ಹಿಂದಿಯ ರಾಮಾಯಣ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಯಶ್ ರಾವಣನಾಗಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಆದರೆ ಯಶ್ ಇನ್ನೂ ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎನ್ನುತ್ತಿದ್ದಾರೆ ಸ್ವತಃ ಯಶ್ ಫ್ಯಾನ್ಸ್. ಯಶ್ ಅವರಿಗೆ ಗಡುಸಾದ ಧ್ವನಿಯಂತೂ ಇದೆ. ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಹೇಳಬಹುದಿತ್ತು ಎನ್ನುತ್ತಿದ್ದಾರೆ. ಯಶ್ ಧ್ವನಿಯಲ್ಲಿ ರಾಕಿ ಭಾಯ್ ಶೈಲಿಯೇ ಇದೆ. ಅದು ರಾವಣನಂತಿಲ್ಲ ಎನ್ನುತ್ತಿರುವುದು ಅಭಿಮಾನಿಗಳು. ಅದಕ್ಕೆ ಕಾರಣ ಈ ಹಿಂದೆ ಕನ್ನಡದಲ್ಲಿ ರಾವಣನಾಗಿ ಅಬ್ಬರಿಸಿರುವ ನಟರು. ಯಶ್, ಅವರೆಲ್ಲರ ಪಾತ್ರವನ್ನು ನೋಡಬೇಕಿತ್ತು. ಇಷ್ಟಕ್ಕೂ ರಾವಣನಾಗಿ ಅಬ್ಬರಿಸಿರುವ ನಟರು ಒಬ್ಬಿಬ್ಬರಲ್ಲ.. ಇದರಲ್ಲೊಂದು ವಿಶೇಷ ಎಂದರೆ ಡಾ.ರಾಜ್. ಅವರು ರಾಮನಾಗಿ, ರಾವಣನಾಗಿ.. ಅಷ್ಟೇ ಏಕೆ ವಾಲ್ಮೀಕಿಯಾಗಿಯೂ ನಟಿಸಿದ್ಧಾರೆ.
ರಾವಣನಾಗಿ ಅಬ್ಬರಿಸಿದ್ದ ಡಾ.ರಾಜ್ ಕುಮಾರ್ : ಡಾ.ರಾಜ್ ಕುಮಾರ್ ಕನ್ನಡದಲ್ಲಿ ರಾಮನಾಗಿಯೂ ಕೆಲವು ಚಿತ್ರಗಳಲ್ಲಿ ನಟಿಸಿದ್ಧಾರೆ. ರಾವಣನಾಗಿ 2 ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಶೇಷ ಎಂದರೆ ಡಾ.ರಾಜ್ ವಾಲ್ಮೀಕಿ ಮಹರ್ಷಿಯ ಪಾತ್ರದಲ್ಲೂ ನಟಿಸಿದ್ಧಾರೆ.
ಭೂಕೈಲಾಸ : ಗೋಕರ್ಣದಲ್ಲಿರುವ ಆತ್ಮಲಿಂಗದ ಹಿನ್ನೆಲೆಯ ಕಥೆ. ರಾವಣನ ತಾಯಿ ಕೈಕಸಿ, ಶಿವನ ಆತ್ಮಲಿಂಗವನ್ನೇ ಪೂಜಿಸಲು ಬಯಸುತ್ತಾಳೆ. ತಾಯಿಗಾಗಿ ತಪಸ್ಸು ಮಾಡುವ ರಾವಣ, ಶಿವ ಪ್ರತ್ಯಕ್ಷನಾದಾಗ ಪಾರ್ವತಿಯ ಮೇಲೆ ಮೋಹಗೊಂಡು ಅವಳನ್ನು ಕೇಳುತ್ತಾನೆ. ನಂತರ ತಪ್ಪಿನ ಅರಿವಾಗಿ ಮತ್ತೆ ತಪಸ್ಸು ಮಾಡಿ ಆತ್ಮಲಿಂಗವನ್ನು ಪಡೆಯುತ್ತಾನೆ. ಲಂಕೆಗೆ ಆತ್ಮಲಿಂಗವನ್ನು ತೆಗೆದುಕೊಂಡು ಹೋಗುವಾಗ ಸೂರ್ಯಾಸ್ತದ ಸಮಯವಾಗಿ, ರಾವಣನು ಪೂಜೆ ಮಾಡುವ ಸಮಯ. ಗಣೇಶನು ದನ ಕಾಯುವ ಬಾಲಕನಾಗಿ ಬಂದು, ಗಣೇಶನ ತಂತ್ರದಿಂದ ಆತ್ಮಲಿಂಗವು ಗೋಕರ್ಣದಲ್ಲಿ ನೆಲೆಯಾಗುತ್ತದೆ.
