ಕಾವೇರಿ ನದಿ ನೀರು ಹಂಚಿಕೆಯಲ್ಲಿ ಕರ್ನಾಟಕದ ಮೇಲ್ಮನವಿಗೂ ಬೆಲೆ ಸಿಕ್ಕಿಲ್ಲ. ನ್ಯಾಯಾಧಿಕರಣ ಹೇಳಿದ್ದಂತೆ 4 ಟಿಎಂಸಿ ನೀರು ಬಿಡುಗಡೆ ಮಾಡಲೇಬೇಕು. ಪ್ರತಿ ಬಾರಿ ಹೀಗಾದಾಗ ಇದ್ಯಾವ ರೂಲ್ಸ್ ಗುರು ಅನ್ನೋವ್ರಿಗೇನು ಕಡಿಮೆ ಇಲ್ಲ. ಹಾಗೆ ಕೇಳುವ ಅಥವಾ ಹೇಳುಬ ಬಹುತೇಕರಿಗೆ ಕಾವೇರಿ ನೀರು ಹಂಚಿಕೆ ಸೂತ್ರದ ಅರಿವು ಇಲ್ಲದವರಿಗೆ ಇಲ್ಲಿ ಕಂಪ್ಲೀಟ್ ಮಾಹಿತಿ ಇದೆ. ಕರ್ನಾಟಕಕ್ಕೆ ಸಮಸ್ಯೆ ಆಗಿರುವುದೇನೆಂದರೆ ಕಾನೂನು ರಚನೆ ಆಗುವಾಗ ʻತಮಿಳುನಾಡು ಮಳೆಗಾಲʼದ ಬಗ್ಗೆ ವಾದಿಸದೇ ಇದ್ದಿದ್ದು. ಅಂದಿನ ಆ ತಪ್ಪಿಗೆ ಕರ್ನಾಟಕ ಬೆಲೆ ತೆರುತ್ತಲೇ ಇದೆ.
ಕಾವೇರಿ ನದಿ ನೀರು ಸಂಕಷ್ಟ ಸೂತ್ರ ಏನು..?
ನೀರಿನ ಲಭ್ಯತೆ ಶೇ.25ರಷ್ಟು ಕಡಿಮೆಯಾದರೆ, ತಮಿಳುನಾಡು, ಪುದುಚೆರಿ, ತಮಿಳುನಾಡಿಗೆ ಕೊಡಬೇಕಾದ ಹಂಚಿಕೆಯಾದ ನೀರಿನ ಪ್ರಮಾಣದಲ್ಲೂ ಶೇ.25ರಷ್ಟು ಕಡಿಮೆಯಾಗುತ್ತದೆ. ಎಲ್ಲಾ ರಾಜ್ಯಗಳ ಪಾಲನ್ನು ಸಮಾನ ಅನುಪಾತದಲ್ಲಿ ಕಡಿತಗೊಳಿಸಬೇಕು.
ಸಂಕಷ್ಟದ ಲೆಕ್ಕಾಚಾರ ಹೇಗೆ ನಡೆಯುತ್ತದೆ..?
ಕರ್ನಾಟಕದ ಪ್ರಮುಖ ನಾಲ್ಕು ಜಲಾಶಯಗಳಾದ ಕೃಷ್ಣರಾಜಸಾಗರ, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಿಗೆ ಹರಿದುಬರುವ ಒಟ್ಟು ನೀರಿನ ಪ್ರಮಾಣ ಲೆಕ್ಕ ಹಾಕಲಾಗುತ್ತದೆ. ಜೊತೆಗೆ ಮಳೆ ಕೊರತೆಯ ಶೇಕಡಾವಾರು ಲೆಕ್ಕ ಮಾಡಲಾಗುತ್ತದೆ. ಅಂದರೆ ಕಾವೇರಿ ಜಲಾನಯನ ಪ್ರದೇಶವಾದ ಕೊಡಗು, ಹಾಸನ, ಮೈಸೂರು, ಮಂಡ್ಯ ಮತ್ತು ವಯನಾಡು ಭಾಗಗಳಲ್ಲಿ ಎಷ್ಟು ಕೊರತೆಯಾಗಿದೆ ಎಂಬ ಹವಾಮಾನ ಇಲಾಖೆಯ ವರದಿಯನ್ನು ಪಡೆಯಲಾಗುತ್ತದೆ.
ಬಿಳಿಗುಂಡ್ಲು ಮಾಪನ
ಕರ್ನಾಟಕದಿಂದ ತಮಿಳುನಾಡಿಗೆ ಗಡಿಯಲ್ಲಿರುವ ಬಿಳಿಗುಂಡ್ಲು ಜಲಮಾಪನ ಕೇಂದ್ರದ ಮೂಲಕ ವಾಸ್ತವವಾಗಿ ಹರಿದು ಹೋಗುತ್ತಿರುವ ನೀರಿನ ಪ್ರಮಾಣವನ್ನು ಮಾತ್ರ ಲೆಕ್ಕ ಹಾಕುತ್ತದೆ.
