ವಿಧಾನ ಪರಿಷತ್ ಅಡ್ಡ ಮತದಾನದ ಬಳಿಕ ಇದ್ದಕ್ಕಿದ್ದಂತೆ ದಡಬಡಿಸಿ ಎದ್ದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ವಿಜಯೇಂದ್ರ, ಅಶೋಕ್ ಜೊತೆ ಸತತ 40 ನಿಮಿಷ ಮೀಟಿಂಗ್ ಮಾಡಿದ್ದಾರೆ. ಫೋನಿನಲ್ಲೇ ಹೇಳಿ ಎಂದರಂತೆ, ಆದರೆ ವಿಜಯೇಂದ್ರ ಅವರೇ ಖುದ್ದು ದೆಹಲಿಗೆ ಬರುತ್ತೇವೆ. ಸುದೀರ್ಘವಾಗಿ ಮಾತನಾಡುವ ವಿಷಯ ಬಹಳ ಇದೆ ಎಂದರಂತೆ. ಹೀಗಾಗಿ ದೆಹಲಿಗೆ ಹೋಗಿದ್ದ ವಿಜಯೇಂದ್ರ ಮತ್ತು ಅಶೋಕ್ ಇಡೀ ಪ್ರಕರಣವನ್ನು ಸವಿಸ್ತಾರವಾಗಿ ವಿವರಿಸಿದ್ಧಾರೆ. ಯಾರು ಮಾಡಿದ್ಧಾರೆ ಎಂಬ ಮಾಹಿತಿಯನ್ನೂ ಹಂಚಿಕೊಂಡಿದ್ಧಾರೆ. ಪಕ್ಷ ನಿಷ್ಠೆಯ ಭಾಷಣ ಬಿಗಿಯುವ ಹುಲಿಗಳೂ ಈ ಲಿಸ್ಟಿನಲ್ಲಲಿದ್ದಾರೆ.
ನಿರೀಕ್ಷೆಯಂತೆ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯ ನಾಯಕರ ನಡೆಗೆ ತೀವ್ರ ಅಸಮಾಧಾನ ಹೊರ ಹಾಕಿದ್ಧಾರೆ. ಅಗತ್ಯ ಶಾಸಕರ ಬಲವಿಲ್ಲದಿದ್ದರೂ ಆಡಳಿತ ಪಕ್ಷ ಶಾಸಕರನ್ನು ಮುಂಚಿತವಾಗಿಯೇ ರೆಸಾರ್ಟ್‌ನಲ್ಲಿಇರಿಸಿ ಚುನಾವಣೆಯಲ್ಲಿಗೆದ್ದಿತು. ಆ ರೀತಿ ನೀವೇಕೆ ಮಾಡಲಿಲ್ಲ, ಮತದಾನದ ಹಿಂದಿನ ದಿನದ ಬದಲಿಗೆ ಮುಂಚಿತವಾಗಿಯೇ ಶಾಸಕಾಂಗ ಪಕ್ಷದ ಸಭೆ ಏಕೆ ನಡೆಸಲಿಲ್ಲ. ಬಹುಶಃ ನೀವು ಪರಿಷತ್ ಚುನಾವಣೆಯನ್ನು ಸೀರಿಯಸ್ ಆಗಿ ಪರಿಗಣಿಸಿಯೇ ಇಲ್ಲ ಎಂದೆಲ್ಲ ಗುಡುಗಿದ್ಧಾರೆ.
ಆಕ್ಚುವಲಿ ಶಾಸಕರನ್ನೆಲ್ಲ ಎರಡು ದಿನ ಹೋಟೆಲ್ ಅಥವಾ ರೆಸಾರ್ಟ್‌ನಲ್ಲಿ ಇರಿಸೋಣ ಎಂಬ ವಾದವನ್ನು ವಿಜಯೇಂದ್ರ ಅವರು ಮುಂದಿಟ್ಟಿದ್ದರಾದರೂ, ಅದಕ್ಕೆ ಅಶೋಕ್ ಅವರು ಒಪ್ಪಿರಲಿಲ್ಲ. ನಮ್ಮ ಶಾಸಕರ ಮೇಲೆ ನಾವೇ ಅನುಮಾನ ಪಟ್ಟರೆ ಹೇಗೆ ಎಂದು ವಾದಿಸಿದ್ದ ಅಶೋಕ್, ಪ್ರತಿ ಶಾಸಕರ ಜೊತೆಯಲ್ಲೂ ಮಾತನಾಡೋಣ, ಸಾಕು ಎಂದಿದ್ದರಂತೆ. ಜೊತೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೂ ಸಭೆ ನಡೆಸಿ ಕಾರ್ಯತಂತ್ರ ರೂಪಿಸಲಾಗಿತ್ತು. ಶಾಸಕರನ್ನು ವಿಶ್ವಾಸದಲ್ಲಿಟ್ಟುಕೊಂಡು ಚುನಾವಣೆಗೆ ಸಜ್ಜಾಗಿದ್ದೆವು. ಆದರೂ ಕೆಲವರು ದ್ರೋಹ ಬಗೆದಿದ್ದಾರೆ ಎಂದು ವಿವರಿಸಿದ್ದಾರೆ ವಿಜಯೇಂದ್ರ ಮತ್ತು ಅಶೋಕ್.