ಡಾ.ರಾಜ್ ರಾವಣನಾಗಿ ನಟಿಸಿದ್ದ ಚಿತ್ರಕ್ಕೆ ಕೆ.ಶಂಕರ್ ನಿರ್ದೇಶಕ. ಎವಿ ಮೇಯಪ್ಪನ್ ನಿರ್ಮಾಪಕ. ಚಿತ್ರದಲ್ಲಿ ಕಲ್ಯಾಣ್ ಕುಮಾರ್, ಜಮುನಾ, ಸರೋಜಾದೇವಿ, ಅಶ್ವತ್ಥ್ ನಟಿಸಿದ್ದರು. ಇದು 1958ರಲ್ಲಿ ತೆರೆ ಕಂಡಿದ್ದ ಸಿನಿಮಾ. ಈ ಚಿತ್ರದಲ್ಲಿ ಬರುವ “ರಾಮನ ಅವತಾರ ರಘುಕುಲ ಸೋಮನ ಅವತಾರ” ಹಾಡು ವಿಶೇಷ. ಕೇವಲ 16 ನಿಮಿಷಗಳಲ್ಲಿ ಇಡೀ ರಾಮಾಯಣದ ಕಥೆ ಹೇಳುವ ಹಾಡು ಅದ್ಭುತವಾಗಿದೆ. ಚಿತ್ರದಲ್ಲಿ ಒಟ್ಟಾರೆ 10 ಹಾಡುಗಳಿದ್ದವು. ಆರ್. ಸುದರ್ಶನಂ ಮತ್ತು ಆರ್. ಗೋವರ್ಧನ್ ಸಂಗೀತ ನೀಡಿದ್ದರು. ಕೆ. ಆರ್. ಸೀತಾರಾಮ ಶಾಸ್ತ್ರಿ (ಕು. ರಾ. ಸೀ) ಸಾಹಿತ್ಯ ರಚಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು.
ದಶಾವತಾರದಲ್ಲಿಯೂ ಡಾ.ರಾಜ್ ರಾವಣ : ಭೂಕೈಲಾಸ ರಿಲೀಸ್ ಆದ ನಂತರ ಕೇವಲ ಎರಡೇ ವರ್ಷದಲ್ಲಿ ಬಂದ ಸಿನಿಮಾ ದಶಾವತಾರ. ಈ ಚಿತ್ರದಲ್ಲಿಯೂ ಡಾ.ರಾಜ್ ರಾವಣ. ರಾವಣ ಅಷ್ಟೇ ಅಲ್ಲ, ವೈಕುಂಠದ ದ್ವಾರಪಾಲಕ ಜಯ, ನರಸಿಂಹ ಅವತಾರಕ್ಕೆ ಎದುರಾಗುವ, ಪರಮ ದೈವವಿರೋಧಿ ದೈತ್ಯ ಹಿರಣ್ಯಕಶಿಪು (ಭಕ್ತ ಪ್ರಹ್ಲಾದ ಚಿತ್ರ ಬೇರೆ), ಶ್ರೀಕೃಷ್ಣನಿಂದ ಸಂಹಾರವಾಗುವ ಶಿಶುಪಾಲ ಹಾಗೂ ರಾವಣನಾಗಿ ನಟಿಸಿದ್ದರು. ಭಗವಾನ್ ವಿಷ್ಣು, ಪರಶುರಾಮ, ರಾಮ, ಕೃಷ್ಣ ಮತ್ತು ಬುದ್ಧ ಹೀಗೆ ಒಟ್ಟು ಐದು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದವರು ರಾಜಾಶಂಕರ್. ಸೋಮಕಾಸುರ, ಹನುಮಂತ ಮತ್ತು ಕಂಸನ ಪಾತ್ರಗಳಲ್ಲಿ ಉದಯ್ ಕುಮಾರ್ ನಟಿಸಿದ್ದರು. ಕಯಾದು (ಪ್ರಹ್ಲಾದನ ತಾಯಿ), ಮಂಡೋದರಿ ಮತ್ತು ದ್ರೌಪದಿಯಾಗಿ ನಟಿಸಿದ್ದವರು ಲೀಲಾವತಿ. ಲಕ್ಷ್ಮಿ, ಸೀತೆ ಮತ್ತು ರುಕ್ಮಿಣಿಯ ಪಾತ್ರಗಳಿಗೆ ಜೀವ ತುಂಬಿದ್ದವರು ಆದವಾನಿ ಲಕ್ಷ್ಮಿದೇವಿ.
