ಕಣ್ಣುಗಳಿಗೆ ಕನ್ನಡಕ ಧರಿಸುವುದಕ್ಕೆ ಕೆಲವರಿಗೆ ಕಿರಿಕಿರಿಯಾಗುತ್ತದೆ. ಕಾಂಟ್ಯಾಕ್ಟ್ ಲೆನ್ಸ್ ಹಾಕ್ಕೊಂಡ್ರೆ ಕಣ್ಣೂ ಚೆನ್ನಾಗಿ ಕಾಣುತ್ತದೆ. ಕನ್ನಡಕದ ಕಿರಿಕಿರಿ ಇರುವುದಿಲ್ಲ ಎನ್ನುವವರಿಗೆ ಒಂದು ಎಚ್ಚರಿಕೆ ಏನೆಂದರೆ.. ಕಾಂಟ್ಯಾಕ್ಟ್ ಲೆನ್ಸ್ ಎಲ್ಲರಿಗೂ ಅಲ್ಲ. ಎಲ್ಲ ಪ್ರದೇಶಗಳಿಗೂ ಅಲ್ಲ. ಕಾಂಟ್ಯಾಕ್ಟ್ ಲೆನ್ಸ್ ಹಾಕ್ಕೊಂಡು ಇಂತಹ ತಪ್ಪುಗಳನ್ನು ಮಾಡುತ್ತ ಹೋದರೆ, ಯಾಮಾರಿದರೆ ಕಣ್ಣೇ ಹೋಗಬಹುದು. ಲೆನ್ಸ್ ಹಾಕಿಕೊಂಡವರು ವಹಿಸಬೇಕಾದ ಮುನ್ನೆಚ್ಚರಿಕೆಗಳು ಗಂಭೀರವಾಗಿಯೇ ಇವೆ.
ಲೆನ್ಸ್ ಹಾಕಿಸಿಕೊಂಡವರು ಅವುಗಳ ಆರೈಕೆಯಲ್ಲಿ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಕಾಂಟ್ಯಾಕ್ಟ್ ಲೆನ್ಸ್ (Contact Lens) ಬಳಸುವವರು ಸ್ವಚ್ಛತೆ ಮತ್ತು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಬ್ಯಾಕ್ಟೀರಿಯಾ, ವೈರಸ್ ಹಾಗೂ ಅಪಾಯಕಾರಿ ಪರಾವಲಂಬಿಗಳು (Parasites) ಕಣ್ಣಿಗೆ ಪ್ರವೇಶಿಸಿ ದೃಷ್ಟಿಗೆ ಶಾಶ್ವತ ಹಾನಿ ಉಂಟುಮಾಡಬಹುದು.
ಕೊಳಕು ನೀರು, ಧೂಳಿನಲ್ಲಿ ಕೆಲಸ ಮಾಡುತ್ತಿದ್ದರೆ..
ಧೂಳಿನ ವಾತಾವರಣದಲ್ಲಿ ಕೆಲಸ ಮಾಡುವವರು ಕಾಂಟ್ಯಾಕ್ಟ್ ಲೆನ್ಸ್ ಧರಿಸುವುದನ್ನು ಸಾಧ್ಯವಾದಷ್ಟು ತಪ್ಪಿಸುವುದು ಸೂಕ್ತ. ಧೂಳಿನ ಕಣಗಳು ಲೆನ್ಸ್‌ನ ಕೆಳಗೆ ಸಿಲುಕಿದರೆ ಕಣ್ಣಿನ ಮೇಲ್ಮೈಗೆ (Cornea) ಗೀರು ಬಿದ್ದು, ಗಂಭೀರ ಸೋಂಕು ಅಥವಾ ದೃಷ್ಟಿ ದೋಷ ಉಂಟಾಗಬಹುದು. ಒಂದು ವೇಳೆ ಧರಿಸಲೇಬೇಕಾದ ಅನಿವಾರ್ಯತೆ ಇದ್ದರೆ, ಲೆನ್ಸ್ ಧರಿಸಿದ ಮೇಲೆ ಧೂಳು ಕಣ್ಣಿಗೆ ಹೋಗದಂತೆ ತಡೆಯಲು ಸಂಪೂರ್ಣವಾಗಿ ಮುಚ್ಚಿದ ಜೀರೋ ಪವರ್ ಪ್ರೊಟೆಕ್ಟಿವ್ ಗ್ಲಾಸ್ ಧರಿಸಿ. ಪ್ರತಿದಿನ ಹೊಸ ಲೆನ್ಸ್ ಧರಿಸಿ, ಸಂಜೆ ಎಸೆಯುವ (Daily Disposable) ಲೆನ್ಸ್‌ಗಳನ್ನು ಬಳಸಿ. ಇದರಿಂದ ಧೂಳು ಸಂಗ್ರಹವಾಗುವ ಅಪಾಯ ಕಡಿಮೆ ಇರುತ್ತದೆ. ಕಣ್ಣು ಒಣಗದಂತೆ ಮತ್ತು ಧೂಳಿನ ಕಣಗಳು ಹೊರಹೋಗಲು ವೈದ್ಯರು ಶಿಫಾರಸು ಮಾಡಿದ (Eye Drops) ಬಳಸಿ. ಕಣ್ಣಿನಲ್ಲಿ ಅತಿಯಾದ ಕಿರಿಕಿರಿ, ಉರಿ ಅಥವಾ ಕೆಂಪಾಗುವಿಕೆ ಕಂಡುಬಂದರೆ ತಕ್ಷಣವೇ ಲೆನ್ಸ್ ತೆಗೆದು ಸ್ವಚ್ಛಗೊಳಿಸಿ ಅಥವಾ ಬಿಸಾಡಿ.