ಇಂತಹವರೇ ಮಾಡಿದ್ಧಾರೆ ಎಂದು ಗುರುತಿಸಲು ಸಾಧ್ಯ ಇಲ್ಲ. ಗೌಪ್ಯ ಮತದಾನವಾಗಿದ್ದರಿಂದ ಅಡ್ಡ ಮತದಾನ ಮಾಡಿರುವ ಶಾಸಕರ ನಿಖರ ಸಂಖ್ಯೆ, ಹೆಸರು ಪತ್ತೆ ಹಚ್ಚುವುದು ಅಸಾಧ್ಯ. ಆದರೆ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಕೆಲವರ ಬಗ್ಗೆ ಅನುಮಾನವಿದೆ. ಈ ಬಗ್ಗೆ ಇನ್ನಷ್ಟು ಪರಿಶೀಲನೆ, ನಿಗಾ ಮೂಲಕ ನಿಖರವಾಗಿ ಗುರುತಿಸಲು ಸಾಧ್ಯವಾಗಲಿದೆ ಎಂದು ರಾಜ್ಯ ನಾಯಕರು ಹೇಳಿದರಂತೆ. ಅಂದಹಾಗೆ ನಬಿನ್ ಜೊತೆ ಮಾತುಕತೆಯಲ್ಲಿ ವಿಜಯೇಂದ್ರ ಮತ್ತು ಅಶೋಕ್ ಅವರ ಜೊತೆ ವಿಧಾನಸಭೆ ಪ್ರತಿಪಕ್ಷ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಚುನಾವಣೆಯಲ್ಲಿಪಕ್ಷದ ಏಜೆಂಟ್ ಆಗಿದ್ದ ಪರಿಷತ್ ಪ್ರತಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ್ ಕೂಡಾ ಇದ್ದರು. ಅಷ್ಟೇ ಅಲ್ಲ, ಯಾವ ಯಾವ ಶಾಸಕರ ಮೇಲೆ ಅನುಮಾನ ಇದೆ, ಮಾಹಿತಿ ಇದೆ ಎಂದೂ ಹೇಳಿದ್ದಾರೆ. ರಾಜ್ಯ ಉಸ್ತುವಾರಿ ರಾಧಾಮೋಹನ್‌ದಾಸ್ ಅಗರ್‌ವಾಲ್, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ್ ಪಾಂಡಾ ಕೂಡ ಸಭೆಯಲ್ಲಿದ್ದರು.
ಕೊನೆಗೆ ವೈಮನಸ್ಸುಗಳನ್ನು ಮರೆತು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಪಕ್ಷದ ಸಂಘಟನೆಗೆ ಬಲ ತುಂಬಿ, ಅಡ್ಡ ಮತದಾನ ಮಾಡಿದವರನ್ನು ಗೌಪ್ಯವಾಗಿ ಗುರುತಿಸಿ, ಅವರ ಚಟುವಟಿಕೆಗಳ ಮೇಲೆ ನಿಗಾ ವಹಿಸಿ, ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುವ ಮೂಲಕ ಮುಂದಿನ ಚುನಾವಣೆಯ ಗೆಲುವಿಗೆ ಸಿದ್ಧತೆ ಮಾಡಿಕೊಳ್ಳಿ ಹಾಗೂ ಧರ್ಮಸ್ಥಳದಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಸುವುದು ಬೇಡ. ಇದನ್ನು ಆಂತರಿಕವಾಗಿಯೇ ಸರಿಪಡಿಸಿಕೊಳ್ಳಿ ಎಂದು ಹೇಳಿದರಂತೆ. ಅಲ್ಲಿಗೆ ಧರ್ಮಸ್ಥಳ ಸಭೆಗೆ ಬ್ರೇಕ್ ಬಿದ್ದಾಯ್ತು.
ಮುಂದಿನ ಸರದಿ ಏನು..? ವಿಜಯೇಂದ್ರ ಅಥವಾ ಅಶೋಕ್ ಯಾವುದಾದರೂ ಹೋರಾಟವನ್ನೋ, ಪ್ರತಿಭಟನೆಯನ್ನೋ ಸಂಘಟಿಸಿದರೆ ಅದನ್ನು ದೆಹಲಿ ಹೈಕಮಾಂಡ್ ನಡೆಸುವುದಕ್ಕೆ ಬಿಡುತ್ತಾ.. ಅಥವಾ ಪ್ರತಿ ಹೆಜ್ಜೆಗೂ ಕೌಂಟರ್ ಇಡುತ್ತಾ.. ಸದ್ಯದ ಕುತೂಹಲ ಇಷ್ಟೇ.