ಈ ಚಿತ್ರದ ಪ್ರಸಿದ್ಧ ಹಾಡು ‘ವೈದೇಹಿ ಏನಾದಳೋ’, ಇವತ್ತಿಗೂ ಜನಪ್ರಿಯವಾಗಿದೆ. ಅಂದಿನ ಕಾಲಕ್ಕೇ ‘ಈಸ್ಟ್‌ಮ್ಯಾನ್‌ಕಲರ್’ (ಕಲರ್) ನಲ್ಲಿ ಚಿತ್ರೀಕರಿಸಲಾಗಿದ್ದ ಸಿನಿಮಾ ಕೂಡ ಸೂಪರ್ ಹಿಟ್ ಆಗಿತ್ತು.
ಚಿತ್ರದ ನಿರ್ದೇಶಕ ಪಿಜಿ ಮೋಹನ್. ಚಿತ್ರಕಥೆ ಜಿವಿ ಅಯ್ಯರ್ ಅವರದ್ದು. ಜಿಕೆ ವೆಂಕಟೇಶ್ ಸಂಗೀತ ನೀಡಿದ್ದರು.
ಇವುಗಳನ್ನು ಹೊರತುಪಡಿಸಿದರೆ ಶ್ರೀರಾಮಾಂಜನೇಯ ಯುದ್ಧ ಚಿತ್ರ ಆಗಿದೆ. ಅದು ಡಾ.ರಾಜ್ ಅವರ 50ನೇ ಸಿನಿಮಾ. ಈ ಚಿತ್ರದಲ್ಲಿ ಡಾ.ರಾಜ್ ಶ್ರೀರಾಮಚಂದ್ರ. ರಾವಣನ ಕಥೆ ಬರುವುದೇ ಇಲ್ಲ. ಉದಯ್ ಕುಮಾರ್ ಆಂಜನೇಯ. ಈ ಚಿತ್ರವೂ ಸೂಪರ್ ಹಿಟ್. 1963ರಲ್ಲಿ ವಾಲ್ಮೀಕಿ ಚಿತ್ರ ತೆರೆಕಂಡಿತ್ತು. ಆ ಚಿತ್ರದಲ್ಲಿ ಡಾ.ರಾಜ್ ವಾಲ್ಮೀಕಿ ಪಾತ್ರದಲ್ಲಿ ನಟಿಸಿದ್ದರು.
ಅದನ್ನು ಹೊರತುಪಡಿಸಿದರೆ ವಜ್ರಮುನಿ ನಾಟಕಗಳಲ್ಲಿ ಪ್ರಚಂಡ ರಾವಣನಾಗಿ ಅಬ್ಬರಿಸಿದ್ದರು. ಕನ್ನಡದ ಮೊದಲ ವಾಕ್ ಚಿತ್ರ ಸತಿ ಸುಲೋಚನ ಚಿತ್ರದಲ್ಲಿ ಆರ್ ನಾಗೇಂದ್ರ ರಾವ್ ರಾವಣನಾಗಿ ನಟಿಸಿದ್ದರು. ಎಂವಿ ಸುಬ್ಬಯ್ಯ ನಾಯ್ಡು, ಇಂದ್ರಜಿತ್ (ಸೃಜನ್ ಲೋಕೇಶ್ ಅವರ ತಾತ, ಲೋಕೇಶ್ ಅವರ ತಂದೆ) ಆಗಿ ನಟಿಸಿದ್ದರು.
ಇವರನ್ನು ಹೊರತುಪಡಿಸಿದರೆ ಈಗ ರಾವಣಾಗಿ ನಟಿಸಿರುವುದು ಯಶ್. ಯಶ್ ನಟನೆ ಹೇಗಿದೆ ಅನ್ನೋದನ್ನು ದೀಪಾವಳಿ ನಿರ್ಧಾರ ಮಾಡಲಿದೆ. ರಾಮಾಯಣ ರಿಲೀಸ್ ಆಗುವುದೇ ಆಗ.