ಕರ್ನಾಟಕದ ವಾದ ಏನು..?
ಜೂನ್ನಿಂದ ಸೆಪ್ಟೆಂಬರ್ವರೆಗಿನ ಮುಂಗಾರು ಅವಧಿಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳಿಗೆ ಬರುವ ವಾಸ್ತವಿಕ ಒಳಹರಿವನ್ನು ಮಾತ್ರ ಪರಿಗಣಿಸಬೇಕು. ನಂತರ ನೈರುತ್ಯ ಮತ್ತು ಈಶಾನ್ಯ ಮುಂಗಾರು ಮಳೆಯನ್ನೂ ಪರಿಗಣಿಸಬೇಕು. ಕರ್ನಾಟಕದ ಕುಡಿಯುವ ನೀರಿನ ಅಗತ್ಯಕ್ಕೆ ಮೊದಲ ಆದ್ಯತೆ ಸಿಗಬೇಕು. ಈ ವೇಳೆ ಮೆಟ್ಟೂರು ಜಲಾಶಯದ ಒಳಹರಿವು ಹಾಗೂ ಅಂತರ್ಜಲ ಲಭ್ಯತೆಯನ್ನೂ ಪರಿಗಣಿಸಬೇಕು.
ತಮಿಳುನಾಡು ವಾದ ಏನು..?
ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಬರುವ ಒಳಹರಿವನ್ನು ಪರಿಗಣಿಸಬಾರದು. ನೈರುತ್ಯ ಮುಂಗಾರಿನ ಜೊತೆಗೆ ಈಶಾನ್ಯ ಮುಂಗಾರು ಮಳೆಯನ್ನೂ ಪರಿಗಣಿಸಬೇಕು ಎಂಬ ಕರ್ನಾಟಕದ ವಾದ ಒಪ್ಪುವುದಿಲ್ಲ. ಅಂತರ್ಜಲ ಲಭ್ಯತೆ ವರದಿಯನ್ನೂ ಒಪ್ಪುವುದಿಲ್ಲ. ತಮಗೆ ನಿಗದಿತ ಮಾಸಿಕ ಪಾಲಿನಂತೆ ನೀರು ಸಿಗಲೇಬೇಕು ಎನ್ನುವುದು ಅವರ ಒತ್ತಾಯ.
ಸಮಸ್ಯೆ ಎಲ್ಲಿದೆ..?
ಜೂನ್, ಜುಲೈ ತಿಂಗಳಿನಲ್ಲಿ ಕರ್ನಾಟಕದಲ್ಲಿ ವಿಶೇಷವಾಗಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಮಳೆಗಾಲ ಹೆಚ್ಚೂ ಕಡಿಮೆ ಮುಗಿದಿದೆ. ಆದರೆ ತಮಿಳುನಾಡಿನಲ್ಲಿ ಜುಲೈ ಮುಗಿದ ನಂತರವೇ ಹೆಚ್ಚು ಮಳೆ. ತಮಿಳುನಾಡಿಗೆ ಶೇ. 48 ಕ್ಕೂ ಹೆಚ್ಚು ಮಳೆ ಸಿಗುವುದು ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿಈ ಅವಧಿಯಲ್ಲಿ ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ವಾಯುಭಾರ ಕುಸಿತ ಮತ್ತು ಚಂಡಮಾರುತಗಳಿಂದಾಗಿ ತಮಿಳುನಾಡಿನ ಕರಾವಳಿ ಮತ್ತು ಕಾವೇರಿ ಜಲಾನಯನ ಪ್ರದೇಶದ ತಳಭಾಗದಲ್ಲಿ (ಡೆಲ್ಟಾ ಪ್ರದೇಶ) ಭಾರಿ ಮಳೆಯಾಗುತ್ತದೆ.
ಈ ಅವಧಿಯಲ್ಲಿ ಮೆಟ್ಟೂರು ಡ್ಯಾಂನ ಜಲಮೂಲಗಳಾದ ತಮಿಳುನಾಡಿನ ಹೊಗೇನಕಲ್ ಜಲಪಾತದ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಧರ್ಮಪುರಿ, ಸೇಲಂ ಜಿಲ್ಲೆಗಳ ಸ್ಥಳೀಯ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತದೆ. ಮೆಟ್ಟೂರು ಡ್ಯಾಂನ ಕೆಳಭಾಗಗಳಾದ ತಂಜಾವೂರು, ತಿರುಚಿರಾಪಳ್ಳಿ ಮತ್ತು ನಾಗಪಟ್ಟಣಂಗಳಲ್ಲಿ ಅತಿ ಹೆಚ್ಚು ಸುರಿಯುತ್ತದೆ.