ಮೇಕಪ್ ಮಾಡಿಕೊಳ್ಳುವಾಗ..
ಮುಖಕ್ಕೆ ಯಾವುದೇ ಕ್ರೀಮ್ ಅಥವಾ ಮೇಕಪ್ ಹಚ್ಚುವ ಮುನ್ನವೇ ಲೆನ್ಸ್ ಧರಿಸಬೇಕು. ಲೆನ್ಸ್ ಮುಟ್ಟುವ ಮುನ್ನ ಕೈಗಳನ್ನು ಸಾಬೂನಿನಿಂದ ತೊಳೆದು, ಸಂಪೂರ್ಣವಾಗಿ ಒಣಗಿಸಿಕೊಳ್ಳಬೇಕು. ಕಣ್ಣಿನ ಒಳಗಿನ ಅಂಚಿಗೆ (Waterline) ಕಾಡಿಗೆ ಅಥವಾ ಲೈನರ್ ಹಚ್ಚಬೇಡಿ. ರೆಪ್ಪೆಗೂದಲಿನ ಹೊರಭಾಗಕ್ಕೆ ಮಾತ್ರ ಹಚ್ಚಿ. ಕಣ್ಣಿನ ಹತ್ತಿರ ಪೌಡರ್ ಬಳಸುವಾಗ ಕಣ್ಣುಗಳನ್ನು ಮುಚ್ಚಿಕೊಳ್ಳಿ, ಇಲ್ಲದಿದ್ದರೆ ಪೌಡರ್ ಕಣಗಳು ಲೆನ್ಸ್ ಒಳಗೆ ಹೋಗಬಹುದು. ಮೇಕಪ್ ತೆಗೆಯುವಾಗಲೂ ಅಷ್ಟೇ.. ಮೇಕಪ್ ಕ್ಲೀನ್ ಮಾಡುವ ಮುನ್ನವೇ ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಕಣ್ಣಿನಿಂದ ಹೊರಗೆ ತೆಗೆಯಬೇಕು. ನಂತರ ಮೇಕಪ್ ರಿಮೂವ್ ಮಾಡಬೇಕು.
ಲೆನ್ಸ್ ಬಳಸುವವರು.. ಲೆನ್ಸ್ ಮುಟ್ಟುವ ಮುನ್ನ ಕೈಗಳನ್ನು ಸಾಬೂನಿನಿಂದ ತೊಳೆದು, ಒಣಗಿಸಿಕೊಳ್ಳಬೇಕು. ನಲ್ಲಿ ನೀರು ಅಥವಾ ಉಗುಳು ಬಳಸಿ ಲೆನ್ಸ್ ತೊಳೆಯಬಾರದು. ಲೆನ್ಸ್ ಸ್ವಚ್ಛಗೊಳಿಸಲು ವೈದ್ಯರು ಶಿಫಾರಸು ಮಾಡಿದ ದ್ರಾವಣವನ್ನು (Solution) ಮಾತ್ರ ಬಳಸಿ, ಪ್ರತಿ ಬಾರಿ ತಾಜಾ ಸಲ್ಯೂಷನ್ ಹಾಕಿ. ಲೆನ್ಸ್ ಧರಿಸಿ ಎಂದಿಗೂ ಮಲಗಬೇಡಿ, ಸ್ನಾನ ಮಾಡಬೇಡಿ ಅಥವಾ ಈಜಾಡಬೇಡಿ. ದಿನಕ್ಕೆ ಗರಿಷ್ಠ 8 ಗಂಟೆಗಳಿಗಿಂತ ಹೆಚ್ಚು ಕಾಲ ಲೆನ್ಸ್ ಧರಿಸಬೇಡಿ. ಲೆನ್ಸ್ ಇಡುವ ಡಬ್ಬಿಯನ್ನು (Case) ಪ್ರತಿ 3 ತಿಂಗಳಿಗೊಮ್ಮೆ ಬದಲಾಯಿಸಿ.
ಲೆನ್ಸ್ ಧರಿಸಿ ಈಜುವುದು ಅಥವಾ ಸ್ನಾನ ಮಾಡುವುದನ್ನು ತಪ್ಪಿಸಿ. ಮಣ್ಣು ಅಥವಾ ಕೊಳಕು ನೀರು ಕಣ್ಣಿಗೆ ತಗುಲಿದರೆ ತಕ್ಷಣ ಲೆನ್ಸ್ ರಿಮೂವ್ ಮಾಡಿ. ಲೆನ್ಸ್‌ಗಳನ್ನು ಯಾವಾಗಲೂ ಶಿಫಾರಸು ಮಾಡಿದ ಕ್ಲೀನಿಂಗ್ ಸೊಲ್ಯೂಷನ್‌ನಲ್ಲೇ ಇಡಿ. ಹಳೆಯ ಸೊಲ್ಯೂಷನ್ ಅನ್ನು ಮರುಬಳಕೆ ಮಾಡಬೇಡಿ. ಮೂರು ತಿಂಗಳಿಗೊಮ್ಮೆ ಲೆನ್ಸ್ ಕೇಸ್ ಬದಲಿಸುತ್ತಿರಿ.



