದು ಸಮರ್ಥಿಸಿಕೊಂಡಿದ್ಧಾರೆ.
ಯತ್ನಾಳ್ ಅವರನ್ನು ಉಚ್ಚಾಟನೆ ಮಾಡುವ ಮೊದಲು ಅವರ ಜೊತೆ ಸುಮಾರು 10 ಗಂಟೆ ಕಾಲ ಮಾತನಾಡಿದ್ದೆವು. ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರ ಅಲ್ಲ ಎಂದಿರುವ ರಾಧಾ ಮೋಹನ್ ಪಕ್ಷ ಆಂತರಿಕವಾಗಿ ಗಟ್ಟಿಯಾಗಿದೆ. ನಿರ್ಣಯಗಳನ್ನು ಕೈಗೊಳ್ಳುವುದು ವಿಳಂಬವಾಗುವುದರಿಂದ ಸಂಘಟನೆ ಕುಸಿಯುವುದಿಲ್ಲ ಎಂದಿದ್ಧಾರೆ.
ನಳಿನ್ ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಮುಗಿದ ನಂತರ, ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ವರಿಷ್ಠರು ವಿಜಯೇಂದ್ರ ಅವರಿಗೆ ರಾಜ್ಯ ಬಿಜೆಪಿಯ ಚುಕ್ಕಾಣಿ ನೀಡಿದರು. ಲಿಂಗಾಯತ ಸಮುದಾಯದ ಪ್ರಮುಖ ಯುವ ನಾಯಕರಾಗಿರುವ ಇವರ ನೇಮಕಾತಿಯು ಪಕ್ಷದ ಸಾಂಪ್ರದಾಯಿಕ ಮತಬ್ಯಾಂಕ್ ಅನ್ನು ಬಲಪಡಿಸುವ ಉದ್ದೇಶವನ್ನು ಹೊಂದಿತ್ತು. ವಿಜಯೇಂದ್ರ ಅವರಿಗೆ ತಂದೆ ಯಡಿಯೂರಪ್ಪನವರ ಹೆಸರೇ ದೊಡ್ಡ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ವಿಜಯೇಂದ್ರ ಅವರ ಹೆಸರು ಮುನ್ನೆಲೆಗೆ ಬಂದಿದ್ದು 2019ರಲ್ಲಿ. ಕಾನೂನು ಪದವೀಧರರಾಗಿರುವ ವಿಜಯೇಂದ್ರ, ಪಕ್ಷದಲ್ಲಿ ಈ ಹಿಂದಿನಿಂದಲೂ ಕೆಲಸ ಮಾಡಿದ್ಧಾರೆ. 2019 ರಿಂದ 2023 ರವರೆಗೆ ಕರ್ನಾಟಕ ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ವಿಜಯೇಂದ್ರ, ಅದಕ್ಕೂ ಮೊದಲು ಭಾರತೀಯ ಜನತಾ ಯುವ ಮೋರ್ಚಾ (BJYM) ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆದರೆ ಯಡಿಯೂರಪ್ಪ ಅವರು ಅಧಿಕಾರದಿಂದ ಕೆಳಗಿಳಿದ ನಂತರ ವಿಜಯೇಂದ್ರ ವಿರುದ್ಧ ದೊಡ್ಡ ಬಂಡಾಯವೇ ಸೃಷ್ಟಿಯಾಯ್ತು.
ಬಿಜೆಪಿ ಗೆ ವಲಸೆ ಬಂದ ಯತ್ನಾಳ್ (ಒಮ್ಮೆ ಜೆಡಿಎಸ್‌ಗೆ ಹೋಗಿ ಬಂದವರು) , ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಮೊದಲಾದವರು, ಬಿಜೆಪಿಯಲ್ಲಿಯೇ ಹುಟ್ಟಿ ಬೆಳೆದ ಅರವಿಂದ ಲಿಂಬಾವಳಿ, ಸಿಟಿ ರವಿ, ಪ್ರತಾಪ್ ಸಿಂಹ ಅವರಂತಹ ನಾಯಕರು.. ಒಮ್ಮೊಮ್ಮೆ ಬಹಿರಂಗವಾಗಿ, ಕೆಲವೊಮ್ಮೆ ಅಂತರಂಗದಲ್ಲಿ ವಿಜಯೇಂದ್ರ ವಿರುದ್ಧವೇ ನಿಂತರು. ಜಿಎಂ ಸಿದ್ದೇಶ್ವರ್, ಬಿಪಿ ಹರೀಶ್.. ಹೀಗೆ ಹಲವರು ಆಕ್ರೋಶಗೊಂಡಿದ್ದರೆ, ಅವರಿಗೆ ಬಸವರಾಜ ಬೊಮ್ಮಾಯಿ, ಆರ್ ಅಶೋಕ್ ಅವರಂತಹ ನಾಯಕರು ಒಳಗೊಳಗೇ ಕುಮ್ಮಕ್ಕು ನೀಡಿದ್ದು ಹೊಸದೇನಲ್ಲ. ಇದರ ನಡುವೆ ಬಹಿರಂಗವಾಗಿ ಎಚ್ಚರಿಕೆ ನೀಡುತ್ತಿದ್ದರೂ, ಅಂತರಂಗದಲ್ಲಿ ಮಾರ್ಗದರ್ಶನ ಮಾಡಿದ ಡಿವಿ ಸದಾನಂದ ಗೌಡರಂತಹ ನಾಯಕರೂ ಇದ್ದರು. ಒಟ್ಟಿನಲ್ಲಿ ವಿಜಯೇಂದ್ರ ಅವರ ಅಧಿಕಾರದ ಅವಧಿ ಮುಗಿಯುತ್ತಾ ಬಂದಿದೆ.



